ಕಾಂಗ್ರೆಸ್‌: ಕೋಲಾರ ಟಿಕೆಟ್‌ ಸಚಿವ ಮುನಿಯಪ್ಪ ಅಳಿಯಗೆ?

KannadaprabhaNewsNetwork |  
Published : Mar 27, 2024, 02:06 AM ISTUpdated : Mar 27, 2024, 07:40 AM IST
Congress

ಸಾರಾಂಶ

ಕಾಂಗ್ರೆಸ್‌ ಟಿಕೆಟ್‌ ಪೈಪೋಟಿಗೆ ಕುತೂಹಲಕಾರಿ ತಿರುವು ಸಿಕ್ಕಿದ್ದು, ರಾಜ್ಯ ನಾಯಕರ ಬಯಕೆಗೆ ವಿರುದ್ಧವಾಗಿ ಕಾಂಗ್ರೆಸ್‌ ಹೈಕಮಾಂಡ್‌ ಸಚಿವ ಕೆ.ಎಚ್.ಮುನಿಯಪ್ಪ ಅವರ ಅಳಿಯ ಚಿಕ್ಕ ಪೆದ್ದಯ್ಯಗೆ ಟಿಕೆಟ್‌ ನೀಡುವ ಸಾಧ್ಯತೆ ಕಂಡುಬಂದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಾಂಗ್ರೆಸ್‌ ಟಿಕೆಟ್‌ ಪೈಪೋಟಿಗೆ ಕುತೂಹಲಕಾರಿ ತಿರುವು ಸಿಕ್ಕಿದ್ದು, ರಾಜ್ಯ ನಾಯಕರ ಬಯಕೆಗೆ ವಿರುದ್ಧವಾಗಿ ಕಾಂಗ್ರೆಸ್‌ ಹೈಕಮಾಂಡ್‌ ಸಚಿವ ಕೆ.ಎಚ್.ಮುನಿಯಪ್ಪ ಅವರ ಅಳಿಯ ಚಿಕ್ಕ ಪೆದ್ದಯ್ಯಗೆ ಟಿಕೆಟ್‌ ನೀಡುವ ಸಾಧ್ಯತೆ ಕಂಡುಬಂದಿದೆ.

ಕೋಲಾರ ಸೇರಿದಂತೆ ತೀವ್ರ ಕಗ್ಗಂಟಾಗಿರುವ ನಾಲ್ಕು ಕ್ಷೇತ್ರ (ಚಿಕ್ಕಬಳ್ಳಾಪುರ, ಬಳ್ಳಾರಿ, ಚಾಮರಾಜನಗರ) ಗಳಿಗೆ ರಾಜ್ಯ ನಾಯಕತ್ವ ಹೆಸರು ಅಂತಿಮಗೊಳಿಸಿ ಹೈಕಮಾಂಡ್‌ಗೆ ಶಿಫಾರಸು ಮಾಡಿದೆ. 

ಆದರೆ, ಹೈಕಮಾಂಡ್‌ ಮಟ್ಟದಲ್ಲಿ ಪ್ರಭಾವಿಗಳಾಗಿರುವ ಸಚಿವ ಕೆ.ಎಚ್‌.ಮುನಿಯಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ನಡೆಸಿದ ಲಾಬಿಯ ಪರಿಣಾಮ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರಗಳಿಗೆ ಅಭ್ಯರ್ಥಿಗಳು ಯಾರಾಗಬಹುದು ಎಂಬ ಕುತೂಹಲ ಇನ್ನೂ ಮುಂದುವರೆದಿದೆ.

ಈ ಪೈಕಿ ಸಚಿವ ಕೆ.ಎಚ್‌.ಮುನಿಯಪ್ಪ ರಾಜ್ಯ ನಾಯಕತ್ವ ಹಾಗೂ ಜಿಲ್ಲೆಯ ತಮ್ಮ ವಿರೋಧಿ ಬಣದ ಮೇಲೆ ಮೇಲುಗೈ ಸಾಧಿಸಿರುವ ಲಕ್ಷಣಗಳಿದ್ದು, ತೀವ್ರ ಲಾಬಿ ನಡೆಸಿ ಈಗಾಗಲೇ ಶಿಫಾರಸಾಗಿರುವ ಎಲ್‌.ಹನುಮಂತಯ್ಯ ಬದಲು ತಮ್ಮ ಅಳಿಯ ಚಿಕ್ಕ ಪೆದ್ದಯ್ಯಗೆ ಟಿಕೆಟ್‌ ಅಂತಿಮಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅವರ ಆಪ್ತ ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ.

ಮಂಗಳವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ತಮ್ಮ ಅಳಿಯ ಚಿಕ್ಕ ಪೆದ್ದಯ್ಯ ಜತೆ ಭೇಟಿ ಮಾಡಿದ್ದ ಮುನಿಯಪ್ಪ ಸುದೀರ್ಘ ಮಾತುಕತೆ ನಡೆಸಿದರು. 

ಅನಂತರ ಖರ್ಗೆ ಅವರು ಮತ್ತೊಬ್ಬ ಆಕಾಂಕ್ಷಿ ಎಲ್‌. ಹನುಮಂತಯ್ಯ ಅವರನ್ನು ಕರೆಸಿಕೊಂಡು ಮಾತುಕತೆ ನಡೆಸಿದರು.ಈ ಭೇಟಿ ವೇಳೆ ಮುನಿಯಪ್ಪ ಅವರ ಅಳಿಯನಿಗೆ ಟಿಕೆಟ್‌ ನೀಡುವ ಸೂಚನೆಯನ್ನು ಖರ್ಗೆ ನೀಡಿದರು ಎಂದು ಮೂಲಗಳು ಹೇಳಿವೆ.

ಇನ್ನು, ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ರಾಜ್ಯ ನಾಯಕತ್ವ ರಕ್ಷಾ ರಾಮಯ್ಯ ಅವರ ಹೆಸರನ್ನು ಶಿಫಾರಸು ಮಾಡಿದೆ. ಆದರೆ, ಆಕಾಂಕ್ಷಿಯಾಗಿರುವ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ಹೈಕಮಾಂಡ್‌ ಮಟ್ಟದಲ್ಲೂ ಕಡೆ ಕ್ಷಣದವರೆಗೆ ಲಾಬಿ ನಡೆಸಿದ್ದಾರೆ ಎನ್ನಲಾಗಿದೆ. 

ಮೂಲಗಳ ಪ್ರಕಾರ ಖುದ್ದು ಸೋನಿಯಾ ಗಾಂಧಿ ಬಳಿಯೇ ಮೊಯ್ಲಿ ಟಿಕೆಟ್‌ಗಾಗಿ ಲಾಬಿ ನಡೆಸಿದ್ದಾರೆ ಎನ್ನಲಾಗಿದೆ. ಆದರೆ, ರಾಜ್ಯ ನಾಯಕತ್ವ ಕೂಡ ರಕ್ಷಾ ರಾಮಯ್ಯ ಪರ ಪ್ರಬಲ ಲಾಬಿ ನಡೆಸಿದ್ದು, ಚಿಕ್ಕಬಳ್ಳಾಪುರಕ್ಕೆ ಬಿಜೆಪಿ ಅಭ್ಯರ್ಥಿ ಡಾ. ಸುಧಾಕರ್‌ ಅವರನ್ನು ಮಣಿಸಲು ರಕ್ಷಾ ರಾಮಯ್ಯಗೆ ಟಿಕೆಟ್‌ ನೀಡಬೇಕು ಎಂದು ರಾಜ್ಯ ನಾಯಕತ್ವ ಹೈಕಮಾಂಡ್‌ಗೆ ಸ್ಪಷ್ಟವಾಗಿ ತಿಳಿಸಿದೆ ಎನ್ನಲಾಗಿದೆ. 

ಹೀಗಾಗಿ ಹೈಕಮಾಂಡ್‌ ಯಾರಿಗೆ ಟಿಕೆಟ್‌ ನೀಡುತ್ತದೆ ಎಂಬುದನ್ನು ಕಾದು ನೋಡಬೇಕು. ಉಳಿದಂತೆ ಬಳ್ಳಾರಿ ಕ್ಷೇತ್ರಕ್ಕೆ ಶಾಸಕ ತುಕಾರಾಂ ಹಾಗೂ ಚಾಮರಾಜನಗರ ಕ್ಷೇತ್ರಕ್ಕ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಪುತ್ರ ಸುನೀಲ್‌ ಬೋಸ್‌ ಅವರಿಗೆ ಟಿಕೆಟ್‌ ದೊರೆಯುವುದು ಬಹುತೇಕ ನಿಚ್ಚಳ.

PREV

Recommended Stories

ಜಿಬಿಎ ತಾತ್ಕಾಲಿಕ, ಮತ್ತೆ ಮಹಾನಗರಪಾಲಿಕೆ ತರುತ್ತೇವೆ: ಆರ್.ಅಶೋಕ್‌
ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೂ ಅಸಮಾನತೆ ಹೇಳಿಕೆ : ವಾಕ್ಸಮರ