ಅಕ್ಕಿ ಕೊಡಲು ಅಡ್ಡಿಪಡಿಸಿದವರನ್ನು ತಿರಸ್ಕರಿಸಿ ಮನೆಗೆ ಕಳುಹಿಸಿ: ಸಿದ್ದು

KannadaprabhaNewsNetwork |  
Published : Mar 01, 2024, 02:16 AM IST
Anna Bhagya | Kannada Prabha

ಸಾರಾಂಶ

ಹಣ ನೀಡುತ್ತೇವೆಂದರೂ ಅಕ್ಕಿ ಕೊಡದೆ ಕೇಂದ್ರದ ಬಿಜೆಪಿ ಸರ್ಕಾರ ಬಡವರ ಹಿತ ಕಡೆಗಣಿಸಿದೆ. ಅಕ್ಕಿಗೆ ಅಡ್ಡ ಬಂದವರನ್ನು ತಿರಸ್ಕರಿಸಿ ಮನೆಗೆ ಕಳುಹಿಸಿ

ಕನ್ನಡಪ್ರಭ ವಾರ್ತೆ ಬೆಂಗಳೂರು

ಪಡಿತರ ವಿತರಕರಿಗೆ ಕೇಜಿಗೆ ₹1.50 ಕಮಿಷನ್‌

ಪಡಿತರ ವಿತರಕರ ಕಮಿಷನ್‌ ಅನ್ನು ಪ್ರತಿ ಕೆಜಿಗೆ 1.24 ರುಪಾಯಿಯಿಂದ 1.50 ರುಪಾಯಿಗೆ ಹೆಚ್ಚಳ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ಕಮಿಷನ್‌ ಬಹಳ ಕಡಿಮೆಯಾಯಿತು. ಕಷ್ಟವಾಗುತ್ತದೆ ಎಂದು ಪಡಿತರ ವಿತರಕರು ಮನವಿ ಸಲ್ಲಿಸಿದ್ದಾರೆ. ಆದ್ದರಿಂದ ಪ್ರತಿ ಕೆಜಿಗೆ ನೀಡುತ್ತಿದ್ದ ಕಮಿಷನ್‌ ಅನ್ನು ಒಂದೂವರೆ ರುಪಾಯಿಗೆ ಹೆಚ್ಚಳ ಮಾಡಲಾಗಿದೆ. ಈಗಲಾದರೂ ನಮ್ಮ ಜೊತೆ ಇರುತ್ತೀರಾ ಎಂದು ನಗುತ್ತಾ ಪ್ರಶ್ನಿಸಿದರು.

