ಸುಪ್ರೀಂ ಹೇಳೋವರೆಗೂ ನೀರು ಬಿಡಬೇಕಿಲ್ಲ : ತಜ್ಞರು

Published : Jul 31, 2026, 04:55 AM IST
KRS Dam

ಸಾರಾಂಶ

ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 3 ಸಾವಿರ ಕ್ಯುಸೆಕ್‌ ನೀರು ಹರಿಸಲು ಕಾವೇರಿ ನೀರು ನಿಯಂತ್ರಣ ಸಮಿತಿ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಗಳು ಆದೇಶಿಸಿವೆ.ಈ ಆದೇಶ ಪಾಲನೆ ಬಗ್ಗೆ ಗೊಂದಲಗಳಿದ್ದು, ಆದೇಶ ಪಾಲನೆಯಾಗದಿದ್ದರೂ ಸದ್ಯ   ರಾಜ್ಯ ಸರ್ಕಾರಕ್ಕೆ ಯಾವುದೇ ಸಮಸ್ಯೆ ಇಲ್ಲ

  ಬೆಂಗಳೂರು :  ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 3 ಸಾವಿರ ಕ್ಯುಸೆಕ್‌ ನೀರು ಹರಿಸಲು ಕಾವೇರಿ ನೀರು ನಿಯಂತ್ರಣ ಸಮಿತಿ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಗಳು ಆದೇಶಿಸಿವೆ. ಈ ಆದೇಶ ಪಾಲನೆ ಬಗ್ಗೆ ಗೊಂದಲಗಳಿದ್ದು, ಒಂದು ವೇಳೆ ಆದೇಶ ಪಾಲನೆಯಾಗದಿದ್ದರೂ ಸದ್ಯದ ಮಟ್ಟಿಗೆ ರಾಜ್ಯ ಸರ್ಕಾರಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಕಾನೂನು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಳೆ ಕೊರತೆ ಕಾರಣದಿಂದಾಗಿ ಈವರೆಗೆ ಕಾವೇರಿ ನದಿ ನೀರನ್ನು ಕೃಷಿ ಚಟುವಟಿಕೆಗಳಿಗೆ ಮತ್ತು ತಮಿಳುನಾಡಿಗೆ ಹರಿಸಿಲ್ಲ. ಆದರೆ, ಕಾವೇರಿ ನೀರು ನಿಯಂತ್ರಣ ಸಮಿತಿ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಗಳು ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವಂತೆ ಸೂಚಿಸಿರುವುದರಿಂದ ರಾಜ್ಯ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ.

ಸಿಡಬ್ಲ್ಯುಆರ್‌ಸಿ(ಕಾವೇರಿ ನೀರು ನಿಯಂತ್ರಣ ಸಮಿತಿ) ಮತ್ತು ಸಿಡಬ್ಲ್ಯುಎಂಎ(ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ) ನೀಡಿರುವ ಆದೇಶದಂತೆ ತಮಿಳುನಾಡಿಗೆ ನೀರು ಹರಿಸದಿದ್ದರೆ ನ್ಯಾಯಾಂಗ ನಿಂದನೆಯಾಗಲಿದೆಯೇ ಎಂಬ ಬಗ್ಗೆ ಪರಿಶೀಲನೆಯನ್ನೂ ಸರ್ಕಾರ ಮಾಡುತ್ತಿದೆ. ಆದರೆ ಕಾನೂನು ತಜ್ಞರು, ಸಿಡಬ್ಲ್ಯುಆರ್‌ಸಿ ಮತ್ತು ಸಿಡಬ್ಲ್ಯುಎಂಎ ನೀಡಿರುವ ಆದೇಶ ಪಾಲನೆಯಾಗದಿದ್ದರೆ ನ್ಯಾಯಾಂಗ ನಿಂದನೆಯಾಗುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸುಪ್ರೀಂಗೆ ಹೋಗಬಹುದು:

