ಮೇಲ್ಮನೆಗೆ ಪತ್ರಕರ್ತರ ಕರೆತರಲು ಎಂಎಲ್‌ಸಿ ಆಫರ್‌!

Published : Mar 16, 2026, 11:50 AM IST
vidhan soudha

ಸಾರಾಂಶ

ವಿಧಾನ ಪರಿಷತ್ತಿನ ಮೊಗಸಾಲೆಯಲ್ಲಿ ಕುಳಿತಿದ್ದ ಯುವ ಪತ್ರಕರ್ತರನ್ನು ಕಂಡ ಮೇಲ್ಮನೆ ಸದಸ್ಯರೊಬ್ಬರು, ‘ಇತ್ತೀಚೆಗೆ ಕೌನ್ಸಿಲ್‌ಗೆ ಸೀನಿಯರ್‌ ಜರ್ನಲಿಸ್ಟ್‌ಗಳು ಬರೋದು ಕಡಿಮೆ ಆಗಿದೆ. ಮೊದಲು ಪೇಪರ್‌ಗಳಲ್ಲಿ ಮೇಲ್ಮನೆಯಲ್ಲಿ ಯಾವುದೇ ವಿಷಯ ಚರ್ಚೆ ಆದರೆ ಹೆಚ್ಚು ಆದ್ಯತೆ ಕೊಟ್ಟು ಪಬ್ಲಿಷ್‌ ಮಾಡ್ತಿದ್ರು. ಈಗ ಸೀನಿಯರ್ ಜರ್ನಲಿಸ್ಟ್‌ಗಳು ಬರ್ತಿಲ್ಲ

ಸೀನಿಯರ್‌ ಜರ್ನಲಿಸ್ಟ್‌ಗಳು ಬರುತ್ತಿಲ್ಲ, ಅದಕ್ಕೇ ಪತ್ರಿಕೆಗಳಲ್ಲಿ ಸುದ್ದಿ ಕಾಣ್ತಿಲ್ಲ.

-ಹೀಗೆಂದು ಅಳಲು ತೋಡಿಕೊಂಡಿದ್ದು ವಿಧಾನಮಂಡಲದ ಹಿರಿಯರ ಮನೆಯ ಸದಸ್ಯರು.

ವಿಧಾನ ಪರಿಷತ್ತಿನ ಮೊಗಸಾಲೆಯಲ್ಲಿ ಕುಳಿತಿದ್ದ ಯುವ ಪತ್ರಕರ್ತರನ್ನು ಕಂಡ ಮೇಲ್ಮನೆ ಸದಸ್ಯರೊಬ್ಬರು, ‘ಇತ್ತೀಚೆಗೆ ಕೌನ್ಸಿಲ್‌ಗೆ ಸೀನಿಯರ್‌ ಜರ್ನಲಿಸ್ಟ್‌ಗಳು ಬರೋದು ಕಡಿಮೆ ಆಗಿದೆ. ಮೊದಲು ಪೇಪರ್‌ಗಳಲ್ಲಿ ಮೇಲ್ಮನೆಯಲ್ಲಿ ಯಾವುದೇ ವಿಷಯ ಚರ್ಚೆ ಆದರೆ ಹೆಚ್ಚು ಆದ್ಯತೆ ಕೊಟ್ಟು ಪಬ್ಲಿಷ್‌ ಮಾಡ್ತಿದ್ರು. ಈಗ ಸೀನಿಯರ್ ಜರ್ನಲಿಸ್ಟ್‌ಗಳು ಬರ್ತಿಲ್ಲ, ಸುದ್ದಿಗಳು ಕಾಣ್ತಿಲ್ಲ’ ಅಂದರು.

ಅದಕ್ಕೆ ಅವರ ಪಕ್ಕದಲ್ಲೇ ಕುಳಿತಿದ್ದ ಮತ್ತೊಬ್ಬ ಸದಸ್ಯ, ‘ಏ... ಇವಾಗ ನಾವು ಯಾವುದು ಇಂಪಾರ್ಟೆಂಟ್‌ ಅನ್ಕೊಂಡು ಚರ್ಚೆ ಮಾಡ್ತೇವೋ, ಆ ವಿಚಾರದ ಸುದ್ದಿ ಎರಡು ಲೈನ್‌ ಕೂಡ ಬರಲ್ಲ’ ಎನ್ನುತ್ತಾ ನೊಂದುಕೊಂಡರು.

