ಬಡಿದೆದ್ದ ಬಂಡಾಯ ಬಹುತೇಕ ಥಂಡಾಯ

Published : Aug 06, 2026, 06:55 AM IST
DK Shivakumar Siddaramaiah

ಸಾರಾಂಶ

ಸಂಪುಟ ವಿಸ್ತರಣೆ ಬಳಿಕ ಭುಗಿಲೆದ್ದಿರುವ ಬಂಡಾಯ ತಣಿಸಲು ವರಿಷ್ಠರು ಹಾಗೂ ರಾಜ್ಯ ನಾಯಕರು ತೀವ್ರ ಕಸರತ್ತು ನಡೆಸಿದ್ದು, ಮೇಲ್ನೋಟಕ್ಕೆ ಬಂಡಾಯ ಥಂಡ ಮಾಡಿದಂತೆ ಕಂಡುಬಂದಿದೆ. ಆದರೂ ಒಳ ಬೇಗುದಿ ಮುಂದುವರೆದಿದೆ. ಪರಿಣಾಮ ಸಚಿವ ಸ್ಥಾನ ದೊರೆಯದ ಶಾಸಕರ ಅಸಮಾಧಾನ ಬೂದಿ ಮುಚ್ಚಿದ ಕೆಂಡದಂತಿದೆ.

ಬೆಂಗಳೂರು :  ಸಂಪುಟ ವಿಸ್ತರಣೆ ಬಳಿಕ ಭುಗಿಲೆದ್ದಿರುವ ಬಂಡಾಯ ತಣಿಸಲು ವರಿಷ್ಠರು ಹಾಗೂ ರಾಜ್ಯ ನಾಯಕರು ತೀವ್ರ ಕಸರತ್ತು ನಡೆಸಿದ್ದು, ಮೇಲ್ನೋಟಕ್ಕೆ ಬಂಡಾಯ ಥಂಡ ಮಾಡಿದಂತೆ ಕಂಡುಬಂದಿದೆ. ಆದರೂ ಒಳ ಬೇಗುದಿ ಮುಂದುವರೆದಿದೆ. ಪರಿಣಾಮ ಸಚಿವ ಸ್ಥಾನ ದೊರೆಯದ ಶಾಸಕರ ಅಸಮಾಧಾನ ಬೂದಿ ಮುಚ್ಚಿದ ಕೆಂಡದಂತಿದೆ.

ಸೋಮವಾರ ನಡೆದ ಸಂಪುಟ ವಿಸ್ತರಣೆ ಬೆನ್ನಲ್ಲೇ 30ಕ್ಕೂ ಹೆಚ್ಚು ಅವಕಾಶ ವಂಚಿತ ಆಕಾಂಕ್ಷಿಗಳಿಂದ ಅಸಮಾಧಾನ ಸ್ಫೋಟಗೊಂಡಿತ್ತು. ಅಸಮಾಧಾನ ತಣಿಸಲು ಮಂಗಳವಾರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್‌ ಹಾಗೂ ಈ ಕಾರ್ಯಕ್ಕಾಗಿಯೇ ದೆಹಲಿಯಿಂದ ಆಗಮಿಸಿದ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲ ಅವರು ತೀವ್ರ ಪ್ರಯತ್ನ ನಡೆಸಿದರು.

ಈ ಪ್ರಯತ್ನದ ಫಲವಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಯಶವಂತರಾಯಗೌಡ ಪಾಟೀಲ್‌ ಸೇರಿ ಕೆಲವರು ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಆದರೆ, ಎಂ.ಕೃಷ್ಣಪ್ಪ, ಪ್ರಿಯಕೃಷ್ಣ, ಎಚ್.ಕೆ.ಪಾಟೀಲ್‌, ಟಿ.ಬಿ. ಜಯಚಂದ್ರ, ಬಸವರಾಜ ಶಿವಣ್ಣನವರ್‌, ಬಿ.ಆರ್‌.ಪಾಟೀಲ್‌, ಸಿ.ಎಸ್‌.ನಾಡಗೌಡ, ಎಂ.ಸಿ.ಸುಧಾಕರ್‌, ಸುಬ್ಬಾರೆಡ್ಡಿ, ಎಸ್‌.ಎನ್‌.ನಾರಾಯಣಸ್ವಾಮಿ, ದಿನೇಶ್ ಗುಂಡೂರಾವ್, ಗುಬ್ಬಿ ಶ್ರೀನಿವಾಸ್‌, ಉಮಾಶ್ರೀ, ಲಕ್ಷ್ಮೀ ಹೆಬ್ಬಾಳ್ಕರ್‌, ಗಾಯಿತ್ರಿ ಶಾಂತೇಗೌಡ, ಎನ್‌.ಎ.ಹ್ಯಾರಿಸ್‌ ಸೇರಿ 20ಕ್ಕೂ ಹೆಚ್ಚು ಶಾಸಕರಲ್ಲಿ ಅಸಮಾಧಾನ ಮುಂದುವರೆದಿದೆ. ಹೀಗಾಗಿ ಬಂಡಾಯ ಬೂದಿ ಮುಚ್ಚಿದ ಕೆಂಡದಂತಾಗಿದೆ ಎಂದು ತಿಳಿದುಬಂದಿದೆ.

