ಸಚಿವ ಸಂಪುಟದ ಪುನಾರಚನೆಗೆ ರಾಹುಲ್‌ ಗಾಂಧಿ ತಾತ್ವಿಕ ಒಪ್ಪಿಗೆ

KannadaprabhaNewsNetwork |  
Published : Nov 16, 2025, 01:45 AM ISTUpdated : Nov 16, 2025, 05:15 AM IST
Rahul Gandhi Siddaramaiah

ಸಾರಾಂಶ

ಮಹತ್ವದ ಬೆಳವಣಿಗೆಯೊಂದರಲ್ಲಿ, ರಾಜ್ಯ ಸಚಿವ ಸಂಪುಟ ಪುನಾರಚನೆ ಪ್ರಕ್ರಿಯೆ ಆರಂಭಿಸಲು ಕಾಂಗ್ರೆಸ್‌ ಹೈಕಮಾಂಡ್‌  ಒಪ್ಪಿಗೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ  ಕಾಂಗ್ರೆಸ್‌ ವರಿಷ್ಠ ರಾಹುಲ್ ಗಾಂಧಿ ಅವರನ್ನು  ಭೇಟಿ ಮಾಡಿ ಸಂಪುಟ ಪುನಾರಚನೆ ವಿಚಾರ ಪ್ರಸ್ತಾಪಿಸಿದಾಗ ತಾತ್ವಿಕ ಒಪ್ಪಿಗೆ ದೊರಕಿದೆ

 ಬೆಂಗಳೂರು :  ಮಹತ್ವದ ಬೆಳವಣಿಗೆಯೊಂದರಲ್ಲಿ, ರಾಜ್ಯ ಸಚಿವ ಸಂಪುಟ ಪುನಾರಚನೆ ಪ್ರಕ್ರಿಯೆ ಆರಂಭಿಸಲು ಕಾಂಗ್ರೆಸ್‌ ಹೈಕಮಾಂಡ್‌ ತಾತ್ವಿಕ ಒಪ್ಪಿಗೆ ನೀಡಿದೆ.

ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ವರಿಷ್ಠ ರಾಹುಲ್ ಗಾಂಧಿ ಅವರನ್ನು ಶನಿವಾರ ಭೇಟಿ ಮಾಡಿ ಸಂಪುಟ ಪುನಾರಚನೆ ವಿಚಾರ ಪ್ರಸ್ತಾಪಿಸಿದಾಗ ಈ ತಾತ್ವಿಕ ಒಪ್ಪಿಗೆ ದೊರಕಿದೆ. ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದು ನವೆಂಬರ್‌ 21ಕ್ಕೆ ಎರಡೂವರೆ ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಂಪುಟ ಪುನಾರಚನೆ ಮಾಡಲು ಅವಕಾಶ ನೀಡಬೇಕು ಎಂಬ ಸಿದ್ದರಾಮಯ್ಯ ಅವರ ಪ್ರಸ್ತಾಪಕ್ಕೆ ರಾಹುಲ್‌ ಗಾಂಧಿ ಅವರು ಈ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಸಮಾಲೋಚನೆ ನಡೆಸುವಂತೆ ಸೂಚನೆ ನೀಡಿದ್ದಾರೆ.

ತನ್ಮೂಲಕ ನವೆಂಬರ್‌ ಕ್ರಾಂತಿಯ ಭಾಗವೆನ್ನಲಾಗಿದ್ದ ಸಂಪುಟ ಪುನಾರಚನೆ ಪ್ರಕ್ರಿಯೆ ಆರಂಭಿಸಲು ಹೈಕಮಾಂಡ್‌ ತಾತ್ವಿಕ ಒಪ್ಪಿಗೆ ದೊರಕಿದಂತಾಗಿದೆ. ಹಾಗಂತ ಸಂಪುಟ ಪುನಾರಚನೆ ಶೀಘ್ರ ಘಟಿಸುವುದೇ ಎಂಬದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ವಿಚಾರದ ಬಗ್ಗೆ ಹೇಗೆ ಸ್ಪಂದಿಸುವರು ಎಂಬುದನ್ನು ಆಧರಿಸಿದೆ ಎನ್ನುತ್ತವೆ ಮೂಲಗಳು.

