ವರಮಹಾಲಕ್ಷ್ಮೀ ಹಬ್ಬಕ್ಕೆ ಕನಕಾಂಬರಿ ಗಗನ ಕುಸುಮ : ಕೇಜಿಗೆ 1500 ರು.ನಿಂದ 5000 ರು.ಗೆ ಮಾರಾಟ

Published : Aug 21, 2026, 10:30 AM IST
Varamahalakshmi festival

ಸಾರಾಂಶ

ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಕನಕಾಂಬರಿ, ತಾವರೆ, ಮಲ್ಲಿಗೆ, ಗುಲಾಬಿ ಹೂವುಗಳಿಗೆ ಜನ ನಿನ್ನೆ ಮುಗಿಬಿದ್ದಿದ್ದು ಮಧ್ಯಾಹ್ನ ಮಳೆಯಾಗುತ್ತಿದ್ದಂತೆ ಗಿರಾಕಿಗಳು ಕಡಿಮೆಯಾದರು.ಒಂದು ವಾರದಿಂದ ಲಾಭದ ನಿರೀಕ್ಷೆಯಲ್ಲಿದ್ದ ವ್ಯಾಪಾರಿಗಳಿಗೆ ಮಳೆ ತಣ್ಣೀರೆರಚಿದೆ.

ಬೆಂಗಳೂರು : ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಕನಕಾಂಬರಿ, ತಾವರೆ, ಮಲ್ಲಿಗೆ, ಗುಲಾಬಿ ಹೂವುಗಳಿಗೆ ಜನ ನಿನ್ನೆ ಮುಗಿಬಿದ್ದಿದ್ದು ಮಧ್ಯಾಹ್ನ ಮಳೆಯಾಗುತ್ತಿದ್ದಂತೆ ಗಿರಾಕಿಗಳು ಕಡಿಮೆಯಾದರು. ಒಂದು ವಾರದಿಂದ ಲಾಭದ ನಿರೀಕ್ಷೆಯಲ್ಲಿದ್ದ ವ್ಯಾಪಾರಿಗಳಿಗೆ ಮಳೆ ತಣ್ಣೀರೆರಚಿದೆ. ಆದರೂ ಕೊಲ್ಕೊತ್ತಾ ತಾವರೆ ಸ್ಥಿರವಾದ ಬೆಲೆ ಕಾಯ್ದುಕೊಂಡಿದೆ.

ವರಮಹಾಲಕ್ಷ್ಮಿ ವ್ರತದ ಪ್ರಯುಕ್ತ ಮಹಿಳೆಯರೇ ಪ್ರಧಾನವಾಗಿ ಪೂಜಿಸುವ ಈ ಹಬ್ಬದಲ್ಲಿ ನಗರದೆಲ್ಲೆಡೆ ಹೂವು, ಹಣ್ಣುಗಳಿಗಾಗಿ ಜನ ಮುಗಿಬಿದ್ದು ಖರೀದಿಸಿದ್ದರಿಂದ ಗುರುವಾರ ವ್ಯಾಪಾರ ಜೋರಾಗಿತ್ತು. ನಗರದ ಪ್ರಮುಖ ಮಾರುಕಟ್ಟೆಗಳಾದ ಕೆ.ಆರ್.ಮಾರುಕಟ್ಟೆ, ಬಸವನಗುಡಿ, ರಾಜಾಜಿನಗರ, ಕೆ.ಆರ್.ಪುರಂಗಳಲ್ಲಿ ಮಹಿಳೆಯರು ಬೆಳಿಗ್ಗೆ 5ಗಂಟೆಯಿಂದಲೇ ಆಗಮಿಸಿದ್ದು, ವ್ಯಾಪಾರಿಗಳಲ್ಲಿ ಸಂಭ್ರಮ ಕಂಡು ಬಂದಿತ್ತು. ಕನಕಾಂಬರ ಹೂವು ಅತ್ಯಂತ ಹೆಚ್ಚು ಬೆಲೆಗೆ ಮಾರಾಟವಾಗಿದ್ದು ಬೆಳಗ್ಗೆ 5.30ರಿಂದ 11 ಗಂಟೆಯವರೆಗೆ 1 ಕೆ.ಜಿ ಕನಕಾಂಬರಕ್ಕೆ 5 ಸಾವಿರ ಬೆಲೆ ಇತ್ತು. 11ರ ನಂತರ ಮಳೆಯಾಗುತ್ತಿದ್ದಂತೆ ಜನರು ಮಾರುಕಟ್ಟೆಗೆ ಬರುವುದು ಕಡಿಮೆಯಾದ್ದರಿಂದ ಹೂವಿನ ಬೆಲೆ ಕಡಿಮೆಯಾಗಿತ್ತು. ರಾತ್ರಿ 7ಗಂಟೆಯಾಗಿದ್ದರೂ ಮಳೆ ಜಿನುಗುತ್ತಿದ್ದ ಕಾರಣ ಕನಕಾಂಬರ ರಾತ್ರಿಯ ವೇಳೆಗೆ ಒಂದೂವರೆ ಸಾವಿರಕ್ಕೆ ಇಳಿದಿತ್ತು.

