ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಯಾಗಿದ್ದರೂ ಸೀಟು ಹಂಚಿಕೆ ಬಗ್ಗೆ ಇನ್ನು ಯಾವುದೇ ತೀರ್ಮಾನ ಆಗಿಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಕನ್ನಡಪ್ರಭ ವಾರ್ತೆ ಪಾಂಡವಪುರ
ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಯಾಗಿದ್ದರೂ ಸೀಟು ಹಂಚಿಕೆ ಬಗ್ಗೆ ಇನ್ನು ಯಾವುದೇ ತೀರ್ಮಾನ ಆಗಿಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದೊಂದು ತಿಂಗಳಿಂದ ಯಾವ ರೀತಿ ಚುನಾವಣೆ ಎದುರಿಸಬೇಕು ಎಂಬ ಬಗ್ಗೆ ತಯಾರಿ ನಡೆಯುತ್ತಿದೆ. ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಮಂಡ್ಯದಲ್ಲಿ ಪಕ್ಷ ಸಂಘಟನೆಗಾಗಿ ಓಡಾಟ ಮಾಡಬೇಕಿದೆ.
2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ನಾನು ಸ್ಪರ್ಧೆ ಮಾಡಿದ್ದೆ. ಹೀಗಾಗಿ ಮಂಡ್ಯದಲ್ಲಿ ನಾನು ಸಕ್ರಿಯವಾಗಿ ಇರಬೇಕು ಎಂಬ ಸೂಚನೆ ಇದೆ. ಹಾಗಾಗಿ ಮಂಡ್ಯದ 8 ವಿಧಾನಸಭಾ ಕ್ಷೇತ್ರದಲ್ಲಿ ಸಂಚಾರ ಮಾಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಿಜೆಪಿ-ಜೆಡಿಎಸ್ ಸೀಟು ಹಂಚಿಕೆ ಬಗ್ಗೆ ಮೈಸೂರಿನಲ್ಲಿ ಸಭೆ ನಡೆಸಿ ಅಮಿತ್ ಶಾ ಬಿಜೆಪಿ ನಾಯಕರಿಗೆ ಸೂಚನೆ ಕೊಟ್ಟಿದ್ದಾರೆ.
ನಮ್ಮ ಪಕ್ಷದ ಯಾರಲ್ಲೂ ಯಾವುದೇ ಗೊಂದಲ ಇಲ್ಲ. ನಾವು ಯಾರೂ ಯಾವುದಕ್ಕೂ ಪ್ರತಿಕ್ರಿಯೆ ನೀಡುವುದಿಲ್ಲ. ಇದು ಆರೋಗ್ಯಕರ ಚುನಾವಣೆ ಆಗಬೇಕು, ಮತ್ತೊಮ್ಮೆ ಮೋದಿ ಪ್ರಧಾನಿ ಆಗಬೇಕು.
ದೇವೇಗೌಡರು ಈಗಾಗಲೇ ಮೋದಿ ಪ್ರಧಾನಿ ಆಗಬೇಕು ಎಂದು ಹೇಳಿದ್ದಾರೆ. ನಾವು ಯಾವುದೇ ಗೊಂದಲಕ್ಕೆ ಎಡೆಮಾಡಿಕೊಡಲ್ಲ ಎಂದರು.
ನಿಖಿಲ್ ಮಂಡ್ಯದಲ್ಲಿ ಸ್ಪರ್ಧೆ ವಿಚಾರವಾಗಿ ಕೇಳಿದಾಗ, ಈಗಾಗಲೇ ಸಾಕಷ್ಟು ಬಾರಿ ಇದರ ಬಗ್ಗೆ ಹೇಳಿದ್ದೇನೆ. ಕೊನೆಯದಾಗಿ ಹೇಳುತ್ತಿದ್ದೇನೆ. ಮಂಡ್ಯದಲ್ಲಿ ಈ ಬಾರಿ ನನ್ನ ಸ್ಪರ್ಧೆ ಇಲ್ಲ.
ಯಾವ ಒತ್ತಡಕ್ಕೂ ಮಣಿದು ನಾನು ಸ್ಪರ್ಧೆ ಮಾಡೋಲ್ಲ. 2019ರ ಸೋಲಿನ ಬಗ್ಗೆ ಮಾತನಾಡುವುದಿಲ್ಲ. ನಡೆದಿರುವುದರ ಬಗ್ಗೆ ಮರೆತು ಮುಂದೆ ಹೋಗಬೇಕು ಎಂದರು.
ಕುಮಾರಸ್ವಾಮಿಯವರ ಸ್ಪರ್ಧೆ ಬಗ್ಗೆ ನನಗೆ ಗೊತ್ತಿಲ್ಲ. ಕಾರ್ಯಕರ್ತರು ನಾಯಕರ ಒತ್ತಡ ಕುಮಾರಸ್ವಾಮಿ ಅವರ ಮೇಲಿದೆ ಎನ್ನುವುದು ಸತ್ಯ ಎಂದರು.
ಮಾಜಿ ಸಂಸದ ಸಿ.ಎಸ್.ಪುಟ್ಟರಾಜು, ಸಿ.ಪಿ.ಶಿವರಾಜು, ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರ, ಪುರಸಭೆ ಮಾಜಿ ಸದಸ್ಯ ಟಿ.ಎಸ್.ಲಿಂಗರಾಜು, ಉದ್ಯಮಿ ಶರತ್ ಇತರರಿದ್ದರು.