ಪುನಾರಚನೆ ಚೆಂಡು ಖರ್ಗೆ ಅಂಗಳಕ್ಕೆ!:

ಹಿರಿಯ ನಾಯಕ ಕಪಿಲ್ ಸಿಬಲ್ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಶನಿವಾರ ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಾಹ್ನದ ವೇಳೆಗೆ ವರಿಷ್ಠೆ ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ನಡೆದ ಮಾತುಕತೆಯಲ್ಲಿ ಬಹುಪಾಲು ಚರ್ಚೆ ಬಿಹಾರ ಚುನಾವಣೆ ಫಲಿತಾಂಶ ಕುರಿತು ನಡೆದಿದೆ ಎನ್ನಲಾಗಿದೆ. ಈ ಚರ್ಚೆಯ ನಂತರ ರಾಹುಲ್‌ ಹಾಗೂ ಸಿದ್ದರಾಮಯ್ಯ ಅವರು ಕೆಲವೊತ್ತು ಪ್ರತ್ಯೇಕವಾಗಿ ನೇರಾನೇರ ಮಾತುಕತೆ ನಡೆಸಿದ್ದು, ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ಸಂಪುಟ ಪುನಾರಚನೆ ವಿಚಾರ ಪ್ರಸ್ತಾಪಿಸಿದ್ದಾರೆ ಎನ್ನಲಾಗುತ್ತಿದೆ.

ರಾಹುಲ್‌ ಗಾಂಧಿ ಅವರು ಎಐಸಿಸಿ ಅಧ್ಯಕ್ಷರೊಂದಿಗೆ ಚರ್ಚಿಸಿ ಎಂದು ಹೇಳಿದ್ದನ್ನು ತಾತ್ವಿಕ ಒಪ್ಪಿಗೆ ಎಂದು ಪರಿಗಣಿಸಲಾಗುತ್ತಿದೆ. ಆದರೆ, ಇದು ನಿಜವಾಗಿಯೂ ಘಟಿಸಬೇಕಾದರೆ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಹಾಗೂ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚರ್ಚಿಸಬೇಕು.

ಈ ಚರ್ಚೆಯು ಫಲಪ್ರದವಾದರೆ ಆಗ ನಿಜವಾದ ಪ್ರಕ್ರಿಯೆ ಆರಂಭವಾಗಲಿದ್ದು, ಸಂಪುಟ ಸೇರಲಿರುವ ಆಕಾಂಕ್ಷಿಗಳ ಹೆಸರು ಹಾಗೂ ಸಂಪುಟದಿಂದ ಹೊರಹೋಗುವವರ ಹೆಸರು ಚರ್ಚೆಗೆ ಬರಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರವೇ ನಗರಕ್ಕೆ ಹಿಂತಿರುಗಲಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಭೇಟಿಗೆ ಅವಕಾಶ ದೊರಕಿರುವ ಹಿನ್ನೆಲೆಯಲ್ಲಿ ಸೋಮವಾರ ಮತ್ತೆ ದೆಹಲಿಗೆ ತೆರಳಲಿದ್ದಾರೆ. ಈ ಸಂದರ್ಭದಲ್ಲಿ ಅವಕಾಶ ದೊರೆತರೇ ಸಿದ್ದರಾಮಯ್ಯ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಸಂಪುಟ ಪುನಾರಚನೆ ವಿಚಾರ ಪ್ರಸ್ತಾಪಿಸಬಹುದು. ಈ ಪ್ರಸ್ತಾಪಕ್ಕೆ ಖರ್ಗೆ ಅವರ ಸ್ಪಂದನೆ ಹೇಗಿರಲಿದೆ ಎಂಬುದರ ಮೇಲೆ ಸಂಪುಟ ಪುನಾರಚನೆ ನಡೆಯುವುದೇ ಅಥವಾ ಮತ್ತಷ್ಟು ವಿಳಂಬವಾಗುವುದೇ ಎಂಬುದು ನಿರ್ಧಾರವಾಗಲಿದೆ. 

ಡಿಕೆಶಿ ದೆಹಲಿಗೆ!

ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ ಬೆನ್ನಲ್ಲೇ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೂ ರಾಹುಲ್ ಅವರ ಭೇಟಿಗೆ ಮುಂದಾಗಿದ್ದಾರೆ ಎನ್ನುತ್ತವೆ ಮೂಲಗಳು.

