ಕನ್ನಡಪ್ರಭ ವಾರ್ತೆ ಹೊಸಪೇಟೆ ಸರ್ಕಾರದಲ್ಲಿ ಯಾವ ಲಿಂಗಾಯತ ನಾಯಕರಿಗೂ ಸಮಸ್ಯೆಯಾಗಿಲ್ಲ. ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಯಾವ ಧಾಟಿಯಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಅವರ ಹೇಳಿಕೆಯ ಹಿಂದೆ ಯಾರೋ ಇದ್ದಾರೆ. ಅವರು ಸ್ವತಃ ಹೇಳಿಕೆ ನೀಡಿಲ್ಲ ಎನಿಸುತ್ತಿದೆ ಎಂದು ಕೆಎಂಎಫ್ ಅಧ್ಯಕ್ಷ ಎಸ್. ಭೀಮಾನಾಯ್ಕ ತಿಳಿಸಿದರು. ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ನಮ್ಮ ಕೇಂದ್ರ ನಾಯಕರು ಮತ್ತು ರಾಜ್ಯ ನಾಯಕರು ಜಿಲ್ಲಾವಾರು ಸಭೆ ಕರೆಯುತ್ತಾರೆ. ನಮ್ಮ ಅಭಿಪ್ರಾಯ ಪಡೆದ ಬಳಿಕ ಹೈಕಮಾಂಡ್ ಸೂಕ್ತ ಅಭ್ಯರ್ಥಿ ಆಯ್ಕೆ ಮಾಡುತ್ತದೆ. ಅವರ ಗೆಲುವಿಗೆ ನಾವು ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ. ಸ್ಥಳೀಯರು, ಹೊರಗಿನ ಅಭ್ಯರ್ಥಿಗೆ ಟಿಕೆಟ್ ಕೊಡುವುದು ಪಕ್ಷದ ತೀರ್ಮಾನ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಎಲ್ಲ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಕ್ಷೇತ್ರ, ತಮ್ಮ ಜಿಲ್ಲೆಗೆ ತಮ್ಮದೇ ಸಮುದಾಯದ ಅಧಿಕಾರಿಗಳನ್ನು ಕೊಡಿ ಎಂಬ ಬೇಡಿಕೆಯಿಟ್ಟರೆ ಹೇಗೆ? ಹೀಗಾದರೆ ಯಾವ ಮುಖ್ಯಮಂತ್ರಿಯಿಂದಲೂ ಸರ್ಕಾರ ನಡೆಸಲು ಸಾಧ್ಯವಿಲ್ಲ. ಆದರೆ, ಸದ್ಯಕ್ಕೆ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ ಎಂದ ಮೇಲೆ ಆ ಬಗ್ಗೆ ಚರ್ಚೆಯೇ ಅನಗತ್ಯ. ಈಗಾಗಲೇ ಜತೆಗೂಡಿ ಊಟ ಮಾಡಿದ್ದಾರೆ. ನಿಮ್ಮನ್ನು ಸೇರಿಸಿ ಊಟ ಮಾಡಿಸಬೇಕಿತ್ತಾ ಎಂದು ಹಾಸ್ಯ ಚಟಾಕಿ ಹಾರಿಸಿದರು.