100 ದಿನದಲ್ಲೇ ಮೊದಲ ಸಂಪುಟದ ನಿರ್ಧಾರಗಳು ಬಹುತೇಕ ಅನುಷ್ಠಾನ

Published : Sep 10, 2026, 10:54 AM IST
DK Shivakumar

ಸಾರಾಂಶ

ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ನಂತರ ನಡೆಸಿದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಯೋಜನೆಗಳ ಆರು ಪ್ರಮುಖ ಯೋಜನೆಗಳನ್ನು ಘೋಷಿಸಿದ್ದ ಡಿ.ಕೆ.ಶಿವಕುಮಾರ್‌ ಅವರು ತಮ್ಮ ಆಡಳಿತದ 100 ದಿನಗಳಲ್ಲೇ ಆ ಆರೂ ಯೋಜನೆಗಳನ್ನು ಬಹುತೇಕ ಅನುಷ್ಠಾನಗೊಳಿಸಿ ಮಾದರಿಯಾಗಿದ್ದಾರೆ.

ಬೆಂಗಳೂರು : ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ನಂತರ ನಡೆಸಿದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಯೋಜನೆಗಳ ಆರು ಪ್ರಮುಖ ಯೋಜನೆಗಳನ್ನು ಘೋಷಿಸಿದ್ದ ಡಿ.ಕೆ.ಶಿವಕುಮಾರ್‌ ಅವರು ತಮ್ಮ ಆಡಳಿತದ 100 ದಿನಗಳಲ್ಲೇ ಆ ಆರೂ ಯೋಜನೆಗಳನ್ನು ಬಹುತೇಕ ಅನುಷ್ಠಾನಗೊಳಿಸಿ ಮಾದರಿಯಾಗಿದ್ದಾರೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಜು.3ರಂದು ಲೋಕಭವನದ ಗಾಜಿನಮನೆಯಲ್ಲಿ ಪ್ರಮಾಣವಚನ ಸ್ವೀಕರಿಸಿದ ನಂತರ ನೇರವಾಗಿ ವಿಧಾನಸೌಧಕ್ಕಾಗಮಿಸಿ ಸಚಿವ ಸಂಪುಟದ ಸಹೋದ್ಯೋಗಿಗಳೊಂದಿಗೆ ಸಭೆ ನಡೆಸಿ ರಾಜ್ಯದ ಜನರಿಗೆ ಅನುಕೂಲವಾಗುವಂಥ ಆರು ಪ್ರಮುಖ ಯೋಜನೆಗಳ ಅನುಷ್ಠಾನದ ನಿರ್ಣಯ ತೆಗೆದುಕೊಂಡಿದ್ದರು. ಅದರಲ್ಲೂ ರಾಜ್ಯದ ಯುವ ಕೇಂದ್ರಿತ ಯೋಜನೆಗಳನ್ನು ಘೋಷಿಸಿ, ಯುವಜನರ ಸಬಲೀಕರಣಕ್ಕೆ ಒತ್ತು ನೀಡಿದ್ದರು.

ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ವಿತರಣೆ, 10 ಸಾವಿರ ಭಾರತ್‌ ಜೋಡೋ ಯುವ ಸಂಘ ರಚನೆ, ನಿರುದ್ಯೋಗಿಗಳ ಅನುಕೂಲಕ್ಕಾಗಿ ಉದ್ಯೋಗ ವಿನಿಮಯ ಕೇಂದ್ರ ಸ್ಥಾಪನೆ, ಸ್ವಾಧೀನಾನುಭವ ಪ್ರಮಾಣಪತ್ರ ಇಲ್ಲದಿದ್ದರೂ ಕಟ್ಟಡಗಳಿಗೆ ನೀರು ಮತ್ತು ವಿದ್ಯುತ್‌ ಸಂಪರ್ಕ ಪಡೆಯುವಲ್ಲಿನ ಸಮಸ್ಯೆಗೆ ಮುಕ್ತಿ ನೀಡಲು ಬೆಂಗಳೂರಿನಲ್ಲಿ ನೀಡಲಾಗಿರುವ ವಿನಾಯ್ತಿ ರಾಜ್ಯಕ್ಕೆ ವಿಸ್ತರಿಸುವುದು, ಬಿ ಖಾತಾ ಆಸ್ತಿಗಳಿಗೆ ಎ ಖಾತಾ ನೀಡುವುದು ಹಾಗೂ ಬೆಂಗಳೂರಿನ ರಸ್ತೆ ಅಭಿವೃದ್ಧಿಗೆ 2 ಸಾವಿರ ಕೋಟಿ ರು. ಅನುದಾನ ಒದಗಿಸುವ ಪ್ರಮುಖ ಆರು ನಿರ್ಣಯ ಕೈಗೊಂಡಿದ್ದರು.

