‘ರಾಜ್ಯದಲ್ಲಿನ ಪ್ರತಿ 1 ಲಕ್ಷ ಜನಸಂಖ್ಯೆಗೆ 66 ಕಾಲೇಜು ಹೊಂದುವ ಮೂಲಕ ರಾಜ್ಯವು ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ. ಆದರೆ, ವಿಶ್ವವಿದ್ಯಾಲಯಗಳು ಡಿಗ್ರಿ ನೀಡಲು ಸೀಮಿತವಾಗದೆ ಉದ್ಯೋಗಾವಕಾಶ, ಉದ್ಯಮಶೀಲತೆ, ನಾವೀನ್ಯತೆ ಮತ್ತು ನಾಯಕತ್ವದ ಎಂಜಿನ್‌ಗಳಾಗಬೇಕು. ಈ ದೃಷ್ಟಿಕೋನ ನಿಜವಾಗಿಸಲು ರಾಜ್ಯ ಸರ್ಕಾರ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
‘ರಾಜ್ಯದಲ್ಲಿನ ಪ್ರತಿ 1 ಲಕ್ಷ ಜನಸಂಖ್ಯೆಗೆ 66 ಕಾಲೇಜು ಹೊಂದುವ ಮೂಲಕ ರಾಜ್ಯವು ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ. ಆದರೆ, ವಿಶ್ವವಿದ್ಯಾಲಯಗಳು ಡಿಗ್ರಿ ನೀಡಲು ಸೀಮಿತವಾಗದೆ ಉದ್ಯೋಗಾವಕಾಶ, ಉದ್ಯಮಶೀಲತೆ, ನಾವೀನ್ಯತೆ ಮತ್ತು ನಾಯಕತ್ವದ ಎಂಜಿನ್‌ಗಳಾಗಬೇಕು. ಈ ದೃಷ್ಟಿಕೋನ ನಿಜವಾಗಿಸಲು ರಾಜ್ಯ ಸರ್ಕಾರ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಉನ್ನತ ಶಿಕ್ಷಣ ಇಲಾಖೆಯು ವಿವಿಧ ಇಲಾಖೆಗಳ ಸಹಯೋಗದಲ್ಲಿ ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಎರಡು ದಿನಗಳ ಕ್ಯಾಂಪಸ್ ಟು ಕೆರಿಯರ್ (ಸಿಟುಸಿ) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಶಿಕ್ಷಣ ಸಂಸ್ಥೆಯ ನಿಜವಾದ ಅಳತೆಗೋಲು ಅದು ದಾಖಲಿಸಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆಯಲ್ಲ, ಬದಲಾಗಿ ಅದು ಎಷ್ಟು ಜನರ ಜೀವನ ಬದಲಾಯಿಸುತ್ತದೆ ಎಂಬುದರ ಮೇಲಿರುತ್ತದೆ. ಶಿಕ್ಷಣವು ಸಾಮಾಜಿಕ ಪರಿವರ್ತನೆಗೆ ಅತ್ಯಂತ ಶಕ್ತಿಯುತ ಸಾಧನ. ಅದು ಉದ್ಯೋಗ, ಕೌಶಲ್ಯಾಭಿವೃದ್ಧಿ ಹಾಗೂ ಸಮಾನ ಅವಕಾಶಗಳ ನಿರ್ಮಾಣಕ್ಕೆ ಪೂರಕವಾಗಬೇಕು. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದರು.
ಭವಿಷ್ಯಮುಖಿ ಕರ್ನಾಟಕ ನಿರ್ಮಾಣ:
ಪ್ರತಿ ಪದವೀಧರ ಉದ್ಯೋಗಕ್ಕೆ ಸಿದ್ಧನಾಗಿರುವ ಹಾಗೂ ಪ್ರತಿ ಶಿಕ್ಷಣ ಸಂಸ್ಥೆಯೂ ಭವಿಷ್ಯಮುಖಿಯಾಗಿರುವ ಕರ್ನಾಟಕ ನಿರ್ಮಾಣವೇ ಸರ್ಕಾರದ ಗುರಿ. ಕರ್ನಾಟಕ ಇಂದು 30.7 ಲಕ್ಷ ಕೋಟಿ ರು. ಜಿಎಸ್‌ಡಿಪಿ ಹೊಂದಿರುವ ಶಕ್ತಿಶಾಲಿ ಆರ್ಥಿಕತೆಯಾಗಿ ಬೆಳೆಯಲು ಶಿಕ್ಷಣ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಯೇ ಪ್ರಮುಖ ಕಾರಣ ಎಂದು ಹೇಳಿದರು.