ಮೊದಲು ವಿಷಯ ಪ್ರಸ್ತಾಪಿಸಿದ ಸದಸ್ಯ, ಸೀನಿಯರ್‌ ಜರ್ನಲಿಸ್ಟ್‌ಗಳು ಸದನಕ್ಕೆ ಬಂದ್ರೆ ಯಾವುದು ಇಂಪಾರ್ಟೆಂಟ್‌, ಯಾವುದು ಇಂಪಾರ್ಟೆಂಟ್‌ ಅಲ್ಲ ಅನ್ನೋದು ಗೊತ್ತಾಗಿ ನ್ಯೂಸ್‌ ಮಾಡ್ತಿದ್ರು. ಜ್ಯೂನಿಯರ್‌ಗಳಿಗೆ ಅದು ಕಷ್ಟ ಅಂತ ಬೇಸರ ಹೊರ ಹಾಕಿದರು.

ಮೇಲ್ಮನೆಯಲ್ಲಿ ನಡೆಯುವ ಸುದ್ದಿಗಳೆಲ್ಲ ನ್ಯೂಸ್‌ ಪೇಪರ್‌ನಲ್ಲಿ ಬರಬೇಕೆಂದರೆ ಒಂದೇ ಉಪಾಯ ಇರೋದು.

ಅದೇನೆಂದರೆ, ಅತಿಹೆಚ್ಚು ಮೇಲ್ಮನೆಯ ಕಲಾಪಗಳಿಗೆ ಯಾವ ಸೀನಿಯರ್‌ ಜರ್ನಲಿಸ್ಟ್‌ ಅಟೆಂಡ್‌ ಆಗುತ್ತಾರೋ ಅವರನ್ನು ಎಂಎಲ್‌ಸಿ ಮಾಡ್ತೇವೆ ಅಂತ ಘೋಷಣೆ ಮಾಡಿದ್ರೆ ಸಾಕು. ಜೂನಿಯರ್‌ಗಳು ಕೂರೋಕೆ ಜಾಗನೇ ಇಲ್ದಂಗೆ ಸೀನಿಯರ್‌ಗಳು ಬಂದಿರ್ತಾರೆ ಎನ್ನುತ್ತಿದ್ದಂತೆ ಜರ್ನಲಿಸ್ಟ್‌ಗಳು ಸೇರಿದಂತೆ ಎಲ್ಲರ ಮೊಗದಲ್ಲಿ ನಗೆ ಉಕ್ಕಿತು.

ಸಾರ್‌, ನಾನು ನಿಮ್‌ ವೋಟರ್!

ಜನಸಾಮಾನ್ಯರು, ‘ಚುನಾವಣೆಯಲ್ಲಿ ನಾನು ನಿಮಗೆ ಮತ ಹಾಕಿದ್ದೇನೆ. ರಸ್ತೆ, ಕುಡಿಯುವ ನೀರು, ಚರಂಡಿ, ಕೊಳವೆ ಬಾವಿ, ಆಶ್ರಯ ಮನೆ ಇತ್ಯಾದಿ ಮಾಡಿಕೊಡಿ ಸಾರ್‌’ ಎಂದು ಕೇಳುವುದು ಸರ್ವೇ ಸಾಮಾನ್ಯ.

ಆದರೆ, ಶಾಸಕರೇ ಈ ಮಾದರಿಯಲ್ಲಿ ಸಚಿವರನ್ನು ಅನುದಾನ ಕೇಳಿದರೆ ಹೇಗೆ?

ಹೌದು, ಮಾ.13ರಂದು ವಿಧಾನಸಭೆ ಅಧಿವೇಶನದಲ್ಲಿ ಇಂತಹ ಪ್ರಸಂಗವೂ ನಡೆಯಿತು. ಉಡುಪಿ ಜಿಲ್ಲೆ ಕಾಪು ವಿಧಾನ ಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಮೊದಲ ಬಾರಿಗೆ ಗೆದ್ದು ಶಾಸಕರಾಗಿರುವ ಗುರ್ಮೆ ಸುರೇಶ್‌ ಶೆಟ್ಟಿ ಅವರು ಮುಜರಾಯಿ ಸಚಿವ ಆರ್.ರಾಮಲಿಂಗಾರೆಡ್ಡಿ ಅವರನ್ನು ಇದೇ ಪರಿಯಲ್ಲಿ ಅನುದಾನ ಕೇಳಿದರು.

