ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಖಂಡ್ರೆ ಕಮಾಲ್‌

Published : Sep 11, 2026, 11:44 AM IST
Eshwar Khandre

ಸಾರಾಂಶ

ರಾಜ್ಯದ ಮುಕ್ಕಾಲು ಭಾಗದಷ್ಟು ಅಂದರೆ 4.45 ಕೋಟಿ ಜನ ವಾಸಿಸುವ ಗ್ರಾಮೀಣ ಕರ್ನಾಟಕವು ರಾಜ್ಯದ ಜೀವನಾಡಿಯಾಗಿದೆ. ಜೂನ್ 3ರಂದು ಗ್ರಾಮೀಣ ಜನರ ಜೀವನ ಸುಗಮಗೊಳಿಸುವ ಹೊಣೆ ಹೊತ್ತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಈ ನಿಟ್ಟಿನಲ್ಲಿ ‘ದಿನ ನೂರು ಕಾರ್ಯ ನೂರಾರು’ ಎನ್ನುವಂತೆ ಕಾರ್ಯನಿರ್ವಹಿಸುತ್ತಿದ್ದಾರೆ.

ಅಪ್ಪಾರಾವ್‌ ಸೌದಿ, ಬೀದರ್‌

ರಾಜ್ಯದ ಮುಕ್ಕಾಲು ಭಾಗದಷ್ಟು ಅಂದರೆ 4.45 ಕೋಟಿ ಜನ ವಾಸಿಸುವ ಗ್ರಾಮೀಣ ಕರ್ನಾಟಕವು ರಾಜ್ಯದ ಜೀವನಾಡಿಯಾಗಿದೆ. ಜೂನ್ 3ರಂದು ಗ್ರಾಮೀಣ ಜನರ ಜೀವನ ಸುಗಮಗೊಳಿಸುವ ಹೊಣೆ ಹೊತ್ತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಈ ನಿಟ್ಟಿನಲ್ಲಿ ‘ದಿನ ನೂರು ಕಾರ್ಯ ನೂರಾರು’ ಎನ್ನುವಂತೆ ಕಾರ್ಯನಿರ್ವಹಿಸುತ್ತಿದ್ದಾರೆ.

ಇಲಾಖೆಯ ಚುಕ್ಕಾಣಿ ಹಿಡಿದ ಈಶ್ವರ ಖಂಡ್ರೆ ಅವರು ಮುಂಗಾರು ಮಳೆ ಕೊರತೆಯ ಹಿನ್ನೆಲೆಯಲ್ಲಿ ಪ್ರಥಮ ಆದ್ಯತೆ ನೀಡಿದ್ದು ಗ್ರಾಮೀಣ ಶುದ್ಧ ಕುಡಿಯುವ ನೀರಿನ ಪೂರೈಕೆಗೆ. ಉನ್ನತಾಧಿಕಾರಿಗಳ ಸಭೆ ನಡೆಸಿ, ಕುಡಿವ ನೀರಿಗೆ ಮುಂಗಡವಾಗಿ ಬಿಡುಗಡೆ ಮಾಡಿರುವ 117 ಕೋಟಿ ರು. ಸದ್ಬಳಕೆ ಮಾಡಬೇಕು, ಕುಡಿವ ನೀರಿನ ಸಮಸ್ಯೆ ಇರುವ ಗ್ರಾಮಗಳನ್ನು ಗುರುತಿಸಿ ಖಾಸಗಿ ಕೊಳವೆಬಾವಿ ಮಾಲೀಕರೊಂದಿಗೆ ಒಡಂಬಡಿಕೆ ಮಾಡಿಕೊಂಡು, ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಬೇಕು. ಯಾವುದೇ ಗ್ರಾಮದಿಂದ ದೂರು ಬಂದರೆ 24 ಗಂಟೆಯೊಳಗೆ ನೀರು ಪೂರೈಸಲು ಕ್ರಮ ವಹಿಸುವಂತೆ ಆದೇಶ ನೀಡಿ, ನಿಯಮಿತವಾಗಿ ಎಲ್ಲ ಜಿ.ಪಂ.ಗಳ ಸಿಇಓಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಅನುಷ್ಠಾನದ ಖಾತ್ರಿಪಡಿಸಿಕೊಂಡರು.

