ಬಂಗಾರಪೇಟೆ : ಮುಡಾ ಹಗರಣದಲ್ಲಿ ಸಿದ್ದರಾಮಯ್ಯರ ಯಾವುದೇ ಪಾತ್ರವಿಲ್ಲವೆಂದು ಒಂದು ಕರಪತ್ರ ತಯಾರು ಮಾಡಿ ತಾಲೂಕಿನ ಪ್ರತಿ ಗ್ರಾಮದಲ್ಲೂ ಹಂಚುವ ಮೂಲಕ ಜನರಲ್ಲಿ ಸಿದ್ದರಾಮಯ್ಯ ಮೇಲಿರುವಂತಹ ತಪ್ಪು ಭಾವನೆಗಳನ್ನು ದೂರ ಮಾಡಲಾಗುವುದು ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ತಿಳಿಸಿದರು.ನಗರದ ಎಸ್.ಎನ್.ರೆಸಾರ್ಟ್‌ನಲ್ಲಿ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮಾತನಾಡಿ, ಜೆಡಿಎಸ್- ಬಿಜೆಪಿ ಸಿದ್ದರಾಮಯ್ಯನವರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಆರೋಪಗಳೆಲ್ಲವನ್ನು ದೂರ ಮಾಡಲು ಕರಪತ್ರ ಹಂಚುವ ತೀರ್ಮಾನ ಮುಖಂಡರ ಸಭೆಯಲ್ಲಿ ಮಾಡಲಾಗಿದೆ ಎಂದರು.
ಬಿಜೆಪಿ, ಎಚ್ಡಿಕೆ ಭ್ರಷ್ಟಾಚಾರ ಪ್ರಚಾರ
ನಂತರ ಆಡಿಯೋ ಮುಖಾಂತರ ಬಿಜೆಪಿ ಸರ್ಕಾರ ಇದ್ದಾಗ ನಡೆದಂತಹ ಭ್ರಷ್ಟಾಚಾರ ಹಾಗೂ ಜೆಡಿಎಸ್‌ನ ಕುಮಾರಸ್ವಾಮಿ ಹಗರಣಗಳನ್ನು ಮಾಡಿ ಎಷ್ಟು ಆಸ್ತಿ ಮಾಡಿದ್ದಾರೆ ಎಂಬುವುದರ ಬಗ್ಗೆ ತಿಳಿಸುತ್ತೇವೆ. ಮತ್ತೊಂದು ಕಡೆ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಜನರಿಗೆ ಏನೇನು ಮಾಡಿದ್ದೇವೆ ಎಂಬುದರ ಮಾಹಿತಿ ನೀಡುವುದಾಗಿ ಹೇಳಿದರು. ಪಕ್ಷಕ್ಕೆ ಬರುವವರಿಗೆ ಸ್ವಾಗತ
ಜೆಡಿಎಸ್-ಬಿಜೆಪಿ ಪಕ್ಷದಲ್ಲಿ ಅನೇಕ ಮುಖಂಡರಿಗೆ ಅಸಮಾಧಾನಗೊಂಡಿದ್ದಾರೆ. ಅಂತಹ ಮುಖಂಡರು ಯಾರೇ ಆಗಲಿ ಹಾಗೂ ಎಲ್ಲಾ ಸಮುದಾಯದವರನ್ನು ಸಹ ಬರಮಾಡಿಕೊಳ್ಳೋಣ ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತ ಕೋರೋಣ. ಹಿಂದೆ ನಡೆದಂತಹ ಚುನಾವಣೆಗಳಲ್ಲಿ ಯಾರನ್ನು ದ್ವೇಷಿಸದೆ ಎಲ್ಲವನ್ನೂ ಮರೆತು ಹಿಂದೆ ಪಕ್ಷ ಬಿಟ್ಟವರನ್ನು ಸಹ ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಳ್ಳೋಣ ಈ ಮುಖಾಂತರ ಕಾಂಗ್ರೆಸ್ ಪಕ್ಷವನ್ನು ಬೃಹತಾಕಾರವಾಗಿ ಬೆಳೆಸೋಣ ಎಂದು ತಿಳಿಸಿದರು.
ಕಾಂಗ್ರೆಸ್ ಹಿರಿಯ ಮುಖಂಡರಾದ ಪಾರ್ಥಸಾರಥಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಗೌಡ ಬೂದಿಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜ್, ಪುರಸಭೆ ಅಧ್ಯಕ್ಷ ಗೋವಿಂದ, ಮಾಜಿ ಅಧ್ಯಕ್ಷ ಶಂಶುದ್ದೀನ್ ಬಾಬು, ಸಮಾಜ ಸೇವಕರಾದ ಮುನಿರಾಜು ಇದ್ದರು.