ದೆಹಲಿ ಪೊಲೀಸರನ್ನು ಮೋದಿ ನನ್ನ ಮನೆಗೆ ಛೂ ಬಿಟ್ಟಿದ್ದಾರೆ: ರೇವಂತ ರೆಡ್ಡಿ

ಸಾರಾಂಶ

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವುದಕ್ಕೆ ದೆಹಲಿ ಪೊಲೀಸರು ಹೈದರಾಬಾದ್‌ನ ನನ್ನ ಮನೆಗೆ ನೋಟಿಸ್‌ ಕೊಡಲು ಬಂದಿದ್ದಾರಂತೆ. ಮೋದಿಯವರು ದೆಹಲಿ ಪೊಲೀಸರನ್ನು ನನ್ನ ವಿರುದ್ಧ ಈಗ ಛೂ ಬಿಟ್ಟಿದ್ದಾರೆ.  

ಕಲಬುರಗಿ :  ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವುದಕ್ಕೆ ದೆಹಲಿ ಪೊಲೀಸರು ಹೈದರಾಬಾದ್‌ನ ನನ್ನ ಮನೆಗೆ ನೋಟಿಸ್‌ ಕೊಡಲು ಬಂದಿದ್ದಾರಂತೆ. ಮೋದಿಯವರು ದೆಹಲಿ ಪೊಲೀಸರನ್ನು ನನ್ನ ವಿರುದ್ಧ ಈಗ ಛೂ ಬಿಟ್ಟಿದ್ದಾರೆ. ಆದರೆ, ಇದಕ್ಕೆಲ್ಲಾ ನಾನು ಹೆದರುವುದಿಲ್ಲ‌ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಆರೋಪಿಸಿದ್ದಾರೆ.

ಕಲಬುರಗಿ ಜಿಲ್ಲೆ ಸೇಡಂನಲ್ಲಿ ಸೋಮವಾರ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಮಾತನಾಡಿ, ಮೋದಿಯವರೆ, ಈ ಹಿಂದೆ ಇ.ಡಿ, ಐ.ಟಿಯವರನ್ನು ಕಳಿಸಿದ್ದೀರಿ. ಈಗ ದಿಲ್ಲಿ ಪೊಲೀಸರನ್ನು ಕಳಿಸಿದ್ದೀರಿ. ಆದರೆ, ನಾನು ಇದಕ್ಕೆಲ್ಲ ಹೆದರುವುದಿಲ್ಲ‌ ಎಂದರು.

ಕೇಂದ್ರ ಸರ್ಕಾರ ಬರ ಪರಿಹಾರ ನೀಡಲು ವಿಳಂಬ ಧೋರಣೆ ಅನುಸರಿಸಿದ್ದರಿಂದ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ದಿಲ್ಲಿಯಲ್ಲಿ ಪ್ರತಿಭಟನೆ ಮಾಡುವ ಸನ್ನಿವೇಶ ನಿರ್ಮಾಣವಾಗಿತ್ತು. ನಂತರ, ಕರ್ನಾಟಕ ರಾಜ್ಯ ಸರ್ಕಾರ ಸುಪ್ರಿಂಕೋರ್ಟ್ ಮೊರೆ‌ ಹೋಗಬೇಕಾಯಿತು ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ 400 ಸೀಟು ಗೆದ್ದಲ್ಲಿ ಎಸ್ ಸಿ‌, ಎಸ್ ಟಿ, ಹಿಂದುಳಿದ ವರ್ಗಗಳ ಮೀಸಲಾತಿಯನ್ನು ರದ್ದುಗೊಳಿಸುತ್ತದೆ. ಹಾಗಾಗಿ, ನೀವೆಲ್ಲ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಮೂಲಕ ಬಿಜೆಪಿಯ ಹುನ್ನಾರವನ್ನು ವಿಫಲಗೊಳಿಸಬೇಕು ಎಂದು ಜನರಿಗೆ ರೇವಂತ್‌ ರೆಡ್ಡೆ ಮನವಿ ಮಾಡಿದರು.

Share this article