ಸಿಡಬ್ಲ್ಯುಆರ್‌ಸಿ ಮತ್ತು ಸಿಡಬ್ಲ್ಯುಎಂಎ ನೀಡಿರುವ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಲು ಅವಕಾಶವಿದೆ. ಸುಪ್ರೀಂ ಕೋರ್ಟ್‌ನಲ್ಲಿ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿನ ಸಂಗ್ರಹದ ಸ್ಥಿತಿ, ಮಳೆ ಕುರಿತು ಹವಾಮಾನ ಇಲಾಖೆ ವರದಿಗಳನ್ನು ಮುಂದಿಟ್ಟು ತಮಿಳುನಾಡಿಗೆ ನೀರು ಬಿಡುವ ಆದೇಶಕ್ಕೆ ತಡೆ ತರಬಹುದಾಗಿದೆ. ಅಲ್ಲಿಯವರೆಗೆ ರಾಜ್ಯ ಸರ್ಕಾರಕ್ಕೆ ಯಾವುದೇ ಆತಂಕವಿಲ್ಲ. ಒಂದು ವೇಳೆ ಸುಪ್ರೀಂ ಕೋರ್ಟ್‌ ಸಿಡಬ್ಲ್ಯುಆರ್‌ಸಿ ಮತ್ತು ಸಿಡಬ್ಲ್ಯುಎಂಎ ಆದೇಶಕ್ಕೆ ತಡೆ ನೀಡದೆ, ಅದನ್ನು ಪಾಲಿಸುವಂತೆ ಸೂಚಿಸಿದರೆ ಮಾತ್ರ ರಾಜ್ಯ ಸರ್ಕಾರ ಅನಿವಾರ್ಯವಾಗಿ ನೀರು ಹರಿಸಬೇಕಾಗಲಿದೆ. ಸುಪ್ರೀಂ ಕೋರ್ಟ್‌ ಆದೇಶವನ್ನೂ ಧಿಕ್ಕರಿಸಿದರೆ ನ್ಯಾಯಾಂಗ ನಿಂದನೆಯಾಗಲಿದ್ದು, ಅದರ ಮೂಲಕ ರಾಜ್ಯ ಸರ್ಕಾರ ಪ್ರತಿಕೂಲ ಪರಿಣಾಮ ಎದುರಿಸಬೇಕಾಗಬಹುದು ಎಂದು ಸುಪ್ರೀಂ ಕೋರ್ಟ್‌ ಹಿರಿಯ ವಕೀಲರೊಬ್ಬರು ತಿಳಿಸಿದ್ದಾರೆ.

ನೀರು ಬಿಡದೆ ಕ್ಷಮೆ ಕೇಳಿದ್ದ ಸರ್ಕಾರ

ಈ ಹಿಂದೆ 2002ರಲ್ಲೂ ಇದೇ ರೀತಿಯ ಪರಿಸ್ಥಿತಿ ರಾಜ್ಯ ಸರ್ಕಾರಕ್ಕೆ ಎದುರಾಗಿತ್ತು. 2002ರಲ್ಲಿ ತೀವ್ರ ಬರ ಎದುರಾಗಿ, ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿನ ತೀವ್ರ ಅಭಾವ ಉಂಟಾಗಿತ್ತು. ಆಗ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಿತ್ತು. ಆದರೆ, ಸುಪ್ರೀಂ ಕೋರ್ಟ್‌ ತಮಿಳುನಾಡಿಗೆ 1.25 ಟಿಎಂಸಿ ನೀರು ಬಿಡುಗಡೆಗೆ ಸೂಚಿಸಿತ್ತು. ಈ ಆದೇಶ ಪಾಲಿಸದ ಅಂದಿನ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರು ಬೆಂಗಳೂರಿನಿಂದ ಮಂಡ್ಯವರೆಗೆ ಪಾದಯಾತ್ರೆ ನಡೆಸಿ, ರಾಜ್ಯದ ದುಃಸ್ಥಿತಿ ತೋರಿಸುವ ಕೆಲಸ ಮಾಡಿದ್ದರು. ಅಂತಿಮವಾಗಿ ಸುಪ್ರೀಂ ಕೋರ್ಟ್‌ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಾಗ ಅನಿವಾರ್ಯವಾಗಿ ತಮಿಳುನಾಡಿಗೆ ನೀರು ಬಿಡುವಂತಾಗಿತ್ತು. ಅದಕ್ಕೂ ಮುನ್ನ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಕ್ಷಮೆ ಕೇಳಿತ್ತು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಕಾವೇರಿ ಇಕ್ಕಟ್ಟಿನಲ್ಲಿ ಸರ್ಕಾರ : ನೀರು ಬಿಡುಗಡೆಗೆ ನಿರ್ವಹಣಾ ಪ್ರಾಧಿಕಾರದಿಂದಲೂ ಆದೇಶ
ವಿದ್ಯಾರ್ಥಿಗಳ ಮೇಲೆ ಗುಂಡಿಗೆ ಶಾ ಆದೇಶ: ರಾಗಾ ಆರೋಪ