ಕರ್ನಾಟಕದಲ್ಲಿ ಒಳ ಮೀಸಲು ಸಮರ್ಪಕ ಜಾರಿಗೆ ಕಾಯ್ದೆ

Published : Oct 30, 2025, 10:30 AM IST
CM Siddaramaiah

ಸಾರಾಂಶ

ರಾಜ್ಯದಲ್ಲಿ ಒಳ ಮೀಸಲಾತಿ ಅನುಷ್ಠಾನಗೊಳಿಸುವ ಸಂಬಂಧ ನೂತನ ಕಾಯ್ದೆ ಜಾರಿಗೆ ಸರ್ಕಾರದ ಮುಂದಾಗಿದ್ದು, ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಕರಡು ಮಸೂದೆ ಮಂಡಿಸಲು ನಿರ್ಧರಿಸಲಾಗಿದೆ.

 ಬೆಂಗಳೂರು :  ರಾಜ್ಯದಲ್ಲಿ ಒಳ ಮೀಸಲಾತಿ ಅನುಷ್ಠಾನಗೊಳಿಸುವ ಸಂಬಂಧ ನೂತನ ಕಾಯ್ದೆ ಜಾರಿಗೆ ಸರ್ಕಾರದ ಮುಂದಾಗಿದ್ದು, ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಕರಡು ಮಸೂದೆ ಮಂಡಿಸಲು ನಿರ್ಧರಿಸಲಾಗಿದೆ.

ವಿಧಾನಸೌಧದಲ್ಲಿ ಬುಧವಾರ ಒಳ ಮೀಸಲಾತಿ ಅನುಷ್ಠಾನಕ್ಕೆ ಇರುವ ಸಮಸ್ಯೆಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಈ ವೇಳೆ ಸಿದ್ದರಾಮಯ್ಯ ಮಾತನಾಡಿ, ಒಳಮೀಸಲಾತಿಗೆ ಸಂಬಂಧಿಸಿ ಸಚಿವ ಸಂಪುಟ ಸಭೆಯ ತೀರ್ಮಾನಗಳಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ರೋಸ್ಟರ್‌ ಆರಿ ಕುರಿತಾಗಿ ಎಲ್ಲರ ಅಹವಾಲುಗಳನ್ನು ಆಲಿಸಬೇಕು. ಯಾವುದೇ ಜಾತಿಗಳಿಗೂ ರೋಸ್ಟರ್‌ನಲ್ಲಿ ಅನ್ಯಾಯವಾಗದಂತೆ ಖಾತ್ರಿ ಪಡಿಸಬೇಕು ಎಂದು ಸೂಚಿಸಿದರು.

