ಕೋಲಾರ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲು ಪಣ

KannadaprabhaNewsNetwork |  
Published : Mar 25, 2024, 12:50 AM ISTUpdated : Mar 25, 2024, 03:37 PM IST
24ಕೆಬಿಪಿಟಿ.1.ಬಂಗಾರಪೇಟೆ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿರುವ ಶಾಸಕ ಎಸ್.ಎನ್.ನಾರಾಯಣಸ್ವಾಮಿ | Kannada Prabha

ಸಾರಾಂಶ

ಟಿಕೆಟ್ ಸಿಗುವವರೆಗೂ ಗುಂಪುಗಾರಿಕೆ ಟಿಕೆಟ್ ಕೊಟ್ಟನಂತರ ಎಲ್ಲರೂ ಒಂದೇ, ನಮಗೆ ಅಭ್ಯರ್ಥಿಗಿಂತಲೂ ಪಕ್ಷ ಮುಖ್ಯವಾಗಿದ್ದು ಹೈಕಮಾಂಡ್ ಟಿಕೆಟ್ ಬಗ್ಗೆ ತೀರ್ಮಾನ ಮಾಡಲಿದೆ, ಪಕ್ಷದ ಗೆಲುವಿಗಾಗಿ ಮಾತ್ರ ಶ್ರಮಿಸಲು ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರು ನಿರ್ಧರಿಸಿದ್ದಾರೆ

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಕೋಲಾರ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಯಾರಿಗೇ ಟಿಕೆಟ್ ನೀಡಿದರೂ ಕ್ಷೇತ್ರದಲ್ಲಿ ಯಾವುದೇ ಭಿನ್ನಮತಕ್ಕೆ ಅವಕಾಶ ನೀಡದೆ ಎಲ್ಲರೂ ಒಮ್ಮತದಿಂದ ಕೆಲಸ ಮಾಡುವ ಮೂಲಕ ಅಭ್ಯರ್ಥಿಗೆ ಹೆಚ್ಚಿನ ಮತಗಳನ್ನು ತಂದುಕೊಡಲು ಪಕ್ಷದ ಕಾರ್ಯಕರ್ತರು, ಮುಖಂಡರು ಪಣ ತೊಡಬೇಕು ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹೇಳಿದರು.

ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಲೋಕಸಭೆ ಚುನಾವಣೆ ಎದುರಿಸುವ ಸಲುವಾಗಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುವ ಸಲುವಾಗಿ ಕರೆದಿದ್ದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಅಭ್ಯರ್ಥಿಗಿಂತ ಪಕ್ಷ ಮುಖ್ಯ: ಟಿಕೆಟ್ ಸಿಗುವವರೆಗೂ ಗುಂಪುಗಾರಿಕೆ ಟಿಕೆಟ್ ಕೊಟ್ಟನಂತರ ಎಲ್ಲರೂ ಒಂದೇ, ನಮಗೆ ಅಭ್ಯರ್ಥಿಗಿಂತಲೂ ಪಕ್ಷ ಮುಖ್ಯವಾಗಿದ್ದು ಹೈಕಮಾಂಡ್ ಟಿಕೆಟ್ ಬಗ್ಗೆ ತೀರ್ಮಾನ ಮಾಡಲಿದೆ, ನಾವು ಪಕ್ಷದ ಗೆಲುವಿಗಾಗಿ ಮಾತ್ರ ಶ್ರಮಿಸಲು ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರು ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಗಿದೆ. 

ಅಲ್ಲದೆ ಜಿಲ್ಲೆಯಲ್ಲೆ ಅತ್ಯಂತ ಹೆಚ್ಚಿನ ಮತಗಳನ್ನು ತಾಲೂಕಿನಲ್ಲಿ ಪಕ್ಷದ ಅಭ್ಯರ್ಥಿಗೆ ಸಿಗುವಂತೆ ಕಾರ್ಯಕರ್ತರು ಶ್ರಮಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರದ ೫ ಗ್ಯಾರಂಟಿ ಯೋಜನೆಗಳನ್ನು ಹಾಗೂ ಕಳೆದ ಹತ್ತು ವರ್ಷಗಳಿಂದ ನಾನು ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಜನರ ಮುಂದಿಟ್ಟು ಮತಯಾಚನೆ ಮಾಡಲಾಗುವುದು. 

