ರಾಜಣ್ಣ ಸೇರಿದಂತೆ ಕಾಂಗ್ರೆಸ್ ಪಕ್ಷಕ್ಕೆ ಯಾರೂ ಅನಿವಾರ್ಯವಲ್ಲ: ಕೆ.ಎಂ.ಉದಯ್

KannadaprabhaNewsNetwork |  
Published : Sep 03, 2025, 01:00 AM IST
2ಕೆಎಂಎನ್ ಡಿ24 | Kannada Prabha

ಸಾರಾಂಶ

ಸಂಪುಟದಿಂದ ವಜಾಗೊಳಿಸುವಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಯಾವುದೇ ಪಾತ್ರವಿಲ್ಲ. ಆದರೂ ಅವರ ಮೇಲೆ ಗೂಬೆ ಕೂರಿಸಲು ರಾಜಣ್ಣ ಪ್ರಯತ್ನಿಸುತ್ತಿದ್ದಾರೆ. ಆದರೂ ರಾಜಣ್ಣ ಪಕ್ಷ ತೊರೆಯುವುದಿಲ್ಲ. ಕೆಲ ಮಠಾಧೀಶರು ಮಂತ್ರಿ ಸ್ಥಾನ ಕಳೆದುಕೊಂಡ ರಾಜಣ್ಣರ ನಿವಾಸಕ್ಕೆ ಭೇಟಿ ನೀಡಿ ಸಮಾಧಾನದ ಮಾತುಗಳನ್ನಾಡಿದ್ದಾರೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ.

ಕನ್ನಡಪ್ರಭ ವಾರ್ತೆ ಮದ್ದೂರು

ಕಾಂಗ್ರೆಸ್ ಸಮುದ್ರವಿದ್ದಂತೆ. ಮಾಜಿ ಸಚಿವ ರಾಜಣ್ಣ ಸೇರಿದಂತೆ ಯಾರು ಸಹ ಪಕ್ಷಕ್ಕೆ ಅನಿವಾರ್ಯವಲ್ಲ ಎಂದು ಶಾಸಕ ಕೆ.ಎಂ.ಉದಯ್ ಮಂಗಳವಾರ ಹೇಳಿದರು.

ತಾಲೂಕಿನ ಬೋರಾಪುರ, ಕುದುರಗುಂಡಿ, ಅಜ್ಜಹಳ್ಳಿ, ಮಠದದೊಡ್ಡಿ, ಬೊಮ್ಮನದೊಡ್ಡಿ, ಕಳ್ಳಿಮೆಳೆದೊಡ್ಡಿ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಹೊಸ ನಾಯಕರನ್ನು ಹುಟ್ಟು ಹಾಕುವ ಸಾಮರ್ಥ್ಯ ಕಾಂಗ್ರೆಸ್ ಪಕ್ಷಕ್ಕಿದೆ. ಪಕ್ಷವನ್ನು ಕಟ್ಟುವಂತಹ ಪ್ರಬಲ ನಾಯಕರು ನಮ್ಮಲ್ಲಿದ್ದಾರೆ ಎಂದರು.

ಮಾಜಿ ಸಚಿವ ಕೆ.ಎನ್.ರಾಜಣ್ಣ ಸಹ ಉತ್ತಮ ನಾಯಕರೇ. ಪಕ್ಷ ಅವರನ್ನು ಸಚಿವ ಸ್ಥಾನದಿಂದ ಹೊರಗಿಟ್ಟಿರಬಹುದೇ ಹೊರತು ಅವರು ಪಕ್ಷ ಬಿಡದೇ ನಮ್ಮ ಜೊತೆಯೇ ಇರುತ್ತಾರೆ ಎಂದು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.

