ಬೆಂಗಳೂರು : ‘ಮುಖ್ಯಮಂತ್ರಿ ಬದಲಾವಣೆಯಿಲ್ಲ, 2028 ರವರೆಗೆ ನಾನೇ ಮುಖ್ಯಮಂತ್ರಿ’ ಎಂದು ದೆಹಲಿಯಲ್ಲಿ ಕುಳಿತು ಸಿದ್ದರಾಮಯ್ಯ ಶಾಕ್ ನೀಡಿದ ಬೆನ್ನಲ್ಲೇ, ಇದೀಗ ಬೆಂಗಳೂರಿನಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರು ‘ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗಬೇಕು’ ಎಂದು ಪುನರುಚ್ಚರಿಸಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾಯಕತ್ವ ಬದಲಾವಣೆ ಚರ್ಚೆಗೆ ಸಿದ್ದರಾಮಯ್ಯ ಪೂರ್ಣವಿರಾಮ ನೀಡಿದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ನಾಯಕತ್ವ ಬದಲಾವಣೆ ಕುರಿತು ಜಾರಕಿಹೊಳಿ ಚರ್ಚೆ ಆರಂಭಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷರ ಸ್ಥಾನ ಬದಲಾವಣೆ ಆಗಬೇಕು. ಈ ಬಗ್ಗೆ ಸಾಕಷ್ಟು ಬಾರಿ ಹೇಳಿದ್ದೇವೆ. ಕೆಪಿಸಿಸಿ ಅಧ್ಯಕ್ಷರು ಬದಲಾಗಬೇಕು. ಪದೇ ಪದೆ ಹೇಳುವ ಅವಶ್ಯಕತೆ ಇಲ್ಲ. ಎಲ್ಲವನ್ನೂ ಹೈಕಮಾಂಡ್ ಗಮನಿಸುತ್ತಿದೆ. ಸೂಕ್ತ ನಿರ್ಧಾರವನ್ನು ಹೈಕಮಾಂಡ್ ನಾಯಕರು ಮಾಡುತ್ತಾರೆ ಎಂದು ಹೇಳಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ‘ಭೇಟಿ ಕುರಿತು ಗುರುವಾರವೇ ಮಾತನಾಡಿದ್ದೇನೆ. ಊಟಕ್ಕಾಗಿ ಸೇರಿದ್ದೇವೆಯೇ ಹೊರತು ವಿಶೇಷವೇನೂ ಇಲ್ಲ. ಹಿಂದೆ ಕೂಡ ಖರ್ಗೆ ಅವರನ್ನು ಭೇಟಿ ಮಾಡಿದ್ದೆವು. ನಾವು ಆಗಾಗ ಭೇಟಿ ಮಾಡುತ್ತಿರುತ್ತೇವೆ. ಪಕ್ಷದ ಅಧ್ಯಕ್ಷರು ಅಂದ ಮೇಲೆ ಭೇಟಿ ಮಾಡಬೇಕಲ್ಲವೇ ಎಂದು ಪ್ರಶ್ನಿಸಿದರು.
ಭೇಟಿ ವೇಳೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚಿಸಿದಿರಾ? ಎಂಬ ಪ್ರಶ್ನೆಗೆ, ‘ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆ ಆಗಿಲ್ಲ. ಸಮಯ ಬಂದಾಗ ಹೈಕಮಾಂಡ್ ಮಾಡಲಿದೆ. ನಾವು ಈಗಾಗಲೇ ಹೇಳಬೇಕಾದ್ದನ್ನು ಹೇಳಿದ್ದೇವೆ’ ಎಂದಷ್ಟೇ ಹೇಳಿದರು.