ಕಲ್ಲು ಗಣಿಗಾರಿಕೆ ಸ್ಥಗಿತ: ಕಲ್ಲು ಕುಟಿಕರ ಜೀವನ ದುಸ್ತರ

KannadaprabhaNewsNetwork | Updated : Jul 16 2024, 04:55 AM IST

ಸಾರಾಂಶ

ಒಂದು ತಿಂಗಳಿನ ಹಿಂದೆ ಇಲ್ಲಿನ ಹಳೇಪಾಳ್ಯ ಬಳಿ ಬಂಡೆ ಉರುಳಿ ಕಾರ್ಮಿಕನೊಬ್ಬ ಸಾವನ್ನಪ್ಪಿದ್ದು ಈ ಹಿನ್ನೆಲೆಯಲ್ಲಿ ಬಂಡೆ ಕೆಲಸವನ್ನು ಜಿಲ್ಲಾಡಳಿತ ಸ್ಥಗಿತ ಮಾಡಿದೆ. ಇದರಿಂದ ಕಲ್ಲು ಕುಟಿಕರ ಜೀವನ ಅದೋಗತಿಗೆ ಇಳಿದಿದೆ. ಕೆಲಸವಿಲ್ಲದೆ ಜೀವನ ದುಸ್ತರವಾಗಿದೆ.

 ಟೇಕಲ್ :  ಟೇಕಲ್ ಸುತ್ತಮುತ್ತಲು ಭೂತಮ್ಮನ ಬೆಟ್ಟದಂಚಿನಲ್ಲಿ ಅರಣ್ಯ ಇಲಾಖೆ, ಕಂದಾಯ ಇಲಾಖೆ ಜಂಟಿ ಸರ್ವೇ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಅಕ್ರಮ ಗಣಿಗಾರಿಕೆ ನಿಲ್ಲಿಸಲು ಹಾಗೂ ಉತ್ತಮ ಪರಿಸರವನ್ನು ನಿರ್ಮಿಸಲು ಅರಣ್ಯ ಇಲಾಖೆಯಿಂದ ಗಿಡ ನೆಡಲು ಗುಂಡಿ ತೋಡಲಾಗಿತ್ತು. ಆದರೆ ಕಳೆದ ನಾಲ್ಕೈದು ದಿನಗಳಿಂದ ತುಂತುರು ಮಳೆ ಹನಿಯಿಂದ ಗಿಡ ನೆಡುವ ಕಾರ್ಯ ಸ್ಥಗಿತ ಮಾಡಲಾಗಿದೆ.

 ಒಂದು ತಿಂಗಳಿನ ಹಿಂದೆ ಇಲ್ಲಿನ ಹಳೇಪಾಳ್ಯ ಬಳಿ ಬಂಡೆ ಉರುಳಿ ಕಾರ್ಮಿಕನೊಬ್ಬ ಸಾವನ್ನಪ್ಪಿದ್ದು ಈ ಹಿನ್ನೆಲೆಯಲ್ಲಿ ಬಂಡೆ ಕೆಲಸವನ್ನು ಜಿಲ್ಲಾಡಳಿತ ಸ್ಥಗಿತ ಮಾಡಿದೆ. ಇದರಿಂದ ಕಲ್ಲು ಕುಟಿಕರ ಜೀವನ ಅದೋಗತಿಗೆ ಇಳಿದಿದೆ. ಕೆಲಸವಿಲ್ಲದೆ ಜೀವನ ದುಸ್ತರವಾಗಿದೆ. ಬಂಡೆ ಮಾಲೀಕರು ಬೇರೆ ಬೇರೆ ಖಾಸಗಿ ಕಲ್ಲುಗಳ ವ್ಯವಹಾರಕ್ಕೆ ಮುಗಿಬಿದ್ದಿದ್ದಾರೆ.

ಕಲ್ಲುಕುಟಿಕರಿಗೆ ಕೆಲಸವಿಲ್ಲಸುತ್ತಲಿನ ಕೆಲವು ಕಲ್ಲು ಕುಟಿಕರು ಸ್ಥಳೀಯವಾಗಿ ಕಲ್ಲು ಕೆಲಸ ಇಲ್ಲವಾದ್ದರಿಂದ ಮಾಸ್ತಿ ಬಳಿಯ ದಿನ್ನಹಳ್ಳಿ ಸುತ್ತಮುತ್ತಲು ಬಂಗಾರಪೇಟೆಯ ಬೂದಿಕೋಟೆ, ಮುಳಬಾಗಿಲಿನ ಗೋಗುಂಟೆ, ಚಿಂತಾಮಣಿ ಬಳಿಯ ಚೇಳೂರು, ನರಸಾಪುರ ಬಳಿ ಹುನುಕುಂದ ಹೀಗೆ ಹಲವಾರು ಕಡೆ ಕಲ್ಲು ಕೆಲಸ ನಿರ್ವಹಿಸುತ್ತಿದ್ದಾರೆ. ಇನ್ನು ಕೆಲವರು ನಿರುದ್ಯೋಗಿಗಳಾಗಿದ್ದಾರೆ. ಅರಣ್ಯ ಇಲಾಖೆಯು ಇದೇ ಮೊದಲ ಬಾರಿಗೆ ಸರ್ವೇ ನಡೆಸಿ ಟ್ರಂಚಿಂಗ್ ಹಾಕಿದೆ. ಆದರೆ ಸುತ್ತಲು ಬೆಟ್ಟದಂಚಿನ ಸುಮಾರು ಕಿಲೋ ಮೀಟರ್ ಟ್ರಂಚಿಂಗ್, ಇಲಾಖೆ ಟ್ರಂಚಿಂಗ್‌ಗೆ ಟೆಂಡರ್ ಪ್ರಕ್ರಿಯೆ ನಡೆಸಲಾಗಿತ್ತು. ಆದರೆ ಈಗ ಅದನ್ನೂ ನಿಲ್ಲಿಸಲಾಗಿದೆ. ಇದಕ್ಕೆ ಕೆಲವು ಜನಪ್ರತಿನಿಧಿಗಳ ಒತ್ತಡ ಕಾರಣ ಎನ್ನಲಾಗಿದೆ. ಅಧಿಕಾರಿಗಳಿಗೆ ಗಿಡ ನೆಡದಂತೆ ಹಾಗೂ ಟ್ರಂಚಿಂಗ್ ಕಾರ್ಯ ನಿಲ್ಲಿಸುವಂತೆ ಒತ್ತಡ ಹೆರುತ್ತಿರುವ ಆರೋಪಗಳು ಕೇಳಿಬರುತ್ತಿವೆ.

ಸಸಿ ನೆಡಲು ಮಳೆ ಅಡ್ಡಿ

ಅರಣ್ಯ ಸಂರಕ್ಷಣಾಧಿಕಾರಿ ಧನಲಕ್ಷ್ಮೀ ಅವರು ಪ್ರತಿಕ್ರಿಯಿಸಿದ್ದು, ಕಳೆದ ೩-೪ ದಿನಗಳಿಂದ ತುಂತುರು ಮಳೆ ಹನಿಗಳು ಬೀಳುತ್ತಿರುವುದರಿಂದ ಗುಂಡಿ ತೋಡಿರುವ ಕಡೆ ಗಿಡ ನೆಡಲು ಸಾಧ್ಯವಾಗುತ್ತಿಲ್ಲ. ಮಳೆ ನಿಂತ ಮೇಲೆ ಗುಂಡಿಗಳಿಗೆ ಗಿಡ ನೆಡಲಾಗುತ್ತದೆ ಎಂದರು. 

Share this article