ಇನ್ನು ಬಿ.ಆರ್‌.ಪಾಟೀಲ ಅವರು ರಾಜ್ಯ ಯೋಜನಾ ಮತ್ತು ನೀತಿ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಗುರುವಾರ ಅವರೆಲ್ಲರ ಮನವೊಲಿಕೆ ಕಸರತ್ತು ಕೂಡ ನಡೆಯಲಿದೆ ಎಂದು ತಿಳಿದುಬಂದಿದೆ.

ಸುರ್ಜೇವಾಲರಿಂದ ಶಮನ ಯತ್ನ:

ಬಂಡಾಯ ಕಡಿಮೆಯಾಗದ ಹಿನ್ನೆಲೆಯಲ್ಲಿ ಬುಧವಾರ ರಾಜ್ಯ ಕಾಂಗ್ರೆಸ್‌ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲ ಅವರು ಬೆಂಗಳೂರಿಗೆ ಆಗಮಿಸಿದ್ದಾರೆ. ಅಸಮಾಧಾನಿತ ಶಾಸಕರಾದ ಎಂ.ಕೃಷ್ಣಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಕೃಷ್ಣಪ್ಪ ಹಾಗೂ ಪ್ರಿಯಕೃಷ್ಣ ಅವರ ಮನವೊಲಿಕೆಗೆ ಕಸರತ್ತು ನಡೆಸಿದರು. ಈ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೂ ಜತೆಯಾಗಿದ್ದರು. ಆದರೆ, ನಾಯಕರ ಭರವಸೆಗಳಿಗೆ ಸಂಪೂರ್ಣ ಒಪ್ಪಿಗೆ ನೀಡದ ಕೃಷ್ಣಪ್ಪ ಅವರು ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಹೀಗಾಗಿ ಅಸಮಾಧಾನ ಮುಂದುವರೆದಿದೆ.

ಎಂ.ಕೃಷ್ಣಪ್ಪ ನಿವಾಸಕ್ಕೆ ಭೇಟಿ ನೀಡಿದ ಬೆನ್ನಲ್ಲೇ ಅವರು ಎಚ್.ಕೆ.ಪಾಟೀಲ್‌ ಅವರನ್ನು ಭೇಟಿಯಾಗಿದ್ದು, ತಡರಾತ್ರಿವರೆಗೆ ಮನವೊಲಿಕೆ ಪ್ರಯತ್ನ ಮುಂದುವರೆಸಿದರು ಎನ್ನಲಾಗಿದೆ.

ಕುಟುಂಬದ ಸಮಸ್ಯೆ ಬಗೆಹರಿಸಿಕೊಳ್ತೇವೆ-ಸುರ್ಜೇವಾಲ:

ಕೃಷ್ಣಪ್ಪ ಅವರನ್ನು ಭೇಟಿ ಮಾಡಿ ಮಾತನಾಡಿದ ಸುರ್ಜೇವಾಲ, ‘ನಾವೆಲ್ಲ ಒಂದು ಕುಟುಂಬ. ಕೃಷ್ಣಪ್ಪ ನಮ್ಮದೇ ಕುಟುಂಬದ ಹಿರಿಯರು. ಕುಟುಂಬದಲ್ಲಿ ಬೇಡಿಕೆಗಳು, ದೂರುಗಳು ಇರುತ್ತವೆ. ನಮ್ಮ ಕುಟುಂಬದ ಸಮಸ್ಯೆ ನಾವು ಬಗೆಹರಿಸಿಕೊಳ್ಳುತ್ತೇವೆ. ಅವರ ಸಮಸ್ಯೆ ಆಲಿಸಿದ್ದು, ಹೈಕಮಾಂಡ್ ಹಾಗೂ ರಾಜ್ಯ ಮುಖಂಡರು, ಮುಖ್ಯಮಂತ್ರಿಗಳು ಎಲ್ಲರೂ ಸೇರಿ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ’ ಎಂದು ಹೇಳಿದರು.

