ಶಾಸಕಾಂಗ ಪಕ್ಷದ ಸಭೆಯಲ್ಲಿ ಬಲಾಬಲ ಪರೀಕ್ಷೆಗೆ ಒತ್ತಡ?

Published : May 28, 2026, 10:27 AM IST
Karnataka CM Siddaramaiah at Indira Bhavan in New Delhi

ಸಾರಾಂಶ

 ಹೈಕಮಾಂಡ್‌ ಸೂಚನೆಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಿದ ನಂತರ ಮುಂದೇನು? ಮುಂದಿನ ಮುಖ್ಯಮಂತ್ರಿ ಆಯ್ಕೆ ಹೈಕಮಾಂಡ್ ನಿರ್ದೇಶನದಂತೆ ಸುಲಲಿತವಾಗಿ ನಡೆಯುವುದೇ ಅಥವಾ  ಶಾಸಕಾಂಗ ಪಕ್ಷದ ಸಭೆ  ಬಲಾಬಲ ಪರೀಕ್ಷೆಯ ಅಖಾಡವಾಗಿ ಬದಲಾಗಲಿದೆಯೇ?

 ಬೆಂಗಳೂರು :  ಕಾಂಗ್ರೆಸ್‌ ಹೈಕಮಾಂಡ್‌ ಸೂಚನೆಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಿದ ನಂತರ ಮುಂದೇನು? ಮುಂದಿನ ಮುಖ್ಯಮಂತ್ರಿ ಆಯ್ಕೆ ಹೈಕಮಾಂಡ್ ನಿರ್ದೇಶನದಂತೆ ಸುಲಲಿತವಾಗಿ ನಡೆಯುವುದೇ ಅಥವಾ ಶುಕ್ರವಾರ ನಡೆಯಲಿದೆ ಎನ್ನಲಾಗುತ್ತಿರುವ ಶಾಸಕಾಂಗ ಪಕ್ಷದ ಸಭೆಯು ಬಲಾಬಲ ಪರೀಕ್ಷೆಯ ಅಖಾಡವಾಗಿ ಬದಲಾಗಲಿದೆಯೇ?

ಈ ಪ್ರಶ್ನೆಗಳು ಕಾಂಗ್ರೆಸ್‌ ವಲಯದಲ್ಲಿ ತೀವ್ರವಾಗಿ ಚರ್ಚೆಯಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ರಾಜೀನಾಮೆಗೆ ಸಿದ್ದರಾಗಿರುವ ಹಾಗೂ ಮುಂದಿನ ಸಿಎಂ ಆಯ್ಕೆ ವಿಚಾರವನ್ನು ಹೈಕಮಾಂಡ್‌ಗೆ ಬಿಡುವ ನಿರ್ಧಾರಕ್ಕೆ ಸಿದ್ದರಾಮಯ್ಯ ಅವರ ಬೆಂಬಲಿಗ ಶಾಸಕರು ಆಂತರಿಕವಾಗಿ ತೀವ್ರ ಆಕ್ಷೇಪ ಎತ್ತುತ್ತಿರುವುದು.

ಈ ವಿಚಾರದ ಬಗ್ಗೆ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಹಲವು ಶಾಸಕರು ದೆಹಲಿಯಲ್ಲಿ ನಡೆದ ಹೈಕಮಾಂಡ್‌ನೊಂದಿಗಿನ ಸಭೆ ವೇಳೆ ರಾಜೀನಾಮೆ ನೀಡಿದ ನಂತರ ರಾಜ್ಯದ ಮುಂದಿನ ನಾಯಕತ್ವದ ಬಗ್ಗೆ ನಿಮಗೆ ಯಾವ ಸುಳಿವು ನೀಡಿತು ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಸಿದ್ದರಾಮಯ್ಯ ಅವರು, ರಾಜೀನಾಮೆ ನೀಡುವಂತೆ ಮಾತ್ರ ಸೂಚಿಸಿದ್ದಾರೆ. ರಾಜ್ಯದ ಮುಂದಿನ ಸಿಎಂ ಯಾರಾಗಲಿದ್ದಾರೆ ಎಂದು ತಾವು ಪ್ರಶ್ನಿಸಿದಾಗ ಅದರ ಬಗ್ಗೆ ತಾವು (ಹೈಕಮಾಂಡ್) ನಿರ್ಧರಿಸಲಿದೆ ಎಂದಷ್ಟೇ ಹೇಳಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ನಾವು ಪ್ರಶ್ನಿಸ್ತೇವೆ:

ಇದಕ್ಕೆ ಶಾಸಕರು ಏಕೆಂದರೆ, ‘ಮುಂದಿನ ನಾಯಕತ್ವ’ ಎಂಬ ವಿಚಾರದಲ್ಲಿ ಕೇವಲ ಸಚಿವರು ಹಾಗೂ ಹಿರಿಯ ನಾಯಕರನ್ನು ಮಾತ್ರ ಕೇಳಿದರೆ ಸಾಲಲ್ಲ. ಶಾಸಕರ ಅಭಿಪ್ರಾಯಕ್ಕೂ ಮನ್ನಣೆ ನೀಡಬೇಕಾಗುತ್ತದೆ. ಇದನ್ನು ಶಾಸಕಾಂಗ ಸಭೆಯಲ್ಲಿ ಪ್ರಶ್ನಿಸುತ್ತೇವೆ ಎಂದಿದ್ದು, ಇದಕ್ಕೆ ಸಿದ್ದರಾಮಯ್ಯ ಯಾವುದೇ ಪ್ರತಿಕ್ರಿಯೆಯನ್ನೂ ನೀಡಿಲ್ಲ ಎನ್ನುತ್ತವೆ ಮೂಲಗಳು.

