ಮೋದಿ ಪಿಕ್‌ಪಾಕೆಟರ್‌ ಎಂದ ರಾಹುಲ್‌ಗೆ ಆಯೋಗ ಚಾಟಿ

KannadaprabhaNewsNetwork | Updated : Mar 07 2024, 08:13 AM IST

ಸಾರಾಂಶ

ಭವಿಷ್ಯದಲ್ಲಿ ಸಾರ್ವಜನಿಕವಾಗಿ ಮಾತನಾಡುವಾಗ ಎಚ್ಚರಿಕೆ ವಹಿಸಿ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಕೇಂದ್ರ ಚುನಾವಣಾ ಆಯೋಗ ಎಚ್ಚರಿಕೆ ಸ್ವರೂಪದ ಸಲಹೆ ನೀಡಿದೆ.

ನವದೆಹಲಿ: ಭವಿಷ್ಯದಲ್ಲಿ ಸಾರ್ವಜನಿಕವಾಗಿ ಮಾತನಾಡುವಾಗ ಎಚ್ಚರಿಕೆ ವಹಿಸಿ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಕೇಂದ್ರ ಚುನಾವಣಾ ಆಯೋಗ ಎಚ್ಚರಿಕೆ ಸ್ವರೂಪದ ಸಲಹೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಕೀಳು ಹೇಳಿಕೆ ನೀಡಿದ ಪ್ರಕರಣದಲ್ಲಿ ಆಯೋಗ ಈ ಸಲಹೆ ನೀಡಿದೆ.

2023ರ ನ.23 ರಂದು ರಾಜಸ್ಥಾನದ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ ಮಾತನಾಡಿದ್ದ ರಾಹುಲ್‌ ಗಾಂಧಿ, ಪ್ರಧಾನಿ ಮೋದಿ ಅವರನ್ನು ಅಪಶಕುನ, ಪಿಕ್‌ ಪಾಕೆಟರ್‌ ಎಂದೆಲ್ಲಾ ಟೀಕಿಸಿದ್ದರು. 

ಈ ಬಗ್ಗೆ ಆಯೋಗಕ್ಕೆ ಬಿಜೆಪಿ ದೂರು ನೀಡಿದರೂ ಅದು ಕ್ರಮ ಕೈಗೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಕಾನೂನಿನ ಅನ್ವಯ ಕ್ರಮ ಕೈಗೊಳ್ಳುವಂತೆ ಆಯೋಗಕ್ಕೆ ಸೂಚಿಸಿತ್ತು.

ಆ ಸೂಚನೆ ಅನ್ವಯ ಇದೀಗ ರಾಹುಲ್‌ಗೆ ಎಚ್ಚರಿಕೆ ನೀಡಿರುವ ಆಯೋಗ, ಭವಿಷ್ಯದಲ್ಲಿ ಸಾರ್ವಜನಿಕವಾಗಿ ಮಾತನಾಡುವಾಗ ಹೆಚ್ಚು ಜಾಗರೂಕ ಮತ್ತು ಎಚ್ಚರದಿಂದ ಇರುವಂತೆ ಸೂಚಿಸಿದೆ. 

ಅಲ್ಲದೆ ‘ಚುನಾವಣಾ ಪ್ರಚಾರದ ವೇಳೆ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮತ್ತು ಸ್ಟಾರ್‌ ಪ್ರಚಾರಕರು ಯಾವುದೇ ರೀತಿಯಲ್ಲಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದಲ್ಲಿ ಕಠಿಣ ಕ್ರಮವನ್ನು ಎದುರಿಸಬೇಕಾಗುತ್ತದೆ’ ಎಂದು ತಾನು ಮಾ.1ರಂದು ಹೊರಡಿಸಿರುವ ಮಾರ್ಗಸೂಚಿಯನ್ನು ಗಮನದಲ್ಲಿಟ್ಟುಕೊಳ್ಳುವಂತೆಯೂ ಹೇಳಿದೆ.

Share this article