;Resize=(412,232))
ಬೆಂಗಳೂರು : ಬಿಹಾರ ಚುನಾವಣೆ ಫಲಿತಾಂಶ ರಾಜ್ಯ ಕಾಂಗ್ರೆಸ್ ಸರ್ಕಾರದ ‘ನವೆಂಬರ್ ಕ್ರಾಂತಿ’ಗೆ ಇಂಬು ನೀಡುತ್ತದೆ ಎಂಬ ನಿರೀಕ್ಷೆ ಸಂಪೂರ್ಣ ಹುಸಿಹೋಗಿದ್ದು, ತೀವ್ರ ಬೆಳವಣಿಗೆ ಬಯಸುತ್ತಿದ್ದವರ ಉತ್ಸಾಹಕ್ಕೆ ಭಂಗ ಬಂದಿದೆ. ತನ್ಮೂಲಕ ರಾಜ್ಯ ಕಾಂಗ್ರೆಸ್ ವಲಯದಲ್ಲಿ ನಿಗೂಢ ಮೌನ ಆವರಿಸಿದೆ ಎನ್ನುತ್ತವೆ ಮೂಲಗಳು.
ಬಿಹಾರ ಚುನಾವಣೆ ಬೆನ್ನಲ್ಲೇ ಸಂಪುಟ ಪುನಾರಚನೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ನಾಯಕತ್ವ ಬದಲಾವಣೆಯಂಥ ಬೆಳವಣಿಗೆಗಳಿಗೆ ನಾಂದಿ ಹಾಡುವ ನಿರೀಕ್ಷೆಯಿತ್ತು. ಆದರೆ, ಬಿಹಾರ ಫಲಿತಾಂಶ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಮುಖಭಂಗ ಉಂಟು ಮಾಡಿರುವುದು ಸಹಜವಾಗಿಯೇ ಕಾಂಗ್ರೆಸ್ ಹೈಕಮಾಂಡ್‌ನ ಗಟ್ಟಿ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಕಮರುವಂತೆ ಮಾಡಿದೆ ಎಂಬುದು ಹಿರಿಯ ನಾಯಕರ ಅಭಿಪ್ರಾಯ.
ಕಾಂಗ್ರೆಸ್‌ನ ಉನ್ನತ ಮೂಲಗಳ ಪ್ರಕಾರ ಬಿಹಾರ ಚುನಾವಣೆ ಪರಿಣಾಮವಾಗಿ ತಕ್ಷಣಕ್ಕೆ ರಾಜ್ಯ ಕಾಂಗ್ರೆಸ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಜತೆಗೆ, ಸಚಿವ ಸಂಪುಟ ವಿಸ್ತರಣೆಯೂ ಸೇರಿ ಯಾವುದೇ ರೀತಿಯ ಮಹತ್ವದ ನಿರ್ಧಾರಗಳಿಗೂ ತಾತ್ಕಾಲಿಕ ತಡೆ ಬೀಳಲಿದೆ. ಆದರೆ, ಕಾಂಗ್ರೆಸ್ ಹೈಕಮಾಂಡ್ ತುಸು ದುರ್ಬಲಗೊಂಡಿತೇ ಎಂಬ ಗುಮಾನಿ ಒಂದು ಬಾರಿ ಕಾಂಗ್ರೆಸ್ ಶಾಸಕರ ಮಟ್ಟಕ್ಕೆ ಮುಟ್ಟಿದರೆ ಹಾಗೂ ರಾಜ್ಯ ಸರ್ಕಾರದ ಸ್ಥಿರತೆಗೆ ಧಕ್ಕೆ ಉಂಟುಮಾಡುವ ಪ್ರಯತ್ನಗಳಿಗೆ ಬಿಜೆಪಿ ಕೈ ಹಾಕಿದರೆ ಏನಾಗಬಹುದು ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ.
ಬಿಹಾರ ಚುನಾವಣೆ ಫಲಿತಾಂಶ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು ದೆಹಲಿಗೆ ಹಾರಲಿದ್ದಾರೆ. ಹೈಕಮಾಂಡ್ ಜತೆ ಚರ್ಚಿಸಿ ಸಂಪುಟ ಪುನರಾಚನೆ ಮಾಡಲಿದ್ದಾರೆ ಎಂಬ ಚರ್ಚೆ ನಡೆಯುತ್ತಿತ್ತು. ಇದಕ್ಕೆ ಪೂರಕವಾಗಿಯೇ ಸಿದ್ದರಾಮಯ್ಯ ಅವರು ಸಹ ಹೇಳಿಕೆ ನೀಡಿದ್ದರು. ಅಲ್ಲದೆ, ನಾಯಕತ್ವ ಬದಲಾವಣೆ ಪರ-ವಿರೋಧದ ಹೇಳಿಕೆಗಳು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ನಿರೀಕ್ಷೆಗಳೂ ಹುಟ್ಟಿಕೊಂಡಿದ್ದವು. ವರಿಷ್ಠರ ಎಚ್ಚರಿಕೆ ಹೊರತಾಗಿಯೂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಬಣದಿಂದ ದಿನಕ್ಕೊಂದು ಹೇಳಿಕೆ ಹೊರ ಬೀಳುತ್ತಿತ್ತು.
