- ರಾಜಕೀಯ ಮಾಡುವುದಕ್ಕಾಗಿ ಮಂಡ್ಯಕ್ಕೆ ಬರುತ್ತಾರೆ - ಕುಮಾರಸ್ವಾಮಿ, ಬೊಮ್ಮಾಯಿ ಪ್ರಧಾನಿ ಬಳಿ ಮಾತನಾಡಲಿ ಕನ್ನಡಪ್ರಭ ವಾರ್ತೆ ಮಂಡ್ಯ ಬಿಜೆಪಿ ಮತ್ತು ಜೆಡಿಎಸ್‌ನವರಿಗೆ ರೈತರು, ಜನರ ಬಗ್ಗೆ ಸ್ವಲ್ಪವೂ ಕೃತಜ್ಞತೆಯೇ ಇಲ್ಲ. ರಾಜಕೀಯ ಮಾಡುವುದಕ್ಕಾಗಿಯೇ ಅವರು ಮಂಡ್ಯಕ್ಕೆ ಬರುತ್ತಾರೆ. ಅವರು ಇಲ್ಲಿಗೆ ಬರುವ ಬದಲು ದೆಹಲಿಗೆ ಹೋಗಿ ಪ್ರಧಾನ..ಮಂತ್ರಿ ಬಳಿ ಮಾತನಾಡಿ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಖಾರವಾಗಿಯೇ ನುಡಿದರು. ನಾನು ರೈತರು ಹಾಗೂ ಸಂಘಟನೆಗಳ ಬಗ್ಗೆ ಮಾತನಾಡುವುದಿಲ್ಲ. ಅವರು ನಮ್ಮ ಗಮನ ಸೆಳೆಯುವುದಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ನಾವೂ ನಮ್ಮ ಸಮಸ್ಯೆಯನ್ನು ಕೋರ್ಟ್ ಹಾಗೂ ಪ್ರಾಧಿಕಾರದ ಮುಂದೆ ಹೇಳಬಹುದಷ್ಟೇ. ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರದೇಶ ಮಾಡುವ ಅವಕಾಶವಿದ್ದರೂ ಏಕೆ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗುತ್ತಿಲ್ಲ ಎಂದು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರಶ್ನಿಸಿದರು.
ಬಿಜೆಪಿ ಹಾಗೂ ಜೆಡಿಎಸ್ ಅವರಿಗೆ ಕಾವೇರಿ ಕಣಿವೆ ಭಾಗದ ರೈತರು ಮತ್ತು ಜನರ ಬಗ್ಗೆ ಕೃತಜ್ಞತೆ ಇಲ್ಲವೇ. ಮಂಡ್ಯದಲ್ಲಿ ಬಂದು ಬಿಜೆಪಿ-ಜೆಡಿಎಸ್‌ನವರು ಏನು ಮಾಡ್ತಾರೆ. ಕುಮಾರಸ್ವಾಮಿ, ಬೊಮ್ಮಾಯಿ ದೆಹಲಿಗೆ ಹೋಗಿ ಪ್ರಧಾನಿಗಳ ಬಳಿ ಮಾತನಾಡಬೇಕು. ಕಾವೇರಿ ವಿವಾದದಿಂದ ಜನರಿಗೆ ಮತ್ತು ರೈತರಿಗಾಗುತ್ತಿರುವ ಸಮಸ್ಯೆಯನ್ನು ಮನವರಿಕೆ ಮಾಡಿಕೊಡಬೇಕು. ಉಭಯ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆದು ಮಾತುತೆ ಮೂಲಕ ಸಮಸ್ಯೆ ಬಗೆಹರಿಸಲು ಹೇಳಬೇಕು. ಅದನ್ನು ಬಿಟ್ಟು ಪ್ರಚಾರಕ್ಕೆ, ರಾಜಕೀಯಕ್ಕೆ ಕಾವೇರಿ ಸಮಸ್ಯೆ ಬಳಸಿಕೊಳ್ಳಬಾರದು ಎಂದು ನೇರವಾಗಿ ಹೇಳಿದರು. ನಾವೂ ದೆಹಲಿಗೆ ಹೋಗಿದ್ದೇವೆ, ಸಂಸದರ ಜೊತೆ ಸಭೆ ಮಾಡಿದ್ದೇವೆ. ಮೂರು ಬಾರಿ ವಿರೋಧ ಪಕ್ಷಗಳ ಜೊತೆ ಸಭೆ ಮಾಡಿದ್ದೇವೆ. ಸುಪ್ರೀಂ ಕೋರ್ಟ್ ಹಾಗೂ ಪ್ರಾಧಿಕಾರದ ಆದೇಶವನ್ನು ಎಲ್ಲ ಮುಖ್ಯಮಂತ್ರಿಗಳೂ ಪಾಲಿಸಿದ್ದಾರೆ. ಇಲ್ಲಿ ಬಂದು ಶೂರರು, ವೀರರಂತೆ ಭಾಷಣ ಮಾಡುವ ಜೆಡಿಎಸ್-ಬಿಜೆಪಿಯವರೂ ಹಿಂದೆ ನೀರು ಬಿಟ್ಟಿದ್ದಾರೆ. ನಮಗಿಂತ ಹೆಚ್ಚು ರೈತರಿಗೆ ಅನ್ಯಾಯ ಮಾಡಿ ತಮಿಳುನಾಡಿಗೆ ನೀರು ಹರಿಸಿದ್ದಾರೆ ಎಂದು ದೂರಿದರು. ನಾವು ಇಲ್ಲಿಯವರೆಗೆ ರೈತರ ಹಿತಾಸಕ್ತಿ ಕಾಪಾಡುವುದರೊಂದಿಗೆ ಅಲ್ಪಸ್ವಲ್ಪ ಆದೇಶ ಪಾಲನೆ ಮಾಡಿದ್ದೇವೆ. ಪ್ರಾಧಿಕಾರ, ಕೋರ್ಟ್ ಆದೇಶಗಳನ್ನು ಪೂರ್ಣ ಪ್ರಮಾಣದಲ್ಲಿ ಪಾಲನೆ ಮಾಡಿಲ್ಲ. ಮಂಡ್ಯ ರೈತರಿಗೆ ಇನ್ನೂ ಎರಡು ಕಟ್ಟು ನೀರು ಕೊಡುತ್ತೇವೆ. ಅವರನ್ನು ರಕ್ಷಣೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಲೋಕಸಭಾ ಚುನಾವಣೆಯಲ್ಲಿ ಒಂದೇ ಸಲ ಸಾಧನೆ ಮಾಡಲು ಬಿಜೆಪಿ-ಜೆಡಿಎಸ್ ಒಂದಾಗುತ್ತಿದ್ದಾರೆ. ಅದೇ ರೀತಿ ಕಾವೇರಿ ವಿಚಾರದಲ್ಲೂ ಪ್ರಾಮಾಣಿಕವಾಗಿ ಪ್ರಧಾನಿ ಬಳಿ ಹೋಗಿ ಸಮಸ್ಯೆಯನ್ನು ಮನವರಿಕೆ ಮಾಡಿಕೊಡಬೇಕು. ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡೋಕಾಗೋಲ್ಲ ಎಂದರೆ ಮನೆಯಲ್ಲಿರಲಿ. ಇಲ್ಲಿಗೆ ಬಂದು ರಾಜಕಾರಣ ಮಾಡುವುದೇಕೆ ಎಂದು ಪ್ರಶ್ನಿಸಿದರು. ಈ ಹಿಂದೆ ಪ್ರಧಾನಿಯಾಗಿದ್ದ ವಾಜಪೇಯಿ ಅವರು ಮಧ್ಯ ಪ್ರವೇಶ ಮಾಡಿರಲಿಲ್ಲವೇ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಎಲ್ಲ ರೀತಿಯಯ ಅಧಿಕಾರವಿದೆ. ಕೇಂದ್ರ ಸರ್ಕಾರವೇ ಎರಡು ರಾಜ್ಯಗಳನ್ನು ಕರೆದು ಸಮಸ್ಯೆ ಬಗೆಹರಿಸಬಹುದು. ಆ ವಿಷಯದಲ್ಲಿ ಇಚ್ಛಾಶಕ್ತಿ, ಬದ್ಧತೆ ಪ್ರದರ್ಶಿಸುತ್ತಿಲ್ಲ ಎಂದು ಟೀಕಿಸಿದರು. ಐಎನ್‌ಡಿಐಎ ಒಕ್ಕೂಟದ ರಾಜಕೀಯವೇ ಬೇರೆ, ಕಾವೇರಿ ವಿಚಾರವೇ ಬೇರೆ. ಕರ್ನಾಟಕ, ತಮಿಳುನಾಡು ಬೇರೆ ಬೇರೆ ರಾಜ್ಯ. ತಮಿಳುನಾಡಿನವರು ಅವರ ಹಿತಾಸಕ್ತಿ ನೋಡುತ್ತಾರೆ. ನಾವು ನಮ್ಮ ಹಿತಾಸಕ್ತಿ ನೋಡುತ್ತೇವೆ. ರಾಜಕೀಯವನ್ನು ಇವರು ಯಾರ ಜೊತೆಯಾದರೂ ಮಾಡಿಕೊಳ್ಳಲಿ. ನಾವೂ ಸಹ ಐಎನ್‌ಡಿಐಎ ಜೊತೆ ರಾಜಕೀಯ ಮಾಡುತ್ತೇವೆ. ಕಾವೇರಿ ಸಮಸ್ಯೆಯನ್ನು ಸಾಧ್ಯವಾದರೆ ಬಗೆಹರಿಸಲಿ. ಅವರ ಕೈಯಲ್ಲಿ ಸಾಧ್ಯವಾಗದಿದ್ದರೆ ನಮ್ಮ ರೈತರನ್ನು ಉಳಿಸೋದು ನಮಗೆ ಗೊತ್ತಿದೆ ಎಂದರು.