ಪ್ರತಿಬಾರಿಯಂತೆ ಈ ಬಾರಿ ಗೌರಿಬಿದನೂರಿನಿಂದ ಅತಿ ಹೆಚ್ಚು ಕನಕಾಂಬರ ಮಾರುಕಟ್ಟೆಗೆ ಬಂದಿತ್ತು. ವ್ಯಾಪಾರಿಗಳು ರೈತರಿಂದ ಅಧಿಕ ಬೆಲೆ ಕೊಟ್ಟು ಖರೀದಿಸಿ ತಂದಿದ್ದರೂ ಅಧಿಕ ಲಾಭಗಳಿಸುವ ಅವರ ಆಸೆಗೆ ಮಧ್ಯಾಹ್ನದ ನಂತರವೂ ಮಳೆ ಬೀಳುತ್ತಿದ್ದ ಕಾರಣ ಗ್ರಾಹಕರಿಲ್ಲದೆ, ಬೆಲೆಗಳು 1 ಕೆಜಿ ಕನಕಾಂಬರದ ಬೆಲೆ 5 ಸಾವಿರದಿಂದ 1,500ಕ್ಕೆ ಇಳಿದಿತ್ತು. ಈ ಬಾರಿ ಕನಕಾಂಬರ ವ್ಯಾಪಾರಿಗಳು ನಷ್ಟ ಅನುಭವಿಸಿದ್ದಾರೆ ಎಂದು ಕೆ.ಆರ್.ಮಾರುಕಟ್ಟೆ ಹೂವಿನ ವ್ಯಾಪಾರಿಗಳ ಸಂಘದ ಸದಸ್ಯ ಬಾಲಾಜಿ ಕನ್ನಡಪ್ರಭಕ್ಕೆ ತಿಳಿಸಿದರು.

ರಾಜ್ಯದಲ್ಲಿ ತಾವರೆ ಹೂವು ಬೆಳೆಯುವ ಪ್ರದೇಶ ಇಲ್ಲವಾದ ಕಾರಣ ಈ ಬಾರಿ ಕೊಲ್ಕೊತ್ತಾದಿಂದ ಅತಿ ಹೆಚ್ಚು ತಾವರೆ ಹೂವು ನಗರದ ಮಾರುಕಟ್ಟೆಗೆ ಬಂದಿತ್ತು. ಬೆಳಿಗ್ಗೆ 1 ಜೋಡಿ ತಾವರೆ (ಮೊಗ್ಗು) ಬೆಲೆ 100 ರು. ಇದ್ದು, ಗುರುವಾರ ರಾತ್ರಿ ವೇಳೆಗೆ 150 ರು.ಗೆ ಮಾರಾಟವಾಗಿವೆ. ಇದೊಂದು ಹೂವು ಮಾತ್ರ ಬೆಳಿಗ್ಗೆಯಿಂದ ರಾತ್ರಿಯವರೆಗೂ ಒಂದೇ ಬೆಲೆ ಏರಿಸಿಕೊಂಡಿದೆ. ಈ ಹೂವು ಮಾರಾಟ ಮಾಡಿದ ವ್ಯಾಪಾರಿಗಳು ಮಾತ್ರ ಸ್ವಲ್ಪ ಲಾಭ ಕಂಡಿದ್ದಾರೆ ಎಂದು ಬಾಲಾಜಿ ತಿಳಿಸಿದರು.