ಹರಿಪ್ರಸಾದ್‌ರಿಂದಲೂ ಕಸರತ್ತು:

ಜತೆಗೆ ಸಚಿವ ಸ್ಥಾನ ತಪ್ಪಿದ್ದಕ್ಕೆ ಆಕ್ರೋಶಗೊಂಡಿರುವ ಟಿ.ಬಿ. ಜಯಚಂದ್ರ ಕಾಂಗ್ರೆಸ್ಸಿನವನು ಎಂದು ಹೇಳಿಕೊಳ್ಳಲು ನಾಚಿಕೆಯಾಗುತ್ತಿದೆ ಎಂದು ಕಿಡಿಕಾರಿದ್ದು, ಹಂಗಾಮಿ ಸ್ಪೀಕರ್‌ ಆಗಿ ನೇಮಕಕ್ಕೆ ಅಪಸ್ವರ ಎತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಟಿ.ಬಿ. ಜಯಚಂದ್ರ ನಿವಾಸಕ್ಕೆ ತೆರಳಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್‌ ಮನವೊಲಿಕೆ ಯತ್ನ ನಡೆಸಿದರು.

ಅಲ್ಲದೆ, ಎಚ್.ಕೆ.ಪಾಟೀಲ್‌, ದಿನೇಶ್‌ ಗುಂಡೂರಾವ್ ನಿವಾಸಕ್ಕೆ ಭೇಟಿ ನೀಡಿ ಸಮಾಧಾನ ಮಾಡಲು ಯತ್ನಿಸಿದರು. ಜತೆಗೆ ಬೇಳೂರು ಗೋಪಾಲಕೃಷ್ಣ, ಬಂಗಾರಪೇಟೆ ನಾರಾಯಣಸ್ವಾಮಿ, ಅಶೋಕ್‌ ಪಟ್ಟಣ್‌ ಅವರೊಂದಿಗೂ ಚರ್ಚಿಸಿದರು.

ಸಿಎಂ ಪ್ರಯತ್ನಕ್ಕೆ ಸ್ವಲ್ಪ ಮಟ್ಟಿಗೆ ಫಲ:

ಯಶವಂತರಾಯಗೌಡ ಪಾಟೀಲ ಅವರಿಗೆ ಖುದ್ದು ಕರೆ ಮಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಹತ್ತು ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಅವರ ಬಂಡಾಯ ಶಮನ ಮಾಡುವಲ್ಲಿ ಭಾಗಶಃ ಯಶಸ್ವಿಯಾದರು. ಪರಿಣಾಮ ಶಾಸಕ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ಪಾಟೀಲ ವಾಪಸ್‌ ಪಡೆದರು. ಕೆಎಸ್‌ಆರ್‌ಟಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರದಿಂದ ಗುಬ್ಬಿ ಶ್ರೀನಿವಾಸ್‌ ಕೂಡ ಹಿಂದೆಸರಿದಿದ್ದಾರೆ.

ಆದರೆ, ಗುಬ್ಬಿ ಶ್ರೀನಿವಾಸ್‌ ಅವರು ತಮಗೆ ಸಚಿವ ಸ್ಥಾನ ನೀಡಿದ್ದ ಎಚ್.ಡಿ.ಕುಮಾರಸ್ವಾಮಿ ಅವರನ್ನು ಹಾಡಿ ಹೊಗಳಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಕಾಂಗ್ರೆಸ್‌ನಲ್ಲಿ ಭಿನ್ನಮತವಿಲ್ಲ: ಡಿಕೆಶಿ

ಕಾಂಗ್ರೆಸ್‌ ಪಕ್ಷದಲ್ಲಿ ಭಿನ್ನಮತ ಇಲ್ಲ. ಎಲ್ಲವೂ ಸರಿಯಿದ್ದು ಯಾವುದೇ ಸಮಸ್ಯೆಯಿಲ್ಲ. ನಾವು ಕೇವಲ ಕಾಳಜಿ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಎಂ.ಕೃಷ್ಣಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ‘ಪಕ್ಷದಲ್ಲಿ ಎಲ್ಲವೂ ಸರಿಯಿದೆ. ಯಾರಿಗೂ ಕೋಪವಿಲ್ಲ, ಯಾರ ಮೇಲೂ ಕೋಪವಿಲ್ಲ. ಎಂ.ಕೃಷ್ಣಪ್ಪ ಹಿರಿಯ ಶಾಸಕರು, ಪಕ್ಷದ ನಿಷ್ಠಾವಂತ ಶಾಸಕರು. ಅವರಿಗೆ ಪರಿಸ್ಥಿತಿ ಅರ್ಥ ಮಾಡಿಸಬೇಕಿತ್ತು. ಹಾಗಾಗಿ ಮಾತನಾಡಲು ಬಂದಿದ್ದೆವು. ನಮ್ಮಲ್ಲಿ ಯಾವುದೇ ಭಿನ್ನಮತವಿಲ್ಲ’ ಎಂದರು.

