‘ಬಿಜೆಪಿಗರು ತಮ್ಮವರಿಗೇಕೆ ಕೇಸರಿ ಶಾಲು ಹಾಕ್ಸಲ್ಲ?’

Published : May 15, 2026, 12:56 PM IST
 Priyank Kharge

ಸಾರಾಂಶ

ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ಗೆ ಅವಕಾಶ ನೀಡಿ ಸರ್ಕಾರ ಹೊರಡಿಸಿರುವ ಆದೇಶಕ್ಕೆ ಬಿಜೆಪಿ ನಾಯಕರಿಂದ ವ್ಯಕ್ತವಾಗುತ್ತಿರುವ ಟೀಕೆಗೆ ಹಲವು ಸಚಿವರು ತಿರುಗೇಟು ನೀಡಿದ್ದಾರೆ. ಸಂವಿಧಾನಕ್ಕೆ ಬದ್ಧವಾಗಿ ಈ ಆದೇಶ ಹೊರಡಿಸಲಾಗಿದೆ.

  ಬೆಂಗಳೂರು : ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ಗೆ ಅವಕಾಶ ನೀಡಿ ಸರ್ಕಾರ ಹೊರಡಿಸಿರುವ ಆದೇಶಕ್ಕೆ ಬಿಜೆಪಿ ನಾಯಕರಿಂದ ವ್ಯಕ್ತವಾಗುತ್ತಿರುವ ಟೀಕೆಗೆ ಹಲವು ಸಚಿವರು ತಿರುಗೇಟು ನೀಡಿದ್ದಾರೆ. ಸಂವಿಧಾನಕ್ಕೆ ಬದ್ಧವಾಗಿ ಈ ಆದೇಶ ಹೊರಡಿಸಲಾಗಿದೆ. ಸರ್ಕಾರದ ಆದೇಶ ಪ್ರಶ್ನಿಸಿದರೆ ಕಾನೂನು ಹೋರಾಟಕ್ಕೆ ಸಿದ್ಧ, ಬೇರೆಯವರ ಮಕ್ಕಳು ಕೇಸರಿ ಶಾಲು ಹಾಕಬೇಕು ಎನ್ನುವ ಬಿಜೆಪಿಗರು ತಮ್ಮ ಮಕ್ಕಳಿಗೆ ಶಾಲು ಹಾಕಲು ಯಾಕೆ ಹೇಳುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಪ್ರತ್ಯೇಕವಾಗಿ ಮಾತನಾಡಿರುವ ಸಚಿವರಾದ ದಿನೇಶ್ ಗುಂಡೂರಾವ್‌, ಸತೀಶ್‌ ಜಾರಕಿಹೊಳಿ, ಪ್ರಿಯಾಂಕ್‌ ಖರ್ಗೆ ಅವರು, ಬಿಜೆಪಿಗರಿಗೆ ಬೇರೆ ಕೆಲಸ ಇಲ್ಲ. ಕೇವಲ ಇಂಥ ವಿಷಯ ಇಟ್ಟುಕೊಂಡೇ ರಾಜಕೀಯ ಮಾಡುತ್ತಾರೆ. ಹಿಜಾಬ್‌ ನಿಷೇಧ ರದ್ದು ಮಾಡುವ ಭರವಸೆಯನ್ನು ನಾವು ಈಗ ಈಡೇರಿಸಿದ್ದೇವೆ ಎಂದಿದ್ದಾರೆ.

ಬಿಜೆಪಿಗರಿಗೆ ಬೇರೆ ಕೆಲಸ ಇಲ್ಲದ ಕಾರಣ ಇಂಥ ವಿಷಯ ಇಟ್ಟುಕೊಂಡು ಮಾತನಾಡುತ್ತಿದ್ದಾರೆ. ತಮ್ಮ ಮಕ್ಕಳು, ಒಳ್ಳೆಯ ಶಾಲೆ, ಕಾಲೇಜು. ವಿದೇಶಿ ವಿವಿಗಳಲ್ಲಿ ಓದಲು ಕಳುಹಿಸುವ ಬಿಜೆಪಿ ನಾಯಕರು ಬೇರೆಯವರ ಮಕ್ಕಳು ಮಾತ್ರ ಕೇಸರಿ ಶಾಲು ಹಾಕಬೇಕೆಂದು ಬಯಸುತ್ತಿದ್ದಾರೆ. ಗೋರಕ್ಷಣೆ, ಧರ್ಮ ರಕ್ಷಣೆ ಬೋಧನೆಯಿಂದ ಮಕ್ಕಳಿಗೆ ಉದ್ಯೋಗ ಸಿಗುತ್ತಾ?. ನಮ್ಮ ಮಕ್ಕಳನ್ನು ಇನ್ನೂ ಹಿಂದಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಅವರು ಹೇಳುತ್ತಿದ್ದಾರೆ ಎಂದು ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಪ್ರಿಯಾಂಕ್‌ ಕಿಡಿಕಾರಿದ್ದಾರೆ.

