ಮೈಸೂರಲ್ಲಿ ಸಮಾವೇಶ, ಮಂಗಳೂರಲ್ಲಿ 2.7 ಕಿ.ಮೀ. ರೋಡ್‌ ಶೋ । ಇಂದು ಮೋದಿ ಅಬ್ಬರ

KannadaprabhaNewsNetwork |  
Published : Apr 14, 2024, 01:51 AM ISTUpdated : Apr 14, 2024, 05:26 AM IST
Narendra Modi

ಸಾರಾಂಶ

 ಪ್ರಧಾನಿ ನರೇಂದ್ರ ಮೋದಿ ಅವರು ಇದೀಗ ಎರಡನೇ ಬಾರಿ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಮೈಸೂರು ಹಾಗೂ ಮಂಗಳೂರಲ್ಲಿ ಭಾನುವಾರ ಸಮಾವೇಶ ಹಾಗೂ ರೋಡ್‌ಶೋ ನಡೆಸಿ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸಲಿದ್ದಾರೆ.

 ಮಂಗಳೂರು :  ಲೋಕಸಭಾ ಚುನಾವಣೆ ಘೋಷಣೆ ಬಳಿಕ ಶಿವಮೊಗ್ಗದಲ್ಲಿ ಪ್ರಚಾರ ಸಭೆ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಇದೀಗ ಎರಡನೇ ಬಾರಿ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಮೈಸೂರು ಹಾಗೂ ಮಂಗಳೂರಲ್ಲಿ ಭಾನುವಾರ ಸಮಾವೇಶ ಹಾಗೂ ರೋಡ್‌ಶೋ ನಡೆಸಿ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸಲಿದ್ದಾರೆ.

ಮೈಸೂರಲ್ಲಿ ಸಂಜೆ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಳ್ಳಲಿರುವ ಅವರು, ನಂತರ ಮಂಗಳೂರಲ್ಲಿ ರಾತ್ರಿ 2.7 ಕಿ.ಮೀ. ರೋಡ್‌ ಶೋ ನಡೆಸಲಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಚುನಾವಣಾ ಪ್ರಚಾರಕ್ಕೆ ಮತ್ತಷ್ಟು ಹುರುಪು ತುಂಬಲಿದ್ದಾರೆ. ಮೋದಿ ಭೇಟಿ ಹಿನ್ನೆಲೆಯಲ್ಲಿ ಮೈಸೂರಲ್ಲಿ ಸಾವಿರಕ್ಕೂ ಅಧಿಕ ಹಾಗೂ ಮಂಗಳೂರಲ್ಲಿ 2 ಸಾವಿರಕ್ಕೂ ಹೆಚ್ಚು ಸೇರಿ ಎರಡೂ ಕಡೆ ಒಟ್ಟಾರೆ ಮೂರು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ಎಚ್‌ಡಿಡಿ-ಮೋದಿ ಮೋಡಿ:

ಮಧ್ಯಪ್ರದೇಶದಿಂದ ನೇರವಾಗಿ ವಿಶೇಷ ವಿಮಾನದ ಮೂಲಕ ಮೈಸೂರು ವಿಮಾನ ನಿಲ್ದಾಣದಲ್ಲಿ ಸಂಜೆ 5.15ಕ್ಕೆ ಬಂದಿಳಿಯಲಿರುವ ಮೋದಿ ಅವರು ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಮೈಸೂರು ವಿವಿ ಓವಲ್ ಮೈದಾನಕ್ಕೆ ಆಗಮಿಸಲಿದ್ದಾರೆ. ಬಳಿಕ ಪಕ್ಕದ ಮಹಾರಾಜ ಕಾಲೇಜು ಮೈದಾನದಲ್ಲಿ ಜರುಗುವ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಮೋದಿ ಅವರು ಪಾಲ್ಗೊಳ್ಳಲಿರುವ ವೇದಿಕೆ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರ ಜತೆಗೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಮೊದಲ ಬಾರಿಗೆ ವೇದಿಕೆ ಹಂಚಿಕೊಳ್ಳುತ್ತಿರುವುದು ವಿಶೇಷ. ಮೈಸೂರು ಕಾರ್ಯಕ್ರಮ ಮುಗಿಸಿ ಮೋದಿ ಅವರು ನೇರವಾಗಿ ಮಂಗಳೂರಿಗೆ ತೆರಳಲಿದ್ದಾರೆ.