ಆರ್ಥಿಕ ಹೊರೆ ನಡುವೆಯೂ ಜಿ ರಾಮ್ ಜಿ

ಯುಪಿಎ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ವಿಬಿ ಜಿ ರಾಮ್ ಜಿ ಆಗಿ ಬದಲಾಯಿಸಿದ ಕೇಂದ್ರ ಸರ್ಕಾರ 90:10 ಅನುಪಾತದ ಬದಲಿಗೆ 60:40ರ ಅನುಪಾತದ ಮೂಲಕ ರಾಜ್ಯಗಳ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಹೊರಿಸಿತು. 2006ರಿಂದ 2026ರ ಜೂನ್ ಅಂತ್ಯದವರೆಗೆ 20 ವರ್ಷದಲ್ಲಿ ಕೇಂದ್ರ ಸರ್ಕಾರ ಮನ್ರೇಗಾ ಅಡಿಯಲ್ಲಿ 56492 ಕೋಟಿ ರು. ಭರಿಸಿದ್ದರೆ, ರಾಜ್ಯ ಸರ್ಕಾರ 4821 ಕೋಟಿ ರು. ಮಾತ್ರ ಭರಿಸಿ ಸುಮಾರು 187 ಕೋಟಿ ಮಾನವ ದಿನಗಳ ಉದ್ಯೋಗ ಸೃಜಿಸಿತ್ತು. ಆದರೆ ಈಗ ಒಂದೇ ವರ್ಷಕ್ಕೆ 3806 ಕೋಟಿ ರು. ವೆಚ್ಚ ಭರಿಸುವ ಸ್ಥಿತಿ ಬಂದಿದೆ. ಆದಾಗ್ಯೂ ಗ್ರಾಮೀಣ ಬಡವರ, ದಲಿತರ, ವಂಚಿತರ, ಶೋಷಿತರ ನೆರವಿಗೆ ನಿಲ್ಲಲು ಯೋಜನೆಯನ್ನು ಜುಲೈ 1ರಿಂದ ಜಾರಿಗೆ ತರುವಲ್ಲಿ ಖಂಡ್ರೆ ಶ್ರಮಿಸಿದರು.

ದಿನನಿತ್ಯ ಸಿಇಓಗಳೊಂದಿಗೆ ವಿಡಿಯೋ ಕಾನ್ಫರೆನ್ಸ್‌ ನಡೆಸಿ ಹಾಗೂ ತಾವೇ ಖುದ್ದು ವಿಬಿ ಜಿ ರಾಮ್ ಜಿ ಕಾಮಗಾರಿ ನಡೆಯುವ ಸ್ಥಳಕ್ಕೆ ಹೋಗಿ ಕೂಲಿ ಕಾರ್ಮಿಕರಿಗೆ ಉತ್ಸಾಹ ತುಂಬಿದ ಈಶ್ವರ ಖಂಡ್ರೆ, ಇಂದು ಪ್ರತಿ ನಿತ್ಯ 3.8 ಲಕ್ಷ ಮಾನವ ದಿನಗಳ ಸೃಷ್ಟಿಯಾಗುವಂತೆ ಮಾಡಿದ್ದಾರೆ. ಬರ ಪರಿಸ್ಥಿತಿಯಲ್ಲಿ ಜನ ಹಳ್ಳಿಯಿಂದ ಗುಳೆ ಹೋಗದಂತೆ ಇರುವಲ್ಲಿಯೇ ಉದ್ಯೋಗ ನೀಡುವಂತೆ ಶ್ರಮಿಸುತ್ತಿದ್ದಾರೆ.

ಎಲ್ಲ ಗ್ರಾಪಂಗೆ ಮಹಾತ್ಮ ಗಾಂಧಿ ಹೆಸರು

ಕೇಂದ್ರ ಸರ್ಕಾರ ವಿಬಿ ಜಿ ರಾಮ್ ಜಿ ಎಂದು ಹೆಸರು ಬದಲಾಯಿಸಿ, ನರೇಗಾದಲ್ಲಿದ್ದ ಮಹಾತ್ಮ ಗಾಂಧಿ ಹೆಸರನ್ನೇ ತೆಗೆದುಹಾಕಿತು. ಆದರೆ ರಾಜ್ಯ ಸರ್ಕಾರ ರಾಜ್ಯದ ಎಲ್ಲ 5927 ಗ್ರಾಮ ಪಂಚಾಯತಿಗಳ ಹೆಸರಿನ ಮುಂದೆ ಮಹಾತ್ಮ ಗಾಂಧಿ ಗ್ರಾಮ ಪಂಚಾಯತಿ ಎಂದು ಬರೆಸುವ ನಿರ್ಣಯ ಕೈಗೊಂಡಿತು. ಈಶ್ವರ ಖಂಡ್ರೆ ಅವರು ಸಚಿವರಾದ ತರುವಾಯ ಆಗಸ್ಟ್ 15ರ ಗಡುವು ನೀಡಿ ಎಲ್ಲ ಪಂಚಾಯತಿಗೂ ಮಹಾತ್ಮ ಗಾಂಧಿ ಹೆಸರು ಬರೆಸಿದ್ದಾರೆ.

