ನಿರ್ಲಕ್ಷ್ಯ ತೋರಿರುವ ಸಚಿವರ ವಿರುದ್ಧ ಕಾಂಗ್ರೆಸ್‌ ಹೈಕಮಾಂಡ್‌ ತೀವ್ರ ಗರಂ : ಖರ್ಗೆ ಚಾಟಿ!

KannadaprabhaNewsNetwork |  
Published : Dec 01, 2024, 01:33 AM ISTUpdated : Dec 01, 2024, 05:22 AM IST
ಖರ್ಗೆ | Kannada Prabha

ಸಾರಾಂಶ

ಇಲಾಖಾ ಸಾಧನೆ ಕುರಿತು ವರದಿ ಕೇಳಿ ಆರು ತಿಂಗಳ ಹಿಂದೆ ನೀಡಿದ್ದ ಸೂಚನೆ ಹಾಗೂ 100 ಬ್ಲಾಕ್‌ ಕಾಂಗ್ರೆಸ್ ಕಚೇರಿ ಆರಂಭಕ್ಕೆ ಸಿದ್ಧತೆ ನಡೆಸಲು ಮೂರು ತಿಂಗಳ ಹಿಂದೆ ನೀಡಿದ್ದ ನಿರ್ದೇಶನ ಬಗ್ಗೆ ನಿರ್ಲಕ್ಷ್ಯ ತೋರಿರುವ ಸಚಿವರ ವಿರುದ್ಧ ಕಾಂಗ್ರೆಸ್‌ ಹೈಕಮಾಂಡ್‌ ತೀವ್ರ ಗರಂ ಆಗಿದೆ.

  ಬೆಂಗಳೂರು : ಇಲಾಖಾ ಸಾಧನೆ ಕುರಿತು ವರದಿ ಕೇಳಿ ಆರು ತಿಂಗಳ ಹಿಂದೆ ನೀಡಿದ್ದ ಸೂಚನೆ ಹಾಗೂ 100 ಬ್ಲಾಕ್‌ ಕಾಂಗ್ರೆಸ್ ಕಚೇರಿ ಆರಂಭಕ್ಕೆ ಸಿದ್ಧತೆ ನಡೆಸಲು ಮೂರು ತಿಂಗಳ ಹಿಂದೆ ನೀಡಿದ್ದ ನಿರ್ದೇಶನ ಬಗ್ಗೆ ನಿರ್ಲಕ್ಷ್ಯ ತೋರಿರುವ ಸಚಿವರ ವಿರುದ್ಧ ಕಾಂಗ್ರೆಸ್‌ ಹೈಕಮಾಂಡ್‌ ತೀವ್ರ ಗರಂ ಆಗಿದೆ.

ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಸಚಿವರು ಇಲಾಖಾವಾರು ತಮ್ಮ ಸಾಧನೆ ಹಾಗೂ ಪಕ್ಷ ಸಂಘಟನೆಗೆ ನೀಡಿರುವ ಕೊಡುಗೆಗಳ ಕುರಿತು ಸಾಧನಾ ಪುಸ್ತಕ ಸಿದ್ಧಪಡಿಸಲು ಮತ್ತು ತಮ್ಮ ಕ್ಷೇತ್ರಗಳಲ್ಲಿ ಬ್ಲಾಕ್‌ ಕಾಂಗ್ರೆಸ್‌ ಕಚೇರಿ ಪ್ರಾರಂಭಿಸಲು ತರಾತುರಿಯಲ್ಲಿ ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇತ್ತೀಚೆಗೆ ನಡೆದ ಸಭೆಯಲ್ಲಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಹಾಗೂ ಇತರೆ ಐದು ಮಂದಿ ಎಐಸಿಸಿ ಕಾರ್ಯದರ್ಶಿಗಳಿಂದ ರಾಜ್ಯದ ಸಚಿವರಿಗೆ ವಹಿಸಿದ್ದ ಜವಾಬ್ದಾರಿಗಳ ಬಗ್ಗೆ ವರದಿ ಕೇಳಿದ್ದಾರೆ.