--

ಬೆಂಗಳೂರು: ಹಣ ನೀಡುತ್ತೇವೆಂದರೂ ಅಕ್ಕಿ ಕೊಡದೆ ಕೇಂದ್ರದ ಬಿಜೆಪಿ ಸರ್ಕಾರ ಬಡವರ ಹಿತ ಕಡೆಗಣಿಸಿದೆ. ಅಕ್ಕಿಗೆ ಅಡ್ಡ ಬಂದವರನ್ನು ತಿರಸ್ಕರಿಸಿ ಮನೆಗೆ ಕಳುಹಿಸಿ. ವೈರಿಗಳು ಯಾರು, ಹಿತ ಬಯಸುವವರು ಯಾರು ಎಂಬುದು ನಿಮ್ಮ ತಲೆಯಲ್ಲಿ ಇರಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನತೆಗೆ ಮನವಿ ಮಾಡಿದರು.ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ‘ಅನ್ನಭಾಗ್ಯ ಯೋಜನೆಯ ದಶಮಾನೋತ್ಸವ ಕಾರ್ಯಕ್ರಮ’ ಉದ್ಘಾಟಿಸಿ ಮಾತನಾಡಿದ ಅವರು, ಭಾರತೀಯ ಆಹಾರ ನಿಗಮದ ಗೋದಾಮಿನಲ್ಲಿ ಅಕ್ಕಿ ಸಂಗ್ರಹವಿದ್ದರೂ ಕೇಂದ್ರ ಸರ್ಕಾರ ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡಲಿಲ್ಲ. ಹಣ ನೀಡುತ್ತೇವೆಂದರೂ ತಿರಸ್ಕರಿಸಿದರು. ಬಡವರ ಹಿತ ಕಡೆಗಣಿಸಿದ ಬಿಜೆಪಿಯನ್ನು ತಿರಸ್ಕರಿಸಿ ಮನೆಗೆ ಕಳುಹಿಸಿ, ವೈರಿಗಳು ಯಾರು, ಬಡವರ ಹಿತ ಬಯಸುವವರು ಯಾರೆಂದು ನಿಮ್ಮ ತಲೆಯಲ್ಲಿ ಇರಲಿ ಎಂದು ಕಳಕಳಿಯಾಗಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.2013ರ ಮೇ 13 ರಂದು ನಾನು ಬಸವ ಜಯಂತಿಯಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಹಸಿವು ಮುಕ್ತ ಕರ್ನಾಟಕಕ್ಕಾಗಿ ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸಿದೆ. ಆದರೆ ‘ಉಚಿತ ಅಕ್ಕಿ ನೀಡಿ ಬಡವರನ್ನು ಸೋಮಾರಿಗಳನ್ನಾಗಿ ಮಾಡಿದಿರಿ’ ಎಂದು ಬಿಜೆಪಿಯವರು ಕುಹಕದ ಮಾತುಗಳನ್ನಾಡಿದರು. ಉತ್ಪಾದನೆ ಮಾಡುವ ಕಾಯಕ ಜೀವಿಗಳು ಯಾವುದೇ ಕಾರಣಕ್ಕೂ ಹಸಿದು ಮಲಗಬಾರದು ಎಂಬುದು ನನ್ನ ಉದ್ದೇಶವಾಗಿತ್ತು ಎಂದು ಸ್ಪಷ್ಟಪಡಿಸಿದರು.ಭಾಗ್ಯ ನೀಡಿದರೂ 2018ರಲ್ಲಿ ಸೋಲು:ಅನ್ನಭಾಗ್ಯ, ಶಾದಿ ಭಾಗ್ಯ, ಇಂದಿರಾ ಕ್ಯಾಂಟೀನ್‌, ಕೃಷಿ ಭಾಗ್ಯ ಸೇರಿದಂತೆ ಹಲವು ಭಾಗ್ಯಗಳನ್ನು ಜಾರಿಗೆ ತಂದರೂ 2018 ರಲ್ಲಿ ನಾವು ಸೋಲು ಅನುಭವಿಸಬೇಕಾಯಿತು. ಬಡವರು, ಕಾರ್ಮಿಕರು, ಹಿಂದುಳಿದವರು, ರೈತರ ಪರ ಇರುವವರನ್ನು ಗುರುತಿಸಿ ಎಂದು ನಿಮ್ಮಲ್ಲಿ ಕಳಕಳಿಯ ಪ್ರಾರ್ಥನೆ ಮಾಡುತ್ತೇನೆ. 5 ಗ್ಯಾರೆಂಟಿಗಳಿಂದ ಕರ್ನಾಟಕ ದಿವಾಳಿಯಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿಕೆ ನೀಡಿದ್ದರು. ಆದರೆ ನಮ್ಮ ಖಜಾನೆ ಖಾಲಿ ಆಗಿಲ್ಲ. ಅಭಿವೃದ್ಧಿ ಕಾರ್ಯ ಮುಂದುವರೆಯುತ್ತಿವೆ ಎಂದು ಸ್ಪಷ್ಟಪಡಿಸಿದರು.ಪ್ರಧಾನಿ ಮನಮೋಹನ್‌ ಸಿಂಗ್‌ ನೇತೃತ್ವದ ಕೇಂದ್ರದ ಯುಪಿಎ ಸರ್ಕಾರ ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೆ ತರಲು ಮುಂದಾದಾಗ ಬಿಜೆಪಿ ರಾಷ್ಟ್ರೀಯ ನಾಯಕರಾದ ರಾಜನಾಥ್‌ ಸಿಂಗ್‌, ಮುರಳಿ ಮನೋಹರ ಜೋಶಿ, ಸುಷ್ಮಾ ಸ್ವರಾಜ್‌, ಅಂದು ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ವಿರೋಧ ವ್ಯಕ್ತಪಡಿಸಿದ್ದರು. ಬಿಜೆಪಿಯವರು ಕಾಂಗ್ರೆಸ್‌ ಮುಕ್ತ ಭಾರತ ಮಾಡುತ್ತೇವೆ ಎಂದು ಹೇಳುತ್ತಾರೆ. ಆದರೆ ನಾವು ಬಿಜೆಪಿ ಮುಕ್ತ ಭಾರತ ಮಾಡುತ್ತೇವೆ ಎಂದು ಹೇಳುವುದಿಲ್ಲ. ಹಸಿವು ಮುಕ್ತ ಭಾರತ ಮಾಡುತ್ತೇವೆ ಎಂದು ತಿರುಗೇಟು ನೀಡಿದರು.ಬಿಜೆಪಿ ತರಸ್ಕರಿಸಿ:ಬಡವರಿಗೆ ನೀಡುತ್ತಿದ್ದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು 7 ಕೆಜಿಯಿಂದ 5 ಕೆಜಿಗೆ ಇಳಿಸಿದ್ದು ಯಾರು? ಹೀಗೆ ಮಾಡಬೇಡಿ ಎಂದು ಬಿ.ಎಸ್‌.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರ ಬಳಿ ಬಡಕೊಂಡರೂ ಕಿವಿಗೆ ಹಾಕಿಕೊಳ್ಳಲಿಲ್ಲ. ಇಂತಹವರನ್ನು ತಿರಸ್ಕಾರ ಮಾಡಿ ಎಂದು ಮನವಿ ಮಾಡಿದರು.ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ, ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್‌.ಎಂ.ರೇವಣ್ಣ, ಆಹಾರ ನಿಗಮದ ಅಧ್ಯಕ್ಷ ಬಿ.ಜಿ.ಗೋವಿಂದಪ್ಪ, ಶಾಸಕ ಶರತ್‌ ಬಚ್ಚೇಗೌಡ ಮತ್ತಿತರರು ಹಾಜರಿದ್ದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಜಿ ರಾಮ್‌ ಜಿ: ಈಗ ಎಚ್ಡಿಕೆಗೆ ಡಿಕೆಶಿ ಸವಾಲ್‌
ಜಿ ರಾಮ್‌ ಜಿ ವಿರುದ್ಧ ಕೈ ಹೋರಾಟ ಶುರು