ಈ ಚುನಾವಣೇಲಿ 2047ರವರೆಗಿನ ಭವಿಷ್ಯ: ಮೋದಿ

Published : Apr 15, 2024, 08:45 AM IST
Narendra Modi

ಸಾರಾಂಶ

ಬಿಜೆಪಿ ಬಿಡುಗಡೆಗೊಳಿಸಿರುವ ಸಂಕಲ್ಪ ಪತ್ರದಲ್ಲಿ ಮೋದಿ ಗ್ಯಾರಂಟಿ ಅಡಗಿದೆ. ಈ ಬಾರಿಯ ಚುನಾವಣೆ ಕೇವಲ ಐದು ವರ್ಷಕ್ಕೆ ಅಲ್ಲ, ಬದಲಿಗೆ 2047 ರವರೆಗಿನ ಭಾರತದ ಭವಿಷ್ಯ ಇದರಲ್ಲಿ ಅಡಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಮೈಸೂರು :  ಬಿಜೆಪಿ ಬಿಡುಗಡೆಗೊಳಿಸಿರುವ ಸಂಕಲ್ಪ ಪತ್ರದಲ್ಲಿ ಮೋದಿ ಗ್ಯಾರಂಟಿ ಅಡಗಿದೆ. ಈ ಬಾರಿಯ ಚುನಾವಣೆ ಕೇವಲ ಐದು ವರ್ಷಕ್ಕೆ ಅಲ್ಲ, ಬದಲಿಗೆ 2047 ರವರೆಗಿನ ಭಾರತದ ಭವಿಷ್ಯ ಇದರಲ್ಲಿ ಅಡಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಭಾನುವಾರ ಬಿಜೆಪಿ-ಜೆಡಿಎಸ್ ಆಯೋಜಿಸಿದ್ದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ಈ ಚುನಾವಣೆ 2024 ರಿಂದ ಐದು ವರ್ಷಕ್ಕೆ ಅಂದುಕೊಳ್ಳಬೇಡಿ. 2047ರವರೆಗಿನ ಭಾರತದ ಭವಿಷ್ಯ ಇದರಲ್ಲಿ ಅಡಗಿದೆ. ಆದ್ದರಿಂದ ದೇಶದ ಅಭಿವೃದ್ಧಿಗೆ ನಿಮ್ಮ ಮತ ಅಮೂಲ್ಯ ಎಂದರು.

ಇದು ನಿರ್ಣಯಕ ಚುನಾವಣೆ. ನಾವು ಸಂಕಲ್ಪ ಪತ್ರ ಬಿಡುಗಡೆಗೊಳಿಸಿದ್ದೇವೆ. ಇಡೀ ಕರ್ನಾಟಕ ಈ ಬಾರಿ ಮೋದಿ ಸರ್ಕಾರ ಎಂದು ಹೇಳುತ್ತಿದೆ. ನಮ್ಮ ಸಂಕಲ್ಪ ಪತ್ರವು ಮೋದಿ ಗ್ಯಾರಂಟಿಯನ್ನು ಹೊಂದಿದೆ. ಬಡವರಿಗೆ ಉಚಿತ ಪಡಿತರ, 3 ಕೋಟಿ ಮಹಿಳೆಯರನ್ನು ಲಕ್ಷಾಧಿಪತಿ ಮಾಡುವ ಯೋಜನೆ, ಹಿರಿಯ ನಾಗರಿಕರಿಗೆ ಆಯುಷ್ಮಾನ್ ಭಾರತ್‌ ಯೋಜನೆಯಡಿ ಉಚಿತ ಚಿಕಿತ್ಸೆ, 3 ಕೋಟಿ ಮನೆ ನಿರ್ಮಾಣದ ಗುರಿಯನ್ನು ನಾವು ಹೊಂದಿದ್ದೇವೆ ಎಂದರು.

ಈ ಎಲ್ಲಾ ಯೋಜನೆಗಳು ಕರ್ನಾಟಕದ ಅರ್ಹರಿಗೂ ತಲುಪುತ್ತವೆ. ಬಡವರ ಜೀವನ ಮಟ್ಟ ಸುಧಾರಿಸಲಿದೆ. ಕಳೆದ 10 ವರ್ಷದ ಹಿಂದೆ ನಾವು ತಂತ್ರಜ್ಞಾನಕ್ಕಾಗಿ ಬೇರೆ ರಾಷ್ಟ್ರಗಳನ್ನು ಅವಲಂಬಿಸಿದ್ದೆವು. ಆದರೆ, ಈಗ ಚಂದ್ರಯಾನ ಸೇರಿದಂತೆ ಅನೇಕ ಸಾಧನೆಗಳ ಮೂಲಕ ಅವರೆಲ್ಲ ನಮ್ಮ ಕಡೆ ನೋಡುವಂತೆ ಮಾಡಿದ್ದೇವೆ. ಈಗ ನಿಮ್ಮ ಮತದ ಮೂಲಕ ಮೋದಿಗೆ ಮತ್ತಷ್ಟು ತಾಕತ್ತು ಬರಲಿದೆ ಎಂದರು.

