;Resize=(412,232))
ತುಮಕೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನೆಗಳಲ್ಲಿ ಉಪಹಾರ ಕೂಟ ಏರ್ಪಡಿಸಿರುವುದು ಬೀಗತನ ಮಾಡಿದಂತೆ ಆಗಿದೆ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎನ್.ರಾಜಣ್ಣ, ಹಳ್ಳಿಯ ಕಡೆ ಗಂಡು ನೋಡಲು ಒಂದು ಸಾರಿ, ಹೆಣ್ಣು ನೋಡಲು ಒಂದು ಸಾರಿ, ಮನೆ ನೋಡಲು ಹೋಗುತ್ತಾರೆ. ಹಾಗಾಗಿದೆ ಈ ಇಬ್ಬರ ಕಥೆ ಎಂದರು.
ಈಗಿನ ಪರಿಸ್ಥಿತಿಯಲ್ಲಿ ರಿವರ್ಸ್ ಏನೂ ಆಗಲ್ಲ, ಇರುವ ವ್ಯವಸ್ಥೆಯೇ ಮುಂದುವರಿದುಕೊಂಡು ಹೋಗುತ್ತದೆ. ಬೆಳಗಾವಿಯ ಅಧಿವೇಶನ ಮುಗಿದ ಬಳಿಕ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಒಂದೊಮ್ಮೆ ಏನಾದರೂ ಅನಿವಾರ‍್ಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪದಚ್ಯುತಿ ಆದರೆ ದಲಿತ ಸಿಎಂ ಆಗಿ ಪರಮೇಶ್ವರ್ ಆಗಬೇಕು ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ ಹೇಳಿದ್ದೇನೆ ಎಂದರು.
‘ರಾಜಣ್ಣ ಬರ್ತ್‌ಡೇಗೆ ನಾ ಹೋಗಿದ್ದು ಬೀಗತನವೇ?’
ನವದೆಹಲಿ: ‘ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರ ಮನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಊಟಕ್ಕೆ ಹೋಗಿದ್ದರು. ಅದು ಬೀಗತನದ ಸಭೆನಾ? ನಾನು ರಾಜಣ್ಣ ಅವರ ಬರ್ತ್‌ಡೇ ಪಾರ್ಟಿಗೆ ಹೋಗಿದ್ದೆ. ಅದು ಬೀಗತನವೇ?’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.ಸಿದ್ದರಾಮಯ್ಯ ಮತ್ತಿ ಡಿ.ಕೆ.ಶಿವಕುಮಾರ್ ನಡುವಿನ ಬ್ರೇಕ್‌ಫಾಸ್ಟ್ ಮೀಟಿಂಗ್ ಬೀಗತನದಂತೆ ಎಂದು ಕೆ.ಎನ್.ರಾಜಣ್ಣ ವ್ಯಂಗ್ಯವಾಡಿದ್ದರು. ಈ ಕುರಿತು ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ ಡಿಕೆಶಿ, ರಾಜಣ್ಣ ಅವರ ಮನೆಗೆ ಸಿಎಂ ಊಟಕ್ಕೆ ಹೋಗಿದ್ದು, ನಾನು ಅವರ ಬರ್ತ್‌ಡೇ ವೇಳೆ ಹೋಗಿದ್ದು ಬೀಗತನವೇ? ಎಂದು ತಿರುಗೇಟು ನೀಡಿದರು.