ಪರಿಷತ್‌ ಫೈಟ್‌ : 7ರ ಆಟ ಗೆಲ್ಲೋರಾರು? - 7ನೇ ಸ್ಥಾನಕ್ಕೆ ಕಾಂಗ್ರೆಸ್‌-ಜೆಡಿಎಸ್‌ ಕಣಕ್ಕೆ

Published : Jun 09, 2026, 05:06 AM IST
vidhan soudha

ಸಾರಾಂಶ

ಪ್ರಸಕ್ತ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆ ರಂಗೇರಲಿದ್ದು, ಏಳನೇ ಸ್ಥಾನಕ್ಕಾಗಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಜೆಡಿಎಸ್‌ ನಡುವೆ ಹಣಾಹಣಿ ನಡೆಯುವುದು ನಿಶ್ಚಿತವಾಗಿದೆ.

  ಬೆಂಗಳೂರು :  ಪ್ರಸಕ್ತ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆ ರಂಗೇರಲಿದ್ದು, ಏಳನೇ ಸ್ಥಾನಕ್ಕಾಗಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಜೆಡಿಎಸ್‌ ನಡುವೆ ಹಣಾಹಣಿ ನಡೆಯುವುದು ನಿಶ್ಚಿತವಾಗಿದೆ.

ಒಟ್ಟು 7 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ವಿಧಾನಸಭೆಯ ಸಂಖ್ಯಾ ಬಲದ ಆಧಾರದ ಮೇಲೆ ಕಾಂಗ್ರೆಸ್‌ ಪಕ್ಷ ನಾಲ್ಕು ಸ್ಥಾನಗಳನ್ನು ಮತ್ತು ಬಿಜೆಪಿ ಎರಡು ಸ್ಥಾನಗಳನ್ನು ನಿರಾಯಾಸವಾಗಿ ಗೆಲ್ಲಲಿದೆ. ಇದೀಗ ಐದನೇ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಆಪ್ತ ವಿನಯ್‌ ಕಾರ್ತಿಕ್‌ ಅವರನ್ನು ಕಣಕ್ಕಿಳಿಸಿದೆ. ಇದಕ್ಕೆ ಪ್ರತಿಯಾಗಿ ಜೆಡಿಎಸ್‌ ಕೊನೇ ಕ್ಷಣದಲ್ಲಿ ಅಗತ್ಯ ಸಂಖ್ಯಾ ಬಲ ಇಲ್ಲದಿದ್ದರೂ ನಿರ್ಗಮಿತ ಸದಸ್ಯ ಗೋವಿಂದರಾಜು ಅವರನ್ನೇ ಸ್ಪರ್ಧಿಯನ್ನಾಗಿಸಿದೆ.

ಮುಖ್ಯಮಂತ್ರಿ ಶಿವಕುಮಾರ್‌ ಅವರು ಮುಖ್ಯಮಂತ್ರಿ ಆದ ಬಳಿಕ ಎದುರಿಸುತ್ತಿರುವ ಮೊದಲ ಚುನಾವಣೆ. ಜತೆಗೆ ಆಪ್ತನನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿರುವುದರಿಂದ ಸಹಜವಾಗಿ ಕುತೂಹಲ ಗರಿಗೆದರಿದೆ. ಇದು ಗೌಪ್ಯ ಮತದಾನ. ಹೀಗಾಗಿ, ಕಾಂಗ್ರೆಸ್ ಪಕ್ಷದಲ್ಲಿನ ಅಸಮಾಧಾನದ ಬೇಗುದಿಯ ಲಾಭ ತನಗೆ ಸಿಗಬಹುದು ಎಂಬ ಎಣಿಕೆಯಲ್ಲಿ ಜೆಡಿಎಸ್‌ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಇದ್ದಾರೆ.

ಲೆಕ್ಕಾಚಾರ:

ಪ್ರಸ್ತುತ ವಿಧಾನಸಭೆ ಸಂಖ್ಯಾಬಲ 222 ಇದೆ. ವಿಧಾನಪರಿಷತ್‌ನ 7 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿರುವುದರಿಂದ ಪ್ರತಿ ಅಭ್ಯರ್ಥಿ ಗೆಲ್ಲಲು 28 ಶಾಸಕರ ಮತಗಳು ಅಗತ್ಯ. ಪ್ರಸ್ತುತ ಕಾಂಗ್ರೆಸ್‌ ಬಳಿ ವಿಧಾನಸಭೆ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಮತ ಸೇರಿದಂತೆ 135 ಮತಗಳು ಇವೆ. ಜತೆಗೆ ಸರ್ವೋದಯ ಕರ್ನಾಟಕ ಪಕ್ಷದ ಶಾಸಕ ದರ್ಶನ್‌ ಪುಟ್ಟಣ್ಣಯ್ಯ, ಪಕ್ಷೇತರ ಶಾಸಕರಾದ ಲತಾ ಮಲ್ಲಿಕಾರ್ಜುನ್‌, ಕೆ.ಎಚ್. ಪುಟ್ಟಸ್ವಾಮಿಗೌಡ ಅವರ ಬೆಂಬಲ ಸೇರಿ 138 ಮತಗಳು ಇವೆ.

