ಮುನಿಸ್ವಾಮಿಗೆ ಮತ್ತೆ ಬಿಜೆಪಿ ಟಿಕೆಟ್‌ ಸಿಗುವ ವಿಶ್ವಾಸ

KannadaprabhaNewsNetwork | Published : Mar 19, 2024 12:56 AM

ಸಾರಾಂಶ

ಬಿಜೆಪಿಯಿಂದ ಆಗಲಿ ಜೆಡಿಎಸ್‌ನಿಂದ ಆಗಲಿ ಸ್ಪರ್ಧೆ ಮಾಡು ಎಂದರೇ ಮುನಿಸ್ವಾಮಿ ಸ್ಪರ್ಧಿಸುತ್ತಾರಂತೆ, ಕಾಂಗ್ರೆಸ್ ಸೋಲಿಸುವುದೇ ಬಿಜೆಪಿ ಗುರಿ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎನ್ನುವುದು ಅವರ ಉದ್ದೇಶ

ಕನ್ನಡಪ್ರಭ ವಾರ್ತೆ ಟೇಕಲ್

ಮುಂದಿನ ತಿಂಗಳು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ಮೈತ್ರಿ ಕೂಟದಿಂದ ತಮಗೇ ಟಿಕೆಟ್ ನೀಡುವ ವಿಶ್ವಾಸವಿದೆ ಎಂದು ಸಂಸದ ಎಸ್‌. ಮುನಿಸ್ವಾಮಿ ಹೇಳಿದರು.

ಅವರು ಸೋಮವಾರ ತಮ್ಮ ಸ್ವಗ್ರಾಮ ಯಲುವಗುಳಿ ಗ್ರಾಮದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೋಲಾರ ಕ್ಷೇತ್ರದಲ್ಲಿ ಹಾಲಿ ಬಿಜೆಪಿ ಸಂಸದ ಎಸ್.ಮುನಿಸ್ವಾಮಿ ಸಮರ್ಥ ಅಭ್ಯರ್ಥಿ ಎಂಬುದಾಗಿ ಬಿಜೆಪಿ ಚುನಾವಣೆ ಸಮಿತಿ ಅಭಿಪ್ರಾಯಪಟ್ಟಿರುವುದಾಗಿ ತಮಗೆ ತಿಳಿದು ಬಂದಿದೆ ಎಂದರು.ಜೆಡಿಎಸ್‌ನಲ್ಲಿ ಆಕಾಂಕ್ಷಿಗಳ ಪೈಪೋಟಿ

ಆದರೆ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಆ ಪಕ್ಷದ ವರಿಷ್ಠರಾದ ಮಾಜಿ ಮುಖ್ಯಮಂತ್ರ್ರಿ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಜೆಡಿಎಸ್‌ ಶಾಸಕರು ಮತ್ತು ಮುಖಂಡರೊಡನೆ ಚರ್ಚೆ ಮುಂದುವರಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ಗೆ ಹೆಚ್ಚು ಮತ ಬಂದಿರುವ ಕಾರಣ ಆ ಪಕ್ಷದ ಅಭ್ಯರ್ಥಿಯನ್ನೆ ಲೋಕಸಭಾ ಅಭ್ಯರ್ಥಿಯನ್ನಾಗಿ ಮಾಡಬೇಕೆಂದು ಚರ್ಚಿಸುತ್ತಿದ್ದಾರೆ. ಆದರೆ ಆ ಪಕ್ಷದಲ್ಲಿ ಅನೇಕ ಜನ ಆಕಾಂಕ್ಷಿಗಳಿದ್ದಾರೆ. ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲು ನಾಯಕರುಗಳಿಗೆ ಗೊಂದಲ ಉಂಟಾಗಿದೆ ಎಂದರು.

ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ವಿರುದ್ಧ ಬಿಜೆಪಿಯ ಹಾಲಿ ಸಂಸದರೇ ಸೂಕ್ತ ಅಭ್ಯರ್ಥಿ ಎಂಬ ಮಾತುಗಳು ಅಂತಿಮಗೊಂಡಂತೆ ಕಾಣುತ್ತಿದೆ. ಆದುದರಿಂದ ತಮಗೇ ಟಿಕೆಟ್ ನೀಡುವ ಸಾಧ್ಯತೆ ಇದೆ. ಆದರೂ ಹೈಕಮಾಂಡ್ ಏನೇ ತೀರ್ಮಾನ ಕೈಗೊಂಡರು ತಾವು ಅದಕ್ಕೆ ಬದ್ದನಾಗಿರುತ್ತೇನೆ. ಆದುದರಿಂದ ಸ್ವಗ್ರಾಮದಲ್ಲಿ ತಾವು ಮನೆದೇವರು ಕರಗದಮ್ಮನಿಗೆ ಪೂಜೆ ಸಲ್ಲಿಸಿದ್ದಾಗಿ ತಿಳಿಸಿದರು.

