ಮರಳೂರುದಿಣ್ಣೆಯಲ್ಲಿ ಜಯಕರ್ನಾಟಕದಿಂದ ನಾಡಹಬ್ಬ ಆಚರಣೆ
ಕನ್ನಡಪ್ರಭ ವಾರ್ತೆ ತುಮಕೂರುನಗರದ ಮರಳೂರು ದಿಣ್ಣೆಯ ಯಾದವ ನಗರದಲ್ಲಿ ಜಯಕರ್ನಾಟಕ ಸಂಘಟನೆಯಿಂದ ಸಾರ್ವಜನಿಕರಿಗೆ ಆರೋಗ್ಯ ಸೇವೆ ಒದಗಿಸುವ ಮೂಲಕ ಕನ್ನಡ ರಾಜ್ಯೋತ್ಸವ ಅಚರಿಸಲಾಯಿತು. ಇದರ ಪ್ರಯುಕ್ತ ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ, ನೇತ್ರ ತಪಸಣೆ ಹಾಗೂ ಶಾಲಾ ಮಕ್ಕಳಿಗೆ ಪಠ್ಯ ಪರಿಕರ ವಿತರಿಸಲಾಯಿತು.ಜಯಕರ್ನಾಟಕ ಸಂಘಟನೆಯ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಸಿ.ಪಿ.ಸುಧೀರ್ ಮಾತನಾಡಿ, ಅಭಿಮಾನ, ಸಡಗರ, ಸಂಭ್ರಮದ ಜೊತೆಗೆ ಬಡವರಿಗೆ, ಸಮಾಜಕ್ಕೆ ನೆರವಾಗುವಂತಹ ಸೇವಾ ಕಾರ್ಯಕ್ರಮಗಳೊಂದಿಗೆ ಕನ್ನಡ ರಾಜ್ಯೋತ್ಸವ ಆಚರಿಸಿ ಸಮಾಜಕ್ಕೆ ಮಾದರಿಯಾಗಬೇಕು. ಅಂತಹ ಕಾರ್ಯಕ್ರಮಗಳು ಅರ್ಥಪೂರ್ಣವಾಗುತ್ತವೆ ಎಂದು ಹೇಳಿದರು.
ಕನ್ನಡ ಸಂಘಟನೆಯಲ್ಲಿರುವವರು ಕನ್ನಡ ನಾಡು, ನುಡಿ, ಸಂಸ್ಕೃತಿಗೆ ಧಕ್ಕೆಯಾದಾಗ ಧ್ವನಿ ಮಾಡಿ ಹೋರಾಟ ನಡೆಸಲು ಸಿದ್ಧರಿರಬೇಕು. ಜೊತೆಗೆ ಅಶಕ್ತರಿಗೆ ನೆರವಾಗಬೇಕು, ಸಮಾಜಕ್ಕೆ ಸಹಾಯವಾಗುವಂತಹ ಕಾರ್ಯಗಳನ್ನು ಮಾಡಬೇಕು. ಆ ಮೂಲಕ ಕನ್ನಡಿಗನಾಗಿ ಸಾರ್ಥಕತೆ ಕಂಡುಕೊಳ್ಳಬೇಕು ಎಂದು ಸಲಹೆ ಮಾಡಿದರು.ಕಾಂಗ್ರೆಸ್ ಮುಖಂಡ ಚಾಂದ್ ಪಾಷ ಅವರು, ಕನ್ನಡ ರಾಜ್ಯೋತ್ಸವ ನಾಡಿನ ಎಲ್ಲರ ಮನೆ ಹಬ್ಬ ಆಗಬೇಕು. ಯುಗಾದಿ, ರಂಜಾನ್, ಬಕ್ರೀದ್ ರೀತಿಯಲ್ಲಿ ರಾಜ್ಯೋತ್ಸವ ಆಚರಿಸಬೇಕು ಎಂದರು.
ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಅನಿಲ್ ನಾಯಕ್ ಮಾತನಾಡಿ, ಕನ್ನಡ ಬಾವುಟ ಹಾರಿಸಿ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ರಾಜ್ಯೋತ್ಸವ ಸೀಮಿತವಾಗದೆ, ಸೇವಾ ಕಾರ್ಯಗಳಿಗೂ ಆದ್ಯತೆ ನೀಡಬೇಕು. ಸಂಘಟನೆಯ ಪ್ರತಿಯೊಬ್ಬರೂ ಸಮಾಜಕ್ಕೆ ಏನಾದರೂ ಕೊಡುಗೆ ಕೊಡಬೇಕು ಎಂಬ ಸಂಕಲ್ಪ ಮಾಡಬೇಕು ಎಂದು ಹೇಳಿದರು.ಜಿಲ್ಲಾ ಗೌರವಾಧ್ಯಕ್ಷ ಸೈಮನ್ ವಿಕ್ಟರ್, ನಗರ ಅಧ್ಯಕ್ಷ ಡಿ.ಜಯಣ್ಣ, ಮುಖಂಡರಾದ ದೀಕ್ಷಿತ್, ಇಮ್ರಾನ್,ಹಿತೇಶ್, ನವದೀಪ್, ಶ್ರೀನಿವಾಸ್, ಧನುಶ್‌ಗೌಡ, ಅಂಜುಂ, ಸೈಯದ್ ವಾಜೀದ್, ಇಸ್ಮಾಯಿಲ್ ಬಾಬು, ನಯಾಜ್ ಇತರರು ಭಾಗವಹಿಸಿದ್ದರು.