ಪ್ರತಿಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿ, ವಿಜಯೇಂದ್ರಗೆ ಮೊದಲು ಅವರ ಬಗ್ಗೆ ಮಾತನಾಡಲು ಹೇಳಿ. ಅವರ ಮನೆ ಸ್ವಚ್ಛ ಮಾಡಿಕೊಳ್ಳಲಿ. ವಿಧಾನಪರಿಷತ್‌ ಚುನಾವಣೆಯಲ್ಲಿ ಏನಾಯಿತು ನೋಡಿದ್ದೀರಲ್ಲಾ? ಎಂದರು.

ಬಂಡಾಯ ಶಮನ ಕಸರತ್ತು

- ಸಂಪುಟ ವಿಸ್ತರಣೆ ಆಕ್ರೋಶ ಹಿನ್ನೆಲೆ. ಅತೃಪ್ತರ ಜತೆಗೆ ಡಿಕೆಶಿ, ಹರಿಪ್ರಸಾದ್‌ರಿಂದ ಚರ್ಚೆ

- ದಿಲ್ಲಿಯಿಂದ ಆಗಮಿಸಿದ ರಾಜ್ಯ ಉಸ್ತುವಾರಿ ಸುರ್ಜೇವಾಲರಿಂದಲೂ ಮನವೊಲಿಕೆ ಯತ್ನ

- ಎಚ್‌.ಕೆ, ಪಾಟೀಲ್‌, ದಿನೇಶ್‌ ಗುಂಡೂರಾವ್‌, ಕೃಷ್ಣಪ್ಪ, ಪ್ರಿಯಕೃಷ್ಣ ಸೇರಿ ಹಲವರ ಜತೆ ಸಭೆ

- ರಾಜೀನಾಮೆ ನೀಡಿದ್ದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್‌ ಆಕ್ರೋಶ ಶಮನ

- ಆದ್ರೂ ಶಾಸಕರಲ್ಲಿ ನಿಂತಿಲ್ಲ ಒಳಬೇಗುದಿ । ಬೂದಿಮುಚ್ಚಿದ ಕೆಂಡದಂತಿರುವ ಶಾಸಕರ ಅತೃಪ್ತಿ

- 30 ಅಸಮಾಧಾನಿತರ ಪೈಕಿ 20 ಶಾಸಕರಲ್ಲಿ ಇನ್ನೂ ಅತೃಪ್ತಿ ಮುಂದುವರಿಕೆ: ಮೂಲಗಳು

ಎಲ್ಲವೂ ಸರಿಯಿದೆ

ಪಕ್ಷದಲ್ಲಿ ಎಲ್ಲವೂ ಸರಿಯಿದೆ. ಯಾರಿಗೂ ಕೋಪವಿಲ್ಲ, ಕೃಷ್ಣಪ್ಪ ಹಿರಿಯ ಶಾಸಕರು, ಪಕ್ಷದ ನಿಷ್ಠಾವಂತ ಶಾಸಕರು. ಅವರಿಗೆ ಪರಿಸ್ಥಿತಿ ಅರ್ಥ ಮಾಡಿಸಬೇಕಿತ್ತು. ಹಾಗಾಗಿ ಮಾತನಾಡಲು ಬಂದಿದ್ದೆವು. ನಮ್ಮಲ್ಲಿ ಯಾವುದೇ ಭಿನ್ನಮತವಿಲ್ಲ.

- ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ರಾಜ್ಯದ 20%, ಬೆಂಗ್ಳೂರಿನ 48% ಮತದಾರರ ಹೆಸರು ಡಿಲೀಟ್‌!
ಡಿಕೆ ಸಂಪುಟದಲ್ಲಿ ಉ.ಕರ್ನಾಟಕ ಮುಸ್ಲಿಮರಿಗೆ ಸಿಗದ ಸಚಿವ ಸ್ಥಾನ