ಎಸ್. ಗಿರೀಶ್ ಬಾಬು ಕನ್ನಡಪ್ರಭ ವಾರ್ತೆ ಬೆಂಗಳೂರು ಸ್ಪರ್ಧೆಗೆ ಶತಾಯಗತಾಯ ಹಿಂದೇಟು ಹಾಕುತ್ತಿರುವ ಸಚಿವರು, ತಮ್ಮ ಪತ್ನಿ ಹಾಗೂ ಸಂಬಂಧಿಕರಿಗೆ ಟಿಕೆಟ್ ಬಯಸುತ್ತಿರುವ ಪ್ರಭಾವಿಗಳು, ಸ್ಪಷ್ಟಗೊಳ್ಳದ ವಲಸಿಗರ ನಿಲುವು ಹಾಗೂ ಯುವ ಆಕಾಂಕ್ಷಿಗಳ ಭರ್ಜರಿ ಲಾಬಿಯಿಂದಾಗಿ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಕಾಂಗ್ರೆಸ್ ನಾಯಕತ್ವದ ಪಾಲಿಗೆ ಕಗ್ಗಂಟಾಗಿ ಪರಿಣಮಿಸಿದೆ.
ಎಲ್ಲಾ 28 ಲೋಕಸಭಾ ಕ್ಷೇತ್ರಗಳಿಗೆ ವೀಕ್ಷಕರನ್ನು ನೇಮಕಮಾಡಿ ಹಲವು ತಿಂಗಳೇ ಕಳೆದಿದ್ದರೂ ಇದುವರೆಗೂ 10 ಕ್ಷೇತ್ರಗಳಿಂದ ಸಂಭವನೀಯರ ಪಟ್ಟಿ ಮಾತ್ರ ಕಾಂಗ್ರೆಸ್ ನಾಯಕತ್ವಕ್ಕೆ ಲಭ್ಯವಾಗಿದೆ. ಉಳಿದ 18 ಕ್ಷೇತ್ರಗಳಲ್ಲಿ ಕೆಲವೆಡೆ ಸೂಕ್ತ ಅಭ್ಯರ್ಥಿಗಳ ಕೊರತೆ ಕಾಡುತ್ತಿದ್ದರೆ ಮತ್ತೆ ಕೆಲವೆಡೆ ತೀವ್ರ ಪೈಪೋಟಿ ಕಾಣಿಸಿಕೊಂಡಿದ್ದು ಸಂಭವನೀಯರ ಪಟ್ಟಿ ಸಿದ್ದಪಡಿಸುವುದೇ ವೀಕ್ಷಕರಿಗೆ ಸಮಸ್ಯೆಯಾಗಿದೆ.ಡಾ. ಎಚ್.ಸಿ. ಮಹದೇವಪ್ಪ (ಚಾಮರಾಜನಗರ), ಸತೀಶ್ ಜಾರಕಿಹೊಳಿ (ಬೆಳಗಾವಿ), ಚಲುವರಾಯಸ್ವಾಮಿ (ಮಂಡ್ಯ), ಕೆ.ಎಚ್. ಮುನಿಯಪ್ಪ (ಕೋಲಾರ) ಪಿರಿಯಾಪಟ್ಟಣ ವೆಂಕಟೇಶ್ (ಮೈಸೂರು), ಕೃಷ್ಣ ಬೈರೇಗೌಡ (ಬೆಂಗಳೂರು ಉತ್ತರ), ರಾಮಲಿಂಗಾರೆಡ್ಡಿ (ಬೆಂ. ದಕ್ಷಿಣ) ಆರ್.ಬಿ. ತಿಮ್ಮಾಪುರ (ವಿಜಯಪುರ), ಬಿ. ನಾಗೇಂದ್ರ (ಬಳ್ಳಾರಿ), ಕೆ.ಜೆ. ಜಾರ್ಜ್ (ಬೆಂಗಳೂರು ಸೆಂಟ್ರಲ್), ಕೆ.ಎನ್. ರಾಜಣ್ಣ (ತುಮಕೂರು)ರಂತಹ ಸಚಿವರ ಮೇಲೆ ಲೋಕಸಭೆಗೆ ಸ್ಪರ್ಧಿಸುವಂತೆ ಒತ್ತಡವಿದೆ. ಆದರೆ, ಮುನಿಯಪ್ಪ ಅವರೊಬ್ಬರನ್ನು ಬಿಟ್ಟರೆ ಉಳಿದ ಎಲ್ಲರೂ ಸ್ಪರ್ಧೆಯಿಂದ ತಪ್ಪಿಸಿಕೊಳ್ಳಲು ಹರಸಾಹಸ ನಡೆಸುತ್ತಿದ್ದಾರೆ.
