-ಶಿಕ್ಷಣ ಸಚಿವರ ವಿರುದ್ಧ ಬುಧವಾರವೂ ವಾಗ್ದಾಳಿ
-ಸತ್ಯ ಹೇಳಿದ್ದಕ್ಕೆ ಶಿಕ್ಷೆ ಕೊಡೋದಾದ್ರೆ ಕೊಡಿ: ಕಿಡಿನವದೆಹಲಿ: ನೂತನ ಶಿಕ್ಷಣ ಸಚಿವ ಪ್ರಹ್ಲಾದ ಜೋಶಿ ವಿರುದ್ಧ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಬುಧವಾರವೂ ವಾಗ್ದಾಳಿ ಮುಂದುವರಿಸಿದ್ದು, ‘ಜೋಶಿ ಮಂಗಳೂರಿನ ಪಬ್‌ನಲ್ಲಿ ಮಹಿಳೆಯರ ಮೇಲಿನ ಹಲ್ಲೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿಯನ್ನು ಬಿಜೆಪಿಗೆ ಸೇರಿಸಿಕೊಂಡವರು’ ಎಂದು ಆಕ್ರೋಶ ಹೊರಹಾಕಿದ್ದಾರೆ.ಬಿಲ್ಕಿಸ್ ಬಾನೋ ಅತ್ಯಾಚಾರ ಆರೋಪಿಗಳ ಅವಧಿಪೂರ್ವ ಬಿಡುಗಡೆಯನ್ನು ಜೋಶಿ ಸಮರ್ಥಿಸಿಕೊಂಡಿದ್ದರು. ಇದನ್ನು ಉಲ್ಲೇಖಿಸಿ ಮಂಗಳವಾರ ಪ್ರಿಯಾಂಕಾ ವಾಗ್ದಾಳಿ ನಡೆಸಿದ್ದರು. ಬುಧವಾರ ಈ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾನು ಸತ್ಯವನ್ನೇ ನುಡಿದಿದ್ದೇನೆ. ಅದಕ್ಕಾಗಿ ಶಿಕ್ಷೆ ವಿಧಿಸಲು ಬಯಸಿದರೆ, ಸರಿ, ನಾನು ಸತ್ಯವನ್ನೇ ಹೇಳುತ್ತೇನೆ. ಇದು ಕೇವಲ ಈ ಒಂದು ಘಟನೆಗೆ ಸೀಮಿತವಾಗಿಲ್ಲ. ಮಂಗಳೂರಿನ ಪಬ್‌ನಲ್ಲಿ ಮಹಿಳೆಯರ ಮೇಲಿನ ಹಲ್ಲೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿಯನ್ನು ಬಿಜೆಪಿಗೆ ಸೇರಿಸಿಕೊಂಡವರು ಯಾರು? ಪ್ರಹ್ಲಾದ ಜೋಶಿಯವರು’ ಎಂದು ಆರೋಪಿಸಿದರು.‘ಆ ವ್ಯಕ್ತಿಯನ್ನು 5 ಗಂಟೆಗಳ ನಂತರ ಪಕ್ಷದಿಂದ ಉಚ್ಚಾಟಿಸಲಾಯಿತು. ಆದರೆ ಆತ ಪಕ್ಷಕ್ಕೆ ಸೇರ್ಪಡೆಗೊಂಡಾಗ ತೆಗೆದ ಛಾಯಾಚಿತ್ರವಂತೂ ಇದೆ. ಇದು ಕೇವಲ ಒಂದು ಘಟನೆಯಲ್ಲ, ಬದಲಿಗೆ ಮಹಿಳೆಯರ ಕುರಿತಾದ ಜೋಶಿಯವರ ಮನಃಸ್ಥಿತಿಯನ್ನು ಇದು ಪ್ರತಿಬಿಂಬಿಸುತ್ತದೆ’ ಎಂದು ಕಿಡಿ ಕಾರಿದರು.