ರಾಜ್ಯಸಭೆ, ವಿಧಾನ ಪರಿಷತ್ ಟಿಕೆಟ್: ಮಂಡ್ಯಕ್ಕೆ ಬಂಪರ್..!

KannadaprabhaNewsNetwork |  
Published : Jun 08, 2026, 01:30 AM IST
ದಡದಪುರ ಶಿವಣ್ಣ | Kannada Prabha

ಸಾರಾಂಶ

ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಸ್ಥಾನಗಳ ಕಾಂಗ್ರೆಸ್ ಪಕ್ಷದ ಟಿಕೆಟ್ ಹಂಚಿಕೆಯಲ್ಲಿ ಮಂಡ್ಯ ಜಿಲ್ಲೆಗೆ ಬಂಪರ್ ಹೊಡೆದಿದೆ. ಇದೇ ಪ್ರಥಮ ಬಾರಿಗೆ ರಾಜ್ಯ ಸಭೆಯ ಒಂದು ಸ್ಥಾನ ಹಾಗೂ ಪರಿಷತ್‌ನ ಎರಡು ಸ್ಥಾನಗಳಿಗೆ ಮಂಡ್ಯ ಮೂಲದವರಿಗೆ ಟಿಕೆಟ್ ದೊರಕಿದೆ.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಸ್ಥಾನಗಳ ಕಾಂಗ್ರೆಸ್ ಪಕ್ಷದ ಟಿಕೆಟ್ ಹಂಚಿಕೆಯಲ್ಲಿ ಮಂಡ್ಯ ಜಿಲ್ಲೆಗೆ ಬಂಪರ್ ಹೊಡೆದಿದೆ. ಇದೇ ಪ್ರಥಮ ಬಾರಿಗೆ ರಾಜ್ಯ ಸಭೆಯ ಒಂದು ಸ್ಥಾನ ಹಾಗೂ ಪರಿಷತ್‌ನ ಎರಡು ಸ್ಥಾನಗಳಿಗೆ ಮಂಡ್ಯ ಮೂಲದವರಿಗೆ ಟಿಕೆಟ್ ದೊರಕಿದೆ.

ಕೆ.ಆರ್.ಪೇಟೆ ಕ್ಷೇತ್ರದ ಕೇಂದ್ರ ಮಾಜಿ ಸಚಿವ ಕೆ.ರೆಹಮಾನ್‌ಖಾನ್ ಪುತ್ರ ಮನ್ಸೂರ್ ಆಲಿಖಾನ್ ಅವರಿಗೆ ರಾಜ್ಯಸಭೆ ಟಿಕೆಟ್ ದೊರಕಿದ್ದರೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಮಳವಳ್ಳಿ ಕ್ಷೇತ್ರದ ದಡದಪುರ ಶಿವಣ್ಣ ಹಾಗೂ ಜಿಲ್ಲೆಯ ಹಿರಿಯ ರಾಜಕಾರಣಿ ಸಾಹುಕಾರ್ ಚನ್ನಯ್ಯನವರ ಮೊಮ್ಮಗ ಹಾಗೂ ಕೆಪಿಸಿಸಿ ಖಜಾಂಚಿ ವಿನಯ್ ಕಾರ್ತಿಕ್ ಅವರಿಗೆ ವಿಧಾನ ಪರಿಷತ್ ಟಿಕೆಟ್ ದೊರಕಿದೆ.

ವಿಧಾನ ಪರಿಷತ್‌ಗೆ ನಾಲ್ಕನೇ ಅಭ್ಯರ್ಥಿಯಾಗಿರುವ ದಡದಪುರ ಶಿವಣ್ಣ ಅವರು ಹಿಂದಿನಿಂದಲೂ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಸಿದ್ದರಾಮಯ್ಯನವರು ಭಾಗವಹಿಸುತ್ತಿದ್ದ ಬಹುತೇಕ ಸಭೆ-ಸಮಾರಂಭಗಳಲ್ಲಿ ಶಿವಣ್ಣನವರ ಹಾಜರಾತಿ ಇರುತ್ತಿತ್ತು. ಶ್ರೀರಾಮಮನೋಹರ ಲೋಹಿಯಾ ವಿಚಾರ ವೇದಿಕೆ ಅಧ್ಯಕ್ಷರಾಗಿ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ. ಸಾಮಾಜಿಕ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಶಿವಣ್ಣ ಅವರು, ರಾಜಕೀಯವಾಗಿ ಕಾಂಗ್ರೆಸ್ ಪಕ್ಷದಲ್ಲೂ ಸಕ್ರಿಯರಾಗಿದ್ದಾರೆ. ಬೆಂಗಳೂರಿನಲ್ಲಿ ನೆಲೆಸಿದ್ದರೂ ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.