ಗುರುವಾರ ಬೆಳಗ್ಗೆ ಹಣ್ಣುಗಳ ದರ ಪ್ರತಿ ಕೆ.ಜಿಗೆ ಸೇಬು-100ರಿಂದ 150, ದಾಳಿಂಬೆ ಕೆ.ಜಿ 120 ರಿಂದ 150, ಏಲಕ್ಕಿ ಬಾಳೆ ಕೆ.ಜಿಗೆ 120 ರಿಂದ 150, ಸೀತಾಫಲ ಕೆ.ಜಿ 100, ಮರಸೇಬು 120 ಸಪೋಟ 100, ಡ್ರಾಗನ್ 100 ಮೂಸಂಬಿ 60, ಜೋಡಿ ಅನಾನಸ್ ಬೆಲೆ 100 ರು. ಇತ್ತು.

ಹೂವುಗಳ ದರ ಪ್ರತಿ ಕೆ.ಜಿಗೆ ಕನಕಾಂಬರ ದರ 5 ಸಾವಿರ

ಹೂವುಗಳ ದರ ಪ್ರತಿ ಕೆ.ಜಿಗೆ ಕನಕಾಂಬರ 2 ಸಾವಿರ ಇದ್ದ ದರ 5 ಸಾವಿರ, ಮಲ್ಲಿಗೆ 500 ಇದ್ದ ದರ 1,600 ರು, ಗುಲಾಬಿ 400 ಇದ್ದ ದರ ಇಂದು 600, ಸೇವಂತಿಗೆ 500 ಇದ್ದ ರ (ಬಿಳಿ) 600, ಸೇವಂತಿಗೆ 300 ರುಪಾಯಿಯಿಂದ 400ರು, ಸಂಪಿಗೆ 400 ಇತ್ತು. ಬಾಳೆ ದಿಂಡಿನ ಬೆಲೆ ಎರಡಕ್ಕೆ 75ರಿಂದ 80 ರುಪಾಯಿಗೆ ಮಾರಾಟವಾಯಿತು.

ಮಧ್ಯಾಹ್ನದ ನಂತರ ಮಳೆ ಬಿದ್ದ ಕಾರಣ ಗುರುವಾರ ರಾತ್ರಿವೇಳೆಗೆ ಎಲ್ಲಾ ಹೂವುಗಳ ಬೆಲೆ ಅರ್ಧಕ್ಕೆ ಅರ್ಧ ಕಡಿಮೆಯಾಗಿತ್ತು. ಬಿಡಿ ಗುಲಾಬಿ 1 ಕೆಜಿಗೆ 200 ರು. ಸೇವಂತಿಗೆ 250 ರಿಂದ 350 ರು, ಮಲ್ಲಿಗೆ 150 ರು, ಮರಲೆ ಕೆಜಿಗೆ 200 ರು.ಇಳಿದಿತ್ತು. ಬಸವನಗುಡಿಯಲ್ಲಿ ಜೋಡಿ ಮಲ್ಲಿಗೆ ಹೂವಿನ ಹಾರ 2500 ರು. ಇದ್ದರೆ, ಕೆ.ಆರ್. ಮಾರುಕಟ್ಟೆಯಲ್ಲಿ 1 ಸಾವಿರ ರು.ಗೆ ಮಾರಾಟ ಮಾಡಲಾಯಿತು.

