ಮೋದಿ ಸರ್ಕಾರದ ಮೊದಲ ಮಸೂದೆ ಮಹಿಳಾ ಮೀಸಲಿಗೆ ಸೋಲು

Published : Apr 18, 2026, 05:38 AM IST
  PM Modi

ಸಾರಾಂಶ

ಇಡೀ ದೇಶದ ಗಮನ ಸೆಳೆದಿದ್ದ, ಮಹಿಳೆಯರಿಗೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇ.33 ಮೀಸಲಾತಿ ನೀಡಲು ಉದ್ದೇಶಿಸಿದ್ದ ‘ಸಂವಿಧಾನ (131ನೇ ತಿದ್ದುಪಡಿ) ಮಸೂದೆ-2026’ ಲೋಕಸಭೆಯಲ್ಲಿ ಶುಕ್ರವಾರ ಸೋಲು ಕಂಡಿದೆ.

 ನವದೆಹಲಿ :  ಇಡೀ ದೇಶದ ಗಮನ ಸೆಳೆದಿದ್ದ, ಮಹಿಳೆಯರಿಗೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇ.33 ಮೀಸಲಾತಿ ನೀಡಲು ಉದ್ದೇಶಿಸಿದ್ದ ‘ಸಂವಿಧಾನ (131ನೇ ತಿದ್ದುಪಡಿ) ಮಸೂದೆ-2026’ ಲೋಕಸಭೆಯಲ್ಲಿ ಶುಕ್ರವಾರ ಸೋಲು ಕಂಡಿದೆ. ಈ ಮೂಲಕ 2029ರ ಲೋಕಸಭೆ ಚುನಾವಣೆಯಿಂದ ಶೇ.33 ಮಹಿಳಾ ಮೀಸಲು ಜಾರಿಗೊಳಿಸುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕನಸು ಭಗ್ನವಾಗಿದೆ. ಸಾಂವಿಧಾನಿಕ ತಿದ್ದುಪಡಿ ಆದ ಕಾರಣ ಅಂಗೀಕಾರಕ್ಕೆ ಅಗತ್ಯವಾಗಿದ್ದ ಮೂರನೇ 2ರಷ್ಟು ಬಹುಮತ ಬಾರದೇ ಮಸೂದೆಗೆ 54 ಮತ ಅಂತರದಿಂದ ಸೋಲಾಗಿದೆ.

ಇದರ ಬೆನ್ನಲ್ಲೇ ಲೋಕಸಭಾ ಕ್ಷೇತ್ರಗಳನ್ನು 543ರಿಂದ 850ಕ್ಕೆ ಹೆಚ್ಚಿಸುವ ‘ಕ್ಷೇತ್ರ ಮರುವಿಂಗಡಣೆ ಮಸೂದೆ-2026’ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಹಿಳಾ ಮೀಸಲಾತಿ ಅನುಷ್ಠಾನಕ್ಕೆ ಸಂಬಂಧಿಸಿದ ಕಾನೂನುಗಳನ್ನು ತಿದ್ದುಪಡಿ ಮಾಡುವ ‘ಕೇಂದ್ರಾಡಳಿತ ಪ್ರದೇಶ ಕಾನೂನು (ತಿದ್ದುಪಡಿ) ಮಸೂದೆ -2026’ಗಳನ್ನು ಮುಂದುವರಿಸುವುದಿಲ್ಲ ಎಂದು ಸರ್ಕಾರ ಹೇಳಿಕೊಂಡಿದೆ.

ಮಹಿಳಾ ಮೀಸಲು ಮಸೂದೆ ರೀತಿಯಲ್ಲೇ ಇವೂ ಸೋಲು ಕಾಣುವುದು ನಿಚ್ಚಳವಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಆದಾಗ್ಯೂ ಶನಿವಾರ ಬೆಳಗ್ಗೆ 11ಕ್ಕೆ ಕಲಾಪದ ಕೊನೆಯ ದಿನ ಆಗಿರುವ ಕಾರಣ ಸರ್ಕಾರ ಏನು ಕ್ರಮ ತೆಗೆದುಕೊಳ್ಳಲಿದೆ ಎಂಬುದು ಕುತೂಹಲ.

ವಿರೋಧ ಪಕ್ಷಗಳು ಮಹಿಳಾ ಮೀಸಲಾತಿಗೆ ಬೆಂಬಲ ವ್ಯಕ್ತಪಡಿಸಿದ್ದರೂ, ಅದನ್ನು ಕ್ಷೇತ್ರ ಮರುವಿಂಗಡಣೆಗೆ ಜೋಡಿಸಿರುವುದನ್ನು ವಿರೋಧಿಸಿದ್ದವು. ಹಾಗಾಗಿ ಮಸೂದೆಯನ್ನು ಪಾಸ್‌ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ.