 ವಾರದಲ್ಲಿ ಉಚಿತ ಬಸ್‌ ಪಾಸ್‌ ವಿತರಣೆ: 

ರಾಜ್ಯದ ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕಾಗಿ ಶಕ್ತಿ ಯೋಜನೆ ಜಾರಿಗೊಳಿಸಲಾಗಿದೆ. ಇದರಿಂದ ರಾಜ್ಯದ ಎಲ್ಲ ವಿದ್ಯಾರ್ಥಿನಿಯರು ಬಸ್‌ನಲ್ಲಿ ಉಚಿತ ಪ್ರಯಾಣ ಮಾಡುತ್ತಿದ್ದು, ವಿದ್ಯಾರ್ಥಿಗಳು ಬಸ್‌ ಪಾಸ್‌ ಖರೀದಿಸಬೇಕಿತ್ತು. ವಿದ್ಯಾರ್ಥಿಗಳಿಗೂ ಉಚಿತ ಬಸ್‌ ಸಂಚಾರಕ್ಕೆ ಅನುವು ಮಾಡಿಕೊಡುವ ದೃಷ್ಟಿಯಿಂದ ಡಿ.ಕೆ.ಶಿವಕುಮಾರ್‌ ಮೊದಲ ಸಚಿವ ಸಂಪುಟದಲ್ಲೇ ವಿದ್ಯಾರ್ಥಿಗಳಿಗೂ ಉಚಿತ ಬಸ್‌ ಪಾಸ್‌ ವಿತರಣೆಗೆ ಅನುಮೋದನೆ ನೀಡಿದರು. ಈ ನಿರ್ಣಯದಿಂದ 10 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ.

ಈ ನಿರ್ಣಯ ತೆಗೆದುಕೊಂಡ ವಾರದೊಳಗೆ ಸಾರಿಗೆ ಇಲಾಖೆ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿತು. ಅಲ್ಲದೆ, ಅದಾಗಲೇ ಹಣ ನೀಡಿ ವಿದ್ಯಾರ್ಥಿ ಬಸ್‌ ಪಾಸ್‌ ಖರೀದಿಸಿದ್ದ ವಿದ್ಯಾರ್ಥಿಗಳಿಗೆ ಪಾಸ್‌ ಮೊತ್ತ ಮರು ಪಾವತಿಗೂ ಕ್ರಮ ಕೈಗೊಳ್ಳಲಾಯಿತು.

ಯುವಜನರಿಗಾಗಿ ಭಾರತ್‌ ಜೋಡೋ ಯುವ ಸಂಘ:

ಯುವಜನರನ್ನು ಒಗ್ಗೂಡಿಸಿ, ಏಕತೆ, ಸಾಮಾಜಿಕ ಸಾಮರಸ್ಯ, ಜವಾಬ್ದಾರಿಯುತ ನಾಗರಿಕ ಹಾಗೂ ರಾಷ್ಟ್ರನಿರ್ಮಾಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಲು ಭಾರತ್‌ ಜೋಡೋ ಯುವ ಸಂಘ ಸ್ಥಾಪಿಸುವ ನಿರ್ಧಾರವನ್ನು ಮೊದಲ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿತ್ತು. ಪ್ರತಿ ಗ್ರಾಪಂ ಸೇರಿ ಪಟ್ಟಣ, ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಒಂದು ಸಂಘ ಸ್ಥಾಪಿಸುವ ಗುರಿ ಹೊಂದಲಾಗಿದೆ. ರಾಜ್ಯದಲ್ಲಿ ಒಟ್ಟು 10 ಸಾವಿರ ಭಾರತ್‌ ಜೋಡೋ ಯುವ ಸಂಘ ರಚನೆ ಗುರಿಯನ್ನು ನಿರ್ಧರಿಸಲಾಗಿತ್ತು.