ದೆಹಲಿಯಲ್ಲಿ ಬೀಡುಬಿಟ್ಟಿರುವ ಶಿವಕುಮಾರ್‌ ಅವರು ಭಾನುವಾರ ಅವಕಾಶ ದೊರಕಿದರೆ ರಾಹುಲ್ ಅವರನ್ನು ಭೇಟಿ ಮಾಡುವ ಉದ್ದೇಶ ಹೊಂದಿದ್ದಾರೆ. ಈ ಭೇಟಿ ನಡೆದರೆ ಡಿ.ಕೆ. ಶಿವಕುಮಾರ್‌ ಅವರು ಸಂಪುಟ ಪುನಾರಚನೆ ವಿಚಾರ ಮತ್ತು ಅಧಿಕಾರ ಹಸ್ತಾಂತರ ವಿಚಾರ ಕುರಿತು ರಾಹುಲ್‌ ಅವರೊಂದಿಗೆ ಪ್ರಸ್ತಾಪಿಸುವರೇ ಎಂಬ ಕುತೂಹಲ ಕಾಂಗ್ರೆಸ್‌ ವಲಯದಲ್ಲಿದೆ.

ಆಪ್ತ ಮೂಲಗಳ ಪ್ರಕಾರ, ಸಂಪುಟ ಪುನಾರಚನೆಯೂ ಸೇರಿದಂತೆ ಯಾವುದೇ ಬೆಳವಣಿಗೆಗೂ ಮುನ್ನ ಅಧಿಕಾರ ಹಸ್ತಾಂತರದ ಬಗ್ಗೆ ಹೈಕಮಾಂಡ್‌ ಸ್ಪಷ್ಟತೆ ನೀಡಬೇಕು ಎಂದು ವರಿಷ್ಠರನ್ನು ಕೋರುವ ಮನಸ್ಥಿತಿಯಲ್ಲಿ ಡಿ.ಕೆ.ಶಿವಕುಮಾರ್ ಇದ್ದಾರೆ ಎನ್ನಲಾಗುತ್ತಿದೆ.

ನಾಳೆ ಸಂಜೆ 5ಕ್ಕೆ ಪ್ರಧಾನಿ-ಸಿಎಂ ಭೇಟಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಸೋಮವಾರ ಸಂಜೆ 5ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಮಯಾವಕಾಶ ಸಿಕ್ಕಿದೆ. ಹೀಗಾಗಿ ಅವರು ಸೋಮವಾರ ದೆಹಲಿಗೆ ತೆರಳಲಿದ್ದಾರೆ. ಕಬ್ಬು ಬೆಳೆಗಾರರ ಸಮಸ್ಯೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಅವರು ಚರ್ಚೆ ನಡೆಸುವ ನಿರೀಕ್ಷೆ ಇದೆ. ಕಬ್ಬು ಬೆಳೆಗಾರರ ಸಮಸ್ಯೆ ಕುರಿತು ಭೇಟಿ ಮಾಡಿ ಚರ್ಚೆ ನಡೆಸಲು ಅವಕಾಶ ನೀಡುವಂತೆ ಸಿದ್ದರಾಮಯ್ಯ ಅವರು ಕೆಲ ದಿನಗಳ ಹಿಂದೆ ಪತ್ರ ಬರೆದಿದ್ದರು. ಈ ಬಗ್ಗೆ ದಿಲ್ಲಿಯಲ್ಲಿ ಮಾತನಾಡಿದ ಸಿಎಂ, ‘ಅತಿವೃಷ್ಟಿ ಹಾನಿ, ರಾಜ್ಯಕ್ಕೆ ಹೆಚ್ಚಿನ ಅನುದಾನ ಸೇರಿ ಸೇರಿ ವಿವಿಧ ವಿಷಯಗಳ ಬಗ್ಗೆ ಚರ್ಚಿಸುವೆ. ನೆರೆ ಪರಿಶೀಲನೆಗೆ ತಂಡ ಕಳಿಸಲು ಕೋರುವೆ’ ಎಂದರು.

ನಿನ್ನೆ ಆಗಿದ್ದೇನು?