ಪ್ರಸ್ತುತ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ದಡದಪುರ ಶಿವಣ್ಣ ಕಾಂಗ್ರೆಸ್‌ನ ನಿಷ್ಠಾವಂತ ಮುಖಂಡರೆನಿಸಿಕೊಂಡಿದ್ದಾರೆ. ಇದುವರೆಗೂ ಜಿಲ್ಲೆಯಿಂದ ಹಿಂದುಳಿದ ವರ್ಗ ಕುರುಬ ಸಮುದಾಯಕ್ಕೆ ವಿಧಾನ ಪರಿಷತ್ ಪ್ರವೇಶಿಸುವ ಅವಕಾಶ ದೊರಕಿರಲಿಲ್ಲ. ಇದೀಗ ದಡದಪುರ ಶಿವಣ್ಣ ಅವರಿಗೆ ಕಾಂಗ್ರೆಸ್‌ನಿಂದ ವಿಧಾನ ಪರಿಷತ್‌ಗೆ ನಾಲ್ಕನೇ ಅಭ್ಯರ್ಥಿಯಾಗಿ ಪ್ರವೇಶ ಪಡೆಯುವ ಅದೃಷ್ಟ ಒಲಿದುಬಂದಿದೆ.

೧೯೯೯ರಲ್ಲಿ ಮಳವಳ್ಳಿಯ ಕಿರುಗಾವಲು ಕ್ಷೇತ್ರದಿಂದ ಜನತಾದಳ ಅಭ್ಯರ್ಥಿಯಾಗಿ ಶಿವಣ್ಣ ಸ್ಪರ್ಧಿಸಿದ್ದರು. ಆ ನಂತರ ರಾಜಕೀಯ ಸ್ಥಿತ್ಯಂತರಗಳಿಂದ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದರಿಂದ ಶಿವಣ್ಣ ಕೂಡ ಕಾಂಗ್ರೆಸ್ ಸೇರ್ಪಡೆಯಾದರು. ಕಿರುಗಾವಲು ಕ್ಷೇತ್ರ ಮಳವಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ವಿಲೀನಗೊಂಡ ನಂತರ ಆಕಾಂಕ್ಷಿಯಾಗಿದ್ದರು. ಆದರೆ, ಮೀಸಲು ಕ್ಷೇತ್ರವಾಗಿದ್ದರಿಂದ ಸ್ಪರ್ಧೆಗೆ ಅವಕಾಶ ಸಿಗಲಿಲ್ಲ. ಆದರೂ ಕಾಂಗ್ರೆಸ್ ಪಕ್ಷ ಹಾಗೂ ಸಾಮಾಜಿಕ ಸೇವೆಯಲ್ಲಿ ಮುಂದುವರೆದಿದ್ದಾರೆ.ಸಾಹುಕಾರ್‌ ಚನ್ನಯ್ಯ ಮೊಮ್ಮಗ ವಿನಯ್‌ ಕಾರ್ತಿಕ್‌

