ಧಾರವಾಡ:
ಅಭಿರುಚಿ ಹೊಂದಿದ ಕ್ರಿಯಾಶೀಲ ಸಂಪನ್ಮೂಲಗಳನ್ನು ಬಳಸಿಕೊಂಡು ಜನರಿಗೆ ಅರ್ಥವಾಗುವ ಭಾಷೆಯಲ್ಲಿಯೇ ನಾಟಕ ಪ್ರದರ್ಶಿಸುವ ಮೂಲಕ ರಂಗಭೂಮಿಗೆ ಹೊಸ ಆಯಾಮ ನೀಡುವಲ್ಲಿ ಜಯತೀರ್ಥ ಜೋಶಿ ಪ್ರಮುಖರು ಎಂದು ನಾಟಕಕಾರ ಡಾ. ಪ್ರಕಾಶ ಗರುಡ ಹೇಳಿದರು.ರಂಗಾಯಣ ಹಾಗೂ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಜಂಟಿಯಾಗಿ ಸುವರ್ಣ ಸಾಂಸ್ಕೃತಿಕ ಸಮುಚ್ಚಯದಲ್ಲಿ ಜಯತೀರ್ಥ ಜೋಶಿ ಸ್ಮರಣೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಅವರು, ಜೋಶಿ ರಂಗಭೂಮಿ ಬಗ್ಗೆ ಅಪಾರ ಕಾಳಜಿ ಹೊಂದಿ, ಸಂಸ್ಕಾರ ಮೈಗೂಡಿಸಿಕೊಂಡಿದ್ದರು. ರಂಗಾಯಣದಲ್ಲಿ ಉಪನಿರ್ದೇಶಕರಾಗಿ ಸೇವೆ ಸಲ್ಲಿಸಿದ ಅವರು ಹಲವಾರು ರಂಗಪ್ರಯೋಗಗಳನ್ನು ಯಶಸ್ವಿಯಾಗಿ ಮಾಡಿದ್ದಾರೆ ಎಂದರು.
ರಂಗಾಯಣದ ನಿರ್ದೇಶಕ ಝಾಕೀರ ನದಾಫ ಮಾತನಾಡಿ, ನಾಟಕ ಕಟ್ಟುವಲ್ಲಿ ಜಯತೀರ್ಥರ ಪಾತ್ರ ಬಹುದೊಡ್ಡದು. ಒಂದು ನಾಟಕ ಸಿದ್ಧವಾಗಿ ಅದು ಒಂದೆರಡು ಪ್ರದರ್ಶನ ಕಂಡರೆ ಸಾಲದು. ಎಲ್ಲ ಪ್ರೇಕ್ಷಕರನ್ನು ತಲುಪುವಂತೆ ನಾಟಕ ಪ್ರದರ್ಶನಗೊಳ್ಳಬೇಕು ಎಂಬುದು ಅವರ ನಿಲುವಾಗಿತ್ತು. ಸವದತ್ತಿಯ ಐತಿಹಾಸಿಕ ಕೋಟೆಯನ್ನೇ ರಂಗಸ್ಥಳವನ್ನಾಗಿ ಮಾಡಿ ಗುಲಾಮನ ಸ್ವಾತಂತ್ರ್ಯ ನಾಟಕವನ್ನು ಮಾಡುವ ಮೂಲಕ ಕೋಟೆಗೆ ಹೊಸತನ ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಸಂಚಾಲಕ ಸಮೀರ ಜೋಶಿ, ಆಡಳಿತಾಧಿಕಾರಿ ಶಶಿಕಲಾ ಹುಡೇದ, ಅಕ್ಕಮ್ಮ ದೇವರಮನಿ ಇದ್ದರು. ನಂತರ ಕುಮಾರ ಲಾಲ್‌ಸಾಬ್ ಹಾಗೂ ಲಕ್ಷ್ಣ್ಮಣ ಪೀರಗಾರ ರಚಿಸಿ, ರಾಘವ ಕಮ್ಮಾರ ಸಂಗೀತ ಸಂಯೋಜಿಸಿದ “ಮರಳಿ ಮಹಾತ್ಮನೆಡೆಗೆ” ನಾಟಕವನ್ನು ರಂಗಾಯಣ ರೆಪರ್ಟರಿ ಕಲಾವಿದರು ಪ್ರಸ್ತುತಪಡಿಸಿದರು.