ಈ ಸಂಘಗಳು ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ, ನಾಯಕತ್ವ ಗುಣ ಬೆಳೆಸುವ ಕೆಲಸ, ಸಾಮಾಜಿಕ ಸಾಮರಸ್ಯ ಬೆಳೆಸುವುದು, ನಮ್ಮ ಇತಿಹಾಸ, ಸಂಸ್ಕೃತಿ, ಸಂಪ್ರದಾಯ ಪಸರಿಸುವ ಕೆಲಸ ಮಾಡಲಿವೆ. ಅದರ ಜತೆಗೆ ಯುವಕರಲ್ಲಿನ ಪ್ರತಿಭೆ ಹೊರತರುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಲಿವೆ. ಅಲ್ಲದೆ, ಪ್ರತಿ ಭಾರತ್‌ ಜೋಡೋ ಯುವ ಸಂಘಕ್ಕೆ ತಲಾ 10 ಲಕ್ಷ ರು.ಗಳನ್ನು ಸರ್ಕಾರವೇ ನೀಡಲಿದೆ. ಈ ಯೋಜನೆಗಾಗಿ ಸರ್ಕಾರವು 1 ಸಾವಿರ ಕೋಟಿ ರು. ವ್ಯಯಿಸಲಿದೆ.

ಈ ಯೋಜನೆಗೆ ಸಂಬಂಧಿಸಿ ಭಾರತ್‌ ಜೋಡೋ ಲೋಗೋ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಅದರ ಜತೆಗೆ ಸಂಘ ಸ್ಥಾಪನೆ ಕುರಿತು ರೂಪುರೇಷೆಯನ್ನೂ ಸಿದ್ಧಪಡಿಸಲಾಗಿದೆ. ಹಾಗೆಯೇ, ಸಂಘಕ್ಕೆ ಸದಸ್ಯರಾಗುವ ಯುವ ಜನರಿಗೆ ತರಬೇತಿ ನೀಡುವುದು ಸೇರಿ ಮತ್ತಿತರ ಕಾರ್ಯಕ್ರಮಕ್ಕೆ ಅಗತ್ಯ ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ.

ಸರ್ಕಾರದಿಂದಲೇ ಉದ್ಯೋಗ ವಿನಿಮಯ ಕೇಂದ್ರ:

ನಿರುದ್ಯೋಗ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿಯಾದ ದಿನವೇ ಮಹತ್ವದ ಹೆಜ್ಜೆ ಇಟ್ಟಿದ್ದ ಡಿ.ಕೆ. ಶಿವಕುಮಾರ್‌ ಅವರು ‘ಯುವ ಉದ್ಯೋಗ ಸೇತು’ ಹೆಸರಿನಲ್ಲಿ ಉದ್ಯೋಗ ವಿನಿಮಯ ಕೇಂದ್ರ ಸ್ಥಾಪಿಸುವ ಘೋಷಣೆ ಮಾಡಿದ್ದರು. ಅದರ ಮೂಲಕ ಖಾಸಗಿ ಸಂಸ್ಥೆಗಳ ಬೇಡಿಕೆಗನುಗುಣವಾಗಿ ನಿರುದ್ಯೋಗಿ ಯುವಕರಿಗೆ ತರಬೇತಿ ನೀಡಿ ಅವರಿಗೆ ಉದ್ಯೋಗ ದೊರಕಿಸಿಕೊಡಲಾಗುತ್ತದೆ. ಅದಕ್ಕಾಗಿ ಖಾಸಗಿ ಸಂಸ್ಥೆ ಮತ್ತು ಉದ್ಯೋಗದ ಅವಶ್ಯಕತೆ ಇರುವ ಯುವಜನತೆ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೋಂದಣಿ ಮಾಡಿಕೊಳ್ಳಬೇಕಿದೆ. ಐಟಿ-ಬಿಟಿ, ಶಿಕ್ಷಣ ಕ್ಷೇತ್ರ ಸೇರಿದಂತೆ ಎಲ್ಲ ರೀತಿಯ ಕ್ಷೇತ್ರಗಳಿಗೂ ಕೌಶಲ್ಯ ಭರಿತ ಯುವಕರನ್ನು ಪೂರೈಸುವ ಯೋಜನೆ ಇದಾಗಿದೆ.