ಮುನಿಯಪ್ಪ ಅವರು ಸಹ ತಮ್ಮ ಪುತ್ರಿ ರೂಪಾ ಶಶಿಧರ್‌ಗೆ ಸಚಿವ ಸ್ಥಾನ ನೀಡಿದರೆ ಹಾಗೂ ಹೈಕಮಾಂಡ್ ಸೂಚಿಸಿದರೆ ಮಾತ್ರ ಕೋಲಾರದಿಂದ ಸ್ಪರ್ಧಿವುದಾಗಿ ಷರತ್ತು ವಿಧಿಸುತ್ತಿದ್ದಾರೆ. ಆದರೆ, ಮುನಿಯಪ್ಪ ಸ್ಪರ್ಧೆಗೆ ಕೋಲಾರದ ಶಾಸಕರಿಂದಲೇ ತೀವ್ರ ವಿರೋಧವಿದೆ. ಉಳಿದ ಎಲ್ಲ ಸಚಿವರು ಸ್ಪರ್ಧೆಗೆ ಹಿಂದೇಟು ಹಾಕುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.ಈ ಪೈಕಿ ಚೆಲುವರಾಯಸ್ವಾಮಿ, ಬಿ. ನಾಗೇಂದ್ರ, ಸತೀಶ್ ಜಾರಕಿಹೊಳಿ, ರಾಮಲಿಂಗಾರೆಡ್ಡಿ, ಡಾ. ಎಚ್.ಸಿ. ಮಹದೇವಪ್ಪ ಅವರು ತಮ್ಮ ಬದಲಾಗಿ ತಮ್ಮ ಸಂಬಂಧಿಗೆ (ಪತ್ನಿ, ಸಹೋದರ, ಪುತ್ರಿಯರು ಹಾಗೂ ಪುತ್ರ) ಟಿಕೆಟ್ ನೀಡುವಂತೆ ಲಾಬಿ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಆದರೆ, ಸಚಿವರ ಸ್ಪರ್ಧೆ ಬಗ್ಗೆ ಬಿಗಿ ನಿಲುವು ಹೊಂದಿರುವ ಕಾಂಗ್ರೆಸ್ ಹೈಕಮಾಂಡ್ ಎಲ್ಲಾ ಕ್ಷೇತ್ರಗಳಲ್ಲೂ ಸರ್ವೇ ನಡೆಸುವಂತೆ ಸೂಚನೆ ನೀಡಿದ್ದು, ಈ ಸರ್ವೇಯಲ್ಲಿ ಸಚಿವರು ಗೆಲ್ಲುವ ಲಕ್ಷಣ ಕಂಡು ಬಂದರೆ ಕಡ್ಡಾಯವಾಗಿ ಸ್ಪರ್ಧೆ ಮಾಡುವಂತೆ ತಾಕೀತು ಮಾಡಲಿದೆ ಎಂದೇ ಉನ್ನತ ಮೂಲಗಳು ಹೇಳಿವೆ.ಹೀಗಾಗಿ ಸಚಿವರ ಸ್ಪರ್ಧೆಯ ಕ್ಷೇತ್ರಗಳ ಬಗ್ಗೆ ಸಂಭವನೀಯರ ಪಟ್ಟಿ ಅಖೈರುಗೊಳಿಸುವುದು ಸಮಸ್ಯೆಯಾಗಿದ್ದರೆ, ವಲಸಿಗರ ಆಗಮನದ ನಿರೀಕ್ಷೆಯಿರುವ ಕಾರವಾರ, ಬೆಂಗಳೂರು ಉತ್ತರ, ತುಮಕೂರು, ಉಡುಪಿ-ಚಿಕ್ಕಮಗಳೂರಿನಂತಹ ಕ್ಷೇತ್ರಗಳಲ್ಲಿ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಏಕೆಂದರೆ, ಪಂಚ ರಾಜ್ಯ ಚುನಾವಣೆ ನಂತರ ವಲಸಿಗರು ದ್ವಂದ್ವದಲ್ಲಿರುವ ಕಾರಣ ಈ ಕ್ಷೇತ್ರಗಳ ಬಗ್ಗೆಯೂ ತೀರ್ಮಾನ ಕೈಗೊಳ್ಳಲು ಆಗುತ್ತಿಲ್ಲ.ಎಸ್ಟಿಎಸ್‌ಗೆ ಬೆಂ. ಉತ್ತರ, ಹೆಬ್ಬಾರ್‌ಗೆ ಉ.ಕ.?:ವಲಸಿಗರ ಪೈಕಿ ಈಗಾಗಲೇ ಕಾಂಗ್ರೆಸ್ಸಿನತ್ತ ಒಂದು ಹೆಜ್ಜೆ ಇಟ್ಟಿರುವ ಹಾಗೂ ಲೋಕಸಭಾ ಚುನಾವಣಾ ವೇಳಾಪಟ್ಟಿ ಪ್ರಕಟವಾಗುತ್ತಿದ್ದಂತೆಯೇ ಬಿಜೆಪಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದೇ ಹೇಳಲಾಗುವ ಯಶವಂತಪುರದ ಎಸ್.ಟಿ. ಸೋಮಶೇಖರ್ ಹಾಗೂ ಯಲ್ಲಾಪುರದ ಶಿವರಾಂ ಹೆಬ್ಬಾರ್ ಅವರನ್ನು ಕಣಕ್ಕೆ ಇಳಿಸುವ ಬಗ್ಗೆ ಕಾಂಗ್ರೆಸ್ ನಾಯಕತ್ವ ಗಂಭೀರವಾಗಿದೆ.
ಈ ಮೊದಲು ಎಸ್.ಟಿ. ಸೋಮಶೇಖರ್ ಅವರ ಹೆಸರು ಮೈಸೂರು ಕ್ಷೇತ್ರಕ್ಕೆ ಕೇಳಿಬಂದಿತ್ತು. ಆದರೆ, ಇತ್ತೀಚಿನ ಮಾಹಿತಿ ಪ್ರಕಾರ ಸೋಮಶೇಖರ್ ಅವರನ್ನು ಬೆಂಗಳೂರು ಉತ್ತರದಿಂದ ಕಣಕ್ಕೆ ಇಳಿಸುವ ಬಗ್ಗೆ ಗಂಭೀರ ಚರ್ಚೆ ನಡೆದಿದೆ ಎನ್ನಲಾಗಿದೆ. ಇನ್ನು ಹೆಬ್ಬಾರ್ ಬಯಸಿದರೆ ಕಾರವಾರದಿಂದ ಸ್ಪರ್ಧೆಗೆ ಇಳಿಯಬಹುದು.