ನಮ್ಮ ಗುರಿ ಕಾಂಗ್ರೆಸ್‌ ಸೋಲಿಸುವುದು

ತಮಗೆ ಬಿಜೆಪಿಯಿಂದ ಆಗಲಿ ಜೆಡಿಎಸ್‌ನಿಂದ ಆಗಲಿ ಸ್ಪರ್ಧೆ ಮಾಡು ಎಂದರೇ ನಾನು ಎಲ್ಲದಕ್ಕೂ ಸಿದ್ಧ. ಕಮಲ ಆದರೇನು, ತೆನೆ ಹೊತ್ತ ಮಹಿಳೆಯಾದರೇನು, ಕಾಂಗ್ರೆಸ್ ಸೋಲಿಸುವುದೇ ನನ್ನ ಗುರಿ. ಎರಡೂ ಪಕ್ಷದ ಕಾರ್ಯಕರ್ತರು ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿಯಾಗಲು ಕೋಲಾರ ಕ್ಷೇತ್ರದ ಮತದಾರರು ಕಾಂಗ್ರೆಸ್‌ ವಿರುದ್ಧ ಮತ ಚಲಾಯಿಸಿ ಬಿಜೆಪಿಗೆ, ಜೆಡಿಎಸ್‌ಗೆ ಬೆಂಬಲ ವ್ಯಕ್ತಪಡಿಸಬೇಕು ಎಂದು ಮನವಿ ಮಾಡಿದರು.

ತಾವು ಆರ್‌ಎಸ್‌ಎಸ್ ಸಿದ್ಧಾಂತದಿಂದ ಬಂದಿದ್ದು ಅತೀ ಮುಖ್ಯವಾಗಿ ಮೋದಿಯವರನ್ನು ಪ್ರಧಾನಿ ಮಾಡುವುದೇ ನಮ್ಮ ಧ್ಯೇಯವಾಗಿದೆ. ಅದಕೆ ನಾವು ಎಲ್ಲದಕ್ಕೂ ಸಿದ್ಧರಿರಬೇಕು. ಕಾಂಗ್ರೆಸ್‌ ಕಾರ್ಯಕರ್ತರು ಹೇಳಿಕೊಳ್ಳುವಂತೆ ಎಡಗೈ ಬಲಗೈ ಎಂಬ ತಾರತಮ್ಯ ನಮ್ಮ ಪಕ್ಷದಲ್ಲಿ ಇಲ್ಲ, ಕಾಂಗ್ರೆಸ್‌ ಸೋಲಿಸುವುದೇ ನಮ್ಮ ಗುರಿ. ಬಿಜೆಪಿ, ಜೆಡಿಎಸ್ ಎರಡು ಪಕ್ಷಗಳು ಕಾರ್ಯಕರ್ತರು ಭೇದಭಾವ ಮರೆತು ಒಗ್ಗಟ್ಟಿನಿಂದ ಅಭ್ಯರ್ಥಿ ಗೆಲ್ಲಿಸಲು ಶ್ರಮಿಸುವಂತೆ ಸಂಸದ ಮುನಿಸ್ವಾಮಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಾಲೂರು ತಾಪಂ ಸದಸ್ಯ ರಮೇಶ್‌ಗೌಡ, ಮುನಿಸ್ವಾಮಿಗೌಡ, ಓಜರಹಳ್ಳಿ ಮುನಿಯಪ್ಪ, ಗೋಪಾಲಕೃಷ್ಣ, ಪ್ರಶಾಂತ್, ಸುರೇಶ್, ನಾಗರಾಜ್, ರಾಜೇಂದ್ರ, ಶ್ರೀನಿವಾಸ್, ಕೆ.ರಾಮಚಂದ್ರಪ್ಪ, ಈಶ್ವರ ಮತ್ತಿತರರು ಹಾಜರಿದ್ದರು.

Share this article