ಕಾಂಗ್ರೆಸ್‌ ಪಕ್ಷ ಕಣಕ್ಕಿಳಿಸಿರುವ 5 ಅಭ್ಯರ್ಥಿಗಳೂ ಗೆಲ್ಲಬೇಕಾದರೆ 140 ಮತ ಬೇಕು. ಕಾಂಗ್ರೆಸ್‌ ಬಳಿ ಪ್ರಸ್ತುತ ಇರುವ 138 ಸ್ಥಾನಗಳ ಜತೆಗೆ ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಶಿವರಾಂ ಹೆಬ್ಬಾರ್, ಎಸ್.ಟಿ. ಸೋಮಶೇಖರ್‌ ಕಾಂಗ್ರೆಸ್‌ಗೆ ಮತ ಹಾಕುವ ಸಾಧ್ಯತೆಯಿದೆ. ಹೀಗಾದರೆ, ಕಾಂಗ್ರೆಸ್‌ನ 5ನೇ ಅಭ್ಯರ್ಥಿಯೂ ನಿರಾಯಾಸವಾಗಿ ಗೆಲುವು ಸಾಧಿಸಬಹುದು.

ಆದರೆ, ಪರಿಷತ್‌ಗೆ ಗೌಪ್ಯ ಮತದಾನ ನಡೆಯುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಪ್ರತಿ ಅಭ್ಯರ್ಥಿಗೆ 28 ಮತಗಳ ಜತೆಗೆ ಹೆಚ್ಚುವರಿಯಾಗಿ ಒಂದು ಮತ ಹಾಕಿಸುವ ಸಾಧ್ಯತೆಯಿದೆ. ಹೀಗಾದರೆ 5 ಮತಗಳ ಕೊರತೆ ಉಂಟಾಗಲಿದೆ.

ಈ ಕೊರತೆ ನೀಗಿಸಲು ಬಿಜೆಪಿ ಅಥವಾ ಜೆಡಿಎಸ್‌ ಯಾವ ಪಕ್ಷದ ಅಭ್ಯರ್ಥಿಗಳಿಗೆ ಕೈ ಹಾಕಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಬೇರೆ ಪಕ್ಷದವರು ಕಾಂಗ್ರೆಸ್‌ ಮತ ಹಾಕಲು ಪಕ್ಷಾಂತರ ಕಾಯಿದೆ ಅಡ್ಡ ಬರಬಹುದು. ಆದರೆ, ಮತದಾನ ಮಾಡದೆ ಗೈರು ಹಾಜರಾದರೆ ಪಕ್ಷಾಂತರ ಕಾಯ್ದೆ ಅನ್ವಯವಾಗುವುದಿಲ್ಲ. 4ಕ್ಕಿಂತ ಹೆಚ್ಚು ಶಾಸಕರು ಗೈರು ಹಾಜರಾದರೆ ಅಭ್ಯರ್ಥಿ ಗೆಲ್ಲಲು ಅಗತ್ಯವಿರುವ ಮತಗಳ ಸಂಖ್ಯೆ 28 ರಿಂದ 27ಕ್ಕೆ ಕುಸಿಯಲಿದೆ. ಆಗ ಕಾಂಗ್ರೆಸ್‌ ಸುಲಭವಾಗಿ 5 ಸ್ಥಾನ ಗೆಲ್ಲಬಹುದು ಎಂಬ ಲೆಕ್ಕಾಚಾರದಲ್ಲಿದೆ.

ಇದರ ನಡುವೆ ಬಿಜೆಪಿಯಿಂದ ಉಚ್ಚಾಟನೆಯಾಗಿರುವ ಮತ್ತೊಬ್ಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌, ಜೆಡಿಎಸ್‌ನ ಅಸಮಧಾನಿತ ಶಾಸಕ ಜಿ.ಟಿ. ದೇವೇಗೌಡರ ನಡೆಯೂ ಕುತೂಹಲ ಕೆರಳಿಸಿದೆ.