ಸೋಮಣ್ಣ ಮೇಲೆ ಕಣ್ಣು:ಕುತೂಹಲಕಾರಿ ಸಂಗತಿಯೆಂದರೆ ಬಿಜೆಪಿಯ ಪ್ರಭಾವಿ ನಾಯಕ ವಿ. ಸೋಮಣ್ಣ ಅವರ ಹೆಸರನ್ನು ಕಾಂಗ್ರೆಸ್ ಇನ್ನೂ ತುಮಕೂರು ಕ್ಷೇತ್ರಕ್ಕೆ ಪರಿಗಣನೆಯಲ್ಲಿಟ್ಟುಕೊಂಡಿದೆ. ಕಾಂಗ್ರೆಸ್‌ನತ್ತ ವಾಲಿದ್ದ ಸೋಮಣ್ಣ ಅವರನ್ನು , ಬಿಜೆಪಿಯ ರಾಷ್ಟ್ರೀಯ ನಾಯಕರು ತುಮಕೂರು ಕ್ಷೇತ್ರದ ಟಿಕೆಟ್ ನೀಡುವ ಭರವಸೆ ನೀಡಿ ತಡೆದಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಸೋಮಣ್ಣ ಅವರಿಗೆ ಬಿಜೆಪಿಯಲ್ಲಿ ಟಿಕೆಟ್ ತಪ್ಪಿದರೆ ಅವರಿಗೆ ಪಕ್ಷಕ್ಕೆ ಸೆಳೆದು ತುಮಕೂರಿನ ಟಿಕೆಟ್ ನೀಡುವ ಇರಾದೆ ಕಾಂಗ್ರೆಸ್ ನಾಯಕತ್ವಕ್ಕೆ ಇದೆ ಎನ್ನಲಾಗುತ್ತಿದೆ.ಖರ್ಗೆ ಸ್ಪರ್ಧೆ ಎಲ್ಲಿಂದ?:ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ಬಾರಿ ಲೋಕಸಭೆಗೆ ಸ್ಪರ್ಧೆ ಇನ್ನೂ ಖಚಿತವಿಲ್ಲ. ಖರ್ಗೆ ಅವರ ಹೆಸರು ಕಲಬುರಗಿ ಹಾಗೂ ಚಾಮರಾಜನಗರಕ್ಕೆ ಕೇಳಿ ಬಂದಿದ್ದರೂ ಅದು ಕೇವಲ ವದಂತಿ ಎನ್ನುತ್ತವೆ ಮೂಲಗಳು. ಇನ್ನು ಕಲಬುರಗಿ ಕ್ಷೇತ್ರದಿಂದ ಈ ಬಾರಿ ಖರ್ಗೆ ಅವರ ಅಳಿಯ ರಾಧಾಕೃಷ್ಣ ಅವರ ಹೆಸರು ಪ್ರಬಲವಾಗಿದೆ. ಖರ್ಗೆ ಅವರು ಸ್ಪರ್ಧಿಸುವುದಿಲ್ಲ ಎಂದಾದರೆ ರಾಧಾಕೃಷ್ಣ ಅವರ ಹೆಸರೇ ಅಂತಿಮಗೊಳ್ಳಲಿದೆ ಎಂದು ಮೂಲಗಳು ಹೇಳುತ್ತವೆ.-----
ರಾಜ್ಯದ 28 ಕ್ಷೇತ್ರಕ್ಕೆ ಯಾರ ನಡುವೆ ಟಿಕೆಟ್ ಫೈಟ್?ಕರ್ನಾಟಕದ 28 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಟಿಕೆಟ್‌ಗಾಗಿ ನಡೆದಿರುವ ಒಳಸುಳಿ ಹೀಗಿದೆ. ಬೆಂಗಳೂರು ಕೇಂದ್ರ:
ಈ ಕ್ಷೇತ್ರದಿಂದ ಸಚಿವ ಕೆ.ಜೆ. ಜಾರ್ಜ್ ಅಥವಾ ಶಾಸಕ ಎನ್.ಎ.ಹ್ಯಾರೀಸ್ ಅವರನ್ನು ಕಣಕ್ಕೆ ಇಳಿಸುವ ಚರ್ಚೆಯಿದೆ. ಆದರೆ, ಈ ಇಬ್ಬರೂ ನಾಯಕರು ಸ್ಪರ್ಧೆಗೆ ಹಿಂಜರಿದಿದ್ದಾರೆ. ಹೀಗಾಗಿ ಹ್ಯಾರೀಸ್ ಅವರ ಪುತ್ರ ಹಾಗೂ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹಮ್ಮದ್ ಹ್ಯಾರೀಸ್ ನಲಪಾಡ್ ಹೆಸರು ಕೇಳಿ ಬಂದಿದೆ. ಇವರಲ್ಲದೆ, ಹಿರಿಯ ನಾಯಕ ರೆಹಮಾನ್ ಖಾನ್ ಅವರ ಪುತ್ರ ಮನ್ಸೂರ್ ಅಲಿಖಾನ್ ಹಾಗೂ ನಾಯಕ ಎಸ್.ಎ.ಹುಸೇನ್ ಅವರು ಆಕಾಂಕ್ಷಿಗಳಾಗಿದ್ದಾರೆ.ಸಂಭವನೀಯರು:ಕೆ.ಜೆ.ಜಾರ್ಜ್, ಎನ್.ಎ.ಹ್ಯಾರೀಸ್, ಮೊಹಮ್ಮದ್ ಹ್ಯಾರೀಸ್ ನಲಪಾಡ್, ಎಸ್.ಎ.ಹುಸೇನ್, ಮನ್ಸೂರ್ ಅಲಿಖಾನ್.ಬೆಂಗಳೂರು ಉತ್ತರ:
ಸಚಿವ ಕೃಷ್ಣ ಬೈರೇಗೌಡ ಅವರ ಹೆಸರು ಈ ಕ್ಷೇತ್ರಕ್ಕೆ ಕೇಳಿ ಬಂದಿದೆ. ಆದರೆ, ಕೃಷ್ಣ ಬೈರೇಗೌಡರಿಗೆ ಸ್ಪರ್ಧೆಯ ಕಿಂಚಿತ್ ಬಯಕೆಯೂ ಇಲ್ಲ. ಹೀಗಾಗಿ, ಬಿಜೆಪಿಯ ಶಾಸಕ ಎಸ್.ಟಿ. ಸೋಮಶೇಖರ್ ಹೆಸರು ಪ್ರಬಲವಾಗಿ ಕೇಳಿಬಂದಿದೆ. ಇವರಲ್ಲದೆ, ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ, ಮಾಜಿ ಎಂಎಲ್‌ಸಿ ನಾರಾಯಣ ಸ್ವಾಮಿ ಅವರು ಟಿಕೆಟ್ ಕೇಳಿದ್ದಾರೆ.ಸಂಭವನೀಯರು:ಎಸ್.ಟಿ. ಸೋಮಶೇಖರ್, ಕೃಷ್ಣ ಬೈರೇಗೌಡ, ಕುಸಮಾ ಹನುಮಂತರಾಯಪ್ಪ. ನಾರಾಯಣಸ್ವಾಮಿ.