ಯುಗಾದಿಗೆ ಮೋದಿ ದರ್ಶನ:

ಕರಾವಳಿಯಲ್ಲಿ ಏ.14 ರಂದು ಸೌರಮಾನ ಯುಗಾದಿಯ ಸಂಭ್ರಮ. ಹೊಸ ವರ್ಷದ ಸಂಭ್ರಮದಲ್ಲಿರುವ ಕರಾವಳಿಗರಿಗೆ ಅಂದು ರೋಡ್‌ ಶೋ ಮೂಲಕ ಪ್ರಧಾನಿ ಮೋದಿ ಅವರ ಸಮೀಪ ದರ್ಶನವೂ ಸಿಗಲಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಗಮನದಲ್ಲಿಟ್ಟುಕೊಂಡು ಮೋದಿ ಅವರು ನಗರದ ಲೇಡಿಹಿಲ್‌ನ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದಿಂದ ನವಭಾರತ ವೃತ್ತದ ವರೆಗೆ ಸುಮಾರು 2.7 ಕಿ.ಮೀ. ದೂರದ ರೋಡ್‌ ಶೋ ನಡೆಸಲಿದ್ದಾರೆ. ಈ ರೋಡ್‌ ಶೋ ರಾತ್ರಿ ರಾತ್ರಿ 7.45ಕ್ಕೆ ಆರಂಭವಾಗಲಿದೆ.

ನಾರಾಯಣಗುರುಗೆ ಮಾಲಾರ್ಪಣೆ:

ದ.ಕ. ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಕರಾವಳಿಯ ಬಹುಸಂಖ್ಯಾತ ಬಿಲ್ಲವ ಸಮುದಾಯದ ಪದ್ಮರಾಜ್‌ ಆರ್‌.ಪೂಜಾರಿ ಕಣಕ್ಕಿಳಿಸಿದ್ದರೆ, ಬಿಜೆಪಿಯಿಂದ ಬಂಟ ಸಮುದಾಯದ ಬೃಿಜೇಶ್‌ ಚೌಟ ಅವರನ್ನು ಅಭ್ಯರ್ಥಿ ಮಾಡಲಾಗಿದೆ. ಇದೀಗ ಕಾಂಗ್ರೆಸ್ಸಿಗರು ಜಾತಿ ಮತ ಸೆಳೆಯಲು ಹೊರಟಿರುವ ಹಿನ್ನೆಲೆಯಲ್ಲಿ ಮೋದಿ ಅವರ ಮೂಲಕ ಬಿಲ್ಲವರ ಮತಗಳನ್ನು ಹಿಡಿದಿಟ್ಟುಕೊಳ್ಳಲು ಬಿಜೆಪಿ ಕೂಡ ತಂತ್ರಗಾರಿಕೆ ನಡೆಸಿದೆ. ಇದರ ಭಾಗವಾಗಿಯೇ ಮೋದಿ ಅವರು ಬ್ರಹ್ಮಶ್ರೀನಾರಾಯಣಗುರು ಪ್ರತಿಮೆಗೆ ಮಾಲಾರ್ಪಣೆ ಹಾಕುವ ಮೂಲಕ ರೋಡ್‌ ಶೋ ಆರಂಭಿಸಲಿದ್ದಾರೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

40 ಲಕ್ಷ ಮಹಿಳೆಯರಿಗೆ 9000 ರು. ಗ್ಯಾರಂಟಿ ! ಎಲೆಕ್ಷನ್‌ ಮುನ್ನ ಬಂಪರ್‌
ಡಿಕೆ ರಾಜಕೀಯ ಹೋರಾಟ ಎಲ್ಲರಿಗೂ ಸ್ಪೂರ್ತಿ : ಸಿಎಂ ಸಿದ್ದರಾಮಯ್ಯ