ಮುಡಾ ಹಗರಣ : ವೈಟ್ನರ್‌ ಹಿಂದಿನ ಸತ್ಯ ಬಯಲು ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ : ವಿಪಕ್ಷಗಳಿಗೆ ತಿರುಗೇಟು

Published : Aug 27, 2024, 05:43 AM IST
CM Siddaramaiah Muda Site

ಸಾರಾಂಶ

  ಬಿಜೆಪಿ – ಜೆಡಿಎಸ್‌ ನಾಯಕರೇ, ವೈಟ್ನರ್‌ ಹಿಂದಿರುವ ಅಕ್ಷರಗಳೇನು ಎಂಬುದು ಈ ವೀಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ, ನಿಮ್ಮ ದ್ವೇಷದ ಕನ್ನಡಕ ಕಳಚಿಟ್ಟು ಸರಿಯಾಗಿ ಕಣ್ಣುಬಿಟ್ಟು ನೋಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.

ಬೆಂಗಳೂರು : ಮುಡಾ ಅಕ್ರಮವಾಗಿ ಸ್ವಾದೀನಪಡಿಸಿಕೊಂಡ ನಮ್ಮ ಕುಟುಂಬದ ಜಮೀನಿಗೆ ಬದಲಿ ಭೂಮಿ ನೀಡುವಂತೆ ನನ್ನ ಪತ್ನಿ ಸಲ್ಲಿಸಿದ್ದ ಅರ್ಜಿಯಲ್ಲಿ ನಾಲ್ಕೈದು ಪದಗಳಿಗೆ ವೈಟ್ನರ್‌ ಹೆಚ್ಚಿದನ್ನೇ ಮಹಾನ್‌ ಅಪಾರಾಧವೆಂಬಂತೆ ಗಂಟಲು ಹರಿದುಕೊಂಡ ಬಿಜೆಪಿ – ಜೆಡಿಎಸ್‌ ನಾಯಕರೇ, ವೈಟ್ನರ್‌ ಹಿಂದಿರುವ ಅಕ್ಷರಗಳೇನು ಎಂಬುದು ಈ ವೀಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ, ನಿಮ್ಮ ದ್ವೇಷದ ಕನ್ನಡಕ ಕಳಚಿಟ್ಟು ಸರಿಯಾಗಿ ಕಣ್ಣುಬಿಟ್ಟು ನೋಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.

ನನ್ನ ಪತ್ನಿ ಬದಲೀ ಭೂಮಿ ಕೇಳಿದ್ದು ತನ್ನದೇ ಜಮೀನನ್ನು ಮುಡಾ ವಶಕ್ಕೆ ಪಡೆದು ಅಭಿವೃದ್ಧಿಪಡಿಸಲಾದ ದೇವನೂರು 3ನೇ ಹಂತದ ಬಡಾವಣೆಯಲ್ಲಿ ಅಥವಾ ನಂತರ ಪ್ರಾಧಿಕಾರವು ಅಭಿವೃದ್ಧಿ ಪಡಿಸಿದ ಸಮಾನಾಂತರ ಬಡಾವಣೆಯಲ್ಲಿ. ಅಲ್ಲಿ ನಿವೇಶನಗಳು ಲಭ್ಯವಿರದ ಕಾರಣಕ್ಕೆ “ದೇವನೂರು 3ನೇ ಹಂತದ ಬಡಾವಣೆಯಲ್ಲಿ ಅಥವಾ ನಂತರ” ಎಂಬ ನಾಲ್ಕೈದು ಪದಗಳಿಗೆ ವೈಟ್ನರ್‌ ಹಾಕಿ, ಪ್ರಾಧಿಕಾರ ಅಭಿವೃದ್ಧಿ ಪಡಿಸಿದ ಸಮಾನಂತರ ಬಡಾವಣೆಯಲ್ಲಿ ನಿವೇಶನ ನೀಡಬೇಕೆಂಬ ಮನವಿ ಮಾಡಿದ್ದಾರೆ. ಇದರಲ್ಲಿ ಟಿಪ್ಪಣಿಯೂ ಇಲ್ಲ, ಆದೇಶವೂ ಇಲ್ಲ, ಅಪ್ಪಣೆಯೂ ಇಲ್ಲ. ತನಗೆ ಸೇರಿದ ಭೂಮಿಯಲ್ಲೇ ನಿವೇಶನ ಕೊಡಿ ಎಂಬ ಮನವಿ ಅಷ್ಟೆ ಇದೆ.

ವೈಟ್ನರ್‌ ಹಚ್ಚಿ ಕಪ್ಪು ಚುಕ್ಕೆ ಅಳಿಸಿಕೊಳ್ಳಲು ಸಾಧ್ಯವಿಲ್ಲ, ಸಿಎಂ ಪತ್ನಿ ನಿವೇಶನ ಕೇಳಿದ್ದು ವಿಜಯನಗರದಲ್ಲಿ, ಮುಡಾ ವಿಚಾರ ಚರ್ಚೆಗೆ ಬಂದ ನಂತರ ಸಿದ್ದರಾಮಯ್ಯ ಅವರ ಪರವಾಗಿ ಯಾರೋ ಹೋಗಿ ವೈಟ್ನರ್‌ ಹಚ್ಚಿ ಬಂದಿದ್ದಾರೆಂದು' ಬೊಬ್ಬೆ ಹಾಕುತ್ತಿದ್ದ ಸ್ವಯಂ ಘೋಷಿತ ಕಾನೂನು ಪಂಡಿತರು ಈಗೇನು ಹೇಳುತ್ತಾರೆ? ಆತುರದಲ್ಲಿ ಮೂಗು ಕತ್ತರಿಸಿಕೊಂಡು, ರಾತ್ರಿಯೆಲ್ಲ ಕನ್ನಡಿ ಮುಂದೆ ನಿಂತು ಕಣ್ಣೀರು ಹಾಕಿದ್ದರಂತೆ ಹಾಗಾಯಿತು ಕೆಲವು ಅತಿ ಬುದ್ದಿವಂತರ ಕತೆ.

ಕಪೋಲ ಕಲ್ಪಿತ ಕಟ್ಟುಕತೆಗಳ ಮೂಲಕ ನನ್ನನ್ನು ಹಾಗೂ ನನ್ನ ಕುಟುಂಬವನ್ನು ವಿನಾಃಕಾರಣ ಅಪರಾಧಿಗಳಂತೆ ಬಿಂಬಿಸಿ ಬಾಯಿಗೆ ಬಂದಂತೆ ಮಾತನಾಡಿರುವ ಬಿಜೆಪಿ – ಜೆಡಿಎಸ್‌ ಪಕ್ಷಗಳ ವಿವೇಕ ಶೂನ್ಯ ನಾಯಕರು ಇಂದು ಜನರೆದುರು ಬೆತ್ತಲಾಗಿದ್ದಾರೆ. ಸತ್ಯ ಹಾಗೆಯೇ, ಅರಿವಿಗೆ ಬರುವುದು ಸ್ವಲ್ಪ ತಡವಾಗಬಹುದು, ಆದರೆ ಅಂತಿಮ ಗೆಲುವು ಸತ್ಯದ್ದೇ ಆಗಿರುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿರುವ ಪೋಸ್ಟ್ ಹಂಚಿಕೊಂಡಿದ್ದಾರೆ.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