ಬಜೆಟ್‌ ಮೇಲಿನ ಚರ್ಚೆ ವೇಳೆ ಗುರ್ಮೆ ಸುರೇಶ್‌ ಶೆಟ್ಟಿ ಅವರು ತುಳುನಾಡಿನ ಭೂತಾರಾಧನೆ, ದೈವರಾಧನೆ, ದೇವಸ್ಥಾನಗಳ ಬಗ್ಗೆ ಮಾತನಾಡುವಾಗ ಈ ವಿಚಾರ ಪ್ರಸ್ತಾಪಿಸಿದರು.

‘ಸಾರ್‌, ನನ್ನ ಬದುಕಿನ 15 ವರ್ಷಗಳನ್ನು ಬೆಂಗಳೂರಿನ ವಿಲ್ಸನ್‌ ಗಾರ್ಡನ್‌ನಲ್ಲಿ ಕಳೆದಿದ್ದೇನೆ. ಒಂದು ಸಮಯದಲ್ಲಿ ನಾನು ನಿಮ್ಮ ಮತದಾರನಾಗಿದ್ದೆ. ದಯವಿಟ್ಟು ನನ್ನ ಕ್ಷೇತ್ರದ ಮಾರಿಗುಡಿ ದೇವಸ್ಥಾನಕ್ಕೆ ಅನುದಾನ ಕೊಡಿ ಸಾರ್‌. ದೇವಸ್ಥಾನ ಅಭಿವೃದ್ಧಿಗೆ ಸಾರ್ವಜನಿಕರಿಂದ 70 ಕೋಟಿ ರು. ಸಂಗ್ರಹಿಸಿದ್ದೇವೆ. ಸ್ವಲ್ಪ ಸಾಲವಾಗಿದೆ. ನೀವು ಮನಸು ಮಾಡಿ ಅನುದಾನ ಕೊಟ್ಟರೆ ನಾವು ಜನರ ಎದುರು ಮುಖ ಎತ್ತಿಕೊಂಡು ಓಡಾಡಬಹುದು. ಮಾರಿಗುಡಿ ಸಿದ್ಧಿ ಕ್ಷೇತ್ರವಾಗಿದ್ದು, ನಿಮಗೆ ಪುಣ್ಯ ಬರುತ್ತದೆ’ ಎಂದು ಮನವಿ ಮಾಡಿದರು.

‘ಈ ಹಿಂದೆ ಸಹ ದೇವಸ್ಥಾನಗಳ ಬೇಡಿಕೆಗೆ ನೀವು ಪೂರಕವಾಗಿ ಸ್ಪಂದಿಸಿದ್ದೀರಿ. ಹಲವು ಬಾರಿ ನಾನು ನಿಮನ್ನು ಭೇಟಿಯಾಗಿದ್ದೇನೆ. ಮಾರಿಗುಡಿ ದೇವಸ್ಥಾನದ ವಿಚಾರದಲ್ಲಿ ಸ್ಪಂಧಿಸುವ ಭರವಸೆ ನೀಡಿದ್ದೀರಿ. ಅದರಂತೆ ಅನುದಾನ ಕೊಟ್ಟರೆ ಉಪಕಾರವಾಗಲಿದೆ ಸಾರ್‌’ ಎಂದು ವಿನಮ್ರವಾಗಿ ಹೇಳಿದರು. ಶಾಸಕರ ಈ ಮನವಿಗೆ ಸಚಿವ ರಾಮಲಿಂಗಾ ರೆಡ್ಡಿ ಪರಿಶೀಲಿಸುವುದಾಗಿ ತಲೆಯಾಡಿಸಿದರು.

-ಸಂಪತ್‌ ತರೀಕೆರೆ

-ಮೋಹನ್‌ ಹಂಡ್ರಂಗಿ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಬಂಗಾಳಕ್ಕೆ ದೀದಿ, ತಮಿಳ್ನಾಡಿಗೆ ಅಣ್ಣಾ, ಅಸ್ಸಾಂಗೆ ಮಾಮಾ, ಕೇರಳಕ್ಕೆ ದಾದಾ!
ಬಾಗಲಕೋಟೆ: ಮತ್ತೆ ಚರಂತಿಮಠ, ಮೇಟಿ ಕುಟುಂಬ ಮಧ್ಯೆ ಫೈಟ್‌