ವಿಪಕ್ಷ ಸಾಲಲ್ಲಿ ಕೂರಲು ಇಂಡಿಯಾ ಕೂಟ ನಿರ್ಧಾರ

KannadaprabhaNewsNetwork | Published : Jun 6, 2024 12:31 AM

ಸಾರಾಂಶ

ಎನ್‌ಡಿಎ ಕೂಟಕ್ಕೆ ಸ್ಪಷ್ಟ ಬಹುಮತ ಬಂದಿದ್ದರೂ, ಇಂಡಿಯಾ ಮೈತ್ರಿಕೂಟ ಕೂಡಾ ಸರ್ಕಾರ ರಚನೆಯ ಅವಕಾಶ ಮುಕ್ತವಾಗಿರಿಸಿಕೊಂಡಿದೆ ಎಂಬ ವರದಿಗಳ ಬೆನ್ನಲ್ಲೇ, ‘ಎಲ್ಲಾ ಸಮಾನ ಮನಸ್ಕ ಪಕ್ಷಗಳನ್ನು ಇಂಡಿಯಾ ಮೈತ್ರಿಕೂಟ ಆಹ್ವಾನಿಸಲಿದೆ’ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ನವದೆಹಲಿ: ಎನ್‌ಡಿಎ ಕೂಟಕ್ಕೆ ಸ್ಪಷ್ಟ ಬಹುಮತ ಬಂದಿದ್ದರೂ, ಇಂಡಿಯಾ ಮೈತ್ರಿಕೂಟ ಕೂಡಾ ಸರ್ಕಾರ ರಚನೆಯ ಅವಕಾಶ ಮುಕ್ತವಾಗಿರಿಸಿಕೊಂಡಿದೆ ಎಂಬ ವರದಿಗಳ ಬೆನ್ನಲ್ಲೇ, ‘ಎಲ್ಲಾ ಸಮಾನ ಮನಸ್ಕ ಪಕ್ಷಗಳನ್ನು ಇಂಡಿಯಾ ಮೈತ್ರಿಕೂಟ ಆಹ್ವಾನಿಸಲಿದೆ’ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟ ಬೆನ್ನಲ್ಲೇ ಬುಧವಾರ ಇಲ್ಲಿ ಆಯೋಜಿಸಿದ್ದ ಇಂಡಿಯಾ ಮೈತ್ರಿಕೂಟದ ನಾಯಕರ ಸಭೆಯಲ್ಲಿ ಮಾತನಾಡಿದ ಖರ್ಗೆ, ‘ಸಂವಿಧಾನದ ಪೀಠಿಕೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ಮೌಲ್ಯಗಳನ್ನು ಕಾಪಾಡುವ ಮತ್ತು ಆರ್ಥಿಕ, ಸಾಮಾಜಿಕ, ರಾಜಕೀಯ ನ್ಯಾಯವನ್ನು ಪಾಲಿಸುವ ಮೂಲಭೂತ ಬದ್ಧತೆ ಹೊಂದಿರುವ ಎಲ್ಲರನ್ನೂ ಇಂಡಿಯಾ ಮೈತ್ರಿಕೂಟ ಸ್ವಾಗತಿಸುತ್ತದೆ’ ಎಂದು ಹೇಳಿದರು.ಜೊತೆಗೆ, ‘ಇಂಡಿಯಾ ಮೈತ್ರಿಕೂಟದ ಎಲ್ಲಾ ಪಾಲುದಾರರು ಚುನಾವಣೆಯನ್ನು ದೃಢ ನಿಶ್ಚಯ, ಒಂದಾಗಿ, ಒಳ್ಳೆಯ ರೀತಿಯಲ್ಲಿ ಹೋರಾಡಿದ್ದೇವೆ. ಇದಕ್ಕಾಗಿ ಎಲ್ಲರನ್ನೂ ಅಭಿನಂದಿಸುತ್ತೇವೆ’ ಎಂದು ಖರ್ಗೆ ಹೇಳಿದರು.ಮೋದಿ ವಿರುದ್ಧ ಜನಾದೇಶ:ಇದೇ ವೇಳೆ ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶವು ಮಿ.ಮೋದಿ ಮತ್ತು ಅವರ ರಾಜಕೀಯ ಶೈಲಿ ಹಾಗೂ ವಿಷಯಗಳ ಕುರಿತಾದ ನಿರ್ಣಾಯಕ ಜನಾದೇಶವಾಗಿದೆ. ಇದು ವೈಯುಕ್ತಿಕವಾಗಿ ಅವರಿಗೆ ಆದ ರಾಜಕೀಯ ನಷ್ಟದ ಜೊತೆಗೆ ಅತ್ಯಂತ ಸ್ಪಷ್ಟವಾಗಿ ಅವರಿಗೆ ಆದ ನೈತಿಕ ಸೋಲು. ಆದರೂ ಅವರು ಜನಾದೇಶವನ್ನು ಬುಡಮೇಲು ಮಾಡಲು ಕಟಿಬದ್ಧರಾಗಿದ್ದಾರೆ’ ಎಂದು ಖರ್ಗೆ ಕಿಡಿಕಾರಿದರು.