ಉದ್ಯೋಗ ವಿನಿಮಯ ಕೇಂದ್ರಕ್ಕೆ ಸಂಬಂಧಿಸಿ ಮುಂದಿನ ಒಂದು ತಿಂಗಳೊಳಗಾಗಿ ಸೂಕ್ತ ರೂಪುರೇಷೆ ಸಿದ್ಧಪಡಿಸಿ ಮೂವರು ಸಚಿವರನ್ನು ನೇಮಿಸಲಾಗುತ್ತಿದೆ. ಆ ಸಚಿವರು ಎಫ್‌ಕೆಸಿಸಿಐ, ಕಾಸಿಯಾ ಸೇರಿ ಕಾಲೇಜುಗಳು, ತಜ್ಞರೊಂದಿಗೆ ಸಭೆ ನಡೆಸಿ ಉದ್ಯೋಗ ವಿನಿಮಯ ಕೇಂದ್ರದ ರೂಪುರೇಷೆ ಸಿದ್ಧಪಡಿಸಲಿದ್ದಾರೆ. ಅದಕ್ಕೆ ಪೂರಕವಾಗಿ ಖುದ್ದು ಮುಖ್ಯಮಂತ್ರಿ ಅವರೇ ಎಫ್‌ಕೆಸಿಸಿಐ, ಕಾಸಿಯಾದಂಥ ಸಂಸ್ಥೆಗಳ ಪ್ರಮುಖರೊಂದಿಗೆ ಮಾತುಕತೆ ನಡೆಸಿದ್ದು, ಯಾವುದೇ ಕೈಗಾರಿಕೆ ಅಥವಾ ಸಂಸ್ಥೆಯ ಆಡಳಿತದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡದೇ ಅಗತ್ಯ ಉದ್ಯೋಗಿಗಳನ್ನು ಪೂರೈಸುವ ಹೊಣೆಯನ್ನು ಸರ್ಕಾರ ತೆಗೆದುಕೊಳ್ಳಲಿದೆ ಎಂದು ತಿಳಿಸಿದ್ದಾರೆ. ಅದಕ್ಕೆ ಕೈಗಾರಿಕೋದ್ಯಮಿಗಳೂ ಸಂತಸ ವ್ಯಕ್ತಪಡಿಸಿ, ಒಪ್ಪಿಗೆ ನೀಡಿದ್ದಾರೆ.

ರಾಜ್ಯಕ್ಕೆ ಒಸಿ-ಸಿಸಿ ವಿನಾಯಿತಿ:

ಸುಪ್ರೀಂಕೋರ್ಟ್‌ ಆದೇಶದಿಂದಾಗಿ ಸ್ವಾಧೀನಾನುಭವ ಪ್ರಮಾಣ ಪತ್ರ ಮತ್ತು ಪೂರ್ಣಗೊಳಿಸುವಿಕೆಯ ಪ್ರಮಾಣಪತ್ರ (ಒಸಿ-ಸಿಸಿ) ಇಲ್ಲದ ಕಟ್ಟಡಗಳಿಗೆ ನೀರು ಮತ್ತು ವಿದ್ಯುತ್‌ ಸಂಪರ್ಕ ನೀಡದಂತಾಗಿದೆ. ಅದಕ್ಕಾಗಿ ಈಗಾಗಲೇ ಬೆಂಗಳೂರು ನಗರ ವ್ಯಾಪ್ತಿಯಲ್ಲಿ 2400 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣವಾದ ಕಟ್ಟಡಗಳಿಗೆ ವಿನಾಯಿತಿ ನೀಡಿ ವಿದ್ಯುತ್‌ ಮತ್ತು ನೀರಿನ ಸಂಪರ್ಕ ನೀಡಲಾಗುತ್ತಿದೆ.