----ಬೆಂಗಳೂರು ಗ್ರಾಮಾಂತರ:ಹಾಲಿ ಸಂಸದ ಡಿ.ಕೆ. ಸುರೇಶ್ ಅವರ ಹೆಸರು ಮಾತ್ರ ಪರಿಗಣನೆಯಲ್ಲಿದೆ. ಸುರೇಶ್ ಅವರನ್ನು ಬೆಂಗಳೂರು ಉತ್ತರಕ್ಕೆ ಕಳುಹಿಸಿ, ಈ ಕ್ಷೇತ್ರದಿಂದ ಕುಸುಮಾ ಹನುಮಂತರಾಯಪ್ಪ ಅವರನ್ನು ಕಣಕ್ಕೆ ಇಳಿಸುವ ಚರ್ಚೆಯಿದೆ ಎಂಬ ಗುಲ್ಲು ಇದ್ದರೂ, ಪಕ್ಷದ ಉನ್ನತ ಮೂಲಗಳು ಇದನ್ನು ನಿರಾಕರಿಸುತ್ತವೆ. ---
ಬೆಂಗಳೂರು ದಕ್ಷಿಣ:ಸಚಿವ ರಾಮಲಿಂಗಾರೆಡ್ಡಿ ಅಥವಾ ಅವರ ಪುತ್ರಿ ಮಾಜಿ ಶಾಸಕಿ ಸೌಮ್ಯ ರೆಡ್ಡಿ ಅವರ ಹೆಸರು ಕೇಳಿಬಂದಿದೆ. ಸಂಭವನೀಯರು:
ರಾಮಲಿಂಗಾರೆಡ್ಡಿ, ಸೌಮ್ಯ ರೆಡ್ಡಿ.---ಮಂಡ್ಯ:
ಈ ಕ್ಷೇತ್ರದಿಂದ ಸಚಿವ ಚೆಲುವರಾಯಸ್ವಾಮಿ ಅವರ ಹೆಸರು ಕೇಳಿಬಂದಿದೆ. ಆದರೆ, ಅವರು ಸ್ಪರ್ಧೆಗೆ ಹಿಂಜರಿದಿದ್ದು ತಮ್ಮ ಬದಲಾಗಿ ತಮ್ಮ ಪತ್ನಿ ಧನಲಕ್ಷ್ಮೀ ಚೆಲುವರಾಯಸ್ವಾಮಿ ಅವರಿಗೆ ಟಿಕೆಟ್ ನೀಡುವಂತೆ ಪಕ್ಷದ ನಾಯಕರನ್ನು ಕೇಳಿದ್ದಾರೆ ಎನ್ನಲಾಗಿದೆ. ಉಳಿದಂತೆ ಗೌರಿಬಿದನೂರು ಶಾಸಕ ಪುಟ್ಟಸ್ವಾಮಿಗೌಡ ಅವರ ಸಹೋದರ ಸ್ಟಾರ್ ಚಂದ್ರ ಹಾಗೂ ಅಮರಾವತಿ ಚಂದ್ರಶೇಖರ್ ಆಕಾಂಕ್ಷಿಗಳಾಗಿದ್ದಾರೆ.ಸಂಭವನೀಯರುಸಚಿವ ಚಲುವರಾಯಸ್ವಾಮಿ, ಧನಲಕ್ಷ್ಮೀ ಚೆಲುವರಾಯಸ್ವಾಮಿ, ಸ್ಟಾರ್ ಚಂದ್ರ ಹಾಗೂ ಅಮರಾವತಿ ಚಂದ್ರಶೇಖರ್----
ಮೈಸೂರು:ಟಿಕೆಟ್‌ಗಾಗಿ ಯುವ ನಾಯಕರು ತೀವ್ರ ಪೈಪೋಟಿ ನಡೆಸಿರುವ ಕ್ಷೇತ್ರವಿದು. ಎಸ್.ಎಂ.ಕೃಷ್ಣ ಅವರ ಸಂಬಂಧಿ ಡಾ.ಸುಶ್ರುತ್ ಗೌಡ ಹಾಗೂ ದೇವರಾಜ ಅರಸು ಅವರ ಮೊಮ್ಮಗ ಸೂರಜ್ ಹೆಗಡೆ ತೀವ್ರ ಪೈಪೋಟಿ ನಡೆಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ಹೆಸರು ಆರಂಭದಲ್ಲಿ ಕೇಳಿ ಬಂದಿತ್ತಾದರೂ ಖುದ್ದು ಸಿದ್ದರಾಮಯ್ಯ ಅವರೇ ಯತೀಂದ್ರ ಸ್ಪರ್ಧೆ ಬೇಡ ಎಂದಿದ್ದಾರೆ ಎನ್ನಲಾಗಿದೆ. ಸಚಿವ ಪಿರಿಯಾಪಟ್ಟಣ ವೆಂಕಟೇಶ್ ಅವರಿಗೆ ಸ್ಪರ್ಧಿಸುವಂತೆ ಸೂಚನೆಯಿದ್ದರೂ ಅವರು ಸುತಾರಾಂ ಬೇಡ ಎಂದಿದ್ದಾರಂತೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್ ಕೂಡ ಆಕಾಂಕ್ಷಿಯಾಗಿದ್ದಾರೆ.ಸಂಭವನೀಯರು:
ಡಾ.ಸುಶ್ರುತ್ ಗೌಡ, ಸೂರಜ್ ಹೆಗಡೆ, ಸಚಿವ ಪಿರಿಯಾಪಟ್ಟಣ ವೆಂಕಟೇಶ್, ವಿಜಯಕುಮಾರ್. ಎಂ.ಲಕ್ಷ್ಮಣ್.---ರಾಯಚೂರು:
ಪ್ರಭಾವಿ ಸಚಿವ ಸತೀಶ್ ಜಾರಕಿಹೊಳಿ ಅವರು ತಮ್ಮ ಪತ್ನಿಯ ಸಹೋದರ ರವಿಕುಮಾರ್ ಪಾಟೀಲ್ ಪರವಾಗಿ ಪ್ರಬಲ ಲಾಬಿ ನಡೆಸಿದ್ದರೆ, ಬಿಡಿಎ ಆಯುಕ್ತರಾಗಿ ನಿವೃತ್ತರಾದ ಅನಿಲಕುಮಾರ ಅವರು ಆಸಕ್ತರಾಗಿದ್ದು, ಇವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬೆಂಬಲವಿದೆ ಎನ್ನಲಾಗಿದೆ. ಹೀಗಾಗಿ ಈ ಕ್ಷೇತ್ರದಲ್ಲಿ ಪೈಪೋಟಿ ತೀವ್ರವಿದೆ.ಸಂಭವನೀಯರು:ರವಿಕುಮಾರ್ ಪಾಟೀಲ್, ಅನಿಲ್ ಕುಮಾರ--
