ಡ್ಯಾಂ ತುಂಬುವವರೆಗೆ ಯಾವ ರೈತರೂ ಬೆಳೆ ಹಾಕಲೇಬೇಡಿ: ಡಿಕೆಶಿ

Published : Jul 03, 2026, 07:47 AM IST
CM DK Shivakumar

ಸಾರಾಂಶ

‘ತೀವ್ರ ಜಲಕ್ಷಾಮದ ಸಾಧ್ಯತೆ ಹಿನ್ನೆಲೆಯಲ್ಲಿ ದೇಶಾದ್ಯಂತ ನೀರು, ವಿದ್ಯುತ್‌ ಅಭಾವ ಸೃಷ್ಟಿಯಾಗಲಿದೆ. ರಾಜ್ಯಾದ್ಯಂತ ಬಹುತೇಕ ಜಲಾಶಯಗಳ ಒಳ ಹರಿವು ಶೂನ್ಯಕ್ಕೆ ಇಳಿದಿದ್ದು, ಜಲಾಶಯ ನಂಬಿಕೊಂಡು ಯಾವ ರೈತರೂ ಬೆಳೆ ಹಾಕಬೇಡಿ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಎಚ್ಚರಿಕೆ ನೀಡಿದ್ದಾರೆ.

 ಬೆಂಗಳೂರು :  ‘ತೀವ್ರ ಜಲಕ್ಷಾಮದ ಸಾಧ್ಯತೆ ಹಿನ್ನೆಲೆಯಲ್ಲಿ ದೇಶಾದ್ಯಂತ ನೀರು, ವಿದ್ಯುತ್‌ ಅಭಾವ ಸೃಷ್ಟಿಯಾಗಲಿದೆ. ರಾಜ್ಯಾದ್ಯಂತ ಬಹುತೇಕ ಜಲಾಶಯಗಳ ಒಳ ಹರಿವು ಶೂನ್ಯಕ್ಕೆ ಇಳಿದಿದ್ದು, ಜಲಾಶಯ ನಂಬಿಕೊಂಡು ಯಾವ ರೈತರೂ ಬೆಳೆ ಹಾಕಬೇಡಿ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಎಚ್ಚರಿಕೆ ನೀಡಿದ್ದಾರೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದಲ್ಲಿ ಎಲ್‌ನಿನೊ ಪರಿಣಾಮದಿಂದ ಉಂಟಾಗಲಿರುವ ಬರದ ಸ್ಥಿತಿ ಹಾಗೂ ಪರಿಣಾಮಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಗಿದೆ.

ತಮಗೆ ವಹಿಸಿರುವ ಉಸ್ತುವಾರಿ ಜಿಲ್ಲೆಗಳಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಿ ಕುಡಿಯುವ ನೀರು, ಮೇವು ಸಿದ್ಧತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವರಿಗೆ ಸೂಚನೆ ನೀಡಿರುವುದಾಗಿ ತಿಳಿದುಬಂದಿದೆ.

ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿ.ಕೆ. ಶಿವಕುಮಾರ್‌, ‘ದೇಶಾದ್ಯಂತ ಭೀಕರ ಬರಗಾಲ ಉಂಟಾಗಲಿದೆ. ವಿದ್ಯುತ್‌ ಹಾಗೂ ನೀರಿನ ಅಭಾವ ಸೃಷ್ಟಿಯಾಗಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದಾರೆ. ಜತೆಗೆ ರಾಜ್ಯದಲ್ಲಿ ಜಲಾಶಯಗಳಲ್ಲಿ ನೀರು ಖಾಲಿಯಾಗಿದೆ. ಹೀಗಾಗಿ ಜಲಾಶಯ ನಂಬಿಕೊಂಡು ಯಾರೂ ಬೆಳೆ ಹಾಕಬೇಡಿ. ಜಲಾಶಯಗಳು ಭರ್ತಿ ಆಗುವವರೆಗೂ ಬೆಳೆ ಹಾಕುವುದು ಬೇಡ. ಮಳೆ ಬಂದರೆ ಖಂಡಿತಾ ನಿಮಗೆ ನೀರು ಒದಗಿಸುತ್ತೇವೆ. ಆದರೆ ಬೆಳೆ ಬಗ್ಗೆ ಸದ್ಯಕ್ಕೆ ಏನೂ ತೀರ್ಮಾನ ಮಾಡಬೇಡಿ’ ಎಂದು ಎಚ್ಚರಿಕೆ ನೀಡಿದರು.