ಬಸವನಗುಡಿಯ ಮಾರುಕಟ್ಟೆಯಲ್ಲಿ ಅತಿಹೆಚ್ಚಿನ ಬೆಲೆ

ಬಸವನಗುಡಿಯ ಮಾರುಕಟ್ಟೆಯಲ್ಲಿ ಅತಿಹೆಚ್ಚಿನ ಬೆಲೆ ಇದ್ದ ಕಾರಣ ಕೆ.ಆರ್.ಮಾರುಕಟ್ಟೆಗೆ ಬಂದಿದ್ದೇವೆ. ಅಲ್ಲಿಗೂ ಇಲ್ಲಿಗೂ ಹೋಲಿಕೆ ಮಾಡಿ ನೋಡಿದರೆ ಪ್ರತಿ ಹೂವಿನ ಬೆಲೆ ಕೆ.ಜಿಗೆ 100 ರು.ಯಿಂದ 200 ರು. ಇದೆ ಎಂದು ಬಸವನಗುಡಿ ನಿವಾಸಿ ಸಾಫ್ಟ್ ವೇರ್ ಎಂಜಿನಿಯರ್ ಗಳಾದ ಕಾರ್ತಿಕ್ ಹಾಗೂ ವೈಷ್ಣವಿ ಹೇಳಿದರು.

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಎಲ್ಲಾ ಹೂವು, ಹಣ್ಣುಗಳ ಬೆಲೆ ಹೆಚ್ಚಿದೆ, ಈಗ ಬೆಲೆ ಹೆಚ್ಚಾದರೆ ಒಂದು ಕೆಜಿ ತೆಗೆದುಕೊಳ್ಳುವ ಬದಲು ಅರ್ಧ ಕೆಜಿ ತೆಗೆದುಕೊಳ್ಳುತ್ತೇವೆ. ಹೀಗೆ ಎಲ್ಲಾ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದೇವೆ ಎಂದು ಕನಕಪುರದ ಚಾಲಕ ಗಣೇಶ್ ಹೇಳಿದರು.

ಹಣ್ಣುಗಳು (ಪ್ರತಿ ಕೆ.ಜಿ.ಗೆ)

ಸೇಬು-250

ದಾಳಿಂಬೆ-150

ಮೂಸಂಬಿ-60

ಅನಾನಸ್-100 (ಎರಡಕ್ಕೆ)

ಬಾಳೆಹಣ್ಣು (ಏಲಕ್ಕಿ)- 100

ತೆಂಗಿನಕಾಯಿ-50ರೂ (ಒಂದಕ್ಕೆ)

ಮರಸೇಬು-50 ರಿಂದ 100

ಸೀತಾಫಲ- 100

ಹೂವುಗಳ ದರ (ಕೆಜಿಗೆ)

ಕನಕಾಂಬರ-1,500 ರಿಂದ 5,000

ಮಲ್ಲಿಗೆ-500ರಿಂದ 1,600

ಸೇವಂತಿಗೆ- 200 ರಿಂದ 300

ಮರಲೆ-200 ರಿಂದ 1,000

ಜಾಜಿ-200

ಚೆಂಡು ಹೂ-200

ತರಕಾರಿ ದರ(ಕೆಜಿಗೆ)

ಈರೇಕಾಯಿ-30 ರು

ಬದನೆಕಾಯಿ- 60 ರು

ಬೀನ್ಸ್- 75 ರು

ಕ್ಯಾರೆಟ್- 65 ರು

ಮಣಸಿನಕಾಯಿ-45 ರು

ಬಾಳೆಕಾಯಿ-40 ರು (ಎರಡಕ್ಕೆ)

ಈರುಳ್ಳಿ-45 ರು

ಬೆಳ್ಳುಳ್ಳಿ-110 ರು

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಮಾತುಕತೆ ಮೂಲಕ ಜಲ ವಿವಾದ ಇತ್ಯರ್ಥ: ಸಚಿವ ಅಮಿತ್‌ ಶಾ ಕರೆ
ಮೇಕೆದಾಟಿಂದ ತ.ನಾಡಿಗೆ ಅನ್ಯಾಯ ಆಗಲ್ಲ: ಡಿಕೆಶಿ