;Resize=(412,232))
ಬೆಂಗಳೂರು : ‘ವೋಟ್ ಚೋರಿ ಎನ್ನುವ ಸುಳ್ಳು ಸಂಕಥನ ಸೃಷ್ಟಿಸಿದ್ದ ಕಾಂಗ್ರೆಸ್ ಪಕ್ಷಕ್ಕೆ ಬಿಹಾರ ಮತದಾರರು ತಕ್ಕಪಾಠ ಕಲಿಸಿದ್ದಾರೆ’ ಎಂದು ಕೆಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
‘ಬಿಹಾರದಲ್ಲಿ ಎನ್‌ಡಿಎ ಪರ ಬಂದಿರುವ ಈ ಐತಿಹಾಸಿಕ ವಿಜಯವೂ ಮುಂಬರುವ ಕರ್ನಾಟಕದ ವಿಧಾನಸಭೆ ಚುನಾವಣೆ ಮೇಲೆಯೂ ಗಾಢ ಪ್ರಭಾವ ಬೀರಲಿದೆ. ಜೆಡಿಎಸ್-ಬಿಜೆಪಿ ಮೈತ್ರಿಕೂಟವೂ ಮುಂದಿನ ಚುನಾವಣೆಯಲ್ಲಿ ಉತ್ತಮ ಬಹುಮತದೊಂದಿಗೆ ಸರ್ಕಾರ ಮಾಡುವುದು ಶತಃಸಿದ್ಧ’ ಎಂದೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಫಲಿತಾಂಶದ ಬಳಿಕ ದೆಹಲಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಂಡು ಸುಳ್ಳಿನ ಕಥೆಗಳನ್ನೇ ಸೃಷ್ಟಿಸಿ ಅಪಪ್ರಚಾರ ನಡೆಸಿತು. ಬಿಹಾರದ ಪ್ರಬುದ್ಧ ಮತದಾರರು ಇದಕ್ಕೆ ತಕ್ಕ ಪ್ರತಿಕ್ರಿಯೆ ನೀಡಿ ಆ ಪಕ್ಷಕ್ಕೆ ಕಪಾಳಮೋಕ್ಷ ಮಾಡಿದ್ದಾರೆ ಎಂದರು.
ಪ್ರಧಾನಿ ಮೋದಿ ಅವರ ಅಭಿವೃದ್ಧಿಪರ ಆಡಳಿತ ಹಾಗೂ 2047ಕ್ಕೆ ವಿಕಸಿತ ಭಾರತ ಸಾಕಾರ ಆಗಬೇಕೆನ್ನುವ ಅವರ ದೃಢ ಸಂಕಲ್ಪಕ್ಕೆ ಬಿಹಾರದ ಜನತೆ ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಇದಕ್ಕಾಗಿ ನಾನು ಅಲ್ಲಿನ ಜನರನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.
ಪ್ರಧಾನಿ ಮೋದಿ ಅವರ ನೇತೃತ್ವದ ಬಲಿಷ್ಠ ಎನ್‌ಡಿಎ ಮೈತ್ರಿಕೂಟವು ಸ್ವಾತಂತ್ರ್ಯೋತ್ತರ ಭಾರತದಲ್ಲಿಯೇ ಹಿಂದೆಂದೂ ಕಂಡಿರದ ದಾಖಲೆ ವಿಜಯ ಸಾಧಿಸಿದೆ. ಮೋದಿ ಅವರೊಂದಿಗೆ ಮೈತ್ರಿಕೂಟದ ಜಯಕ್ಕಾಗಿ ಅವಿರತವಾಗಿ ದುಡಿಮೆ ಮಾಡಿದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವರಾದ ಚಿರಾಗ್ ಪಾಸ್ವಾನ್ ಹಾಗೂ ಜಿತಿನ್ ಕುಮಾರ್ ಮಾಂಜಿ ಅವರನ್ನು ನಾನು ಅಭಿನಂಧಿಸುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದರು.
ಈಗಾಗಲೇ ರಾಜ್ಯ ಕಾಂಗ್ರೆಸ್ ಸರ್ಕಾರ ಆಡಳಿತ ವಿರೋಧಿ ಅಲೆಯಿಂದ ನರಳುತ್ತಿದೆ. ಕಳೆದ ಎರಡೂವರೆ ವರ್ಷದಿಂದ ನಾಯಕತ್ವ ಬದಲಿಸುವುದರಲ್ಲೇ ಕಾಂಗ್ರೆಸ್ ಕಾಲಹರಣ ಮಾಡಿದೆ. ಜನ ಭ್ರಮನಿರಸಗೊಂಡಿದ್ದು, ಬಹಳ ನಿರೀಕ್ಷೆ ಇಟ್ಟುಕೊಂಡು 136 ಸ್ಥಾನ ಕೊಟ್ಟಿದ್ದಕ್ಕೆ ನಿರಾಶರಾಗಿದ್ದಾರೆ. ರಾಜ್ಯದ ಜನ ಯಾವಾಗ ಚುನಾವಣೆ ಬರುತ್ತದೋ ಎಂದು ನೋಡುತ್ತಿದ್ದಾರೆ. ಕಾಂಗ್ರೆಸ್ಸಿಗೆ ಪಾಠ ಕಲಿಸಲು ಮಾನಸಿಕವಾಗಿ ಸಿದ್ಧವಾಗಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ರಾಜ್ಯದಲ್ಲಿ ಎನ್‌ಡಿಎ ಮೈತ್ರಿಕೂಟ ಬಲಿಷ್ಠವಾಗಿದೆ. ಬಿಜೆಪಿ- ಜೆಡಿಎಸ್ ನಾಯಕರೆಲ್ಲರೂ ಒಂದೇ ವೇದಿಕೆಯಲ್ಲಿ ಹೋಗುತ್ತಿದ್ದೇವೆ. ಬಿಹಾರದಂತೆಯೇ ಕರ್ನಾಟಕದಲ್ಲಿಯೂ ದಾಖಲೆಯ ಫಲಿತಾಂಶ ಪಡೆಯಲು ಮೋದಿ ಅವರ ನಾಯಕತ್ವದಲ್ಲಿ ಕೆಲಸ ಮಾಡುತ್ತೇವೆ. ಬಿಹಾರದ ದಾಖಲೆಯನ್ನು ಮುರಿಯುವ ರೀತಿಯಲ್ಲಿ ಕೆಲಸ ಮಾಡುತ್ತೇವೆ ಎಂದು ಅವರು ವಿಶ್ವಾಸದಿಂದ ನುಡಿದರು.