ನಮ್ಮ ಸರ್ಕಾರದ ಹತ್ತು ವರ್ಷದ ಆಡಳಿತದ ಅವಧಿಯಲ್ಲಿ ಕರ್ನಾಟಕದಲ್ಲಿ 4.5 ಲಕ್ಷ ಮಂದಿಗೆ ಮನೆ ದೊರಕಿದೆ, ಜಲ ಜೀವನ ಮಿಷನ್ ಯೋಜನೆಗೆ ಕೋಟ್ಯಂತರ ಹಣ ನೀಡಲಾಗಿದೆ. ಇದರಿಂದಾಗಿ ನೂರಾರು ಗ್ರಾಮಗಳು ಕುಡಿಯುವ ನೀರು ಪಡೆಯುತ್ತಿವೆ. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯಾಗಿದೆ. ವಂದೇ ಭಾರತ್ ರೈಲು ನೀಡಲಾಗಿದೆ ಎಂದರು.

ಕರ್ನಾಟಕ ಸಮೃದ್ಧಿಯ ಕೇಂದ್ರ:

ಕರ್ನಾಟಕ ಮಾಹಿತಿ ತಂತ್ರಜ್ಞಾನದ ಬಹುದೊಡ್ಡ ಶಕ್ತಿಯ ಕೇಂದ್ರ. ಈ ನೆಲ ಸಮೃದ್ಧಿಯ ಭಾಗ. ಮೈಸೂರು, ಹಂಪಿ, ಬಾದಾಮಿ ಮುಂತಾದ ನಗರಗಳು ಪಾರಂಪರಿಕ ನಗರವಾಗಿ ವಿಶ್ವ ಭೂಪಟದಲ್ಲಿ ತಮ್ಮ ಸ್ಥಾನ ಪಡೆದುಕೊಂಡಿವೆ. ಕನ್ನಡ ಭಾಷೆಯೂ ಸಮೃದ್ಧವಾಗಿದ್ದು, ಅದನ್ನು ವಿಶ್ವಮಟ್ಟದಲ್ಲಿ ಪ್ರಚಾರಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಕರ್ನಾಟಕದಲ್ಲಿ ದೇವೇಗೌಡರಂತ ಹಿರಿಯರ ಮಾರ್ಗದರ್ಶನವಿದೆ. ಯಡಿಯೂರಪ್ಪ, ಕುಮಾರಸ್ವಾಮಿ ಅವರಂತ ಸಂಘಟಕರು ಇದ್ದಾರೆ. ಇವರು ಕರ್ನಾಟಕದ ಅಭಿವೃದ್ಧಿಗೆ ನೆರವಾಗಲಿದ್ದಾರೆ. ಸುತ್ತೂರು ಮಠ, ಕುವೆಂಪು ಅವರ ಧ್ವನಿ ಇಲ್ಲಿದೆ. ಕಾರ್ಯಪ್ಪ ಅವರಂತಹ ಮಹನೀಯರ ಕೊಡುಗೆ ಇದೆ. ಈ ನೆಲದ ವಿಕಾಸ ಅವರಿಂದ ಆಗಿದೆ ಎಂದು ಮೋದಿ ಬಣ್ಣಿಸಿದರು.

ಕಾವೇರಿ, ಗೌಡರನ್ನು ಸ್ಮರಿಸಿದ ಮೋದಿ

‘ನಿಮಗೆಲ್ಲ ನಮಸ್ಕಾರಗಳು’ ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ಮೋದಿ, ತಾಯಿ ಚಾಮುಂಡೇಶ್ವರಿ, ಭುವನೇಶ್ವರಿ ಮತ್ತು ಕಾವೇರಿಗೆ ಪ್ರಣಾಮ ಸಲ್ಲಿಸಿದರು. ಅತ್ಯಂತ ಹಿರಿಯ ಮುತ್ಸದ್ಧಿಯಾದ ದೇವೇಗೌಡರ ಆಶೀರ್ವಾದ ದೊರಕ್ಕಿದ್ದು ನನ್ನ ಸೌಭಾಗ್ಯ. ಇದಕ್ಕೆ ನಾನು ಆಭಾರಿ ಎಂದು ಹೇಳಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''
ಸರ್ವಜನಾಂಗ ಶಾಂತಿಯ ತೋಟ ಆಗಲು ಈ ಮಸೂದೆ ಬೇಕೇಬೇಕು