ಒಳ ಹರಿವು ಶೂನ್ಯಕ್ಕೆ ಇಳಿಕೆ:

ರಾಜ್ಯದಲ್ಲಿ ಮಳೆ ಅಭಾವದಿಂದ ಬಹುತೇಕ ಜಲಾಶಯಗಳ ಒಳಹರಿವು ಶೂನ್ಯಕ್ಕೆ ಇಳಿದಿದ್ದು, ಕಾವೇರಿ ಕೊಳ್ಳದ ಜಲಾಶಯಗಳ ಒಳ ಹರಿವು ಶೇ.80ರಷ್ಟು ಕುಸಿದು ಶೇ.20ಕ್ಕೆ ಇಳಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ನೀರು, ವಿದ್ಯುತ್‌ ಅಭಾವದ ಬಗ್ಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದು ಎಚ್ಚರಿಸಿದರು.

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ತುಂಗಭದ್ರಾ, ಘಟಪ್ರಭಾ, ಮಲಪ್ರಭಾ, ನಾರಾಯಣಪುರ, ವಾಣಿವಿಲಾಸ ಅಣೆಕಟ್ಟುಗಳ ಒಳಹರಿವಿನ ಪ್ರಮಾಣ ಶೂನ್ಯಕ್ಕೆ ಇಳಿದಿದೆ. ಕಾವೇರಿ ಪಾತ್ರದಲ್ಲಿ ಮಳೆ ಪ್ರಮಾಣ ಕುಸಿದಿದೆ. ಕಳೆದ ವರ್ಷ ಈ ಸಮಯದಲ್ಲಿ ಹೇಮಾವತಿಯಲ್ಲಿ 80 ಅಡಿ ಇತ್ತು, ಈ ವರ್ಷ 40 ಅಡಿಗೆ ಕುಸಿದಿದೆ. ಕೆಆರ್‌ಎಸ್ ನಲ್ಲಿ 100 ಅಡಿ ಇದ್ದ ನೀರಿನ ಪ್ರಮಾಣ ಈಗ 22 ಅಡಿಯಷ್ಟಿದೆ. ಕಬಿನಿಯಲ್ಲಿ 79 ಅಡಿ ಇತ್ತು, ಈಗ 26 ಅಡಿಯಷ್ಟಿದೆ. ಈ ಅಣೆಕಟ್ಟುಗಳಲ್ಲಿ ಒಳಹರಿವಿನ ಪ್ರಮಾಣ ಶೇ.20 ಕ್ಕೆ ಕುಸಿದಿದೆ. ಹೀಗಾಗಿ ಸಮಸ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ವಿವರಿಸಿದರು.

ವಿದ್ಯುತ್‌ ಅಭಾವ ಕಾಡುವ ಸಾಧ್ಯತೆ:

ದೇಶಾದ್ಯಂತ ವಿದ್ಯುತ್‌ ಸಮಸ್ಯೆ ಉಂಟಾಗುವ ಬಗ್ಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಹೀಗಾಗಿ ರಾಜ್ಯದಲ್ಲಿ ಜಲವಿದ್ಯುತ್‌ಗೆ ಪರ್ಯಾಯವಾಗಿ ಉಷ್ಣವಿದ್ಯುತ್‌ಗೆ ಅಗತ್ಯವಿರುವ ಕಲ್ಲಿದ್ದಲು, ತ್ಯಾಜ್ಯದಿಂದ ವಿದ್ಯುತ್‌, ಅನಿಲ ಉತ್ಪಾದಿಸುವ ಘಟಕಗಳಿಗೆ ಸಿದ್ಧತೆ ಮಾಡಿಕೊಳ್ಳಿ ಎಂದು ಇಂಧನ ಇಲಾಖೆಗೆ ಸೂಚನೆ ನೀಡಿದ್ದೇನೆ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

ನಾಲ್ಕೂ ವಲಯದಲ್ಲೂ ಸಭೆ ನಡೆಸುತ್ತೇನೆ:

ಬರದ ಸ್ಥಿತಿ ನಿರ್ವಹಣೆಗೆ ರಾಜ್ಯದ ನಾಲ್ಕೂ ಕಂದಾಯ ವಿಭಾಗಗಳಲ್ಲಿ ಪ್ರವಾಸ ಮಾಡಿ ಖುದ್ದು ಸಭೆ ನಡೆಸುತ್ತೇನೆ. ಜತೆಗೆ ಹಾಲಿ ಇರುವ ಸಚಿವರಿಗೆ 2-3 ಜಿಲ್ಲೆಗಳ ಬರ ನಿರ್ವಹಣೆ ಹೊಣೆ ನೀಡಿದ್ದು, ಅವರು ಪ್ರತಿ ಜಿಲ್ಲೆಯಲ್ಲೂ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ನೀರು, ಮೇವು ಲಭ್ಯವಿರುವಂತೆ ನೋಡಿಕೊಳ್ಳಬೇಕು. ಅಗತ್ಯವಿರುವ ಕಡೆ ತುರ್ತಾಗಿ ಕೊಳವೆ ಬಾವಿ ಕೊರೆಸಬೇಕು ಎಂದು ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಅವರು ಹೇಳಿದರು.