ಕೇಸರಿ ಶಾಲಿಗೆ ಅವಕಾಶವಿಲ್ಲ-ಗುಂಡೂರಾವ್:

ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಮಾತನಾಡಿ, ಬಿಜೆಪಿಯವರು ಹಿಜಾಬ್‌ ವಿಚಾರ ಇಟ್ಟುಕೊಂಡೇ ರಾಜಕೀಯ ಮಾಡಿಕೊಂಡು ಬರುತ್ತಿದ್ದಾರೆ. ಅಲ್ಪಸಂಖ್ಯಾತರ ವಿರುದ್ಧದ ರಾಜಕಾರಣ ಬಿಟ್ಟರೆ ಬೇರೆ ಏನು ಗೊತ್ತಿದೆ? ಲಿಂಗಾಯತರು ಶಿವದಾರ, ಬ್ರಾಹ್ಮಣರು ಜನಿವಾರ ಹಾಕಿಕೊಳ್ಳುತ್ತಾರೆ. ಅದೇ ರೀತಿ ಮುಸ್ಲಿಮರು ಹಿಜಾಬ್‌ ಹಾಕಿಕೊಳ್ಳುತ್ತಾರೆ. ಆದರೆ ಕೇಸರಿ ಶಾಲು ಹಾಕಿಕೊಂಡು ಬರಲು ಅವಕಾಶ ಇಲ್ಲ. ಒಬ್ಬರು ಕೇಸರಿ ಶಾಲು ಹಾಕಿಕೊಂಡು ಬಂದರೆ ಮತ್ತೊಬ್ಬರು ಹಸಿರು, ಕಪ್ಪು ಶಾಲು ಹಾಕಿಕೊಂಡು ಬರುತ್ತೇವೆ ಎನ್ನುತ್ತಾರೆ. ಯಾವುದೇ ಕಾರಣಕ್ಕೂ ಸಮವಸ್ತ್ರಕ್ಕೆ ಅಡ್ಡಿಯಾಗುವಂತೆ ಮಾಡುವುದಿಲ್ಲ ಎಂದರು.

ಸಚಿವ ಸತೀಶ್‌ ಜಾರಕಿಹೊಳಿ ಮಾತನಾಡಿ, ಹಿಜಾಬ್ ಮುಂಚಿನಿಂದಲೂ ಇತ್ತು. ಬಿಜೆಪಿಯವರು ಬ್ಯಾನ್ ಮಾಡಿದ್ದರು, ಈಗ ನಾವು ತೆರವು ಮಾಡಿದ್ದೇವೆ. ಧಾರ್ಮಿಕ ಸಂಕೇತ ಧರಿಸಲು ಕೇವಲ ಒಂದೇ ಧರ್ಮಕ್ಕೆ ಅವಕಾಶ ನೀಡಿಲ್ಲ, ಇನ್ನೊಂದು ಧರ್ಮಕ್ಕೂ ಅವಕಾಶ ಕಲ್ಪಿಸಿದ್ದೇವೆ. ಸಣ್ಣ ಪುಟ್ಟ ಗೊಂದಲ ಸರಿಮಾಡಿದ್ದೇವೆ. ಬಿಜೆಪಿ ನಾಯಕರು ಇದೇ ವಿಷಯ ಇಟ್ಟುಕೊಂಡು ಇನ್ನೂ ಎರಡು ವರ್ಷ ಮಾತನಾಡುತ್ತಾರೆ ಟೀಕಿಸಿದರು.

ಜನಿವಾರ, ಶಿವಧಾರಕ್ಕೂ ಅನುಮತಿಸಿರುವುದು ಕಾಣುತ್ತಿಲ್ಲವೇ

ಸಚಿವ ಮಧು ಮಾತನಾಡಿ, ಹಿಜಾಬ್‌ ಬಗ್ಗೆ ಮಾತನಾಡುತ್ತಿರುವ ಬಿಜೆಪಿಯವರಿಗೆ ಅದೇ ಆದೇಶದಲ್ಲಿರುವ ಜನಿವಾರ, ಶಿವಧಾರಕ್ಕೂ ಅನುಮತಿಸಿರುವುದು ಕಾಣುತ್ತಿಲ್ಲವೇ? ಹಾಗಾದರೆ ಅವರೆಲ್ಲ ಜನಿವಾರ, ಶಿವದಾರದ ವಿರೋಧಿಗಳಾ? ಜನಿವಾರ ತೆಗೆಯುವಾಗ ಆದ ನೋವು ಹಿಜಾಬ್‌ ತೆಗೆಯುವಾಗಲೂ ಆಗಿರುತ್ತದೆಯಲ್ಲವಾ ಎಂದು ಪ್ರಶ್ನಿಸಿದ್ದಾರೆ.

ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ, ಉದ್ಯಮಶೀಲತೆ, ಸಮಾನತೆ ಅಂಶಗಳನ್ನು ಕಲಿಸಬೇಕು. ದೇಶದ ಆರ್ಥಿಕ ಪರಿಸ್ಥಿತಿ ಏನಾಗಿದೆ? ಇಂಧನ ಸ್ಥಿತಿ, ರುಪಾಯಿ ಮೌಲ್ಯ ಏನಾಗಿದೆ ಎಂಬ ಬಗ್ಗೆ ಮಕ್ಕಳಿಗೆ ತಿಳಿಸಬೇಕು. ಅದನ್ನು ಬಿಟ್ಟು. ಹಿಜಾಬ್‌, ಕೇಸರಿ, ಹಸಿರು, ಅರಿಶಿಣ ಶಾಲಿನ ಬಗ್ಗೆ ಮಾತನಾಡಬಾರದು. ಜನ ನಮಗೆ ಇಂಥ ಮಾತು ಆಡಲು ಮತ ಹಾಕಿದ್ದಾರೆಯೇ? ಎಂದು ತಿರುಗೇಟು ನೀಡಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಹಿಜಾಬ್‌ಗೆ ಅನುಮತಿಸಿ ನ್ಯಾಯಾಂಗಕ್ಕೆ ಅಪಚಾರ: ಬಿಜೆಪಿ
ಸತೀಶನ್‌ಗೆ ಒಲಿದ ಕೇರಳಂ - ರಾಗಾ ಆಪ್ತ ವೇಣುಗೆ ನಿರಾಸೆ