ಆಗಿದ್ದೇನು?:

543 ಸದಸ್ಯ ಬಲದ ಸದನದಲ್ಲಿ 528 ಸಂಸದರು ಮತದಾನದ ವೇಳೆ ಹಾಜರಿದ್ದರು. ಆಗ ಸಂವಿಧಾನದ 131ನೇ ತಿದ್ದುಪಡಿ (2023ರ ನಾರಿ ಶಕ್ತಿ ವಂದನ ಅಧಿನಿಯಮ ಮಹಿಳಾ ಮೀಸಲು ತಿದ್ದುಪಡಿ) ಮಸೂದೆಯನ್ನು ಬೆಂಬಲಿಸಿ 298 ಸದಸ್ಯರು ಮತ ಚಲಾಯಿಸಿದರೆ, ವಿರುದ್ಧವಾಗಿ 230 ಸಂಸದರು ಮತ ಚಲಾಯಿಸಿದರು. ಮತ ಚಲಾಯಿಸಿದ 528 ಸದಸ್ಯರಲ್ಲಿ, ಮಸೂದೆಗೆ ಮೂರನೇ ಎರಡರಷ್ಟು ಬಹುಮತಕ್ಕೆ 352 ಮತಗಳು ಬೇಕಾಗಿದ್ದವು. ಹೀಗಾಗಿ ಅಷ್ಟೊಂದು ಮತ ಸಿಗದೇ ವಿಧೇಯಕಕ್ಕೆ ಸೋಲಾಯಿತು.

ಬಳಿಕ ಕೇಂದ್ರ ಸಂಸದೀಯ ಸಚಿವ ಕಿರಣ್ ರಿಜಿಜು ಅವರು, ‘ಇತರ ಎರಡು ಶಾಸನಗಳಾದ ಡಿಲಿಮಿಟೇಶನ್ ಬಿಲ್, 2026 ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳು (ತಿದ್ದುಪಡಿ) ಬಿಲ್, 2026 ಅನ್ನು ಮುಂದುವರಿಸಬೇಡಿ’ ಎಂದು ಸಭಾಧ್ಯಕ್ಷ ಓಂ ಬಿರ್ಲಾ ಅವರಿಗೆ ಕೋರಿದರು.

ಬಳಿಕ ಓಂ ಬಿರ್ಲಾ ಅವರು ಕಲಾಪವನ್ನು ಶನಿವಾರ ಬೆಳಗ್ಗೆ 11 ಗಂಟೆಗೆ ಮುಂದೂಡಿದರು. ಹೀಗಾಗಿ ಈ ವೇಳೆ ಸರ್ಕಾರ ಏನು ಮಾಡಲಿದೆ ಎಂಬುದೇ ಪ್ರಶ್ನೆಯಾಗಿದೆ. ಮಸೂದೆಗೆ ಸಂಸತ್ತಿನ ಅನುಮೋದನೆ ಪಡೆಯಲು ಏಪ್ರಿಲ್ 16 ರಿಂದ 18 ರವರೆಗೆ ಮೂರು ದಿನಗಳ ವಿಶೇಷ ಅಧಿವೇಶನವನ್ನು ಕರೆಯಲಾಗಿತ್ತು. ಶನಿವಾರ ಕಲಾಪದ ಕೊನೆಯ ದಿನ.

ಸರ್ಕಾರದ ಉದ್ದೇಶ ಏನಿತ್ತು?:

ಸರ್ಕಾರ 131ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯ ಮೂಲಕ 2023ರ ಮಹಿಳಾ ಮೀಸಲಾತಿ ಕಾಯಿದೆಯನ್ನು ಬದಲಾಯಿಸಿ, 2029ರ ಲೋಕಸಭಾ ಚುನಾವಣೆಯಿಂದಲೇ ಶೇ.33 ಮಹಿಳಾ ಮೀಸಲಾತಿ ಜಾರಿಗೆ ತರಲು ಯೋಜಿಸಿತ್ತು. ಇನ್ನು ಕ್ಷೇತ್ರ ಮರುವಿಂಗಡಣೆ ಮಸೂದೆಯು ಲೋಕಸಭೆಯ ಸೀಟುಗಳನ್ನು 543ರಿಂದ 850ಕ್ಕೆ ಹೆಚ್ಚಿಸುವ ಇರಾದೆ ಹೊಂದಿತ್ತು.

