ಪ್ರತ್ಯೇಕ ರಾಷ್ಟ್ರ: ಡಿಕೆಸು ಹೇಳಿಕೆಗೆ ಸಂಸತ್ತಲ್ಲಿ ಕಿಡಿ

KannadaprabhaNewsNetwork | Updated : Feb 03 2024, 07:42 AM IST

ಸಾರಾಂಶ

‘ಬಜೆಟ್‌ನಲ್ಲಿ ದಕ್ಷಿಣ ರಾಜ್ಯಗಳನ್ನು ಕಡೆಗಣಿಸಲಾಗುತ್ತಿದೆ. ಇದೇ ಮುಂದುವರಿದರೆ ದಕ್ಷಿಣ ಭಾರತದ ರಾಜ್ಯಗಳು ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಬೇಕಾಗುತ್ತದೆ’ ಎಂಬ ಹೇಳಿಕೆ ನೀಡಿದ್ದ ಕಾಂಗ್ರೆಸ್‌ ಸಂಸದ ಡಿ.ಕೆ.ಸುರೇಶ್‌ ವಿರುದ್ಧ ಕೇಂದ್ರ ಸಚಿವರು ಹಾಗೂ ಬಿಜೆಪಿ ನಾಯಕರು ಮುಗಿಬಿದ್ದಿದ್ದಾರೆ.

ನವದೆಹಲಿ: ‘ಬಜೆಟ್‌ನಲ್ಲಿ ದಕ್ಷಿಣ ರಾಜ್ಯಗಳನ್ನು ಕಡೆಗಣಿಸಲಾಗುತ್ತಿದೆ. ಇದೇ ಮುಂದುವರಿದರೆ ದಕ್ಷಿಣ ಭಾರತದ ರಾಜ್ಯಗಳು ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಬೇಕಾಗುತ್ತದೆ’ ಎಂಬ ಹೇಳಿಕೆ ನೀಡಿದ್ದ ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್‌ ಸಂಸದ ಡಿ.ಕೆ.ಸುರೇಶ್‌ ಹಾಗೂ ಕಾಂಗ್ರೆಸ್‌ ವಿರುದ್ಧ ಕೇಂದ್ರ ಸಚಿವರು ಹಾಗೂ ಬಿಜೆಪಿ ನಾಯಕರು ಮುಗಿಬಿದ್ದಿದ್ದಾರೆ. 

ಈ ಕುರಿತು ಲೋಕಸಭೆಯಲ್ಲಿ ಮಾತನಾಡಿದ ಪ್ರಹ್ಲಾದ್‌ ಜೋಶಿ, ‘ನನ್ನನ್ನೂ ಒಳಗೊಂಡಂತೆ ಹಲವು ಸಂಪುಟ ಸಹೋದ್ಯೋಗಿಗಳು ದಕ್ಷಿಣ ಭಾರತದಿಂದ ಬಂದಿದ್ದೇವೆ. ನಮಗೆ ಬಜೆಟ್‌ನಲ್ಲಿ ಅನ್ಯಾಯವಾಗಿದೆ ಎಂದು ತೋರದಿದ್ದುದು ಕಾಂಗ್ರೆಸ್‌ ಸಂಸದರಿಗೆ ಹೇಗೆ ತೋರಿತು? ಡಿ.ಕೆ.ಸುರೇಶ್‌ ದೇಶದ ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ. 

ಈ ಹಿನ್ನೆಲೆಯಲ್ಲಿ ಅವರ ಹೇಳಿಕೆಯನ್ನು ನೈತಿಕ ಸಮಿತಿಗೆ ವರ್ಗಾಯಿಸಿ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು. ಇದೇ ವೇಳೆ, ಬೆಂಗಳೂರು ದಕ್ಷಿಣ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕೂಡ ಸುರೇಶ್‌ ಹೇಳಿಕೆಯನ್ನು ಖಂಡಿಸಿದರು. 

ರಾಜ್ಯಸಭೆಯಲ್ಲಿ ಮಾತನಾಡಿದ ವಾಣಿಜ್ಯ ಸಚಿವ ಪೀಯೂಷ್‌ ಗೋಯಲ್‌, ‘ಕರ್ನಾಟಕದ ಕಾಂಗ್ರೆಸ್ ಸಂಸದ ಸುರೇಶ್‌ ಅವರು ದೇಶವನ್ನು ವಿಭಜಿಸುವ ಮಾತುಗಳಾಡಿದ್ದಾರೆ. ಇದು ಕಾಂಗ್ರೆಸ್ಸಿಗರ ಮನಸ್ಥಿತಿಯನ್ನು ತೋರಿಸುತ್ತದೆ. ಕಾಂಗ್ರೆಸ್‌ ಈ ಹಿಂದೆಯೂ ದೇಶವನ್ನು ವಿಭಜಿಸಿತ್ತು.

 ಆ ಮನಸ್ಥಿತಿ ಇಂದಿಗೂ ಹೋಗಿಲ್ಲ ಎಂಬುದು ಇದರಿಂದ ವ್ಯಕ್ತವಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷ ಕ್ಷಮೆಯಾಚಿಸಬೇಕು ಮತ್ತು ತನ್ನ ನಿಲುವನ್ನು ತಿಳಿಸಬೇಕು. ಜೊತೆಗೆ ಸುರೇಶ್‌ ಅವರ ಪ್ರಕರಣವನ್ನು ಹಕ್ಕುಬಾಧ್ಯತಾ ಸಮಿತಿಗೆ ವರ್ಗಾಯಿಸಿ ತನಿಖೆ ನಡೆಸಬೇಕು. ಸೋನಿಯಾ ಗಾಂಧಿ ಆದಿಯಾಗಿ ಕಾಂಗ್ರೆಸ್‌ ನಾಯಕರು ಕ್ಷಮೆ ಕೇಳಬೇಕು’ ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ರವಿಶಂಕರ ಪ್ರಸಾದ್, ‘ಡಿಕೆಸು ದೇಶ ಒಡೆಯುವಂಥ ಸಂವಿಧಾನ ವಿರೋಧಿ ಹೇಳಿಕೆ ನೀಡಿದರೂ ಏಕೆ ಖರ್ಗೆ ಹಾಗೂ ರಾಹುಲ್‌ ಗಾಂಧಿ, ಇಂಡಿಯಾ ಕೂಟದ ನಾಯಕರು ಮೌನ ತಾಳಿದ್ದಾರೆ. ಡಿಕೆಸು ಒಂದು ಕ್ಷಣವೂ ಸಂಸದ ಹುದ್ದೆಯಲ್ಲಿ ಇರಬಾರದು. ಅವರು ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

ದೇಶ ವಿಭಜನೆ ಹೇಳಿಕೆ ಸಹಿಸಲ್: ದೇಶಕ್ಕಾಗಿ ಕಾಂಗ್ರೆಸ್ಸಿನ ಹಲವರು ಪ್ರಾಣ ತ್ಯಾಗ ಮಾಡಿದ್ದಾರೆ. ಭಾರತ ವಿಭಜಿಸುವ ಹೇಳಿಕೆಯನ್ನು ಸಹಿಸುವುದಿಲ್ಲ.- ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಧ್ಯಕ್ಷ

Share this article