ಶಿವಮೊಗ್ಗ:ಟಿಕೆಟ್ ಬಹುತೇಕ ಖಚಿತವಾಗಿರುವ ಕೆಲವೇ ಕ್ಷೇತ್ರಗಳಲ್ಲಿ ಶಿವಮೊಗ್ಗ ಕೂಡ ಒಂದು. ನಟ ಶಿವರಾಜಕುಮಾರ್ ಪತ್ನಿ ಗೀತಾ ಶಿವರಾಜಕುಮಾರ್ ಅವರಿಗೆ ಟಿಕೆಟ್ ಬಹುತೇಕ ಖಚಿತಸಂಭವನೀಯರು:
ಗೀತಾ ಶಿವರಾಜಕುಮಾರ್==ತುಮಕೂರು:ವಲಸಿಗರಿಗಾಗಿ ಕಾಂಗ್ರೆಸ್ ಕಾಯುತ್ತಿರುವ ಕ್ಷೇತ್ರವಿದು. ಹಿರಿಯ ನಾಯಕ ವಿ.ಸೋಮಣ್ಣ ಪಕ್ಷಕ್ಕೆ ಬಂದರೆ ಅವರಿಗೆ ಟಿಕೆಟ್ ನೀಡುವ ಇರಾದೆ ರಾಜ್ಯ ನಾಯಕತ್ವಕ್ಕೆ ಇದೆ. ಇವರಲ್ಲದೇ ಬಿಜೆಪಿಯಲ್ಲಿರುವ ಮತ್ತೊಬ್ಬ ಹಿರಿಯ ನಾಯಕ ಮುದ್ದಹನುಮೇಗೌಡ ಅವರಿಗೂ ಆಹ್ವಾನ ನೀಡಲಾಗಿದೆ. ಉಳಿದಂತೆ ಸಚಿವ ಕೆ.ಎನ್. ರಾಜಣ್ಣ ತಾವೇ ಖುದ್ದಾಗಿ ಸ್ಪರ್ಧೆಗೆ ಸಿದ್ಧ ಎಂದು ಘೋಷಿಸಿದ್ದಾರೆ. ಒಂದು ವೇಳೆ ವಲಸಿಗರು ಬರದಿದ್ದರೆ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಅವರನ್ನು ಕಣಕ್ಕೆ ಇಳಿಸಿದರೆ ಹೇಗೆ ಎಂಬ ಚಿಂತನೆಯೂ ಕಾಂಗ್ರೆಸ್ ನಾಯಕತ್ವ ಹೊಂದಿದೆ. ಯುವ ನಾಯಕ ಮುರಳೀಧರ್ ಹಾಲಪ್ಪ ಕೂಡ ಟಿಕೆಟ್ ಬಯಕೆ ಹೊಂದಿದ್ದಾರೆ.ಸಂಭವನೀಯರು:
ವಿ.ಸೋಮಣ್ಣ, ಕೆ.ಎನ್.ರಾಜಣ್ಣ, ಮುದ್ದಹನುಮೇಗೌಡ, ಮುರಳೀಧರ ಹಾಲಪ್ಪ, ಟಿ.ಬಿ.ಜಯಚಂದ್ರ.---ಬೆಳಗಾವಿ:
ತೀವ್ರ ಪೈಪೋಟಿ ಇರುವ ಕ್ಷೇತ್ರವಿದು. ಈ ಕ್ಷೇತ್ರದಿಂದ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಕಣಕ್ಕೆ ಇಳಿಸಬೇಕು ಎಂಬ ಲಾಬಿ ನಡೆದಿದೆ. ಆದರೆ, ಸತೀಶ್ ಅವರಿಗೆ ತಮ್ಮ ಪುತ್ರಿ ಪ್ರಿಯಾಂಕಾ ಅವರನ್ನು ಕಣಕ್ಕೆ ಇಳಿಸುವ ಬಯಕೆಯಿದೆ. ಪ್ರಿಯಾಂಕ ಕಣಕ್ಕೆ ಇಳಿದರೆ ಕ್ಷೇತ್ರದ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಶಾಸಕರಾಗಿರುವ ಜಾರಕಿಹೊಳಿ ಸಹೋದರರು ಖಚಿತವಾಗಿ ಬೆಂಬಲಕ್ಕೆ ನಿಲ್ಲುವ ಮೂಲಕ ಪ್ರಿಯಾಂಕ ಗೆಲುವು ಸುಲಭವಾಗಿಸುತ್ತಾರೆ ಎಂದು ಬಿಂಬಿಸಲಾಗುತ್ತಿದೆ. ಆದರೆ, ಮತ್ತೊಬ್ಬ ಪ್ರಭಾವಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ತಮ್ಮ ಪುತ್ರ ಮೃಣಾಲ್ ಪರವಾಗಿ ಪ್ರಬಲ ಲಾಬಿ ನಡೆಸಿದ್ದಾರೆ.ಸಂಭವನೀಯರು:ಸಚಿವ ಸತೀಶ್ ಜಾರಕಿಹೊಳಿ, ಮೃಣಾಲ್ ಹೆಬ್ಬಾಳಕರ, ಪ್ರಿಯಾಂಕಾ ಜಾರಕಿಹೊಳಿ--
ಬಳ್ಳಾರಿ:ಸಚಿವ ಬಿ. ನಾಗೇಂದ್ರ ಅವರಿಗೆ ಸ್ಪರ್ಧಿಸುವಂತೆ ರಾಜ್ಯ ನಾಯಕತ್ವ ಸೂಚಿಸಿದೆ. ಆದರೆ, ಅವರು ತಮ್ಮ ಸಹೋದರ ವೆಂಕಟೇಶ್ ಪ್ರಸಾದ್ ಪರವಾಗಿ ಲಾಬಿ ನಡೆಸಿದ್ದಾರೆ. ಹಿರಿಯ ನಾಯಕ ವಿ.ಎಸ್. ಉಗ್ರಪ್ಪ ಕೂಡ ಆಕಾಂಕ್ಷಿಯಾಗಿದ್ದಾರೆ. ಸಂಭವನೀಯರು:
ಬಿ. ನಾಗೇಂದ್ರ, ವೆಂಕಟೇಶ್ ಪ್ರಸಾದ್, ವಿ.ಎಸ್. ಉಗ್ರಪ್ಪ.ಬೀದರ್:ಸಚಿವ ಈಶ್ವರ್ ಖಂಡ್ರೆ ಅವರಿಗೆ ಸ್ಪರ್ಧಿಸುವಂತೆ ನಾಯಕರು ಹೇಳುತ್ತಿದ್ದರೆ ಅವರು ತಮ್ಮ ಪುತ್ರ ಸಾಗರ್ ಖಂಡ್ರೆ ಪರವಾಗಿ ಬ್ಯಾಟ್ ಬೀಸಿದ್ದಾರೆ. ಇವರಿಗೆ ಇನ್ನೂ ಮಾಜಿ ಶಾಸಕ ರಾಜಶೇಖರ್ ಪಾಟೀಲ್ ಹುಮ್ನಾಬಾದ್ ತೀವ್ರ ಪೈಪೋಟಿ ನೀಡಿದ್ದಾರೆ.
