ಮಧ್ಯಪ್ರದೇಶದ ಒಂದು ಮತ ‘ತ್ರಿಶಕ್ತಿ’ಗೆ ಬಲ ಕೊಡಲಿದೆ: ಪ್ರಧಾನಿ
ಸತ್ನಾ: ಸರ್ಕಾರದ ವತಿಯಿಂದ ಬಡವರಿಗಾಗಿ 4 ಕೋಟಿ ಕಾಂಕ್ರೀಟ್ ಮನೆ ನಿರ್ಮಿಸಿ ಕೊಡಲಾಗಿದೆ. ಆದರೂ ನನಗಾಗಿ ನಾನು ಮನೆಯನ್ನು ನಿರ್ಮಾಣ ಮಾಡಿಕೊಂಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.ಮಧ್ಯಪ್ರದೇಶದಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ‘ಡಬಲ್ ಎಂಜಿನ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಸತ್ನಾದಲ್ಲಿ 1,32 ಲಕ್ಷ ಬಡವರಿಗೆ ಮನೆ ನಿರ್ಮಿಸಿ ಕೊಡಲಾಗಿದೆ. ಅಲ್ಲದೆ ಹೊಸ ಸಂಸತ್ ಭವನ ನಿರ್ಮಿಸುವುದರ ಜೊತೆಗೆ 30 ಸಾವಿರ ಪಂಚಾಯಿತಿ ಕಟ್ಟಡಗಳನ್ನು ನಿರ್ಮಿಸಿದ್ದೇವೆ. ಇಷ್ಟೆಲ್ಲಾ ಆದರೂ ಸ್ವಂತಕ್ಕಾಗಿ ಏನೂ ಮಾಡಿಕೊಂಡಿಲ್ಲ ಎಂದು ಹೇಳಿದರು. ಇದೇ ವೇಳೆ ಮಧ್ಯಪ್ರದೇಶದಲ್ಲಿ ಒಂದು ಮತ ನೀಡಿದರೆ ಅದು ‘ತ್ರಿಶಕ್ತಿ’ಯಾಗಿ ಬದಲಾಗಲಿದೆ, ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಕೇಂದ್ರದಲ್ಲಿ ಮೋದಿ ಕೈ ಬಲಗೊಳ್ಳಲಿದೆ ಮತ್ತು ಭ್ರಷ್ಟಾಚಾರ ನಡೆಸುತ್ತಿರುವ ಕಾಂಗ್ರೆಸ್ಸನ್ನು ರಾಜ್ಯದಿಂದ ದೂರ ಇಡಬಹುದಾಗಿದೆ ಎಂದು ಅವರು ಹೇಳಿದರು.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಉಚಿತ ಅಕ್ಕಿ ಯೋಜನೆಯನ್ನು 5 ವರ್ಷಗಳ ಕಾಲ ಮುಂದುವರೆಸಿದ್ದರೂ ಕಾಂಗ್ರೆಸ್ಸಿಗರು ನಕಲಿಯಾಗಿ ಸೃಷ್ಟಿಸಿದ್ದ 10 ಕೋಟಿ ಫಲಾನುಭವಿಗಳನ್ನು ರದ್ದುಪಡಿಸಿ ಜನರ 2.75ಲಕ್ಷ ಕೊಟಿ ರು.ಗಳನ್ನು ಉಳಿಸಲಾಗಿದೆ. ಹಾಗಾಗಿ ಕಾಂಗ್ರೆಸ್ಸಿಗರು ನನ್ನ ವಿರುದ್ಧ ಕೆಂಡ ಕಾರುತ್ತಿದ್ದಾರೆ’ ಎಂದು ಗುಡುಗಿದರು.