ಇ-ಸ್ವತ್ತು ಸಮಸ್ಯೆಗೆ ಪರಿಹಾರ

ಇ-ಸ್ವತ್ತು ಕೋರಿ ಅರ್ಜಿ ಸಲ್ಲಿಸಿದವರಿಗೆ ಹಲವು ತಿಂಗಳೇ ಆದರೂ ಖಾತೆ ಪಡೆಯುವಲ್ಲಿ ವಿಳಂಬವಾಗುತ್ತಿರುವುದನ್ನು ಗಮನಿಸಿ, ಸಮಸ್ಯೆ ಪರಿಹಾರಕ್ಕೆ ಪಂಚ ಸದಸ್ಯರ ಸಮಿತಿ ರಚಿಸಿ ಪರಿಹಾರ ಕಂಡುಕೊಂಡಿರುವ ಅವರು ಮನೆ ಮನೆಗೆ ಇ-ಸ್ವತ್ತು ನೀಡುವ ಅಭಿಯಾನಕ್ಕೆ ಮುಂದಾಗಿದ್ದಾರೆ.

ಜಲ ಆಯವ್ಯಯ ಮಾಡಿದ ಪ್ರಥಮ ರಾಜ್ಯ

ದೇಶಾದ್ಯಂತ ಅಂತರ್ಜಲ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಮುಂದಿನ ದಿನಗಳಲ್ಲಿ ಮೇಲ್ಮೈ ಜಲ ಮೂಲಗಳಾದ ಕೆರೆ, ಕಟ್ಟೆ, ಕುಂಟೆ, ನದಿ, ಸರೋವರಗಳೇ ಜೀವನಾಧಾರವಾಗಿದ್ದು, ಈ ಕೆರೆಗಳ ಸಂರಕ್ಷಣೆಗೆ ಮುಂದಾಗಿರುವ ಈಶ್ವರ ಖಂಡ್ರೆ, ಯಾರೇ ಹೊಸದಾಗಿ ಕೆರೆ ಒತ್ತುವರಿ ಮಾಡಿದರೆ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸೂಚಿಸಿದ್ದಾರೆ ಮತ್ತು ಈಗಾಗಲೇ ಒತ್ತುವರಿಯಾಗಿರುವ 4828 ಕೆರೆಗಳ 11671 ಎಕರೆ ಒತ್ತುವರಿ ತೆರವಿಗೂ ಆದೇಶ ನೀಡಿದ್ದಾರೆ.

ಜೊತೆಗೆ ರಾಜ್ಯದ ವಿವಿಧ ಗ್ರಾಮದಲ್ಲಿ ಲಭ್ಯವಿರುವ ನೀರು, ಅಲ್ಲಿನ ಜನಸಂಖ್ಯೆ, ಪ್ರತಿಯೊಬ್ಬರಿಗೂ ಪ್ರತಿನಿತ್ಯ 55 ಲೀಟರ್ ನೀರಿನಂತೆ ಎಷ್ಟು ನೀರಿನ ಅಗತ್ಯವಿದೆ? ಕೈಗಾರಿಕೆ, ಶಾಲೆ, ಕಾಲೇಜು, ಸರ್ಕಾರಿ ಕಟ್ಟಡಗಳ ನೀರಿನ ಅವಶ್ಯಕತೆ ಎಷ್ಟು? ಯಾವ ಯಾವ ಮೂಲದಿಂದ ನೀರು ಪೂರೈಸಲು ಸಾಧ್ಯ ಎಂಬುದನ್ನು ತಿಳಿಯಲು ಆರಂಭಿಸಲಾಗಿದ್ದ ಜಲ ಆಯವ್ಯಯ (ವಾಟರ್ ಬಜೆಟಿಂಗ್)ಕ್ಕೂ ಚುರುಕು ನೀಡಿದ್ದಾರೆ.

ಜಲ ಆಸ್ತಿಗಳ ಜಿಯೋ ಟ್ಯಾಗ್

ಗ್ರಾಮೀಣ ಜಲ ಆಸ್ತಿಗಳ ವೈಜ್ಞಾನಿಕ ನಿರ್ವಹಣೆ ಮತ್ತು ನಕಲಿ ಬಿಲ್‌ಗಳಿಗೆ ಕಡಿವಾಣ ಹಾಕಲು ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್) ಆಧಾರಿತ ಮೊಬೈಲ್ ಮತ್ತು ವೆಬ್ ಅಪ್ಲಿಕೇಷನ್‌ಗೆ ಚಾಲನೆ ನೀಡಿದ್ದಾರೆ. ಈ ಆ್ಯಪ್‌ನಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವತಿಯಿಂದ ಕೊರೆಸಲಾಗುವ ಬೋರ್‌ವೆಲ್, ನಿರ್ಮಿಸಲಾಗುವ ಓವರ್ ಹೆಡ್ ಟ್ಯಾಂಕ್, ತೆರೆದ ಬಾವಿ, ಪಂಪ್ ಹೌಸ್, ಜಲ ಶುದ್ಧೀಕರಣ ಘಟಕ, ಸಮತೋಲಿತ ಕೆರೆಗಳು, ಸರೋವರ, ಪ್ರಯೋಗಾಲಯ, ಕೈ ಪಂಪ್ ಇತ್ಯಾದಿಗಳನ್ನು ಸೆ.30ರೊಳಗೆ ಕಡ್ಡಾಯವಾಗಿ ಜಿಯೋ ಟ್ಯಾಗ್ ಮಾಡಲು ಸೂಚಿಸಿದ್ದಾರೆ.