ಕಾಂಗ್ರೆಸ್‌ ಲೆಕ್ಕಾಚಾರ

- ಪ್ರಸ್ತುತ ವಿಧಾನಸಭೆಯ ಬಲ 222. ಏಳು ಸ್ಥಾಣಕ್ಕೆ ಈಗ ಪರಿಷತ್‌ ಚುನಾವಣೆ

- ಕಾಂಗ್ರೆಸ್‌ನ ಪ್ರತಿ ಅಭ್ಯರ್ಥಿ ಗೆಲ್ಲಲು ತಲಾ 28 ಶಾಸಕರ ಮತಗಳು ಅಗತ್ಯ

- ಕಾಂಗ್ರೆಸ್‌ ಬಳಿ 138 ಮತ ಲಭ್ಯ. ಎಲ್ಲ ಐವರೂ ಗೆಲ್ಲಲು 140 ಮತ ಬೇಕು

- ಬಿಜೆಪಿಯ ಇಬ್ಬರು ಉಚ್ಚಾಟಿತರು ಕಾಂಗ್ರೆಸ್‌ಗೆ ಮತ ಹಾಕಿದರೆ 5ರಲ್ಲೂ ಜಯ

- ಆದರೆ ಗೌಪ್ಯ ಮತದಾನ ಕಾರಣ 28ರ ಬದಲು 29 ಮತ ಹಂಚಿಕೆ ಸಾಧ್ಯತೆ

- ಈ ಹೆಚ್ಚುವರಿ 1 ಮತದಿಂದ ಕಾಂಗ್ರೆಸ್‌ಗೆ ಹೀಗಾದರೆ 5 ಮತಗಳ ಕೊರತೆ

- ಈ ಕೊರತೆ ನೀಗಿಸಲು ಬಿಜೆಪಿ ಅಥವಾ ಜೆಡಿಎಸ್‌ ಬುಟ್ಟಿಗೆ ಕೈಹಾಕುವ ಸಂಭವ

- ಆದರೆ ವಿಪಕ್ಷಗಳ 4ಕ್ಕಿಂತ ಹೆಚ್ಚು ಶಾಸಕರು ಗೈರಾದರೆ ಗೆಲ್ಲುವ ಬಲ 27ಕ್ಕೆ ಇಳಿಕೆ

- ಆಗ ಸುಲಭವಾಗಿ ನಾವು 5 ಸ್ಥಾನ ಗೆಲ್ಲಬಹುದು ಎಂದು ಕಾಂಗ್ರೆಸ್ಸಿಗರ ಲೆಕ್ಕಾಚಾರ

ಜೆಡಿಎಸ್‌ ಲೆಕ್ಕಾಚಾರ

- ಜೆಡಿಎಸ್‌ ಬಳಿ ಕೇವಲ 18 ಮತ. ಬಿಜೆಪಿಯ 2 ಅಭ್ಯರ್ಥಿಗಳ ಜಯಕ್ಕೆ 56 ಮತ ಸಾಕು.

- ಉಳಿದ 7 ಮತಗಳನ್ನು (ಗಾಲಿ ಜನಾರ್ದನ ರೆಡ್ಡಿ ಸೇರಿ) ತನ್ನ ಸುಪರ್ದಿಗೆ ಪಡೆವ ಜೆಡಿಎಸ್‌

- ಅಂದರೆ, ಜೆಡಿಎಸ್‌ನ 18 ಮತ್ತು ಬಿಜೆಪಿಯ 7 ಸೇರಿ ಒಟ್ಟು ಮತಗಳ ಸಂಖ್ಯೆ 25 ಆಗಲಿದೆ.

- ಆಗ ಇನ್ನೂ 3 ಮತಗಳ ಕೊರತೆ. ಆ 3 ಮತಗಳಿಗಾಗಿ ಕಾಂಗ್ರೆಸ್ ಅತೃಪ್ತರಿಗೆ ಗಾಳ ಸಂಭವ

- ಬಿಜೆಪಿಯಿಂದ ಉಚ್ಚಾಟಿತವಾದ ಶಾಸಕ ಬಸನಗೌಡ ಯತ್ನಾಳ್ ಸೆಳೆಯುವ ಪ್ರಯತ್ನ ಸಾಧ್ಯತೆ

- ಆದರೂ ಇನ್ನೂ ಎರಡು ಮತಗಳ ಕೊರತೆ ಎದುರಾಗಲಿದೆ. ಹೀಗಾಗಿ ಬೇರೆ ಕಾರ್ಯತಂತ್ರ

- ಕಾಂಗ್ರೆಸ್‌ನಲ್ಲಿನ ಅಸಮಾಧಾನಿತ ಶಾಸಕರ ಪೈಕಿ ಕೆಲವರನ್ನು ಸೆಳೆಯುವ ಲೆಕ್ಕಾಚಾರ

- ಜೆಡಿಎಸ್‌ನ ಅಸಮಧಾನಿತ ಶಾಸಕ ಜಿ.ಟಿ. ದೇವೇಗೌಡರ ನಡೆಯೂ ತೀವ್ರ ಕುತೂಹಲ

- ಹೀಗಾಗಿ ಜಯ ಗೋವಿಂದರಾಜುಗೋ, ಕಾಂಗ್ರೆಸ್‌ನ ವಿನಯ್‌ ಕಾರ್ತಿಕ್‌ಗೋ ಎಂಬ ಜಿಜ್ಞಾಸೆ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಮೇಲ್ಮನೆ ಸದಸ್ಯ ನಸೀರ್‌ ಅಹಮದ್‌ ದಿವಾಳಿ : ಶಾಸಕ ಸ್ಥಾನಕ್ಕೆ ಈಗ ಕುತ್ತು
ಸತತ 3ನೇ ದಿನವೂ ದಿಲ್ಲೀಲಿ ಡಿಕೆಶಿ ರಾಜ್ಯಾಭಿವೃದ್ಧಿ ಮಂತ್ರ