ಸಚಿವೆ ಹೆಬ್ಬಾಳಕರ ಕೀಳುಮಟ್ಟದ ಹೇಳಿಕೆ ಸರಿಯಲ್ಲ: ಶೆಟ್ಟರ್‌

ಸಾರಾಂಶ

ಚುನಾವಣೆ ಪ್ರಚಾರದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ನನ್ನ ವಿರುದ್ಧ ಕೀಳುಮಟ್ಟದ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದು ಬೆಳಗಾವಿ ಲೋಕಸಭಾ ಮತಕ್ಷೇತ್ರದ ಅಭ್ಯರ್ಥಿ ಜಗದೀಶ್ ಶೆಟ್ಟರ್ ಕಿಡಿಕಾರಿದ್ದಾರೆ.

ಬೆಳಗಾವಿ :  ಚುನಾವಣೆ ಪ್ರಚಾರದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ನನ್ನ ವಿರುದ್ಧ ಕೀಳುಮಟ್ಟದ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದು ಬೆಳಗಾವಿ ಲೋಕಸಭಾ ಮತಕ್ಷೇತ್ರದ ಅಭ್ಯರ್ಥಿ ಜಗದೀಶ್ ಶೆಟ್ಟರ್ ಕಿಡಿಕಾರಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಂದ ಮೇಲೆ ಈ ವಿಚಾರವನ್ನು ಲಕ್ಷ್ಮೀ ಹೆಬ್ಬಾಳಕರ ಹೇಳಲಿಲ್ಲ. ಈಗ್ಯಾಕೆ ಹೇಳುತ್ತಿದ್ದಾರೆ ಎಂದು ಪ್ರಶ್ನಿಸಿದ ಅವರು, ಚುನಾವಣೆಯ ಪ್ರಚಾರದಲ್ಲಿ ಇಷ್ಟೊಂದು ಕೀಳುಮಟ್ಟದ ಪ್ರಚಾರದ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ನುಡಿದರು.

ಕಾಂಗ್ರೆಸ್‌ನವರಿಗೆ ಜಗದೀಶ್ ಶೆಟ್ಟರ್ ಹಾಗೂ ಬಿಜೆಪಿ ಬಗ್ಗೆ ಮಾತನಾಡಲು ಯಾವುದೇ ವಿಷಯಗಳು ಇಲ್ಲ. ಇದು ಲೋಕಸಭಾ ಚುನಾವಣೆ ಯಾವುದೋ ಜಿಪಂ, ವಿಧಾನಸಭೆ ಚುನಾವಣೆ ಎಂದು ತಿಳಿದುಕೊಂಡಿದ್ದಾರೋ ಹೆಬ್ಬಾಳಕರ ಎಂದು ಅರ್ಥವಾಗುತ್ತಿಲ್ಲ. ಇಂಥ ಕೀಳುಮಟ್ಟದ ಭಾಷೆ, ಅಪಪ್ರಚಾರಕ್ಕೆ ನಾನು ಅಷ್ಟೊಂದು ಕೀಳುಮಟ್ಟಕ್ಕೆ ಹೋಗುವುದಿಲ್ಲ ಎಂದು ಕುಟುಕಿದರು.

ನಾನು ಕಾಂಗ್ರೆಸ್ ಸೇರಿದಾಗ ಅವರ ಪಕ್ಷದ ನಾಯಕರೇ ದೊಡ್ಡ ಶಕ್ತಿ ಬಂದಿದೆ ಎಂದಿದ್ದರು. ಇಂಥ ಹಸಿ ಸುಳ್ಳು ಹೇಳುವುದನ್ನು ನಿಲ್ಲಿಸಬೇಕು. ಸೋಲಿನ ಹತಾಶೆಯಿಂದ ಕಾಂಗ್ರೆಸ್ ಈ ರೀತಿಯ ಹೇಳಿಕೆ ಅಪಪ್ರಚಾರ ಮಾಡುವುದು ಪ್ರಾರಂಭವಾಗಿದೆ. ಇದಕ್ಕೆ ಮತದಾನದ ದಿನ ಜನರು ಉತ್ತರ ಕೊಡುತ್ತಾರೆ ಎಂದರು.

Share this article