ಈ ವಿನಾಯಿತಿಯನ್ನು ರಾಜ್ಯ ವ್ಯಾಪ್ತಿಗೆ ವಿಸ್ತರಿಸಲು ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಅದರಂತೆ ರಾಜ್ಯದ ಗ್ರಾಪಂನಿಂದ ಎಲ್ಲ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ 2026ರ ಮೇ 31ರವರೆಗೆ ನಿರ್ಮಾಣವಾಗಿರುವ 2400 ಚದರ ಅಡಿ ವಿಸ್ತೀರ್ಣದ ನಿವೇಶನದಲ್ಲಿ ನಿರ್ಮಾಣವಾದ 3 ಅಂತಸ್ತಿನವರೆಗಿನ ಕಟ್ಟಡಗಳಿಗೆ ವಿದ್ಯುತ್‌ ಮತ್ತು ನೀರಿನ ಸಂಪರ್ಕ ನೀಡಲು ಒಸಿ-ಸಿಸಿಯಲ್ಲಿ ವಿನಾಯಿತಿ ನೀಡಲಾಗುತ್ತದೆ. ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ತೆಗೆದುಕೊಂಡ 20 ದಿನಗಳಲ್ಲಿ ಅಧಿಕೃತ ಆದೇಶವನ್ನೂ ಹೊರಡಿಸಲಾಗಿದೆ. ಈ ಆದೇಶವು ನಗರ ಪ್ರದೇಶದ ಕಟ್ಟಡಗಳ ಜತೆಗೆ ಗ್ರಾಮೀಣ ಭಾಗದ ರೈತರಿಗೆ ಹೆಚ್ಚಿನ ನೆರವಾಗಿದೆ. ಪ್ರಮುಖವಾಗಿ ರೈತರು ವಾಸಿಸುವ ಮನೆಗಳು ಹಾಗೂ ಕೃಷಿ ಪೂರಕ ಕಟ್ಟಡಗಳಿಗೆ ವಿದ್ಯುತ್‌ ಸಂಪರ್ಕ ಪಡೆಯಲು ಅನುಕೂಲವಾಗಿದೆ.

ಬಿ ಖಾತಾ ಆಸ್ತಿಗಳಿಗೆ ಎ ಖಾತಾ:

ಈ ಹಿಂದೆ ಬೆಂಗಳೂರು ವ್ಯಾಪ್ತಿಯಲ್ಲಿ ಮಾತ್ರ ಅನ್ವಯವಿಸುವಂತೆ ಮಾಡಲಾಗಿದ್ದ ಬಿ ಖಾತಾ ಆಸ್ತಿಗಳಿಗೆ ಎ ಖಾತಾ ನೀಡುವ ಕ್ರಮ ರಾಜ್ಯಕ್ಕೂ ವಿಸ್ತರಿಸಲು ಡಿ.ಕೆ.ಶಿವಕುಮಾರ್‌ ಅವರ ಮೊದಲ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಅದರ ಪ್ರಕಾರ ರಾಜ್ಯದ ಗ್ರಾಪಂನಿಂದ ಜಿಬಿಎವರೆಗಿನ ಎಲ್ಲ ಬಿ ಖಾತಾ ಆಸ್ತಿಗಳಿಗೆ ಸೂಕ್ತ ದಾಖಲೆಗಳಿದ್ದ ಎ ಖಾತಾ ನೀಡಲು ನಿರ್ಣಯಿಸಲಾಯಿತು. ಈ ನಿರ್ಣಯ ತೆಗೆದುಕೊಂಡ ತಿಂಗಳಲ್ಲಿ ಸೂಕ್ತ ಮಾರ್ಗಸೂಚಿಗಳೊಂದಿಗೆ ಅಧಿಕೃತ ಆದೇಶ ಹೊರಡಿಸಲಾಯಿತು. ಜತೆಗೆ ಬಿ ಖಾತಾ ಆಸ್ತಿಗಳನ್ನು ಎ ಖಾತಾ ಪರಿವರ್ತಿಸುವ ಕುರಿತ ಕ್ರಮಕ್ಕೆ ನಿಗದಿ ಮಾಡಿದ್ದ ಶುಲ್ಕವನ್ನು ಕಡಿತಗೊಳಿಸಲಾಯಿತು.