ಮಾರ್ಗಸೂಚಿ ಪಾಲಿಸಬೇಕು

ಜಾತಿ ಪ್ರಮಾಣಪತ್ರ ನೀಡುವ ಕುರಿತು ಬಿಡುಗಡೆ ಮಾಡಲಾಗಿರುವ ಮಾರ್ಗಸೂಚಿ ಪಾಲಿಸಬೇಕು. ಜತೆಗೆ ನೇಮಕಾತಿಗೆ ಸಂಬಂಧಿಸಿ ಇದ್ದ ನಿರ್ಬಂಧ ತೆರವುಗೊಂಡಿದ್ದು, ಅದರ ಪ್ರಕ್ರಿಯೆಯೂ ಆರಂಭವಾಗಿದೆ. ಅದರಲ್ಲಿ ಒಳಮೀಸಲಾತಿ ಸಮರ್ಪಕ ಜಾರಿಗೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಇದೇ ವೇಳೆ ಒಳಮೀಸಲಾತಿ ಸಮರ್ಪಕ ಅನುಷ್ಠಾನಕ್ಕೆ ಮಾಡಲು ಮತ್ತು ಸೂಕ್ತ ಪ್ರಾತಿನಿಧ್ಯ ಒದಗಿಸಲು ಕಾನೂನು ಮಾಡುವ ಅವಶ್ಯಕತೆಯಿದೆ. ಎಲ್ಲರಿಗೂ ಅವಕಾಶ ನೀಡಲು ಹಾಗೂ ನ್ಯಾಯ ಕೊಡಲು ಕಾನೂನು ತರಬೇಕಿದೆ. ಅದಕ್ಕಾಗಿ ಕರಡು ಮಸೂದೆ ಸಿದ್ಧಪಡಿಸಿ, ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ಮಂಡಿಸುವಂತೆ ನಿರ್ದೇಶಿಸಿದರು.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಸಚಿವ ಎಚ್‌.ಕೆ.ಪಾಟೀಲ್‌, ಕಳೆದ ಆ.25ರಂದು ಸರ್ಕಾರದಿಂದ ಹೊರಡಿಸಲಾಗಿರುವ ಆದೇಶದಂತೆ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಒಳ ಮೀಸಲಾತಿ ಸಮರ್ಪಕ ಅನುಷ್ಠಾನಕ್ಕಾಗಿ ಕಾಯ್ದೆ ಮಾಡಬೇಕಿದ್ದು, ಅದರ ಕರಡು ಮಸೂದೆಯನ್ನು ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲು ಸಿಎಂ ಸೂಚಿಸಿದ್ದಾರೆ ಎಂದರು.

31ರಂದು ಸಭೆ:

ಸಮಾಜ ಕಲ್ಯಾಣ ಸಚಿವ ಎಚ್‌.ಸಿ. ಮಹದೇವಪ್ಪ, ಒಳ ಮೀಸಲಾತಿ ಕುರಿತು ಅಸಮಾಧಾನವಿರುವ ಅಲೆಮಾರಿ ಸಮುದಾಯಗಳೊಂದಿಗೆ ಅ. 31ರಂದು ಸಭೆ ಮಾಡಲು ನಿರ್ಧರಿಸಲಾಗಿದೆ. ಸುಪ್ರೀಂಕೋರ್ಟ್‌ ಆದೇಶದಂತೆ ಒಳಮೀಸಲಾತಿ ಜಾರಿ ಮಾಡಲಾಗುತ್ತಿದೆ. ಅದರ ಸಮರ್ಪಕ ಅನುಷ್ಠಾನಕ್ಕಾಗಿ ಕಾಯ್ದೆ ಮಾಡಬೇಕಿದೆ. ಅದಕ್ಕೆ ಸಂಬಂಧಿಸಿದಂತೆ ಸಂಬಂಧಿಸಿದ ಇಲಾಖೆಗಳ ಜತೆಗೆ ಈಗಾಗಲೇ ಚರ್ಚಿಸಲಾಗಿದೆ. ಇನ್ನು, ಒಳ ಮೀಸಲಾತಿ ಹೋರಾಟಗಾರರ ವಿರುದ್ಧ ದಾಖಲಿಸಲಾಗಿರುವ ಪ್ರಕರಣಗಳನ್ನು ಹಿಂಪಡೆಯುತ್ತೇವೆ ಎಂದು ಹೇಳಿದರು.

ಸಭೆಯಲ್ಲಿ ಸಚಿವರಾದ ಡಾ। ಜಿ.ಪರಮೇಶ್ವರ್‌, ಕೆ.ಎಚ್‌.ಮುನಿಯಪ್ಪ, ಶಿವರಾಜ ತಂಗಡಗಿ, ಪ್ರಿಯಾಂಕ್‌ ಖರ್ಗೆ, ಆರ್‌.ಬಿ.ತಿಮ್ಮಾಪೂರ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ। ಶಾಲಿನಿ ರಜನೀಶ್‌ ಇದ್ದರು

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ
ರಾಗಾ-ವೈಷ್ಣವ್‌ ಉದ್ಯೋಗ ಸೃಷ್ಟಿ ‘ಕ್ರೆಡಿಟ್‌ ವಾರ್’