ಮೈಸೂರು : ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ನಡೆಯುತ್ತಿರುವಾಗಲೇ, ನವೆಂಬರ್‌ನಲ್ಲಿ ರಾಜ್ಯ ರಾಜಕೀಯದಲ್ಲಿ ಅಲ್ಲೋಲ-ಕಲ್ಲೋಲವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಡನೆ ಅವರು ಮಾತನಾಡಿದರು. ಕಾಂಗ್ರೆಸ್ ಶಾಸಕರೇ ‘ನವೆಂಬರ್ ಕ್ರಾಂತಿ’ ಬಗ್ಗೆ ಮಾತನಾಡುತ್ತಿದ್ದಾರೆ. ನವೆಂಬರ್ ಕ್ರಾಂತಿಗೂ, ಜಾತಿಗಣತಿಗೂ ಸಂಬಂಧ ಇದೆ ಎಂಬ ಚರ್ಚೆ ನಡೆಯುತ್ತಿದೆ. ಸಿದ್ದರಾಮಯ್ಯ ಬಹಳ ಆತುರದಲ್ಲಿ ಇದ್ದಾರೆ. ಮೈಸೂರಿನಲ್ಲಿ ಅವರು ಶಕ್ತಿ ಪ್ರದರ್ಶನ ನಡೆಸಿದರು. ಮೈಸೂರಲ್ಲಿ ಸಿದ್ದರಾಮಯ್ಯ ರ್‍ಯಾಂಪ್ ವಾಕ್ ಮಾಡುವಾಗ ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್ ಇಬ್ಬರೂ ಅಡ್ರೆಸ್‌ಗೆ ಇರಲಿಲ್ಲ. ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಬೇಡಿ ಎಂದು ಕಾಂಗ್ರೆಸ್ ನಾಯಕ ವೇಣುಗೋಪಾಲ್ ಎಚ್ಚರಿಸುತ್ತಾರೆ. ನಾಯಕತ್ವ ಬದಲಾವಣೆ ಕುರಿತು ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ಹೇಳುತ್ತಾರೆ. ಆದರೆ, ಹೈಕಮಾಂಡ್ ಎಲ್ಲೂ ನಾಯಕತ್ವ ಬದಲಾವಣೆ ಇಲ್ಲಾ ಎಂದು ಹೇಳುತ್ತಿಲ್ಲ ಎಂದರು.
ಜಾತಿ ಗಣತಿ ಬಗ್ಗೆ ಮಾತನಾಡಿ, ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ರಾಜ್ಯ ಸರ್ಕಾರ ಪೂರ್ವ ತಯಾರಿ ಇಲ್ಲದೆ ಆತುರದಲ್ಲಿ ಕೈಗೊಂಡಿದೆ. ಸಮೀಕ್ಷೆಯಲ್ಲಿ ಎಷ್ಟು ಗೊಂದಲ ಇದೆ ಎಂಬುದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪ್ರತಿಕ್ರಿಯೆಯಲ್ಲಿಯೇ ಗೊತ್ತಾಗುತ್ತದೆ. 60 ಪ್ರಶ್ನೆಗಳನ್ನು ಜನರ ಮುಂದಿಟ್ಟಿದ್ದಾರೆ. ಈ ಸಮೀಕ್ಷೆಯಿಂದ ಗೊಂದಲಗಳೇ ಹೆಚ್ಚು. ಸಿದ್ದರಾಮಯ್ಯಗೆ ಇಷ್ಟೊಂದು ಆತುರ ಯಾಕೆ ಎಂಬುದೇ ನಮ್ಮ ಪ್ರಶ್ನೆ ಎಂದರು.
ದೇಶದಲ್ಲಿ ಜಾತಿಗಣತಿ ಮಾಡುತ್ತೇವೆ ಎಂದು ಪ್ರಧಾನಿ ಮೋದಿಯೇ ಘೋಷಿಸಿದ್ದಾರೆ. ಈ ನಡುವೆ ರಾಜ್ಯದಲ್ಲಿ ಈ ರೀತಿಯ ಗೊಂದಲ ಸೃಷ್ಟಿಮಾಡುವ ಅವಶ್ಯಕತೆ ಇರಲಿಲ್ಲ ಎಂದು ಅವರು ಹೇಳಿದರು.