ಬರಗಾಲದಲ್ಲಿಯೂ ಕ್ಷೇತ್ರದಲ್ಲಿ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಸಮರ್ಪಕವಾಗಿ ನಿರ್ವಹಣೆ ಮಾಡಿರುವುದು ಮತ್ತು ಯರಗೋಳ್ ಯೋಜನೆಯನ್ನು ಲೋಕಾರ್ಪಣೆ ಮಾಡಿರುವುದು ಈ ಬಾರಿ ಚುನಾವಣೆಯ ಪ್ರಚಾರದ ಅಸ್ತ್ರವಾಗಲಿದೆ ಎಂದು ಶಾಸಕರು ಹೇಳಿದರು.

ಅವಕಾಶವಾದಿ ಸಂಸದ ಮುನಿಸ್ವಾಮಿ: ಸಂಸದ ಎಸ್. ಮುನಿಸ್ವಾಮಿ ಕಳೆದ ೫ ವರ್ಷಗಳಲ್ಲಿ ಒಮ್ಮೆಯೂ ಪ್ರಧಾನಿ ಬಳಿ ಹೋಗಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಚಕಾರ ಎತ್ತದೆ ಹಾಗೂ ಜಿಲ್ಲೆಯಲ್ಲಿ ಅಭಿವೃದ್ಧಿಗೆ ಅಸಡ್ಡೆ ತೋರಿದ್ದರಿಂದ ಅವರಿಗೆ ಟಿಕೆಟೆ ಕೈತಪ್ಪಿದೆ, ಆದರೂ ಅವಕಾಶವಾದಿಯಂತೆ ಜೆಡಿಎಸ್ ಮುಖಂಡರ ಮನೆ ಬಾಗಿಲಿಗೆ ಹೋಗಿ ಮೈತ್ರಿ ಅಭ್ಯರ್ಥಿಯಾಗಿ ಟಿಕೆಟ್ ನೀಡುವಂತೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಬಳಿ ಕೇಳಿರುವುದು ನಾಚಿಕೆಯಾಗಬೇಕೆಂದು ಟೀಕಿಸಿದರು.

ಮೋದಿ ಹವಾ ಎಲ್ಲಿಯೂ ಇಲ್ಲ: ದೇಶದಲ್ಲಿ ಪ್ರಧಾನಿ ಮೋದಿ ಹವಾ ಎಲ್ಲಿಯೂ ಇಲ್ಲ. ಹವಾ ಇದೆ ಎಂಬುದು ಬರೀ ಮಾಧ್ಯಮಗಳ ಸೃಷ್ಟಿ ಅಷ್ಟೇ, ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಟೀಕಿಸಿದ್ದ ಪ್ರಧಾನಿ ಮೋದಿ ಈಗ ಮೋದಿ ಗ್ಯಾರಂಟಿ ಎನ್ನುವರು ಎಂದು ವ್ಯಂಗ್ಯವಾಡಿದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗೋಪಾಲಗೌಡ,ಕೆ.ವಿ. ನಾಗರಾಜ್,ಚಂದು, ಡಿಸಿಸಿ ಬ್ಯಾಂಕಿನ ನಿರ್ದೇಶಕ ಗೋವಿಂದರಾಜು,ತಾಪಂ ಮಾಜಿ ಅಧ್ಯಕ್ಷ ಮಹಾದೇವ್, ಪುರಸಭೆ ಮಾಜಿ ಅಧ್ಯಕ್ಷ ಶಂಶುದ್ದಿನ್ ಬಾಬು, ಸದಸ್ಯರಾದ ಗಂಗಮ್ಮ,ಶಫಿ, ಮುಖಂಡರಾದ ಅ.ನಾ. ಹರೀಶ್, ನಂಜಪ್ಪ,ಡಿ. ಕುಮಾರ್ ಇದ್ದರು.

PREV