ಸೋಲುವ ಅನುಮಾನ ಇತ್ತು:

ಸರ್ಕಾರಕ್ಕೆ ಈ ಸೋಲು ಪೂರ್ಣವಾಗಿ ಅಂದಾಜಿತ್ತು. ಎನ್‌ಡಿಎ ಬಳಿ ಸುಮಾರು 293 ಸಂಸದರಿದ್ದರೂ, ಸಂವಿಧಾನ ತಿದ್ದುಪಡಿ ಮಸೂದೆಗೆ ಬೇಕಾದ 2/3ರಷ್ಟು ಬಹುಮತ (ಸುಮಾರು 360 ಮತಗಳು) ಸಿಗುವುದು ಕಷ್ಟ ಎಂದು ಸರ್ಕಾರಕ್ಕೆ ಗೊತ್ತಿತ್ತು. ವಿರೋಧ ಪಕ್ಷಗಳು ಕ್ಷೇತ್ರ ಮರುವಿಂಗಡಣೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದುದರಿಂದ ಮಸೂದೆ ಸೋಲುತ್ತದೆ ಎಂದು ಮುಂಚಿತವಾಗಿಯೇ ಲೆಕ್ಕ ಹಾಕಲಾಗಿತ್ತು. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ಅನೇಕ ಪ್ರಮುಖರು ಅನೇಕ ಬಾರಿ ಮನವಿ ಮಾಡಿ ವಿಪಕ್ಷಗಳ ಮನವೊಲಿಸಲು ಯತ್ನಿಸಿದ್ದರು.

ಸಂಸತ್ತಿನಲ್ಲಿ ಸೋಲು!

ಮಹಿಳಾ ಮೀಸಲು ಮಸೂದೆಗೆ 3ನೇ 2ರಷ್ಟು ಬಹುಮತ ಬಾರದ ಕಾರಣ ಲೋಕಸಭೆಯಲ್ಲಿ ಸೋಲಾಗಿದೆ. ಮೋದಿ ಸರ್ಕಾರದ ಅವಧಿಯಲ್ಲಿ ಮಸೂದೆಯೊಂದು ಸಂಸತ್ತಿನಲ್ಲಿ ಸೋಲನುಭವಿಸಿದ್ದು ಇದೇ ಮೊದಲು.

ಇದು ನಮ್ಮ ಗೆಲುವು: ವಿಪಕ್ಷಗಳ ಸಂಭ್ರಮ

ನವದೆಹಲಿ: ಸಂಸತ್‌ನಲ್ಲಿ ಬಹು ನಿರೀಕ್ಷಿತ ಮಹಿಳಾ ಮೀಸಲಾತಿಗೆ ಸೋಲಾಗಿರುವುದನ್ನು ವಿಪಕ್ಷಗಳು ಸಂಭ್ರಮಿಸಿವೆ. ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಸೇರಿ ಹಲವರು ಇದಕ್ಕೆ ಸಂತಸ ವ್ಯಕ್ತಪಡಿಸಿದ್ದು ‘ಇದು ವಿಪಕ್ಷಗಳಿಗೆ ಸಂದ ಜಯ’ ಎಂದಿದ್ದಾರೆ.

ಇದು ನಮ್ಮ ಗೆಲುವು: ಪ್ರತಿಪಕ್ಷಗಳ ವಿರುದ್ಧ ಬಿಜೆಪಿಗರ ಪ್ರತಿಭಟನೆ

ನವದೆಹಲಿ: ಲೋಕಸಭೆಯಲ್ಲಿ ಮಹಿಳಾ ಮೀಸಲು ಮಸೂದೆಗೆ ಸೋಲುಂಟಾದ ಬೆನ್ನಲ್ಲೇ ಎನ್‌ಡಿಎ ಸಂಸದರು ಸಂಸತ್‌ನ ಹೊರಗೆ ಮತ್ತು ಸದನದ ಒಳಗೆ ತೀವ್ರ ಪ್ರತಿಭಟನೆ ನಡೆಸಿದರು. ಬಿಜೆಪಿ ಮಹಿಳಾ ಸಂಸದರು ‘ವಿಪಕ್ಷಗಳು ಮಹಿಳೆಯರನ್ನು ಮತ್ತೆ ವಂಚಿಸಿವೆ’, ‘ನಾವು ಮಹಿಳೆಯರ ಹಕ್ಕಿಗಾಗಿ ಹೋರಾಡುತ್ತೇವೆ’ ಎಂಬ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆಯಲ್ಲಿ ಭಾಗವಹಿಸಿದರು.