ವಾರದಲ್ಲಿ 2 ದಿನ ಸಿಇಓಗಳ ಗ್ರಾಮ ಭೇಟಿ ಕಡ್ಡಾಯ:

ಉನ್ನತಾಧಿಕಾರಿಗಳು ಹಳ್ಳಿಗಳಿಗೆ ದಿಢೀರ್ ಭೇಟಿ ನೀಡಿ ಶುದ್ಧ ಕುಡಿಯುವ ನೀರು ಪೂರೈಕೆ, ಉತ್ತಮ ರಸ್ತೆ, ನೈರ್ಮಲ್ಯ, ಕೆರೆಗಳ ಸ್ಥಿತಿ ಇತ್ಯಾದಿ ಪರಾಮರ್ಶೆ ನಡೆಸಿದರೆ ಗ್ರಾಮಗಳ ಅಭಿವೃದ್ಧಿ ಆಗುತ್ತದೆ. ಹೀಗಾಗಿ ರಾಜ್ಯದ ಎಲ್ಲ ಜಿಲ್ಲೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು (ಸಿಇಓ) ವಾರದಲ್ಲಿ ಕನಿಷ್ಠ 2 ದಿನ 4-5 ಗ್ರಾಮಗಳಿಗೆ ಭೇಟಿ ನೀಡುವಂತೆ ಆದೇಶಿಸಿದ್ದು ಇದಕ್ಕೆ ಜನರಿಂದ ಉತ್ತಮ ಸ್ಪಂದನೆ ಲಭಿಸಿದೆ.

ಕೌನ್ಸೆಲಿಂಗ್ ಮೂಲಕ ಪಾರದರ್ಶಕ ವರ್ಗಾವಣೆ

ರಾಜ್ಯದ ಗ್ರಾಮೀಣ ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಇಲಾಖೆಯ 2026-27ನೇ ಸಾಲಿನ ವರ್ಗಾವಣೆ ಪ್ರಕ್ರಿಯೆಯಲ್ಲಿ 31 ಜಿಲ್ಲೆಗಳಲ್ಲಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್ - 1 ಮತ್ತು ಗ್ರೇಡ್ -2 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಿಂದ ಸ್ವೀಕೃತವಾಗಿದ್ದ 1,801 ವರ್ಗಾವಣೆ ಅರ್ಜಿಗಳನ್ನು ಪರಿಶೀಲಿಸಿ 1,229 ಅರ್ಹ ಸಿಬ್ಬಂದಿಗೆ ಆನ್ ಲೈನ್ ಮೂಲಕ ಕೌನ್ಸೆಲಿಂಗ್‌ ನಡೆಸಿ, ವರ್ಗಾವಣೆ ಆದೇಶಗಳನ್ನು ಸ್ಥಳದಲ್ಲೇ ನೀಡಿದ್ದಾರೆ. ಖಾಲಿ ಇರುವ ಹುದ್ದೆಗಳ ಪೈಕಿ 1400 ಹುದ್ದೆಗಳ ಭರ್ತಿಗೆ ಕ್ರಮವಹಿಸಿದ್ದಾರೆ.

15ನೇ ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯದ ಗ್ರಾಮ ಪಂಚಾಯತಿಗಳಿಗೆ ಬರಬೇಕಾದ 2186.20 ಕೋಟಿ ರು.ಗಳನ್ನು ಕೇಂದ್ರ ಸರ್ಕಾರ ಪಾವತಿಸದ ಹಿನ್ನೆಲೆಯಲ್ಲಿ ಎಲ್ಲ ಸಂಸತ್ ಸದಸ್ಯರಿಗೆ ಪತ್ರ ಬರೆದು ಒಕ್ಕೂಟ ವ್ಯವಸ್ಥೆಯ ಘನತೆ ಎತ್ತಿಹಿಡಿದಿದ್ದಾರೆ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಡಿಕೆ ಸರ್ಕಾರ ಸರಿದಾರೀಲಿ ಸಾಗುತ್ತಿದೆ : ಸಿದ್ದು ಶ್ಲಾಘನೆ
ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷರ ಆಯ್ಕೇಲಿ ಡಿಕೆ ಮೇಲುಗೈ