ಭ್ರಷ್ಟಾಚಾರಕ್ಕೆ ಸಾಕ್ಷ್ಯ ಕೊಟ್ರೆ ರಾಜೀನಾಮೆ : ಸಚಿವರ ಸವಾಲ್

Published : Jan 31, 2026, 09:11 AM IST
RB Thimmapura

ಸಾರಾಂಶ

ನನ್ನ ಮೇಲೆ ಬಂದಿರುವ ಎಲ್ಲಾ ಆರೋಪಗಳು ಆಧಾರ ರಹಿತ. ಯಾರೋ ಅಧಿಕಾರಿ ಹೇಳಿದ್ದಾನೆಂಬ ಆರೋಪ ಹೊರಿಸಿ ರಾಜೀನಾಮೆ ಕೇಳುವುದು ಸರಿಯಲ್ಲ. ನಾನು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದೇನೆ ಎನ್ನುವುದಕ್ಕೆ  ಸಾಕ್ಷ್ಯಾಧಾರ ಕೊಟ್ಟರೆ ಈ ಕ್ಷಣದಲ್ಲಿ ರಾಜೀನಾಮೆ ಕೊಡುತ್ತೇನೆ ಎಂದು ಸಚಿವ ಆರ್‌.ಬಿ.ತಿಮ್ಮಾಪುರ ಹೇಳಿದರು.

 ವಿಧಾನ ಪರಿಷತ್ತು :  ನನ್ನ ಮೇಲೆ ಬಂದಿರುವ ಎಲ್ಲಾ ಆರೋಪಗಳು ಆಧಾರ ರಹಿತ. ಯಾರೋ ಅಧಿಕಾರಿ ಹೇಳಿದ್ದಾನೆಂಬ ಆರೋಪ ಹೊರಿಸಿ ರಾಜೀನಾಮೆ ಕೇಳುವುದು ಸರಿಯಲ್ಲ. ನಾನು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದೇನೆ ಎನ್ನುವುದಕ್ಕೆ ಯಾರಾದರು ಸಾಕ್ಷ್ಯಾಧಾರ ಕೊಟ್ಟರೆ ಈ ಕ್ಷಣದಲ್ಲಿ ರಾಜೀನಾಮೆ ಕೊಡುತ್ತೇನೆ ಎಂದು ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಹೇಳಿದರು.

ನಿಯಮ 330ರಡಿ ಬಿಜೆಪಿ ಸದಸ್ಯ ಕೆ.ಎಸ್‌.ನವೀನ್‌, ಡಾ.ಧನಂಜಯ ಸರ್ಜಿ ಸೇರಿ ಇತರರು ಅಬಕಾರಿ ಇಲಾಖೆ ಭ್ರಷ್ಟಾಚಾರದ ಕುರಿತು ಚರ್ಚಿಸಿದ ವಿಷಯಕ್ಕೆ ಉತ್ತರಿಸಿದ ಸಚಿವರು, ಕಟ್ಟಾಸುಬ್ರಹ್ಮಣ್ಯನಾಯ್ಡು, ರೇಣುಕಾಚಾರ್ಯ, ಮನೋಹರ ತಹಸೀಲ್ದಾರ್‌, ಸತೀಶ್‌ ಜಾರಕಿಹೊಳಿ, ಗೋಪಾಲಯ್ಯ ಸೇರಿ ಯಾರ್‍ಯಾರು ಅಬಕಾರಿ ಸಚಿವರಾಗಿದ್ದರೋ ಅವರೆಲ್ಲರ ಮೇಲೆಯೂ ವರ್ಗಾವಣೆ, ಪರವಾನಗಿ ನವೀಕರಣದಲ್ಲಿ ಹಣ ತಿನ್ನುತ್ತಾರೆ ಎಂಬ ಆರೋಪಗಳು ಬಂದಿವೆ. ಅವರೆಲ್ಲರೂ ರಾಜೀನಾಮೆ ಕೊಟ್ಟಿದ್ದಾರೆಯೇ? ನನ್ನ ಮೇಲೆ ಬಂದಿರುವ ಆರೋಪ ಸತ್ಯಕ್ಕೆ ದೂರವಾದವು ಎಂದರು.

