;Resize=(412,232))
ಬೆಂಗಳೂರು : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾನಸಿಕ ಆರೋಗ್ಯ ಸರಿ ಇಲ್ಲ. ಅವರು ತಮ್ಮ ನಾಲಿಗೆಯನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಬೇಕು ಎಂದು ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ತೀಕ್ಷ್ಮವಾಗಿ ಹೇಳಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರು ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ಪ್ರಚೋದನಾಕಾರಿ ಹೇಳಿಕೆ ನೀಡಿರುವುದು ಖಂಡನೀಯ. ಅರಳು-ಮರುಳು ರೀತಿ ಮಾತನಾಡಬಾರದು. ಇವರ ವಿರುದ್ಧ ದೇಶದಾದ್ಯಂತ ಜನರು ಹಿಡಿಶಾಪ ಹಾಕುತ್ತಿದ್ದಾರೆ. ಕೊಲ್ಲಲು ಪ್ರಚೋದನೆ ನೀಡುವುದು ಸರಿ ಅಲ್ಲ ಎಂದರು.
ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ತಡೆ ಮಸೂದೆಗೆ ಅಂಗೀಕಾರ ದೊರೆತಿದೆ. ಆ ಮಸೂದೆ ಅನ್ವಯ ಖರ್ಗೆ ಅವರ ರೀತಿ ಪ್ರಚೋದನಾಕಾರಿಯಾಗಿ ಮಾತನಾಡಿದರೆ ಪ್ರಕರಣ ದಾಖಲು ಮಾಡಬಹುದು. ಹೀಗಾಗಿ ಬಿಜೆಪಿ ದೂರು ನೀಡಿದೆ. ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಹೇಳಿದರು.
ರಜಾಕರಿಂದ ತಮ್ಮ ಕುಟುಂಬದ ಮೇಲೆ ದಾಳಿ ನಡೆದಿದೆ ಎಂದು ಖರ್ಗೆ ಅವರೇ ಹೇಳಿದ್ದಾರೆ. ತಮ್ಮ ಮನೆತನ ಹಾಳು ಮಾಡಿದವರ ವಿರುದ್ಧ ಮಾತನಾಡುವುದನ್ನು ಬಿಟ್ಟು ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ಮಾತನಾಡುತ್ತಿದ್ದಾರೆ. ಇವರ ಹೇಳಿಕೆಗೆ ಮಗ ಪ್ರಿಯಾಂಕ್ ಖರ್ಗೆ ಬೆಂಬಲ ನೀಡಿದ್ದಾರೆ. ಇದು ಬೇವಿನ ಕಾಯಿಗೆ ಹಾಗಲಕಾಯಿ ಸಾಕ್ಷಿ ಇದ್ದಂತೆ. ಇವರಿಬ್ಬರ ಮನಸ್ಥಿತಿ ಒಂದೇ ಆಗಿದೆ ಎಂದು ಇದೇ ವೇಳೆ ಛಲವಾದಿ ವಾಗ್ದಾಳಿ ನಡೆಸಿದರು.
ಮಲ್ಲಿಕಾರ್ಜುನ ಖರ್ಗೆ ಅವರ ಬೆಂಬಲಕ್ಕೆ ಕಾಂಗ್ರೆಸ್‍ನಿಂದ ಯಾರೂ ಬಂದಿಲ್ಲ. ಪ್ರಿಯಾಂಕ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಕಾಂಗ್ರೆಸ್‍ನಲ್ಲಿ ಇಬ್ಬರೂ ಮೂಲೆಗುಂಪಾಗಿದ್ದಾರೆ. ಅಪ್ಪ ಮತ್ತು ಮಗನ ತಲೆಯಲ್ಲಿ ವಿಷಕಾರಿ ಹಾವಿಗಿಂತ ಹೆಚ್ಚು ವಿಷ ಇದೆ. ಈ ಬ್ಬರ ವಿರುದ್ಧ ಕೇಂದ್ರ ಸರ್ಕಾರವು ಸ್ವಯಂಪ್ರೇರಿತ ದೂರು ದಾಖಲಿಸಿ ತಿಹಾರ್ ಜೈಲಿಗೆ ಕಳಿಸಬೇಕು ಎಂದು ಆಗ್ರಹಿಸಿದರು.
ಜಾತಿ ಬಿಟ್ಟು ಮಾತನಾಡಿ:
ವಯಸ್ಸಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವಿಶ್ರಾಂತಿ ಅವಶ್ಯಕತೆ ಇದೆ. ಜೈಲಿಗೆ ಹಾಕಿದರೆ ವಿಶ್ರಾಂತಿ ಸಿಗಲಿದೆ. ಮಗ ಅಲ್ಲೇ ಇದ್ದರೆ ಸಹಾಯವಾಗುತ್ತೆ. ಮಾತೆತ್ತಿದರೆ ತಾವು ದಲಿತರು ಅಂತ ಖರ್ಗೆ ಹೇಳುತ್ತಾರೆ. ದಲಿತ ಅನ್ನೋ ಕಾರಣಕ್ಕೇ ಏನು ಬೇಕಾದರೂ ಮಾತನಾಡಬಾರದು. ಬೇರೆಯವರು ನಿಂದಿಸಿದರೆ ನೀವು ದಲಿತ ಕಾರ್ಡ್ ಚಲಾವಣೆ ಮಾಡುತ್ತೀರಿ. ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾದ ಮೇಲೆ ಜಾತಿ ಬಿಟ್ಟು ಮಾತನಾಡಬೇಕು. ಜಾತಿ ಟ್ಯಾಗ್ ಮಾಡಿಕೊಂಡು ಮಾತನಾಡಬಾರದು ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.