ರಾಜ್ಯವು ದೇಶದ ಅತ್ಯಂತ ಕ್ರಿಯಾತ್ಮಕ ಆರ್ಥಿಕತೆಗಳಲ್ಲಿ ಒಂದಾಗಿರುವುದು ಆಕಸ್ಮಿಕವಲ್ಲ. ದಶಕಗಳ ಕಾಲ ಶಿಕ್ಷಣ, ಶಿಕ್ಷಣ ಸಂಸ್ಥೆಗಳು, ಮಾನವ ಬಂಡವಾಳ ಸಂಸ್ಥೆಗಳ ನಿರ್ಮಾಣ ಮತ್ತು ಮಾನವ ಬಂಡವಾಳದಲ್ಲಿ ಹೂಡಿಕೆ ಮಾಡಿರುವುದರಿಂದ ದೊರೆತ ನೇರ ಲಾಭ. ಶಿಕ್ಷಣ ನಮ್ಮ ಸರ್ಕಾರದ ಆದ್ಯತಾ ವಲಯ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
20 ಲಕ್ಷ ಉದ್ಯೋಗ ಸೃಜಿಸುವ ಗುರಿ:
ನಮ್ಮ ಕೈಗಾರಿಕಾ ನೀತಿಯು ಉತ್ಪಾದನೆ, ಸೇವಾಕ್ಷೇತ್ರ, ತಂತ್ರಜ್ಞಾನ ಮತ್ತು ಉದಯೋನ್ಮುಖ ವಲಯಗಳಲ್ಲಿ 20 ಲಕ್ಷ ಉದ್ಯೋಗ ಸೃಜಿಸುವ ಗುರಿ ಹೊಂದಿದೆ. ನಮ್ಮ ಮಹತ್ವಾಕಾಂಕ್ಷಿ ಕ್ವಿನ್ ಸಿಟಿ ಕಾರ್ಯಕ್ರಮ ಮುಂದಿನ ಪೀಳಿಗೆಯ ಜ್ಞಾನ, ಸ್ವಾಸ್ಥ್ಯ, ನಾವೀನ್ಯತೆ ಮತ್ತು ಉದ್ಯಮವು ಭವಿಷ್ಯದ ಪೀಳಿಗೆಗೆ ಅವಕಾಶಗಳನ್ನು ಸೃಷ್ಟಿಸುವ ವಿಶ್ವಾಸವಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಕ್ಯಾಂಪಸ್ ಟು ಕೆರಿಯರ್ ಉಪಯುಕ್ತ:
ಶಿಕ್ಷಣ ಹಾಗೂ ಉದ್ಯೋಗದ ನಡುವಿನ ಅಂತರ ಕಡಿಮೆ ಮಾಡಲು ''''''''ಕ್ಯಾಂಪಸ್ ಟು ಕೆರಿಯರ್'''''''' ಕಾರ್ಯಕ್ರಮ ಉಪಯುಕ್ತವಾಗಲಿದೆ. ಸುಭದ್ರವಾದ ಉನ್ನತ ಶಿಕ್ಷಣ ಮತ್ತು ಯುವ ಸಬಲೀಕರಣ ಸಾಧ್ಯವಾಗಿಸಿ ಗ್ರಾಮೀಣ ಮತ್ತು ನಗರ ವಿದ್ಯಾರ್ಥಿಗಳನ್ನು ವೃತ್ತಿಪರ ಆಯ್ಕೆಗಳಿಗೆ ಸಂಪರ್ಕಿಸಲು ಇದು ನೆರವಾಗಲಿದೆ. ಇದಕ್ಕೆ ಪೂರಕವಾದ ಅವಕಾಶಗಳನ್ನು ಸೃಷ್ಟಿಸುವ ಸರ್ಕಾರದ ದೂರದೃಷ್ಟಿ ಕಾರ್ಯಗತಗೊಳಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಿ2ಸಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಖುಷ್ಬೂ ಚೌಧರಿ ಮುಂತಾದವರು ಪಾಲ್ಗೊಂಡಿದ್ದರು.
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.