---
ವಿಜಯಪುರ (ಮೀಸಲು):ಸಚಿವ ಆರ್.ಬಿ.ತಿಮ್ಮಾಪುರ ಅವರನ್ನು ಕಣಕ್ಕೆ ಇಳಿಸುವ ಚಿಂತನೆಯಿದ್ದರೂ ಮಾಜಿ ಶಾಸಕ ರಾಜೂ ಅಲಗೂರ ಹೆಸರು ಪ್ರಬಲವಾಗಿ ಕೇಳಿ ಬಂದಿದೆ. ಲಂಬಾಣಿಗಳಿಗೆ ಮೀಸಲು ಕ್ಷೇತ್ರದಿಂದ ಟಿಕೆಟ್ ನೀಡಬೇಕು ಎಂಬ ಪ್ರಬಲ ಬೇಡಿಕೆಯೂ ಇರುವುದರಿಂದ ಈ ಕ್ಷೇತ್ರದಲ್ಲಿ ಪ್ರಕಾಶ್ ರಾಠೋಡ್ ಹೆಸರು ಪ್ರಬಲವಾಗಿದೆ.ಕೆಪಿಸಿಸಿ ಪ್ರದಾಧಿಕಾರಿ ಕಾಂತಾ ನಾಯಕ್ ಕೂಡ ಆಕಾಂಕ್ಷಿ.ಸಂಭವನೀಯರು:
ಸಚಿವ ಆರ್.ಬಿ. ತಿಮ್ಮಾಪುರ, ಮಾಜಿ ಶಾಸಕ ರಾಜು ಅಲಗೂರು, ಪ್ರಕಾಶ ರಾಠೋಡ್, ಕಾಂತಾ ನಾಯಕ್
--
ಚಾಮರಾಜನಗರ:ಈ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರ ಮೇಲೆ ಪ್ರಬಲ ಒತ್ತಡವಿದೆ. ಆದರೆ, ಅವರು ತಮ್ಮ ಪುತ್ರ ಸುನೀಲ್ ಬೋಸ್ ಪರ ಲಾಬಿ ನಡೆಸಿದ್ದಾರೆ. ಉಳಿದಂತೆ ಮಾಜಿ ಶಾಸಕ ನಂಜುಂಡಸ್ವಾಮಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಅಮರಾನಾಥ್ ಆಕಾಂಕ್ಷಿಯಾಗಿದ್ದಾರೆ.ಸಂಭವನೀಯರು:
ಡಾ. ಎಚ್.ಸಿ. ಮಹದೇವಪ್ಪ, ಸುನೀಲ್ ಬೋಸ್, ನಂಜುಂಡಸ್ವಾಮಿ, ಪುಷ್ಪ ಅಮರನಾಥ್.-----ಚಿಕ್ಕಬಳ್ಳಾಪುರ:
ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ಸ್ಪರ್ಧೆಯ ಬಯಕೆ ಹೊಂದಿರುವ ಕ್ಷೇತ್ರ. ಆದರೆ, ಮಾಜಿ ಡೆಪ್ಯುಟಿ ಸ್ಪೀಕರ್ ಶಿವಶಂಕರ ರೆಡ್ಡಿ ಹಾಗೂ ಯುವ ನಾಯಕ ರಕ್ಷಾ ರಾಮಯ್ಯ ಅವರು ಹೆಸರು ಪ್ರಬಲವಾಗಿ ಕೇಳಿಬಂದಿದೆ. ಸಂಭವನೀಯರು:ಶಿವಶಂಕರ ರೆಡ್ಡಿ, ವೀರಪ್ಪ ಮೊಯ್ಲಿ, ರಕ್ಷಾ ರಾಮಯ್ಯ---
ಚಿಕ್ಕೋಡಿ:ಸತೀಶ್ ಜಾರಕಿಹೊಳಿ ಅವರು ಈ ಕ್ಷೇತ್ರದಿಂದ ಕುರುಬ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂದು ಲಾಬಿ ನಡೆಸುತ್ತಿದ್ದು ಜಿಲ್ಲಾಧ್ಯಕ್ಷ ಲಕ್ಷ್ಮಣ ರಾವ್ ಚಿಂಗಳೆ ಅವರ ಪರ ಬ್ಯಾಟ್ ಬೀಸಿದ್ದಾರೆ. ಬಿಜೆಪಿಯಿಂದ ವಲಸೆ ಬಂದರೆ ರಮೇಶ್ ಕತ್ತಿ ಅವರ ಹೆಸರು ಪ್ರಮುಖವಾಗಿ ಪರಿಗಣನೆಯಾಗುವ ಸಾಧ್ಯತೆಯಿದೆ. ಇನ್ನು ಶಾಸಕ ಗಣೇಶ್ ಹುಕ್ಕೇರಿ ಸಹ ಇಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.ಸಂಭವನೀಯರು:
ರಮೇಶ್ ಕತ್ತಿ , ಲಕ್ಷ್ಮಣ್ ರಾವ್ ಚಿಂಗಳೆ, ಗಣೇಶ್ ಹುಕ್ಕೇರಿ---ಚಿತ್ರದುರ್ಗ:
ಮಾಜಿ ಸಂಸದ ಬಿ.ಎನ್. ಚಂದ್ರಪ್ಪ ಹೆಸರು ಪ್ರಬಲವಾಗಿ ಕೇಳಿಬಂದಿದೆ. ಇನ್ನೂ ಬೋವಿ ಸಮುದಾಯದ ನಾಯಕ ಡಿ. ಬಸವರಾಜ ಹಾಗೂ ತಿಪ್ಪೇಸ್ವಾಮಿ ಅವರು ಆಕಾಂಕ್ಷಿಗಳಾಗಿದ್ದಾರೆ. ಮಾಜಿ ಸಚಿವ ಆಂಜನೇಯ ಅವರ ಹೆಸರು ಕೇಳಿ ಬಂದಿದೆ.ಸಂಭವನೀಯರು:ಬಿ.ಎನ್. ಚಂದ್ರಪ್ಪ, ಡಿ. ಬಸವರಾಜ, ತಿಪ್ಪೇಸ್ವಾಮಿ, ಎಚ್.ಆಂಜನೇಯ---