ಕಚೇರಿ ಬಗ್ಗೆ ನಿರ್ಲಕ್ಷ್ಯಕ್ಕೆ ಕಿಡಿ:

ರಾಜ್ಯಾದ್ಯಂತ 100 ಹೊಸ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಕಚೇರಿಗಳನ್ನು ಪ್ರಾರಂಭಿಸಲು ಅಗತ್ಯ ಸಿದ್ಧತೆ ನಡೆಸಿ ಮಾಹಿತಿ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್‌ ಮೂರು ತಿಂಗಳ ಹಿಂದೆಯೇ ಜಿಲ್ಲಾ ಉಸ್ತುವಾರಿ ಸಚಿವರಿಗೆ ನಿರ್ದೇಶನ ನೀಡಿತ್ತು. ಈ ನೂರು ಬ್ಲಾಕ್‌ ಸಮಿತಿ ಕಚೇರಿಗಳನ್ನು

ಡಿ.28 ರಂದು ಬೆಳಗಾವಿಯಲ್ಲಿ ನಡೆಯಲಿರುವ ಎಐಸಿಸಿಯ 100ನೇ ಅಧಿವೇಶನದಲ್ಲಿ ಸಂದರ್ಭದಲ್ಲಿ ವರಿಷ್ಠರಾದ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮೂಲಕ ಉದ್ಘಾಟನೆ ಮಾಡುವುದು ಈ ನಿರ್ದೇಶನದ ಹಿಂದಿನ ಉದ್ದೇಶವಾಗಿತ್ತು.

ಆದರೆ, ಬಹಳಷ್ಟು ಸಚಿವರು ತಮ್ಮ ಉಸ್ತುವಾರಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬ್ಲಾಕ್‌ ಕಾಂಗ್ರೆಸ್‌ ಕಚೇರಿ ಸ್ಥಾಪನೆಗೆ ಆಸಕ್ತಿ ತೋರಿರಲಿಲ್ಲ. ಈ ಹಿನ್ನೆಲೆಯಲ್ಲಿ ಖರ್ಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಎಷ್ಟೆಷ್ಟು ಕಚೇರಿ ಸಿದ್ಧಪಡಿಸಲಾಗಿದೆ ಎಂಬುದರ ಬಗ್ಗೆ ಒಂದು ವಾರದಲ್ಲಿ ವರದಿ ನೀಡಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರು ಮೂರು ತಿಂಗಳ ಹಿಂದೆಯೇ ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸೂಚನೆ ನೀಡಿದ್ದರು. ಕಡಿಮೆ ಕಾಲಾವಕಾಶ ಇರುವುದರಿಂದ ಕೂಡಲೇ ನಿವೇಶನ ಪಡೆದು ಕಚೇರಿ ಆರಂಭಿಸಬೇಕು. ನಿವೇಶನ ಲಭ್ಯವಿಲ್ಲದಿದ್ದರೆ ಸ್ಥಳೀಯ ಸಂಸ್ಥೆಗಳಿಂದ ಸೂಕ್ತ ಬೆಲೆಗೆ ಮಂಜೂರು ಮಾಡಿಸಿಕೊಳ್ಳಬೇಕು. ಇಲ್ಲದಿದ್ದರೆ ಖಾಸಗಿಯವರಿಂದ ಖರೀದಿ ಮಾಡಿ ಆದರೂ ಸ್ಥಾಪಿಸಬೇಕು ಎಂದು ಸೂಚಿಸಲಾಗಿತ್ತು. ಆದರೆ ಬಹುತೇಕ ಕಡೆ ಈ ಕೆಲಸ ಆಗಿಲ್ಲ. ಇದೀಗ ಹೈಕಮಾಂಡ್‌ ಗರಂ ಆಗಿದೆ.

ಸಚಿವರಿಂದ ತರಾತುರಿಯಲ್ಲಿ ಸಾಧನೆ ಪುಸ್ತಕಗಳ ತಯಾರಿ!