ಗ್ರಾಮೀಣ ಕುಡಿಯುವ ನೀರಿಗೆ 117

ಕೋಟಿ ರು. ಬಿಡುಗಡೆ: ಈಶ್ವರ ಖಂಡ್ರೆ

ಎಲ್‌ನಿನೋ ಪ್ರಭಾವದಿಂದ ರಾಜ್ಯದಲ್ಲಿ ಮಳೆ ಅಭಾವ ಉಂಟಾಗಲಿದೆ. ಹೀಗಾಗಿ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಿಸಲು 117 ಕೋಟಿ ರು. ಮುಂಗಡವಾಗಿ ಬಿಡುಗಡೆ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್‌ ಖಂಡ್ರೆ ಹೇಳಿದ್ದಾರೆ.

ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ 85 ಕೋಟಿ ರು. ವೆಚ್ಚ ಮಾಡಿ ಕ್ರಿಯಾ ಯೋಜನೆ ರೂಪಿಸಲಾಗಿದೆ. ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ಕುಡಿಯುವ ನೀರು ಪೂರೈಕೆಗೆ ತೊಂದರೆ ಆಗದಂತೆ ಕ್ರಮ ವಹಿಸಲಾಗಿದ್ದು, ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ತೊಂದರೆ ಆದರೆ 24 ಗಂಟೆ ಒಳಗಾಗಿ ಪರಿಹರಿಸುವಂತೆ ಸೂಚಿಸಲಾಗಿದೆ ಎಂದರು.

- ಜೂನ್‌ ಕಳೆದರೂ ರಾಜ್ಯದಲ್ಲಿ ಆರಂಭವಾಗದ ಮುಂಗಾರು ಮಾರುತಗಳ ಅಬ್ಬರ. ತೀವ್ರ ಮಳೆ ಕೊರತೆ

- ಎಲ್‌ ನಿನೊ ಎಂಬ ಪರಿಣಾಮದಿಂದಾಗಿ ದೇಶಾದ್ಯಂತ ಮಳೆ ಸಮಸ್ಯೆ. ಬರಗಾಲ ಎದುರಾಗುವ ಭೀತಿ

- ಸಂಭಾವ್ಯ ಬರ ಕುರಿತು ಸಚಿವ ಸಂಪುಟ ಸಭೆಯಲ್ಲಿ ನಿನ್ನೆ ಚರ್ಚೆ. ಅದರ ಪರಿಣಾಮಗಳ ಬಗ್ಗೆ ಮಾತುಕತೆ

- ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದ ಸಿಎಂ. ದೇಶಾದ್ಯಂತ ಬರಗಾಲ ಎದುರಾಗಲಿದೆ ಎಂದು ವಿವರ

- ರಾಜ್ಯದ ಜಲಾಶಯಗಳಲ್ಲಿ ನೀರು ಖಾಲಿಯಾಗಿದೆ. ಹೀಗಾಗಿ ಡ್ಯಾಂ ನಂಬಿ ಬೆಳೆ ಬೆಳೆಯಬೇಡಿ ಎಂದು ಮನವಿ

- ಜಲಾಶಯಗಳು ಭರ್ತಿಯಾಗುವವರೆಗೂ ಬೆಳೆ ಹಾಕುವುದು ಬೇಡ. ಮಳೆ ಬಂದರೆ ನೀರು ಕೊಡುತ್ತೇವೆ ಎಂದ ಸಿಎಂ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಸಂಪುಟ ವಿಸ್ತರಣೆ: 5ಕ್ಕೆ ಸಿಎಂ ಡಿಕೆ, ಸಿದ್ದು ದಿಲ್ಲಿಗೆ - ಸಂಭಾವ್ಯರು ಯಾರ್‍ಯಾರು?
ಜನರನ್ನು ಕಲ್ಯಾಣಮಂಟಪದಲ್ಲಿ ಕೂರಿಸಿ ರಾಮನಗರದಲ್ಲಿ ಎಸ್‌ಐಆರ್‌ : ಎಚ್‌ಡಿಕೆ