ಹಿರಿಯ ನಾಯಕ, ಹಿರಿಯ ವಕೀಲ ಕಪಿಲ್‌ ಸಿಬಲ್‌ ಪುಸ್ತಕ ಬಿಡುಗಡೆ ಸಮಾರಂಭ ನಿನ್ನೆ ದಿಲ್ಲಿಯಲ್ಲಿ ಆಯೋಜನೆ- ಅದರಲ್ಲಿ ಭಾಗಿಯಾಗಲು ರಾಜಧಾನಿಗೆ ತೆರಳಿದ್ದ ಸಿದ್ದರಾಮಯ್ಯ. ಈ ವೇಳೆ ಸೋನಿಯಾ ನಿವಾಸಕ್ಕೆ ಭೇಟಿ- ಆ ಸಂದರ್ಭ ರಾಹುಲ್‌ ಗಾಂಧಿ ಜತೆ ಸಮಾಲೋಚನೆ. ಬಿಹಾರ ಚುನಾವಣೆಯ ಬಗ್ಗೆಯೇ ಬಹುಪಾಲು ಚರ್ಚೆ- ಬಳಿಕ ಪ್ರತ್ಯೇಕವಾಗಿ ರಾಹುಲ್‌ ಜತೆ ಸಿಎಂ ಮಾತುಕತೆ. ಸಂಪುಟ ಪುನಾರಚನೆ ವಿಷಯದ ಬಗ್ಗೆ ಪ್ರಸ್ತಾಪ- ಎಐಸಿಸಿ ಅಧ್ಯಕ್ಷರ ಜತೆ ಈ ಬಗ್ಗೆ ಚರ್ಚಿಸಿ ಎಂದು ಹೇಳಿದ ರಾಹುಲ್‌. ಇದು ತಾತ್ವಿಕ ಒಪ್ಪಿಗೆ ಎಂದು ವ್ಯಾಖ್ಯಾನ

ಮುಂದೇನು?

ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ್‌, ಸುರ್ಜೇವಾಲಾ ಜತೆ ಸಿಎಂ ಚರ್ಚೆ ನಡೆಸಬೇಕು- ಪ್ರಧಾನಿ ಭೇಟಿಗೆ ಸಮಯ ನಿಗದಿ ಹಿನ್ನೆಲೆಯಲ್ಲಿ ಸೋಮವಾರ ಮತ್ತೆ ಮುಖ್ಯಮಂತ್ರಿ ದೆಹಲಿಗೆ- ಆ ವೇಳೆ ಅವಕಾಶ ದೊರೆತರೆ ಖರ್ಗೆ, ಮತ್ತಿತರ ನಾಯಕರ ಜತೆ ಸಿದ್ದು ಮಾತುಕತೆ ಸಂಭವ- ಅವರು ಹೇಗೆ ಸ್ಪಂದಿಸುತ್ತಾರೆ ಎಂಬುದರ ಮೇಲೆ ಸಂಪುಟ ಪುನಾರಚನೆಯ ಭವಿಷ್ಯ ಅವಲಂಬಿತ

ರಾಹುಲ್‌ರನ್ನು ಭೇಟಿ ಆಗ್ತಾರಾ ಡಿಸಿಎಂ ಡಿಕೆ?

ಹಿರಿಯ ನಾಯಕ ಕಪಿಲ್‌ ಸಿಬಲ್‌ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕೂಡ ಶನಿವಾರ ದೆಹಲಿಗೆ ತೆರಳಿದ್ದಾರೆ. ಅವಕಾಶ ಸಿಕ್ಕರೆ ಅವರು ಭಾನುವಾರ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಬಹುದು ಎನ್ನಲಾಗುತ್ತಿದೆ.

ಮೋದಿ ಭೇಟಿ ಆಗಲು ನಾಳೆ ಸಿಎಂ ಮತ್ತೆ ದೆಹಲಿಗೆ ಪ್ರಯಾಣ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಸೋಮವಾರ ಸಂಜೆ 5ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಮಯಾವಕಾಶ ಸಿಕ್ಕಿದೆ. ಹೀಗಾಗಿ ಅವರು ಸೋಮವಾರ ದೆಹಲಿಗೆ ತೆರಳಲಿದ್ದಾರೆ. ಕಬ್ಬು ಬೆಳೆಗಾರರ ಸಮಸ್ಯೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಅವರು ಚರ್ಚೆ ನಡೆಸುವ ನಿರೀಕ್ಷೆ ಇದೆ. ಕಬ್ಬು ಬೆಳೆಗಾರರ ಸಮಸ್ಯೆ ಕುರಿತು ಭೇಟಿ ಮಾಡಿ ಚರ್ಚೆ ನಡೆಸಲು ಅವಕಾಶ ನೀಡುವಂತೆ ಸಿದ್ದರಾಮಯ್ಯ ಅವರು ಕೆಲ ದಿನಗಳ ಹಿಂದೆ ಪತ್ರ ಬರೆದಿದ್ದರು.

PREV
Read more Articles on

Recommended Stories

ಎನ್‌ಡಿಎ ಜಯ ಹಿಂದೆ ಆರೆಸ್ಸೆಸ್‌ ‘ಮಿಷನ್‌ ತ್ರಿಶೂಲ್‌’!
ಕಾಂಗ್ರೆಸ್‌ ಈಗ ‘ಮುಸ್ಲಿಂ ಲೀಗ್‌-ಮಾವೋ’ ಪಕ್ಷ: ಮೋದಿ