- ಇಂದಿರಾ ಜನ್ಮದಿನ ಕಾರ್‍ಯಕ್ರಮದಲ್ಲಿ ಡಿಕೆ ಮಾರ್ಮಿಕ ನುಡಿ
---ಕನ್ನಡಪ್ರಭ ವಾರ್ತೆ ಬೆಂಗಳೂರು
ಜಗತ್ತಿನಲ್ಲಿ ಎರಡು ರೀತಿಯ ಜನ ಇದ್ದಾರೆ. ಒಬ್ಬ ಕೆಲಸ ಮಾಡುವವನು, ಮತ್ತೊಬ್ಬ ಅದರ ಲಾಭ ಪಡೆದುಕೊಳ್ಳುವವನು. ನೀವು ಮೊದಲ ಗುಂಪಿಗೆ ಸೇರಿ ಎಂದು ಇಂದಿರಾ ಗಾಂಧಿ ಹೇಳಿದ್ದರು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾರ್ಮಿಕವಾಗಿ ತಿಳಿಸಿದ್ದಾರೆ.ಬುಧವಾರ ಕೆಪಿಸಿಸಿ ಕಚೇರಿಯ ಭಾರತ ಜೋಡೋ ಸಭಾಂಗಣದಲ್ಲಿ ನಡೆದ ಇಂದಿರಾ ಗಾಂಧಿ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಧ್ಯಕ್ಷ ಹುದ್ದೆ ಬಿಡಲು ನಿರ್ಧರಿಸಿದ್ದೆ;
ನಾನು ಈ ಹುದ್ದೆಯಲ್ಲಿ ಶಾಶ್ವತವಾಗಿ ಇರಲು ಸಾಧ್ಯವಿಲ್ಲ. ಈಗಾಗಲೇ ಐದೂವರೆ ವರ್ಷವಾಗಿದೆ, ಮಾರ್ಚ್ ಬಂದರೆ ಆರು ವರ್ಷ. ಬೇರೆಯವರಿಗೆ ಅವಕಾಶ ನೀಡಬೇಕು. ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ಇನ್ನು ಸ್ವಲ್ಪ ದಿನ ಮುಂದುವರಿಯಲು ಸೂಚಿಸಿದ್ದರಿಂದ ರಾಜ್ಯಾಧ್ಯಕ್ಷನಾಗಿ ಕರ್ತವ್ಯ ನಿಭಾಯಿಸುತ್ತಿದ್ದೇನೆ ಎಂದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ಪಕ್ಷ ಏನು ಹೇಳುತ್ತದೆಯೋ ಅದನ್ನು ನಾನು ಪಾಲಿಸುತ್ತೇನೆ. ಪಕ್ಷದ ಅಧ್ಯಕ್ಷರಾದವರು ಹೇಗೆ ಕೆಲಸ ಮಾಡಬೇಕೆಂಬುದಕ್ಕೆ ನಾನು ಉದಾಹರಣೆಯಾಗಬೇಕು, ಪಕ್ಷದಲ್ಲಿ ನಮ್ಮ ಗುರುತು ಬಿಟ್ಟುಹೋಗಬೇಕು. ನಾನು ಈ ವಿಚಾರವಾಗಿ ಮಾತನಾಡುತ್ತಿದ್ದೇನೆ ಹೊರತು, ತ್ಯಾಗ ಅಥವಾ ಓಡಿ ಹೋಗುವ ಬಗ್ಗೆ ಮಾತನಾಡುತ್ತಿಲ್ಲ. ನಾನು ಓಡಿ ಹೋಗುವ ಮನುಷ್ಯನಲ್ಲ. ಗಾಂಧಿ ಕುಟುಂಬ ಹಾಗೂ ಕಾಂಗ್ರೆಸ್ ಅಧ್ಯಕ್ಷರು ಎಲ್ಲಿಯವರೆಗೂ ಜವಾಬ್ದಾರಿ ನಿಭಾಯಿಸಲು ಸೂಚಿಸುತ್ತಾರೋ ಅಲ್ಲಿಯವರೆಗೂ ನಾನು ಕರ್ತವ್ಯ ನಿಭಾಯಿಸುತ್ತೇನೆ ಎಂದರು.
ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತದೆ. ನೀವು ನಿಮ್ಮ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ಎಲ್ಲಿ ಶ್ರಮ ಇದೆಯೋ ಅಲ್ಲಿ ಫಲವಿದೆ. ಅನೇಕ ನಿಗಮ-ಮಂಡಳಿ ನಿರ್ದೇಶಕರ ಪಟ್ಟಿ ಸಿದ್ಧವಾಗಿದ್ದು, ಮರುಪರಿಶೀಲನೆ ಮಾಡಿಸಿ, ಬ್ಲಾಕ್ ಅಧ್ಯಕ್ಷರಿಗೆ ಅಧಿಕಾರ ಕೊಡಬೇಕಾಗಿದೆ. ಪಕ್ಷದ ಸದಸ್ಯತ್ವ ನೋಂದಣಿಯಲ್ಲಿ ಹೆಚ್ಚು ಸದಸ್ಯತ್ವ ಮಾಡಿಸಿದ ಹೊಳಲ್ಕೆರೆಯ ಸವಿತಾ ಎಂಬಾಕೆಗೆ ಅಧ್ಯಕ್ಷ ಸ್ಥಾನ ಕೊಡಿಸಿದ್ದೆ. ಆಕೆ ಅಧಿಕಾರವನ್ನು ತನ್ನ ಗಂಡನಿಗೆ ಬಿಟ್ಟುಕೊಟ್ಟಿದ್ದಾಳೆ. ಅದಕ್ಕಾಗಿ ಎನ್ಎಸ್‌ಯುಐ, ಯುವ ಕಾಂಗ್ರೆಸ್ ಹಾಗೂ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ಮಾಡಿದವರಿಗೆ ಅವಕಾಶ ನೀಡಿದ್ದೇವೆ. ಕಾರ್ಯಕರ್ತರಿಗೆ ಅಧಿಕಾರ ನೀಡಿದ್ದೇವೆ. ಗ್ಯಾರಂಟಿ ಸಮಿತಿಗಳ ಮೂಲಕ ಪ್ರತಿ ಸಮಿತಿಯಲ್ಲಿ 15 ಕಾರ್ಯಕರ್ತರಿಗೆ ಅಧಿಕಾರ ನೀಡಿದ್ದೇವೆ. ಇಡೀ ದೇಶದಲ್ಲಿ ಕಾರ್ಯಕರ್ತರಿಗೆ ಈ ರೀತಿ ಅಧಿಕಾರ ನೀಡಿರುವುದು ನಮ್ಮಲ್ಲಿ ಮಾತ್ರ ಎಂದು ಹೇಳಿದರು.