ಇಂಡಿಯಾ ಕೂಟದ ಸಭೆಯಲ್ಲಿ ಖರ್ಗೆ, ರಾಹುಲ್‌ ಗಾಂಧಿ, ಸಂಜಯ ರಾವುತ್‌, ಶರದ್‌ ಪವಾರ್‌, ಅಖಿಲೇಶ್‌ ಯಾದವ್‌, ಎ. ರಾಜಾ ಸೇರಿ 33 ನಾಯಕರು ಪಾಲ್ಗೊಂಡಿದ್ದರು.

ವಿಪಕ್ಷದಲ್ಲಿ ಕೂರೋಣ: ಇಂಡಿಯಾ ಕೂಟ ನಾಯಕರುಖರ್ಗೆ ಅವರು ಸಮಾನ ಮನಸ್ಕ ಪಕ್ಷಗಳನ್ನು ಇಂಡಿಯಾ ಕೂಟಕ್ಕೆ ಆಹ್ವಾನಿಸಿದ್ದಾರೆ. ಆದರೆ ಇಂಡಿಯಾ ಮೈತ್ರಿಕೂಟವು ಸರ್ಕಾರ ರಚಿಸಲು ಯಾವುದೇ ಪ್ರಯತ್ನಗಳನ್ನು ಮಾಡುವುದಿಲ್ಲ ಮತ್ತು ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುತ್ತಾರೆ ಎಂದು ಕೂಟದ ಮೂಲಗಳ ಹೇಳಿವೆ.

ಜನಾದೇಶವನ್ನು ಹತ್ತಿಕ್ಕಲು ಮೋದಿ ಯತ್ನ: ಜೈರಾಂ

ನವದೆಹಲಿ: ದೇಶಾದ್ಯಂತ ಜನರು ಮೋದಿಯ ವಿರುದ್ಧ ಜನಾದೇಶ ನೀಡಿದ್ದರೂ ಅವರು ಅದನ್ನು ಹತ್ತಿಕ್ಕುವ (ಡೆಮೊ-ಕರ್ಸಿ) ಪ್ರಯತ್ನದಲ್ಲಿ ತೊಡಗಿದ್ದಾರೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ಆರೋಪಿಸಿದ್ದಾರೆ.

ತಮ್ಮ ಎಕ್ಸ್‌ ಖಾತೆಯಲ್ಲಿ ಟ್ವೀಟ್‌ ಮಾಡಿ, ‘ನರೇಂದ್ರ ಮೋದಿಯ ವಿರುದ್ಧವಾಗಿ ಜನರು ತೀರ್ಪು ನೀಡಿದ್ದರೂ ತಮ್ಮ ಕುಗ್ಗಿದ ಎದೆಯನ್ನೇ ಬಡಿದುಕೊಂಡು ಹಂಗಾಮಿ ಪ್ರಧಾನಿ ಸತತವಾಗಿ ಮೂರನೇ ಸಲ ಇತಿಹಾಸದಲ್ಲೇ ಮೊದಲ ಬಾರಿಗೆ ಎನ್‌ಡಿಎ ಸರ್ಕಾರಕ್ಕೆ ಅಧಿಕಾರ ನೀಡಿರುವುದಾಗಿ ಕೊಚ್ಚಿಕೊಳ್ಳುತ್ತಿದ್ದಾರೆ. ಆದರೆ ನೆಹರು ಸತತ ಮೂರು ಬಾರಿ ಬಹುಮತ ಪಡೆದು ಅಧಿಕಾರಕ್ಕೇರಿದ್ದರು ಎಂಬುದನ್ನು ಮರೆಯಬಾರದು. ಅಲ್ಲದೆ 1989ರಲ್ಲಿ ಕಾಂಗ್ರೆಸ್‌ಗೆ 197 ಸೀಟು ಬಂದರೂ ರಾಜೀವ್‌ ಗಾಂಧಿ ನೈತಿಕತೆಯಿಂದ ತಮ್ಮ ಪ್ರಧಾನಿ ಹುದ್ದೆ ಬಿಟ್ಟುಕೊಟ್ಟರು. ಅದೇ ರೀತಿ ಪ್ರಧಾನಿ ಮೋದಿಯೂ ಸಹ ತಮ್ಮ ಪ್ರಧಾನಿ ಸ್ಥಾನ ಬಿಟ್ಟುಕೊಡದೆ ಅಹಂಕಾರ ಮೆರೆಯುತ್ತಿದ್ದಾರೆ’ ಎಂದು ಟೀಕಿಸಿದರು.

Share this article