ಕಾಂಗ್ರೆಸ್‌ನಿಂದ ಹಣ ಪಡೆದು ಪ್ರತಿಭಟನೆ ಹೇಳಿಕೆ ನರೇಂದ್ರಸ್ವಾಮಿ, ಅನ್ನದಾನಿ ಬಹಿರಂಗ ಕ್ಷಮೆಯಾಚನೆಗೆ ಆಗ್ರಹ

KannadaprabhaNewsNetwork |  
Published : Jan 16, 2025, 12:48 AM ISTUpdated : Jan 16, 2025, 04:13 AM IST
PM Narendra Swamy

ಸಾರಾಂಶ

ದಲಿತ ಸಂಘಟನೆಗಳ ಪ್ರತಿಭಟನೆ ಕಾಂಗ್ರೆಸ್ ಪ್ರೇರಿತ, ಕಾಂಗ್ರೆಸ್‌ನಿಂದ ಹಣ ಪಡೆದು ಪ್ರತಿಭಟನೆ ನಡೆಸಲಾಗುತ್ತಿದೆ ಎಂಬ ಮಾಜಿ ಶಾಸಕ ಕೆ.ಅನ್ನದಾನಿ ಅವರ ಹೇಳಿಕೆಯನ್ನು ದಲಿತ, ರೈತ, ಅಲ್ಪಸಂಖ್ಯಾತ, ಕಾರ್ಮಿಕ ಹಿಂದುಳಿದ ವರ್ಗಗಳ ಮಹಾ ಒಕ್ಕೂಟ ಖಂಡಿಸುತ್ತದೆ.

 ಮಂಡ್ಯ : ದಲಿತ ಸಂಘಟನೆಗಳ ಪ್ರತಿಭಟನೆ ಕಾಂಗ್ರೆಸ್ ಪ್ರೇರಿತ, ಕಾಂಗ್ರೆಸ್‌ನಿಂದ ಹಣ ಪಡೆದು ಪ್ರತಿಭಟನೆ ನಡೆಸಲಾಗುತ್ತಿದೆ ಎಂಬ ಮಾಜಿ ಶಾಸಕ ಕೆ.ಅನ್ನದಾನಿ ಅವರ ಹೇಳಿಕೆಯನ್ನು ದಲಿತ, ರೈತ, ಅಲ್ಪಸಂಖ್ಯಾತ, ಕಾರ್ಮಿಕ ಹಿಂದುಳಿದ ವರ್ಗಗಳ ಮಹಾ ಒಕ್ಕೂಟ ಖಂಡಿಸುತ್ತದೆ ಎಂದು ಸಮಾನ ಮನಸ್ಕರ ವೇದಿಕೆಯ ಸಂಚಾಲಕ ಲಕ್ಷ್ಮಣ್ ಚೀರನಹಳ್ಳಿ ತಿಳಿಸಿದರು.

ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರು ಅಂಬೇಡ್ಕರ್ ಕುರಿತು ಆಡಿದ ಅಪಮಾನದ ಮಾತುಗಳ ವಿರುದ್ಧ ದಲಿತ ಸಂಘಟನೆಗಳು ನಡೆಸಿದ ಪ್ರತಿಭಟನೆಯ ಬಗ್ಗೆ ಈ ರೀತಿ ಮಾತನಾಡಿರುವುದನ್ನು ಬುಧವಾರ ಸುದ್ದಿಗೋಷ್ಠಿಯಲ್ಲಿ ಖಂಡಿಸಿದರು.