ಸಂಪುಟದಿಂದ ವಜಾಗೊಳಿಸುವಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಯಾವುದೇ ಪಾತ್ರವಿಲ್ಲ. ಆದರೂ ಅವರ ಮೇಲೆ ಗೂಬೆ ಕೂರಿಸಲು ರಾಜಣ್ಣ ಪ್ರಯತ್ನಿಸುತ್ತಿದ್ದಾರೆ. ಆದರೂ ರಾಜಣ್ಣ ಪಕ್ಷ ತೊರೆಯುವುದಿಲ್ಲ ಎಂಬ ವಿಶ್ವಾಸ ನನಗಿದೆ ಎಂದರು.ಕೆಲ ಮಠಾಧೀಶರು ಮಂತ್ರಿ ಸ್ಥಾನ ಕಳೆದುಕೊಂಡ ರಾಜಣ್ಣರ ನಿವಾಸಕ್ಕೆ ಭೇಟಿ ನೀಡಿ ಸಮಾಧಾನದ ಮಾತುಗಳನ್ನಾಡಿದ್ದಾರೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ರಾಜಣ್ಣಗೆ ಸಚಿವ ಸ್ಥಾನ ನೀಡುವಂತೆ ಬೆಂಬಲಿಗರು ಹೈಕಮಾಂಡ್ ಗಮನ ಸೆಳೆಯಲು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಅವರಿಗೆ ಸಚಿವ ಸ್ಥಾನ ನೀಡುವುದು ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಸ್ಪಷ್ಟಪಡಿಸಿದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ 60 ರಿಂದ 70 ಮಂದಿ ಶಾಸಕರೊಂದಿಗೆ ಬಿಜೆಪಿ ಸೇರಲಿದ್ದಾರೆ ಎಂಬ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಆರೋಪಕ್ಕೆ ತಿರುಗೇಟು ನೀಡಿದ ಉದಯ್, ಡಿಕೆಶಿ ಮನಸ್ಸು ಮಾಡಿದರೆ ಯಾವತ್ತೋ ಬಿಜೆಪಿ ಸೇರಬಹುದಿತ್ತು. ಈ ಹಿಂದೆ ಬಿಜೆಪಿಯಲ್ಲಿ ಸಾಕಷ್ಟು ಹುದ್ದೆಗಳ ಅವಕಾಶಗಳು ಇದ್ದವು. ಆದರೆ, ಆಗ ಬಿಜೆಪಿ ಸೇರದವರು ಈಗ ಸೇರ್ತಾರಾ ಎಂದರು.

ಈ ಹಿಂದೆ ಬಿಜೆಪಿ ನಾಯಕರು ಡಿಕೆಶಿ ಪಕ್ಷ ಸೇರ್ಪಡೆಗೆ ಹಲವು ಬಾರಿ ಚರ್ಚೆ ನಡೆಸಿ ಮಹತ್ವದ ಹುದ್ದೆಗಳ ಆಮಿಷ ನೀಡಿದ್ದರು. ಆದರೆ, ಅವರು ಅಂತಹ ನಿರ್ಧಾರ ತೆಗೆದುಕೊಳ್ಳಲಿಲ್ಲ. ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಕಟ್ಟಾಳು. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜೊತೆಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿ ಹೈಕಮಾಂಡ್ ಉತ್ತಮ ರೀತಿಯಲ್ಲಿ ನಡೆಸಿಕೊಳ್ಳುತ್ತಿದೆ ಎಂದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ 136 ಶಾಸಕರನ್ನು ಗೆಲ್ಲಿಸಿ ಕಾಂಗ್ರೆಸ್ ಸರ್ಕಾರವನ್ನು ರಚನೆ ಮಾಡಿದ್ದಾರೆ. ಅವರು ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷ ಸೇರುವ ಅನಿವಾರ್ಯತೆ ಇಲ್ಲ ಎಂದು ಯತ್ನಾಳ್ ಆರೋಪಕ್ಕೆ ತಿರುಗೇಟು ನೀಡಿದರು.

ಇದೇ ವೇಳೆ ಗ್ರಾಪಂ ಅಧ್ಯಕ್ಷ ಸತೀಶ್, ಸದಸ್ಯ ಸಿದ್ದಪ್ಪ, ಶ್ರೀಧರ್, ಜಯರಾಂ, ಧ್ರುವ ಕುಮಾರ್, ಮಧುಕುಮಾರ್, ನಾಗೇಶ್, ನಯನ, ಚಿಕ್ಕಣ್ಣ, ಎಇ ಮಂಜುನಾಥ್, ಗುತ್ತಿಗೆದಾರ ರವೀಂದ್ರ ಸೇರಿದಂತೆ ಮತ್ತಿತರರು ಇದ್ದರು.

PREV

Recommended Stories

ಮತ್ತೆ ಕೈ ಶಾಸಕ ವೀರೇಂದ್ರಪಪ್ಪಿಗೆ ಇ.ಡಿ. ದಾಳಿ ಬಿಸಿ!
ರಾಜಣ್ಣ ಅಲ್ಲ, ಬಾಲಕೃಷ್ಣ ಟೀಂ ಬಿಜೆಪಿಗೆ: ರಾಜೇಂದ್ರ