ಕಾಂಗ್ರೆಸ್ ಪಕ್ಷದಿಂದ ಐದನೇ ಅಭ್ಯರ್ಥಿಯಾಗಿ ಕಣ ಪ್ರವೇಶಿಸಲಿರುವ ವಿನಯ್ ಕಾರ್ತಿಕ್ ಕೂಡ ಮಂಡ್ಯ ಮೂಲದವರೇ ಆಗಿದ್ದಾರೆ. ಜಿಲ್ಲೆಯ ಹಿರಿಯ ರಾಜಕಾರಣಿ ಸಾಹುಕಾರ್ ಚನ್ನಯ್ಯನವರ ಮೊಮ್ಮಗ. ಪ್ರಸ್ತುತ ಕೆಪಿಸಿಸಿ ಖಜಾಂಚಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ವಿನಯ್ ಕಾರ್ತಿಕ್ ಭಾರತ್ ಜೋಡೋ ಯಾತ್ರೆ ಹಾಗೂ ಮೇಕೆದಾಟು ಪಾದಯಾತ್ರೆಯ ಉಸ್ತುವಾರಿ ವಹಿಸಿಕೊಂಡು ಸಮರ್ಥವಾಗಿ ನಿಭಾಯಿಸಿದ್ದರು. ವಿನಯ್ ಕಾರ್ತಿಕ್ ಐದನೇ ಅಭ್ಯರ್ಥಿಯಾಗಿ ಪರಿಷತ್ ಪ್ರವೇಶಿಸುವ ಆಕಾಂಕ್ಷೆಯನ್ನು ಹೊಂದಿದ್ದಾರೆ. ಆದರೆ, ಇವರ ಪರಿಷತ್ ಪ್ರವೇಶಕ್ಕೆ ಐದು ಮತಗಳ ಅವಶ್ಯಕತೆ ಇದೆ. ಅದನ್ನು ಯಾವ ರೀತಿ ಸರಿದೂಗಿಸುವರೆಂಬ ಕುತೂಹಲ ಮೂಡಿದೆ. ವಿನಯ್ ಕಾರ್ತಿಕ್ ಅವರನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಕಣಕ್ಕಿಳಿಸುತ್ತಿದ್ದಾರೆಂದು ಹೇಳಲಾಗುತ್ತಿದ್ದು, ಅದರ ಹಿಂದಿನ ರಣತಂತ್ರ ಏನೆಂಬುದನ್ನು ಕಾದುನೋಡಬೇಕಿದೆ.ಮನ್ಸೂರ್ ಅಲಿಖಾನ್‌ಗೆ ಹೈಕಮಾಂಡ್ ಕೃಪಾಶೀರ್ವಾದ

ರಾಜ್ಯಸಭೆ ಪ್ರವೇಶಿಸಲು ಮುಂದಾಗಿರುವ ಮನ್ಸೂರ್ ಆಲಿಖಾನ್ ಕೇಂದ್ರ ಮಾಜಿ ಸಚಿವ ಕೆ.ರೆಹಮಾನ್‌ಖಾನ್ ಅವರ ಪುತ್ರ. ಕೆ.ರೆಹಮಾನ್‌ಖಾನ್ ಅವರು ಕೆ.ಆರ್.ಪೇಟೆ ಕ್ಷೇತ್ರದಿಂದಲೇ ರಾಜ್ಯಸಭೆ ಪ್ರವೇಶಿಸಿ ಕೇಂದ್ರದ ಅಂದಿನ ಯುಪಿಎ ಸರ್ಕಾರದಲ್ಲಿ ಮಂತ್ರಿಯಾಗಿದ್ದರು. ಹೈಕಮಾಂಡ್ ನಾಯಕರೊಂದಿಗೆ ಉತ್ತಮ ನಿಕಟ ಸಂಪರ್ಕ ಹೊಂದಿದ್ದರು. ಇದೇ ಕಾರಣಕ್ಕೆ ಅವರ ಪುತ್ರ ಮನ್ಸೂರ್ ಅಲಿಖಾನ್‌ಗೆ ರಾಜ್ಯಸಭೆ ಪ್ರವೇಶಕ್ಕೆ ಕೈ ಹೈಕಮಾಂಡ್ ಅವಕಾಶ ಕಲ್ಪಿಸಿದೆ ಎನ್ನಲಾಗಿದೆ.