ಆದರೆ ಇದೀಗ ಬಿಹಾರದ ಬೆಳವಣಿಗೆಗಳಿಂದ ಹೈಕಮಾಂಡ್, ಕಮಾಂಡ್ ನೀಡುವ ಧ್ವನಿ ಕಳೆದುಕೊಂಡಿದೆ. ಬಿಹಾರದಲ್ಲಿ ಅಹಿಂದ ಮತ ಕಳೆದುಕೊಂಡಿರುವ ಕಾಂಗ್ರೆಸ್ ರಾಜ್ಯದಲ್ಲಿ ಅಹಿಂದ ನಾಯಕ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ದೂರ ಮಾಡುವ ಧೈರ್ಯ ಮಾಡಲಿಕ್ಕಿಲ್ಲ ಎಂಬ ವಾದ ಸಿದ್ದರಾಮಯ್ಯ ಬಣದಿಂದ ಕೇಳಿ ಬರುತ್ತಿದೆ.
ಆದರೆ, ಹೈಕಮಾಂಡ್ ಈ ರೀತಿ ತಟಸ್ಥವಾದರೆ ಡಿ.ಕೆ.ಶಿವಕುಮಾರ್ ಅವರ ಬಣ ಹೇಗೆ ಪ್ರತಿಕ್ರಿಯೆ ತೋರಲಿದೆ? ಶಿವಕುಮಾರ್ ತಾಳ್ಮೆ ವಹಿಸುತ್ತಾರಾ? ಅವರಿಗೆ ತಾಳ್ಮೆಯ ಪಾಠ ಮಾಡುವ ಸ್ಥಿತಿಯಲ್ಲಿ ಹೈಕಮಾಂಡ್ ಇದೆಯಾ ಎಂಬುದು ಇದೀಗ ಎದ್ದಿರುವ ಯಕ್ಷ ಪ್ರಶ್ನೆ.
ಸಂಪುಟ ಪುನಾರಚನೆ ವಿಳಂಬವಾದರೆ ಸಚಿವ ಸ್ಥಾನ ಕೈ ತಪ್ಪುವ ಸುಳಿವು ಪಡೆದಿದ್ದ ಸಚಿವರು ಸ್ವಲ್ಪ ನಿರಾಳರಾಗಬಹುದು. ಆದರೆ, ಹೊಸದಾಗಿ ಸಂಪುಟದಲ್ಲಿ ಅವಕಾಶ ಪಡೆಯಬೇಕಾಗಿದ್ದ ಆಕಾಂಕ್ಷಿಗಳು ತಾಳ್ಮೆ ವಹಿಸುತ್ತಾರೆಯೇ? ಮತ್ತೊಂದೆಡೆ ಕಾಂಗ್ರೆಸ್‌ಗೆ 136 ಶಾಸಕರ ಬೆಂಬಲವಿದ್ದರೂ ಬಿಹಾರದ ಗೆಲುವಿನ ಹುಮ್ಮಸ್ಸಿನಲ್ಲಿ ಸರ್ಕಾರವನ್ನು ಅತಂತ್ರಗೊಳಿಸಲು ಬಿಜೆಪಿ ಯತ್ನಿಸುವುದೇ ಎಂಬ ಆತಂಕ ಕಾಂಗ್ರೆಸ್‌ನ ಒಂದು ವಲಯದಲ್ಲಿದೆ.
ಬಿಹಾರ ಫಲಿತಾಂಶ ಕಾಂಗ್ರೆಸ್‌ಗೆ ಎಚ್ಚರಿಕೆ ಗಂಟೆ ಮೊಳಗಿಸಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಆಡಳಿತವನ್ನು ಮತ್ತಷ್ಟು ಕ್ರಿಯಾಶೀಲ ಮಾಡಿ ಅಭಿವೃದ್ದಿಪರ ಯೋಜನೆಗಳಿಗೆ ಹಾಗೂ ಜನಪರ ಯೋಜನೆಗಳಿಗೆ ಒತ್ತು ಕೊಡಬೇಕಾದ ಅನಿವಾರ್ಯತೆ ಸರ್ಕಾರಕ್ಕೆ ಸೃಷ್ಟಿಯಾಗಿದೆ. ಹೀಗಾಗಿ ರಾಜ್ಯದಲ್ಲಿ ಮಾಡಬೇಕಿರುವ ಪ್ರತಿ ಬದಲಾವಣೆಯ ಪರಿಣಾಮ, ದುಷ್ಪರಿಣಾಮಗಳ ಬಗ್ಗೆ ಹೈಕಮಾಂಡ್ ಅಳೆದು ತೂಗಿ ನಿರ್ಧಾರ ಮಾಡಬೇಕಾದ ಸಂದಿಗ್ದತೆ ಉಂಟಾಗಿದೆ. ಹೀಗಾಗಿ ರಾಜ್ಯ ರಾಜಕಾರಣದ ಮುಂದಿನ ಬೆಳವಣಿಗೆಗಳ ಬಗ್ಗೆ ಕುತೂಹಲ ಸೃಷ್ಟಿಯಾಗಿದೆ.