ಮಂಗಳೂರು:ಮಾಜಿ ಸಚಿವರಾದ ರಮಾನಾಥ ರೈ ಹಾಗೂ ವಿನಯಕುಮಾರ್ ಸೊರಕೆ ತೀವ್ರ ಪೈಪೋಟಿ ನಡೆಸಿರುವ ಕ್ಷೇತ್ರವಿದು. ಸ್ಪೀಕರ್ ಯು.ಟಿ. ಖಾದರ್ ಸೊರಕೆ ಪರವಾಗಿ ಬ್ಯಾಟ್ ಬೀಸಿದ್ದಾರೆ. ಯುವ ನಾಯಕ ಮಿಥುನ್ ರೈ ಕೂಡ ಟಿಕೆಟ್ ಬಯಸಿದ್ದರೆ ಸ್ಥಳೀಯ ನಾಯಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ತಮ್ಮ ಸೇವೆಯಿಂದ ಹೆಸರು ಮಾಡಿರುವ ರವಿಶಂಕರ್ ಶೆಟ್ಟಿ ಹೆಸರು ಕೂಡ ಕೇಳಿಬಂದಿದೆ. ಸಂಭವನೀಯರು:
ರಮಾನಾಥ್ ರೈ, ವಿನಯಕುಮಾರ ಸೊರಕೆ, ರವಿಶಂಕರ್ ಶೆಟ್ಟಿ, ಮಿಥುನ್ ರೈ---ದಾವಣಗೆರೆ:
ಶಾಮನೂರು ಶಿವಶಂಕರಪ್ಪ ಅವರ ಸೊಸೆ ಹಾಗೂ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ ಟಿಕೆಟ್ ಆಕಾಂಕ್ಷಿಯಾಗಿದ್ದರೆ ಅವರಿಗೆ ಪ್ರಬಲ ಪೈಪೋಟಿ ನೀಡುತ್ತಿರುವುದು ಕುರುಬ ಸಮುದಾಯದ ವಿನಯಕುಮಾರ್. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೃಪಾಕಟಾಕ್ಷ ಹೊಂದಿರುವ ವಿನಯಕುಮಾರ್ ಹಾಗೂ ಪ್ರಭಾ ನಡುವೆ ತೀವ್ರ ಪೈಪೋಟಿಯಿದೆ. ಇವರಲ್ಲದೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಂಜಪ್ಪ ಹಾಗೂ ಸಿಲ್ಕ್ ಬೋರ್ಡ್ ಮಾಜಿ ಅಧ್ಯಕ್ಷ ಬಸವರಾಜ ಕೂಡ ಟಿಕೆಟ್ ಬಯಸಿದ್ದಾರೆ.ಸಂಭವನೀಯರು:ಡಾ. ಪ್ರಭಾ ಮಲ್ಲಿಕಾರ್ಜುನ್, ವಿನಯಕುಮಾರ್, ಮಂಜಪ್ಪ, ಬಸವರಾಜ್----
ಧಾರವಾಡ:ಶಾಸಕ ವಿನಯ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ ತೀವ್ರ ಪೈಪೋಟಿ ನಡೆಸಿದ್ದರೆ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸದಾನಂದ ಡಂಗನವರ್ ಹಾಗೂ ಯುವ ನಾಯಕರಾದ ರಜತ್ ಉಳ್ಳಾಗಡ್ಡಿಮಠ ಹಾಗೂ ಅನಿಲಕುಮಾರ ಪಾಟೀಲ ಕೂಡ ಟಿಕೆಟ್ ಬಯಸಿದ್ದಾರೆ.ಸಂಭವನೀಯರು:
ಶಿವಲೀಲಾ ಕುಲಕರ್ಣಿ, ಸದಾನಂದ ಡಂಗನವರ, ರಜತ್ ಉಳ್ಳಾಗಡ್ಡಿಮಠ, ಅನಿಲಕುಮಾರ ಪಾಟೀಲ--ಕಲಬುರಗಿ:
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸ್ಪರ್ಧಿಸುವುದಾದರೇ ಅವರಿಗೆ ಟಿಕೆಟ್. ಒಂದು ವೇಳೆ ಅವರು ಸ್ಪರ್ಧಿಸದಿದ್ದರೆ ಅವರ ಅಳಿಯ ರಾಧಾಕೃಷ್ಣ ಅವರಿಗೆ ಟಿಕೆಟ್ ಖಚಿತ.ಸಂಭವನೀಯರು:ಮಲ್ಲಿಕಾರ್ಜುನ ಖರ್ಗೆ, ರಾಧಾಕೃಷ್ಣ.---
ಹಾಸನ:ಮಾಜಿ ಶಾಸಕ ಗೋಪಾಲ ಸ್ವಾಮಿ, ಮಾಜಿ ಸಚಿವ ಎಚ್.ಸಿ. ಶ್ರೀಕಂಠಯ್ಯ ಅವರ ಮೊಮ್ಮಗ ಎಚ್.ಸಿ. ಲಲಿತ್ ರಾಘವ ಶ್ರೀಕಂಠಯ್ಯ (ದೀಪು), ಮಾಜಿ ಸಚಿವ ಪುಟ್ಟಸ್ವಾಮಿಗೌಡ ಅವರ ಮೊಮ್ಮಗ ಶ್ರೇಯಸ್ ಪಟೇಲ್ ಅವರ ನಡುವೆ ಟಿಕೆಟ್ ಗಾಗಿ ತೀವ್ರ ಪೈಪೋಟಿಯಿದೆ.ಸಂಭವನೀಯರು:
ಗೋಪಾಲಸ್ವಾಮಿ, ಲಲಿತ್ ರಾಘವ ಶ್ರೀಕಂಠಯ್ಯ, ಶ್ರೇಯಸ್ ಪಟೇಲ್---ಹಾವೇರಿ:
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಹಾಗೂ ಮಾಜಿ ಶಾಸಕ ಸೋಮಣ್ಣ ಬೇವಿನಮರದ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಸಂಭವನೀಯರು:ಸಲೀಂ ಅಹ್ಮದ್, ಸೋಮಣ್ಣ ಬೇವಿನಮರದ--