ಕಾವೇರಿ ಅಚ್ಚುಕಟ್ಟಿಗೆ ಎಚ್‌ಡಿಕೆ ಕೊಡುಗೆ ಏನು?: ಸಿಆರ್‌ಎಸ್
ಕನ್ನಡಪ್ರಭ ವಾರ್ತೆ ಮಂಡ್ಯ ಕಾವೇರಿ ಅಚ್ಚುಕಟ್ಟು ಪ್ರದೇಶಕ್ಕೆ ಮತ್ತು ಮಂಡ್ಯ ಜಿಲ್ಲೆಗೆ ಕುಮಾರಸ್ವಾಮಿ ಕೊಡುಗೆ ಏನು. ಅವರ ತಂದೆ ಕೊಡುಗೆಯನ್ನೇ ಎಷ್ಟು ಸಲ ಹೇಳುತ್ತಾರೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಪ್ರಶ್ನಿಸಿದರು. ದೇವೇಗೌಡರು ಕಾವೇರಿ ಅಚ್ಚುಕಟ್ಟು ಪ್ರದೇಶಕ್ಕೆ ಕೊಡುಗೆ ಕೊಟ್ಟೂ ಆಯಿತು. ಜಿಲ್ಲೆಯ ಜನರು ಕೃತಜ್ಞತೆ ಸಲ್ಲಿಸಿದ್ದೂ ಆಯಿತು. ಕುಮಾರಸ್ವಾಮಿ ಅವರ ವೈಯಕ್ತಿಕ ಕೊಡುಗೆ ಏನೆಂದು ಹೇಳಲಿ. ದೇವೇಗೌಡರ ಕೊಡುಗೆ ಮೇಲೆ ಕುಮಾರಸ್ವಾಮಿ ರಾಜಕಾರಣ ಮಾಡುತ್ತಿದ್ದಾರೆ ಅಷ್ಟೇ ಎಂದರು.
ಸಂಕ್ರಾಂತಿ ವೇಳೆಗೆ ಕಾಂಗ್ರೆಸ್ ಸರ್ಕಾರ ಉರುಳಲಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾತ್ರಿಯೆಲ್ಲ ಕನಸು ಕಾಣೋಕೆ ಹೇಳಿ. ಐದು ವರ್ಷ ಸರ್ಕಾರ ಕಂಪ್ಲೀಟ್ ಮಾಡಿದ ಮೇಲೆ ಅವರಿಗೇ ಗೊತ್ತಾಗುತ್ತೆ ಎಂದು ಚುಟುಕಾಗಿ ಉತ್ತರಿಸಿದರು. ಅಲ್ಪ ಸಂಖ್ಯಾತರು ಮತಗಳು ಜೆಡಿಎಸ್ ಕೈಹಿಡಿಯಲಿಲ್ಲ ಎಂಬ ಕುಮಾರಸ್ವಾಮಿ ಹೇಳಿಕೆಗೆ, ಕುಮಾರಸ್ವಾಮಿ ಸಾಧನೆ ಏನೂಂತ ನಿಮಗೂ ಗೊತ್ತು ನಮಗೂ ಒತ್ತು. ಓಟು ಹಾಕಿಸಿಕೊಳ್ಳಲು ಏನು ಮಾತನಾಡಬೇಕೋ ಅದನ್ನು ಅವರು ಮಾತನಾಡುತ್ತಾರೆ ಎಂದು ಕುಟುಕಿದರು.