ಕೆ.ಆರ್.ಪೇಟೆ ಮೂಲದವರಾಗಿದ್ದರೂ ಮನ್ಸೂರ್ ಆಲಿಖಾನ್ ಹಾಲಿ ಬೆಂಗಳೂರಿನಲ್ಲಿ ನೆಲೆಸಿದ್ದು, ಅಲ್ಲಿನ ಮತದಾರರಾಗಿದ್ದಾರೆ. ಕಳೆದ ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಮತ್ತೆ ಕಾಂಗ್ರೆಸ್ ಪಕ್ಷ ರಾಜ್ಯಸಭೆ ಚುನಾವಣೆ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿದೆ. ತಂದೆಗೆ ನೀಡಿದ್ದ ಅವಕಾಶವನ್ನು ಪುತ್ರನಿಗೂ ನೀಡಿರುವುದರಿಂದ ಮನ್ಸೂರ್ ತಂದೆಯ ಹಾದಿಯಲ್ಲೇ ಮುನ್ನಡೆದಿದ್ದಾರೆ.ಪವಾಡ ನಡೆದರೆ ಜಿಲ್ಲೆಗೆ ನಾಲ್ಕು ಎಂಎಲ್‌ಸಿಗಳು

ವಿಧಾನ ಪರಿಷತ್ ಚುನಾವಣೆಯಲ್ಲಿ ದಡದಪುರ ಶಿವಣ್ಣ ನಾಲ್ಕನೇ ಅಭ್ಯರ್ಥಿಯಾಗಿ, ವಿವೇಕ್ ಕಾರ್ತಿಕ್ ಐದನೇ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಚುನಾವಣೆಯಲ್ಲಿ ಪವಾಡವೇನಾದರೂ ನಡೆದು ಇಬ್ಬರೂ ಆಯ್ಕೆಯಾದರೆ ಜಿಲ್ಲೆಗೆ ನಾಲ್ಕು ವಿಧಾನ ಪರಿಷತ್ ಸದಸ್ಯರು ಸಿಕ್ಕಂತಾಗುತ್ತದೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ನ ಐದು ಸ್ಥಾನಗಳ ಪೈಕಿ ನಾಲ್ಕನೇ ಅಭ್ಯರ್ಥಿಯಾಗಿ ದಡದಪುರ ಶಿವಣ್ಣ ಕಣಕ್ಕಿಳಿದಿದ್ದಾರೆ. ಅವರು ಚುನಾವಣೆ ನಡೆದರೆ ಇಲ್ಲವೇ, ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ. ಒಮ್ಮೆ ವಿನಯ್ ಕಾರ್ತಿಕ್ ಗೆಲುವು ಕಷ್ಟವೆನಿಸಿದ್ದರೂ ಕೊನೇ ಘಳಿಗೆಯಲ್ಲಿ ನಡೆಸುವ ತಂತ್ರಗಾರಿಕೆ ಫಲಿಸಿದರೆ ಅವರಿಗೂ ಪರಿಷತ್ ಪ್ರವೇಶಿಸುವ ಅವಕಾಶ ಸಿಗಲಿದೆ. ಈಗಾಗಲೇ ಸ್ಥಳೀಯ ಸಂಸ್ಥೆಗಳಿಂದ ದಿನೇಶ್‌ ಗೂಳಿಗೌಡ, ದಕ್ಷಿಣ ಪದವೀಧರ ಕ್ಷೇತ್ರದಿಂದ ಮಧು ಜಿ.ಮಾದೇಗೌಡ ಸದಸ್ಯರಾಗಿದ್ದಾರೆ. ಇವರೊಂದಿಗೆ ದಡದಪುರ ಶಿವಣ್ಣ ಸೇರಿಕೊಳ್ಳಬಹುದು. ವಿನಯ್‌ ಕಾರ್ತಿಕ್ ಪ್ರವೇಶ ಹೇಗೆ ಎನ್ನುವುದು ಕುತೂಹಲ ಮೂಡಿಸಿದೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಸಚಿವನಾಗಲು ನಾನು ಫಿಟ್ ಇದ್ದೇನೆ: ರಮೇಶ್ ಬಂಡಿಸಿದ್ದೇಗೌಡ
ಡಿಕೆಶಿ ಸಿಎಂ ಆಗಿರೋದು ನಾನೇ ಮಂತ್ರಿಯಾದಷ್ಟು ಸಂತೋಷ: ಪಿ.ರವಿಕುಮಾರ್