- 1 ವಾರದಲ್ಲಿ ವರದಿಗೆ ಸುರ್ಜೇವಾಲಾ ತಾಕೀತುಸಚಿವರ ಕಾರ್ಯಕ್ಷಮತೆ ಅಳೆಯಲು ಸಾಧನೆಗಳ ಕುರಿತು ವರದಿ ನೀಡುವಂತೆ ಆರು ತಿಂಗಳ ಹಿಂದೆಯೇ ಸೂಚಿಸಿದ್ದರೂ ಕೆಲ ಸಚಿವರು ಮಾತ್ರ ವರದಿ ನೀಡಿದ್ದರು. ಈ ಬಗ್ಗೆಯೂ ಹೈಕಮಾಂಡ್‌ ಅಸಮಾಧಾನ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಸುರ್ಜೇವಾಲಾ ಅವರು ಸಚಿವರಿಗೆ ಒಂದು ವಾರದಲ್ಲಿ ವರದಿ ನೀಡುವಂತೆ ತಾಕೀತು ಮಾಡಿದ್ದಾರೆ.

ಹೀಗಾಗಿ ರಾತ್ರೋರಾತ್ರಿ ಸಚಿವರ ಆಪ್ತ ಶಾಖೆ ಸಾಧನಾ ಪುಸ್ತಕದ ತಯಾರಿ ಹಾಗೂ ಮುದ್ರಣ ಕಾರ್ಯದಲ್ಲಿ ತೊಡಗಿದೆ. ಪಕ್ಷ ಸಂಘಟನೆ ಹಾಗೂ ಇಲಾಖೆಯಲ್ಲಿನ ಸಾಧನೆಗಳ ಬಗ್ಗೆ ಬಿಂಬಿಸುವ ಸಾಧನಾ ಪುಸ್ತಕ ಸಿದ್ಧಪಡಿಸಲಾಗುತ್ತಿದೆ.

ಜಿಲ್ಲಾ ಉಸ್ತುವಾರಿ ಸಚಿವರಾಗಿ, ಇಲಾಖಾ ಸಚಿವರಾಗಿ, ಉಪ ಚುನಾವಣೆ ಹಾಗೂ ಲೋಕಸಭೆ ಚುನಾವಣೆ, ನೆರೆ ರಾಜ್ಯಗಳ ಚುನಾವಣೆಗಳಿಗೆ ಪಕ್ಷದ ಪರವಾಗಿ ನೀಡಿರುವ ಕೊಡುಗೆಗಳನ್ನು ಹೈಲೈಟ್‌ ಮಾಡಿ ಸಚಿವ ಸ್ಥಾನ ಉಳಿಸಿಕೊಳ್ಳಲು ಕಸರತ್ತು ನಡೆಸಲಾಗುತ್ತಿದೆ.

ಹಾಸನ ರ್‍ಯಾಲಿ ಸಿದ್ಧತೆ ಬಗ್ಗೆ ನಿಗಾಕ್ಕೆ ಸೂಚನೆ

ಡಿ.5ರಂದು ಹಮ್ಮಿಕೊಂಡಿರುವ ಹಾಸನ ಸಮಾವೇಶದ ಸಿದ್ಧತೆ ಬಗ್ಗೆ ನಿಗಾ ವಹಿಸಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ ಅವರಿಗೆ ಸೂಚಿಸಿದ್ದಾರೆ. ಪಕ್ಷದ ವೇದಿಕೆ ಅಡಿಯಲ್ಲೇ ಸಮಾವೇಶ ನಡೆಯಬೇಕು. ಈ ಬಗ್ಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡು ಸಮಾವೇಶ ಯಶಸ್ವಿಗೊಳಿಸುವ ಬಗ್ಗೆ ಗಮನ ನೀಡಿ ಎಂದು ಸೂಚಿಸಿರುವುದಾಗಿ ಮೂಲಗಳು ತಿಳಿಸಿವೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಮತಚೋರಿ ಹೆಸರಲ್ಲಿ ಸುಳ್ಳು ಪ್ರಚಾರ ತಪ್ಪು: ದೇವೇಗೌಡ
ದೆಹಲಿಯಲ್ಲೂ ಸಿದ್ದು ಸಿದ್ದು, ಡಿಕೆ ಡಿಕೆ ಸದ್ದು