ಕೋಲಾರ:ಸಚಿವ ಕೆ.ಎಚ್. ಮುನಿಯಪ್ಪ ಅವರು ತಮ್ಮ ಪುತ್ರಿ ರೂಪಾ ಅವರನ್ನು ರಾಜ್ಯ ಸಚಿವ ಸಂಪುಟಕ್ಕೆ ತೆಗೆದುಕೊಳ್ಳುವ ಭರವಸೆ ನೀಡಿದರೆ ಸ್ಪರ್ಧಿಸುವ ಷರತ್ತು ಇಟ್ಟು ಸ್ಪರ್ಧೆಗೆ ಎದುರುನೋಡುತ್ತಿರುವ ಕ್ಷೇತ್ರವಿದು. ಆದರೆ, ಮುನಿಯಪ್ಪ ಅವರಿಗೆ ಸ್ಥಳೀಯವಾಗಿ ತೀವ್ರ ವಿರೋಧವಿದೆ.ಸಂಭವನೀಯರು:
ಕೆ.ಎಚ್. ಮುನಿಯಪ್ಪ---ಕೊಪ್ಪಳ:ಶಾಸಕ ರಾಘವೇಂದ್ರ ಹಿಟ್ನಾಳ್ ಅವರು ತಮ್ಮ ಸಹೋದರ ರಾಜಶೇಖರ ಹಿಟ್ನಾಳ್ ಪರವಾಗಿ ತೀವ್ರ ಲಾಬಿ ನಡೆಸಿದ್ದಾರೆ. ಆದರೆ, ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ಕೂಡ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಇನ್ನು ಯುವ ಕಾಂಗ್ರೆಸ್ ನಾಯಕನಾಗಿದ್ದ ಬಸನಗೌಡ ಬಾದರ್ಲಿ ಕೂಡ ಆಕಾಂಕ್ಷಿ.ಸಂಭವನೀಯರು:
ರಾಜಶೇಖರ ಹಿಟ್ನಾಳ್. ಅಮರೇಗೌಡ ಬಯ್ಯಾಪುರ, ಬಸವಗೌಡ ಬಾದರ್ಲಿ---ಉಡುಪಿ-ಚಿಕ್ಕಮಗಳೂರು:
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಹೆಸರು ಪ್ರಮುಖವಾಗಿ ಕೇಳಿ ಬಂದಿದೆ. ಆದರೆ, ಬಿಜೆಪಿಯಿಂದ ವಲಸೆ ಬರುವ ಸಾಧ್ಯತೆಯಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ಹಿಂದೆ ಆರ್‌ಎಸ್‌ಎಸ್‌ನಲ್ಲಿದ್ದೂ ಈಗ ಕಾಂಗ್ರೆಸ್ ಸೇರಿ ಕ್ಷೇತ್ರದಲ್ಲಿ ಸದ್ದು ಮಾಡುತ್ತಿರುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಎಸ್.ಎಸ್. ಸುಧೀರ್ ಕುಮಾರ್ ಮುರುಳಿ ತೀವ್ರ ಪೈಪೋಟಿ ನೀಡುತ್ತಿದ್ದಾರೆ.ಸಂಭವನೀಯರು:ಜಯಪ್ರಕಾಶ್ ಹೆಗ್ಡೆ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಎಸ್.ಎಸ್. ಸುಧೀರ್ ಕುಮಾರ್ ಮುರುಳಿ.--
ಕಾರವಾರ:ಕಾಂಗ್ರೆಸ್‌ಗೆ ಬಿಜೆಪಿಯಿಂದ ವಲಸೆ ಬಂದರೆ ಶಿವರಾಮ ಹೆಬ್ಬಾರ್‌ಗೆ ಟಿಕೆಟ್ ದೊರೆಯುವ ಸಾಧ್ಯತೆಯಿದೆ. ಆದರೆ, ಈ ಕ್ಷೇತ್ರದಿಂದ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಕೂಡ ಆಕಾಂಕ್ಷಿ. ಉಳಿದಂತೆ, ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಹಾಗೂ ಹಿರಿಯ ನಾಯಕ ಆರ್.ವಿ. ದೇಶಪಾಂಡೆ ಅವರ ಪುತ್ರ ಪ್ರಶಾಂತ ದೇಶಪಾಂಡೆ ಹೆಸರು ಕೇಳಿಬಂದಿದೆ.ಸಂಭವನೀಯರು:
ಶಿವರಾಮ ಹೆಬ್ಬಾರ್, ಬಿ.ಕೆ. ಹರಿಪ್ರಸಾದ್, ಅಂಜಲಿ ನಿಂಬಾಳ್ಕರ್, ಪ್ರಶಾಂತ ದೇಶಪಾಂಡೆ---ಬಾಗಲಕೋಟೆ:
ಬ್ಯಾರೇಜ್ ಸಿದ್ದು ಎಂದೇ ಖ್ಯಾತರಾದ ಸಿದ್ದು ನ್ಯಾಮೇಗೌಡ ಪುತ್ರ ಆನಂದ ನ್ಯಾಮಗೌಡ, ಶಾಸಕ ವಿಜಯಾನಂದ ಕಾಶಪ್ಪನವರ ಪತ್ನಿ ವೀಣಾ ಕಾಶಪ್ಪನವರ ಅವರ ನಡುವೆ ಪೈಪೋಟಿಯಿದ್ದರೂ ಮಾಜಿ ಕೇಂದ್ರ ಸಚಿವ ಅಜಯಕುಮಾರ ಸರನಾಯಕ್ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ. ಈ ಮೂವರ ನಡುವೆ ಟಿಕೆಟ್ ಗಾಗಿ ತೀವ್ರ ಪೈಪೋಟಿಯಿರುವ ಕ್ಷೇತ್ರವಿದು.ಸಂಭವನೀಯರು:ಅಜಯಕುಮಾರ್ ಸರನಾಯಕ್, ಆನಂದ ನ್ಯಾಮಗೌಡ, ವೀಣಾ ಕಾಶಪ್ಪನವರ.