ಭ್ರಷ್ಟಾಚಾರ ಆರೋಪ ರಾಜಕೀಯ ಪ್ರೇರಿತ

ನನ್ನ ವಿರುದ್ಧದ ಭ್ರಷ್ಟಾಚಾರ ಆರೋಪ ರಾಜಕೀಯ ಪ್ರೇರಿತ, ತೇಜೋವಧೆ ಮಾಡುವುದಾಗಿದೆ. ಸಾಕ್ಷ್ಯಾಧಾರ ಇಲ್ಲದೆ ಆರೋಪ ಮಾಡುವುದು ಸರಿಯಲ್ಲ. ನನ್ನ ವಿರುದ್ಧದ ಇಲ್ಲ-ಸಲ್ಲದ ಆರೋಪಗಳು ನಮಗೆ ಬೇಸರ ತರಿಸುತ್ತಿದೆ ಎಂದರು.

ಸಾಕ್ಷ್ಯ ಕೊಡಲು ಸಿದ್ಧ:

ಈ ವೇಳೆ ಮಾತನಾಡಿದ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಎನ್.ರವಿಕುಮಾರ್‌, ಪ್ರತಿ ತಿಂಗಳು ಬಾರ್‌ಗಳು ಪೊಲೀಸ್‌ ಇಲಾಖೆ, ಅಬಕಾರಿ ಡಿಸಿ ಮತ್ತು ಸ್ಥಳೀಯ ಅಧಿಕಾರಿಗಳಿಗೆ ಲಂಚ ಕೊಡಬೇಕಾದ ಪರಿಸ್ಥಿತಿ ಇದೆ. ಪ್ರತಿ ಅಂಗಡಿಗಳು 11 ಸಾವಿರ ರು.ಕೊಡುತ್ತಿವೆ. ಇದಕ್ಕೆ ಸಂಬಂಧಪಟ್ಟಂತೆ ಸಾಕ್ಷ್ಯ ಕೊಡಲು ಸಿದ್ಧ ಎಂದರು.

ಕೂಡಲೇ ಸಚಿವ ಪ್ರಿಯಾಂಕ್‌ ಖರ್ಗೆ, ಶಿವರಾಜ ತಂಗಡಗಿ, ಸಭಾನಾಯಕ ಬೋಸರಾಜ್‌, ಐವಾನ್‌ ಡಿಸೋಜಾ ಸೇರಿ ಆಡಳಿತ ಪಕ್ಷದ ಸದಸ್ಯರು ಸಾಕ್ಷಿ ಕೊಡುವಂತೆ ಆಗ್ರಹಿಸಿದರು. ಈ ವೇಳೆ ಗದ್ದಲ ಉಂಟಾಯಿತು. ಪ್ರತಿಪಕ್ಷದ ಸದಸ್ಯರು ಬಾವಿಗಿಳಿದು ತಿಮ್ಮಾಪುರ ಅವರು ರಾಜೀನಾಮೆ ಕೊಡುವಂತೆ ಆಗ್ರಹಿಸಿ ಪ್ರತಿಭಟಿಸಿದರು.

ಸಭಾಪತಿಗಳು ಸಭೆಯನ್ನು ಸೋಮವಾರಕ್ಕೆ ಮುಂದೂಡಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಟಿಬಿ ಗೇಟ್‌ ಬದಲಿಸಲು ಹಣ ಕೊಡಿ : ಬಿವೈವಿ
ಅಜಿತ್‌ ಪವಾರ್‌ ಪತ್ನಿ ಮಹಾ ಡಿಸಿಎಂ: ಇಂದು ಪ್ರಮಾಣ?