ಬೆಂಗಳೂರು ರಸ್ತೆ ಅಭಿವೃದ್ಧಿಗೆ 2 ಸಾವಿರ ಕೋಟಿ ರು.:

ಬೆಂಗಳೂರಿನ ರಸ್ತೆ ಗುಂಡಿ ಸಮಸ್ಯೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ತಮ್ಮ ಮೊದಲ ಸಚಿವ ಸಂಪುಟ ಸಭೆಯಲ್ಲಿ ಬೆಂಗಳೂರಿನ ರಸ್ತೆ ಗುಂಡಿ ಸಮಸ್ಯೆಗೆ ಪರಿಹಾರ ನೀಡಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನಿರ್ಧರಿಸಿದ್ದರು. ಹಾಲಿ ಚಾಲ್ತಿಯಲ್ಲಿರುವ ರಸ್ತೆ ಕಾಮಗಾರಿಗಳನ್ನು ಹೊರತುಪಡಿಸಿ ರಸ್ತೆ ಅಭಿವೃದ್ಧಿಗಾಗಿ ಪ್ರತ್ಯೇಕವಾಗಿ ಎರಡು ಸಾವಿರ ಕೋಟಿ ರು. ನೀಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಈ ನಿರ್ಧಾರಕ್ಕೆ ತಕ್ಕಂತೆ ಈಗಾಗಲೇ ಹಂತಹಂತವಾಗಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ)ಕ್ಕೆ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಆ ಅನುದಾನವನ್ನು ಜಿಬಿಎ ಐದೂ ನಗರ ಪಾಲಿಕೆಗೆ ಬೇಡಿಕೆಗನುಗುಣವಾಗಿ ಹಂಚಿಕೆ ಮಾಡಿದೆ. ಆಮೂಲಕ ರಸ್ತೆ ಗುಂಡಿ ಸಮಸ್ಯೆಗೆ ಪರಿಹಾರ ನೀಡಲಾಗುತ್ತಿದೆ.

ನೇಮಕಾತಿಗೆ ವೇಳಾಪಟ್ಟಿ:

ವಿವಿಧ ಇಲಾಖೆಗಳಲ್ಲಿನ ಖಾಲಿ ಹುದ್ದೆ ಭರ್ತಿಗೆ ಸಂಬಂಧಿಸಿ ನೇಮಕಾತಿ ಪ್ರಕ್ರಿಯೆಗೆ ವೇಗ ನೀಡಲು ಡಿ.ಕೆ.ಶಿವಕುಮಾರ್‌ ಮೊದಲ ಸಚಿವ ಸಂಪುಟದಲ್ಲಿಯೇ ಚರ್ಚೆ ನಡೆಸಿದ್ದರು. ಪ್ರಮುಖವಾಗಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಪ್ರಕಟಿಸಲಾಗಿದ್ದ 56,432 ಖಾಲಿ ಹುದ್ದೆ ಭರ್ತಿ ಘೋಷಣೆ ಪ್ರಕ್ರಿಯೆ ಪೂರ್ಣಗೊಳಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಿರ್ಧರಿಸಿದ್ದರು. ಅದರ ಪ್ರಕಾರ 56,432 ಖಾಲಿ ಹುದ್ದೆ ಸೇರಿ ಅದಾಗಲೇ ಚಾಲ್ತಿಯಲ್ಲಿದ 70 ಸಾವಿರಕ್ಕೂ ಹೆಚ್ಚಿನ ಖಾಲಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿ ವೇಳಾಪಟ್ಟಿ ಪ್ರಕಟಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆ ಈಗಾಗಲೇ ನೇಮಕಾತಿಗೆ ಸಂಬಂಧಿಸಿದಂತೆ ಪ್ರಕ್ರಿಯೆಯನ್ನೂ ಆರಂಭಿಸಿ, ವ್ಯವಸ್ಥಿತವಾಗಿ ನಡೆಸಲಾಗುತ್ತಿದೆ. ಅದರಲ್ಲೂ 3800 ಪೊಲೀಸ್‌ ಪೇದೆ ಹುದ್ದೆ ನೇಮಕಾತಿ ಪ್ರಕ್ರಿಯೆ ಈಗಾಗಲೇ ಆರಂಭಿಸಲಾಗಿದೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಒಡೆದ ಮನಸ್ಸು ಜೋಡಿಸಿದ ಭಾರತ್‌ ಜೋಡೋ
ಇಂದು ಬಿಜೆಪಿ ಬಳ್ಳಾರಿ ಕಹಳೆ - 10 ದಿನಗಳ ಪಾದಯಾತ್ರೆಗೆ ತೆರೆ