ಈ ಮೂಲಗಳ ಪ್ರಕಾರ ಶುಕ್ರವಾರ ನಡೆಸಲು ಉದ್ದೇಶಿಸಲಾಗಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಂದಿನ ಮುಖ್ಯಮಂತ್ರಿ ಆಯ್ಕೆಯನ್ನು ಹೈಕಮಾಂಡ್‌ ನಿರ್ಧಾರಕ್ಕೆ ಬಿಡುವ ಒಂದು ಸಾಲಿನ ನಿರ್ಣಯ ಕೈಗೊಳ್ಳಬೇಕು ಎಂಬ ನಿಲುವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಶಾಸಕರು ಆಕ್ಷೇಪವೆತ್ತುವ ಸಾಧ್ಯತೆಯಿದೆ. ಶಾಸಕಾಂಗ ಪಕ್ಷದ ಸಭೆ ನಡೆದರೆ ಅಲ್ಲಿ ಬಲಾಬಲ ಪರೀಕ್ಷೆ ನಡೆಯಬೇಕು ಎಂದು ಒತ್ತಾಯಿಸಲಿದ್ದು, ಆಗ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರನ್ನು ಈ ಬಲಾಬಲ ಪರೀಕ್ಷೆಗೆ ಒಬ್ಬ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವ ಚಿಂತನೆ ಈ ಶಾಸಕರಿಗೆ ಇದೆ ಎನ್ನಲಾಗುತ್ತಿದೆ.

ಒಂದು ವೇಳೆ ಇಂತಹ ಬೆಳವಣಿಗೆ ನಡೆದರೆ ಆಗ ಮುಂದಿನ ನಾಯಕತ್ವ ಬದಲಾವ‍ಣೆ ಎಂಬುದು ಸರಾಗವಾಗಿ ನಡೆಸಬೇಕು ಎಂಬ ಹೈಕಮಾಂಡ್‌ ಇರಾದೆಗೆ ದೊಡ್ಡ ಪೆಟ್ಟು ಬೀಳುವ ಸಾಧ್ಯತೆಯಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

 ಗೌರ್‍ನರ್‌ ದಿಢೀರ್‌ ಇಂದೋರ್‌ಗೆ! 

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ರಾಜೀನಾಮೆ ನೀಡಲು ಸಜ್ಜಾಗಿರುವ ಸಂದರ್ಭದಲ್ಲೇ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರು ಬುಧವಾರ ರಾತ್ರಿ ದಿಢೀರ್‌ ತಮ್ಮ ತವರು ರಾಜ್ಯ ಮಧ್ಯಪ್ರದೇಶದ ಇಂದೋರ್‌ಗೆ ತೆರಳಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳು ರಾಜ್ಯಪಾಲರು ಬರುವವರೆಗೆ ಕಾಯುತ್ತಾರೋ ಅಥವಾ ಲೋಕಭವನಕ್ಕೆ ತೆರಳಿ ರಾಜೀನಾಮೆ ಕೊಟ್ಟು ಬರುತ್ತಾರೋ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಸಿಎಂ ಸ್ಥಾನಕ್ಕೆ ಡಾ।ಪರಂ ಸೂಚಿಸಲು 1 ಬಣ ರೆಡಿ?

ಬೆಂಗಳೂರು: ಶಾಸಕಾಂಗ ಪಕ್ಷದ ಸಭೆಯಲ್ಲೇ ಮುಖ್ಯಮಂತ್ರಿ ಆಯ್ಕೆಯಾಗಬೇಕು ಎಂದು ಆ ಸಭೆಯ ವೇಳೆ ಒತ್ತಾಯಿಸಲು ಕೆಲವು ಶಾಸಕರು ತಯಾರಿ ನಡೆಸಿದ್ದಾರೆ. ತಮ್ಮ ಬಣದಿಂದ ಗೃಹ ಸಚಿವ ಡಾ। ಜಿ. ಪರಮೇಶ್ವರ್‌ ಅವರನ್ನು ಕಣಕ್ಕಿಳಿಸುವ ಚಿಂತನೆಯಲ್ಲಿದ್ದಾರೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಇಂದು ಸಿಎಂ ರಾಜೀನಾಮೆ - ಇಂದೇ ಸುದ್ದಿಗೋಷ್ಠಿಯಲ್ಲಿ ವಿದಾಯ ಭಾಷಣ ಸಾಧ್ಯತೆ?
ಇದೀಗ ಮೌನಕ್ಕೆ ಶರಣಾದ ಸಿಎಂ! ಸಿದ್ದು ರಹಸ್ಯ ನಡೆ ಅರಿಯದಾದ ಕಾಂಗ್ರೆಸ್‌ ಹೈಕಮಾಂಡ್‌