ಡಿ.ಕೆ.ಶಿವಕುಮಾರ್ ಹೊರಗಿಟ್ಟು ಸಭೆ ಕುರಿತು ಪಕ್ಷದೊಳಗೆ ತೀವ್ರ ಚರ್ಚೆಸಿಎಂ ನಡೆಗೆ ಆಪ್ತರಿಂದಲೇ ವಿಭಿನ್ನ ಹೇಳಿಕೆ: ನನಗೆ ಸಮಸ್ಯೆ ಇಲ್ಲ: ಡಿಕೆಶಿ
===ಸಿಎಂ ಸಭೆಯಲ್ಲಿ ತಪ್ಪೇನಿಲ್ಲ
ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಶಾಸಕರ ಸಭೆ ನಂತರ ಕೆಲ ವಿಚಾರಗಳನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತಂದಿದ್ದಾರೆ. ಹೀಗಾಗಿ ಶಾಸಕರ ಅಹವಾಲು ವಿಚಾರವಾಗಿ ತಮ್ಮ ಅಧಿಕಾರ ಬಳಸಿ ಮುಖ್ಯಮಂತ್ರಿ ಸಭೆ ನಡೆಸುತ್ತಿದ್ದಾರೆ. ಅದರಲ್ಲಿ ತಪ್ಪೇನಿಲ್ಲ. ನನ್ನನ್ನು ಆಹ್ವಾನಿಸದ ಕುರಿತು ಯಾವುದೇ ಸಮಸ್ಯೆಯಿಲ್ಲ, ನಿಮಗೇನು (ಮಾಧ್ಯಮಗಳಿಗೆ) ಸಮಸ್ಯೆ?ಡಿ.ಕೆ.ಶಿವಕುಮಾರ್, ಡಿಸಿಎಂ==
ಶಾಸಕರ ಸಮಸ್ಯೆ ಆಲಿಸಿ,ಸಿಎಂ ಅಭಿವೃದ್ಧಿಯ ಪಾಠ- 6 ಜಿಲ್ಲೆ ಶಾಸಕರ ಜತೆ ಸಿದ್ದು ಸಮಾಲೋಚನೆ===ಕನ್ನಡಪ್ರಭ ವಾರ್ತೆ ಬೆಂಗಳೂರು
ಹೈಕಮಾಂಡ್ ಸೂಚನೆ ಮೇರೆಗೆ ಸ್ವಪಕ್ಷದ ಶಾಸಕರ ಸಮಸ್ಯೆ ಆಲಿಸುವ ಪ್ರಕ್ರಿಯೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಆರಂಭಿಸಿದ್ದು, ಮೊದಲ ದಿನದ ಸಭೆಯಲ್ಲಿ ಕ್ಷೇತ್ರಗಳಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಕುರಿತು ಸಿದ್ದರಾಮಯ್ಯ ಅವರು ಶಾಸಕರಿಗೆ ಪಾಠ ಮಾಡಿದರು.ವಿಧಾನಸೌಧದ ಮುಖ್ಯಮಂತ್ರಿ ಕಚೇರಿಯಲ್ಲಿ ನಡೆದ ಮೊದಲ ದಿನ ಮೈಸೂರು, ಚಾಮರಾಜನಗರ, ತುಮಕೂರು, ಕೊಡಗು, ದಕ್ಷಿಣ ಕನ್ನಡ, ಹಾಸನ ಜಿಲ್ಲೆಗಳ 22 ಶಾಸಕರು ಮತ್ತು ಆಯಾ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಪ್ರಮುಖವಾಗಿ ಕ್ಷೇತ್ರವಾರು ಅನುಷ್ಠಾನಗೊಳಿಸಬೇಕಾದ ಕಾರ್ಯಕ್ರಮಗಳ ಕುರಿತಂತೆ ಸಿದ್ದರಾಮಯ್ಯ ಅವರು ಶಾಸಕರಿಂದ ಮಾಹಿತಿ ಪಡೆದರು. ಇದೇ ವೇಳೆ ಯಾವೆಲ್ಲ ಕಾರ್ಯಕ್ರಮಗಳತ್ತ ಹೆಚ್ಚಿನ ಗಮನಕೊಡಬೇಕು ಎಂಬುದರ ಬಗ್ಗೆಯೂ ಶಾಸಕರಿಗೆ ಸೂಚನೆ ನೀಡಿದ್ದಾರೆ.
==ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ನಂತರ ಶಾಸಕರ ಅಸಮಾಧಾನ ತಣಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸುತ್ತಿರುವ ಸರಣಿ ಸಭೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಆಹ್ವಾನ ನೀಡದಿರುವುದು ಪಕ್ಷದೊಳಗೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರದಿಂದ ನಾಲ್ಕು ದಿನಗಳ ಕಾಲ ಜಿಲ್ಲಾವಾರು ಶಾಸಕರೊಂದಿಗೆ ಸಭೆಗೆ ಚಾಲನೆ ನೀಡಿದ್ದಾರೆ. ಆದರೆ, ಈ ಸಭೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಹ್ವಾನಿತರಾಗಿಲ್ಲ. ಈ ಬಗ್ಗೆ ಸಿಎಂ ಆಪ್ತ ಸಚಿವರಲ್ಲೇ ವಿಭಿನ್ನ ಹೇಳಿಕೆ ಕೇಳಿಬಂದಿದ್ದರೆ, ಖುದ್ದು ಡಿಸಿಎಂ ಶಿವಕುಮಾರ್ ಅವರು ಈ ಬಗ್ಗೆ ನಮಗೇ ಸಮಸ್ಯೆ ಇಲ್ಲ. ನಿಮಗೇನು (ಮಾಧ್ಯಮಕ್ಕೆ)ಸಮಸ್ಯೆ ಎಂದು ಪ್ರಶ್ನಿಸುವ ಮೂಲಕ ವಿಷಯ ತಳ್ಳಿ ಹಾಕಲು ಯತ್ನಿಸಿದ್ದಾರೆ.
ಆದರೆ, ಸಿಎಂ ಆಪ್ತ ಸಚಿವ ಕೆ.ಎನ್.ರಾಜಣ್ಣ ಅವರು ಉಪ ಮುಖ್ಯಮಂತ್ರಿಯಾಗಿ ಅಲ್ಲದಿದ್ದರೂ ಪಕ್ಷದ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಅವರನ್ನು ಆಹ್ವಾನಿಸಬೇಕಿತ್ತು ಎಂದು ಹೇಳಿದ್ದಾರೆ.ನಮಗೇ ಸಮಸ್ಯೆಯಿಲ್ಲ, ನಿಮಗೇನು?:
ಶಾಸಕರ ಸಭೆಗೆ ತಮ್ಮನ್ನು ಆಹ್ವಾನಿಸದ ಮುಖ್ಯಮಂತ್ರಿ ಅವರ ನಡೆ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರ ಬಳಸಿ ಶಾಸಕರ ಸಭೆ ಮಾಡುತ್ತಿದ್ದಾರೆ. ಅದರಲ್ಲಿ ತಪ್ಪೇನಿದೆ? ಸುರ್ಜೇವಾಲಾ ಅವರು ಶಾಸಕರನ್ನು ಭೇಟಿ ಮಾಡಿದ ಬಳಿಕ ಅನೇಕ ವಿಚಾರಗಳನ್ನು ಮುಖ್ಯಮಂತ್ರಿ ಗಮನಕ್ಕೆ ತಂದಿದ್ದಾರೆ. ಅದರಂತೆ ಶಾಸಕರ ಅಹವಾಲು ಆಲಿಸಲು ಮುಖ್ಯಮಂತ್ರಿ ಸಭೆ ನಡೆಸುತ್ತಿದ್ದಾರೆ ಎಂದರು.