ಸಾಹಿತ್ಯ ಸಮ್ಮೇಳನದಂತಹ ಸಾರ್ವಜನಿಕ ಕಾರ್ಯಕ್ರಮದಲ್ಲಿ ಬಹುಜನರ ಆಹಾರದ ಹಕ್ಕನ್ನು ನಿರಾಕರಿಸುವ ಅನ್ನದಾನಿ ಯಾವ ಮನುವಾದಿಗೂ ಕಡಿಮೆಯಿಲ್ಲ. ಅಧಿಕಾರಕ್ಕಾಗಿ ಆತ ಯಾರ ಮನೆ ಬಾಗಿಲಾದರೂ ಕಾಯಲಿ. ಆದರೆ, ದಲಿತರ ಸ್ವಾಭಿಮಾನಿ ಹೋರಾಟವನ್ನು ಅಪಮಾನಗೊಳಿಸುವ ಹೀನ ಪ್ರಯತ್ನ ನಿಲ್ಲಿಸಬೇಕು. ತಮ್ಮಹೇಳಿಕೆಗೆ ಸಾಕ್ಷ್ಯ ಒದಗಿಸಬೇಕು. ಇಲ್ಲವೇ ಜಿಲ್ಲೆಯ ದಲಿತ ಸಮುದಾಯವನ್ನು ಬೇಷರತ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಸೋಮನಹಳ್ಳಿ ಅಂದಾನಿ ಮಾತನಾಡಿ, ಮಳವಳ್ಳಿ ಕ್ಷೇತ್ರದ ಶಾಸಕ ನರೇಂದ್ರ ಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಓಲೈಸುವ ಭರಾಟೆಯಲ್ಲಿ ಸಿದ್ದರಾಮಯ್ಯನವರ ಸಿದ್ಧಾಂತವೆ ಈ ರಾಜ್ಯದಲ್ಲಿ ಅಂತಿಮ ಎಂದಿದ್ದಾರೆ. ಆದರೆ, ರಾಜ್ಯ ಮಾತ್ರವಲ್ಲದೆ ದೇಶದ ಒಕ್ಕೂಟ ವ್ಯವಸ್ಥೆಗೆ ಸಂವಿಧಾನ ಕೊಟ್ಟ ಅಂಬೇಡ್ಕರ್ ಸಿದ್ಧಾಂತ ಗೌರವಾರ್ಹವಾಗಿದೆ. ಆದರೆ, ಅಧಿಕಾರದ ಹಪಾಹಪಿಯಿಂದ ಶಾಸಕರು ಇಂತಹ ಬಾಲಬಡುಕ ಹೇಳಿಕೆ ಕೊಡಬಾರದು. ಅದೇ ರೀತಿ ತಮ್ಮನ್ನು ಅಧಿಕಾರಕ್ಕೇರಿಸಿದ ಸಿದ್ಧಾಂತಕ್ಕೆ ನಿಷ್ಠೆಯಿಂದ ಇರಬೇಕು ಎಂದು ಆಗ್ರಹಿಸಿದರು.

ಮಾಜಿ ಶಾಸಕ ಅನ್ನದಾನಿ ಮತ್ತು ಹಾಲಿ ಶಾಸಕ ನರೇಂದ್ರ ಸ್ವಾಮಿ ಬಹಿರಂಗವಾಗಿ ಕ್ಷಮೆಯಾಚಿಸದಿದ್ದರೆ ಅವರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು

ಕರ್ನಾಟಕ ಸಮ ಸಮಾಜ ಸಂಘಟನೆಯ ನರಸಿಂಹಮೂರ್ತಿ, ಅಂಬೇಡ್ಕರ್ ವಾರಿಯರ್ಸ್ ಸಂಘಟನೆ ಅಧ್ಯಕ್ಷ ಗಂಗರಾಜು, ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎಂ.ವಿ.ಕೃಷ್ಣ, ಸಂವಿಧಾನ ಬಳಗದ ಅನಿಲ್ ಕಿರುಗಾವಲು ಇತರರು ಗೋಷ್ಠಿಯಲ್ಲಿದ್ದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ತಂತ್ರಜ್ಞಾನದ ಬದಲಾವಣೆಗೆ ತಕ್ಕಂತೆ ‘ಸುಸ್ಥಿರ ಡೇಟಾ ಸೆಂಟರ್‌’
ಕಾರಂತ ಬಡಾವಣೆ ರೈತರಿಗೆ ನಿವೇಶನ ನೀಡಲು ಕ್ರಮ: ಡಿ.ಕೆ.ಶಿವಕುಮಾರ್‌ ಭರವಸೆ