ಕಾಂಗ್ರಸ್‌ ಬಿಡಲಿಲ್ಲ

ಮಹಿಳಾ ಮೀಸಲು ಮಸೂದೆ ಅಂಗೀಕರಿಸಲು ಕಾಂಗ್ರೆಸ್‌, ಅದರ ಮಿತ್ರರು ಬಿಡಲಿಲ್ಲ. ಅವರು ಹೀಗೆ ಮಾಡುತ್ತಿರುವುದು ಇದೇ ಮೊದಲಲ್ಲ. ಹಲವು ಬಾರಿ ಮಾಡಿವೆ. ಅವರ ಮನಸ್ಥಿತಿ ಮಹಿಳೆಯರ ಪರವಾಗಿಯೂ ಇಲ್ಲ, ದೇಶದ ಪರವಾಗಿಯೂ ಇಲ್ಲ.

- ಅಮಿತ್‌ ಶಾ ಕೇಂದ್ರ ಗೃಹ ಸಚಿವ

ಬಿಜೆಪಿಗೆ ಸಿಕ್ತು ಪ್ರಬಲ ಅಸ್ತ್ರ

ನವದೆಹಲಿ: ಮಹಿಳಾ ಮೀಸಲು ಮಸೂದೆಯ ಸೋಲನ್ನು ಬಿಜೆಪಿಯು ಪ್ರತಿಪಕ್ಷಗಳ ವಿರುದ್ಧ ಮುಂಬರುವ 2 ವಿಧಾನಸಭೆ ಚುನಾವಣೆಗಳಲ್ಲಿ ಹಾಗೂ ಮುಂದಿನ ದಿನಗಳಲ್ಲಿ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ. ಇದೇ ಏ.23ಕ್ಕೆ ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆಯಲಿದೆ.

ಮಸೂದೆಗೆ ಸೋಲಾಗಿದ್ದು ಹೇಗೆ?

- ಇದು ಸಾಂವಿಧಾನಿಕ ತಿದ್ದುಪಡಿ ಮಸೂದೆ. ಸರಳ ಬಹುಮತದ ಬದಲು 3ನೇ ಎರಡರಷ್ಟು ಬಹುಮತದೊಂದಿಗೆ ಅಂಗೀಕರಿಸಬೇಕು

- ಬಿಜೆಪಿ ನೇತೃತ್ವದ ಎನ್‌ಡಿಎಗೆ ಲೋಕಸಭೆಯಲ್ಲಿ ಅಷ್ಟು ಬಹುಮತವಿರಲಿಲ್ಲ. ಅನಿರೀಕ್ಷಿತ ಘಟನೆ ನಡೆಯಲಿಲ್ಲ. ಹೀಗಾಗಿ ಸೋಲು

ವಿಪಕ್ಷಗಳು ಮಣಿಸಿದ್ದೇಕೆ?

- ಮಹಿಳಾ ಮೀಸಲಾತಿಗೆ ಪ್ರತಿಪಕ್ಷಗಳ ವಿರೋಧ ಇರಲಿಲ್ಲ. ಮೀಸಲು ಜತೆ ಲೋಕಸಭೆ ಕ್ಷೇತ್ರ ಹೆಚ್ಚಳಕ್ಕೆ ತೀವ್ರ ಆಕ್ಷೇಪ ಇತ್ತು

- ಲೋಕಸಭಾ ಕ್ಷೇತ್ರಗಳನ್ನು ಹೆಚ್ಚಳ ಮಾಡುವ ಉದ್ದೇಶದಿಂದ ಮಹಿಳಾ ಮೀಸಲು ತರುತ್ತಿದೆ ಎಂಬುದು ಅವುಗಳ ಆರೋಪ

- 543 ಸದಸ್ಯ ಬಲದ ಲೋಕಸಭೆಯಲ್ಲೇ ಮಹಿಳಾ ಮೀಸಲಿಗೆ ಪಟ್ಟು. ಸರ್ಕಾರ ಒಪ್ಪದ ಕಾರಣ ಮಸೂದೆ ವಿರುದ್ಧ ಮತ 

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಇ- ಸ್ವತ್ತು ವಿಳಂಭ ಖಂಡಿಸಿ ಮಧುಚಂದ್ರ ಪಾದಯಾತ್ರೆ ಅರ್ಧಕ್ಕೇ ಮೊಟಕು
ಮಿತಿಮೀರಿದ ಟಿಪ್ಪರ್‌ ಹಾವಳಿ, ಅಕ್ರಮ ಗಣಿಗಾರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