ಈ ಸಭೆಗೆ ನನ್ನನ್ನು ಆಹ್ವಾನಿಸದ್ದಕ್ಕೆ ಆಕ್ಷೇಪವಿಲ್ಲ. ಈ ವಿಚಾರವಾಗಿ ನನಗೆ ಯಾವುದೇ ಸಮಸ್ಯೆಯಿಲ್ಲ, ಮಾಧ್ಯಮಗಳಿಗೆ ಏಕೆ ಕಷ್ಟವಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಇದು ಸರ್ಕಾರದ ಸಭೆ-ಡಾ.ಮಹದೇವಪ್ಪ:ಡಿ.ಕೆ.ಶಿವಕುಮಾರ್ ಅವರನ್ನು ಆಹ್ವಾನಿಸದಿರುವುದನ್ನು ಸಮರ್ಥಿಸಿಕೊಂಡಿರುವ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತಿದೆ. ಪಕ್ಷದ ವಿಚಾರ ಬಂದಾಗ ಡಿ.ಕೆ.ಶಿವಕುಮಾರ್ ಸೇರಿ ಎಲ್ಲರೂ ಸೇರುತ್ತಾರೆ. ಇದು ಸರ್ಕಾರದ ಸಭೆಯಾದ ಕಾರಣ ಸಿಎಂ ಸಭೆ ನಡೆಸುತ್ತಿದ್ದಾರೆ. ನಮ್ಮಲ್ಲಿ ಸಮನ್ವಯತೆ ಕೊರತೆಯಿಲ್ಲ. ಹೀಗಾಗಿ ಎಲ್ಲರೂ ಸೇರಿ ಸಭೆ ನಡೆಸುತ್ತಿದ್ದೇವೆ. ಮಾಧ್ಯಮಗಳು ಇಲ್ಲದಿರುವುದನ್ನು ಹುಟ್ಟು ಹಾಕಬೇಡಿ. ಅಲ್ಲದೆ, ಸುರ್ಜೇವಾಲಾ ಅವರು ಶಾಸಕರ ಸಭೆ ನಡೆಸುವ ಮುನ್ನವೇ ಈ ಸಭೆ ಮಾಡಲು ಯೋಜಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಪಕ್ಷದ ಅಧ್ಯಕ್ಷರನ್ನು ಆಹ್ವಾನಿಸಬೇಕಿತ್ತು:ಡಿ.ಕೆ.ಶಿವಕುಮಾರ್ ಅವರನ್ನು ಹೊರಗಿಟ್ಟು ಶಾಸಕರ ಸಭೆ ನಡೆಸುತ್ತಿರುವುದಕ್ಕೆ ಪರೋಕ್ಷವಾಗಿ ಆಕ್ಷೇಪ ವ್ಯಕ್ತಪಡಿಸಿರುವ ಸಚಿವ ಕೆ.ಎನ್.ರಾಜಣ್ಣ, ಉಪಮುಖ್ಯಮಂತ್ರಿ ಹುದ್ದೆಗೆ ಸಾಂವಿಧಾನಿಕ ಸ್ಥಾನಮಾನವಿಲ್ಲ. ಹೀಗಾಗಿ ಉಪಮುಖ್ಯಮಂತ್ರಿ ಅವರನ್ನು ಹೊರಗಿಟ್ಟು ಸಭೆ ನಡೆಸುತ್ತಿದ್ದಾರೆ ಎಂದರೆ ಒಪ್ಪುವುದಿಲ್ಲ. ಕೆಪಿಸಿಸಿ ಅಧ್ಯಕ್ಷರಾಗಿ ಅವರು ಭಾಗವಹಿಸಬೇಕಿತ್ತು. ಪಕ್ಷ ಮತ್ತು ಸರ್ಕಾರ ಒಟ್ಟಿಗೆ ಹೋಗುವುದು ಒಳ್ಳೆಯ ಸೂಚನೆ. ಆದರೆ, ಅವರನ್ನು ಆಹ್ವಾನಿಸದೆ ಸಭೆ ನಡೆಸುತ್ತಿರುವುದಕ್ಕೆ ಕಾರಣ ಗೊತ್ತಿಲ್ಲ. ಅದು ಸಿಎಂ ಮತ್ತು ಡಿಸಿಎಂ ನಡುವೆ ಇರುವ ವಿಚಾರ. ಅಲ್ಲದೆ, ಮುಖ್ಯಮಂತ್ರಿ ಅವರು ಶಾಸಕರ ಸಭೆ ನಡೆಸುವುದು ಹೊಸದೇನಲ್ಲ. ಹಿಂದೆಯೂ ಹಲವು ಸರ್ಕಾರ ಮತ್ತು ಮುಖ್ಯಮಂತ್ರಿ ಅವರು ಈ ರೀತಿ ಶಾಸಕರ ಸಭೆ ನಡೆಸಿದ್ದಾರೆ ಎಂದು ಹೇಳಿದರು.
==