ಬೆಂಗಳೂರು : ಸ್ವಾತಂತ್ರ್ಯ ಭಾರತದ ಮೊದಲ ಪ್ರಧಾನಿ ಜವಾಹರ್‌ಲಾಲ್ ನೆಹರು ಅವರು ಸಮಾಜವಾದಿ ಹಾಗೂ ಬಂಡವಾಳ ಶಾಹಿ ನಡುವಿನ ಮಿಶ್ರ ಆರ್ಥಿಕತೆಗೆ ಹೆಚ್ಚು ಒತ್ತು ನೀಡಿದ್ದರು. ಬೃಹತ್ ಅಣೆಕಟ್ಟು, ಕೈಗಾರಿಕೆಗಳು, ಶಿಕ್ಷಣ, ಸಹಕಾರ ಕ್ಷೇತ್ರಕ್ಕೆ ಕೊಡುವ ನೀಡುವ ಮೂಲಕ ಆಧುನಿಕ ಭಾರತ ನಿರ್ಮಾಣದಲ್ಲಿ ಮಹತ್ವದ ಪಾತ್ರ ಪೋಷಿಸಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನೆಹರು ಅವರ ಪುಣ್ಯಸ್ಮರಣೆ ಅಂಗವಾಗಿ ವಿಧಾನಸೌಧ ಆವರಣದಲ್ಲಿರುವ ನೆಹರು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ನೆಹರು ಅವರು ದೇಶದ ಸ್ವಾತಂತ್ರ್ಯ ಬಳಿಕ ಮೊದಲ ಪ್ರಧಾನಿ ಆಗಿದ್ದರು.17 ವರ್ಷಗಳ ಕಾಲ ದೇಶದ ಪ್ರಧಾನಿಯಾಗಿಜನರ ಸೇವೆ ಮಾಡಿದ್ದಾರೆ. ಆಧುನಿಕ ಭಾರತದ ನಿರ್ಮಾಣದಲ್ಲಿ ನೆಹರು ಅವರ ಪಾತ್ರ ಬಹಳ ದೊಡ್ಡದು. ಜತೆಗೆ ದೇಶದಲ್ಲಿ ವೈಜ್ಞಾನಿಕ ಮನೋಭಾವ ಬೆಳೆಯಲು ನೆಹರು ಅವರು ಪ್ರಮುಖ ಕಾರಣ ಎಂದರು.
ಪಂಚವಾರ್ಷಿಕ ಯೋಜನೆಗಳನ್ನು ರೂಪಿಸಿ ದೇಶದ ಪ್ರಗತಿಯನ್ನು ವೈಜ್ಞಾನಿಕವಾಗಿ ಸಾಧಿಸುವ ಪ್ರಯತ್ನ ಮಾಡಿದ್ದರು. ಅವರು ಅಗಲಿ 62 ವರ್ಷಗಳಾಗಿವೆ. ಈ ವೇಳೆ ಅವರನ್ನು ಸ್ಮರಿಸಿ ಅವರ ಹಾದಿಯಲ್ಲಿ ನಡೆಯುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುವುದಾಗಿ ತಿಳಿಸಿದರು.
ಸಚಿವರಾದ ಜಮೀರ್ ಅಹ್ಮದ್‌ಖಾನ್, ಎಚ್.ಸಿ. ಮಹದೇವಪ್ಪ, ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ, ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿ ಹಲವರು ಹಾಜರಿದ್ದರು.
ದೆಹಲಿ ಸಭೆಯ ಕುರಿತು ಮಾನತಾಡಲು ನಿರಾಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘ಅದರ ಬಗ್ಗೆ ನಾಳೆ (ಗುರುವಾರ) ಮಾತನಾಡುತ್ತೇನೆ. ಇವತ್ತು ನೆಹರು ಬಗ್ಗೆ ಬರೆಯಿರಿ’ ಎಂದಷ್ಟೇ ಹೇಳಿದರು.